ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಧಾರಿಣಿ ತಣಿಸಿದ ‘ಭರಣಿ’ ಮಳೆ

Published 9 ಮೇ 2024, 8:06 IST
Last Updated 9 ಮೇ 2024, 8:06 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಕೆಲವೆಡೆ ಬುಧವಾರ ಸುರಿದ ಧಾರಾಕಾರ ಮಳೆಯು ಇಳೆಯನ್ನು ತಂಪಾಗಿಸಿತು.

ಸುಂಟಿಕೊಪ್ಪ, ಕೆದಕಲ್, ನಾಪೋಕ್ಲು, ಸೋಮವಾರಪೇಟೆ ಸೇರಿದಂತೆ ಹಲವೆಡೆ ಬಿರುಸಿನ ಮಳೆ ಸುರಿಯಿತು. ಅದರಲ್ಲೂ ಕೆದಕಲ್, ನಾಪೋಕ್ಲು, ಹಿರಿಕರ ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆ ಜನರ ಹೃಣ್ಮನಗಳನ್ನು ಪುಳಕಗೊಳಿಸಿತು.

ಬೆಳಿಗ್ಗೆಯಿಂದಲೇ ಆಗೊಮ್ಮೆ ಈಗೊಮ್ಮೆ ಮೋಡ ಕವಿದ ವಾತಾವರಣವು ಮಳೆ ಬರಬಹುದು ಎಂಬ ಮುನ್ಸೂಚನೆ ನೀಡಿತು. ಮಧ್ಯಾಹ್ನದ ನಂತರ ಆರಂಭವಾದ ಗುಡುಗು, ಸಿಡಿಲುಗಳು ಸುಂಟಿಕೊಪ್ಪ ಹಾಗೂ ಕೆದಕಲ್ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ತರಿಸಿದವು. ಸಂಜೆಗೂ ಮುನ್ನವೇ ಫಳಾರನೇ ಮಿಂಚು‌ತ್ತಿದ್ದ ಕಣ್ಣುಕೋರೈಸುವ ಬೆಳಕು ಚಕಿತಗೊಳಿಸಿತು. ಆಗಸದಲ್ಲಿ ನಿರಂತರವಾಗಿ ಕೋಲ್ಮಿಂಚುಗಳು ಮೂಡಿ, ಧಾರಾಕಾರ ಮಳೆಗೆ ನಾಂದಿ ಹಾಡಿತು.

ಸುಂಟಿಕೊಪ್ಪ ವ್ಯಾಪ್ತಿಯ ಜನತಾ ಕಾಲೋನಿಯ ಮೆಟ್ಟಿಲು ಮಾರ್ಗದಲ್ಲಿ ಜಲಪಾತದಂತೆ ನೀರು ಧುಮ್ಮಿಕ್ಕಿತು. ಕಾಲೊನಿಯ ನಿವಾಸಿ ವಿನೋದ್ ಅವರ ಮನೆಯೊಳಗೆ ನೀರು ನುಗ್ಗಿ ಮನೆಯವರು ಚಿಂತಕ್ರಾಂತರಾದರು.ಮಳೆ ನಿಲ್ಲುವವರೆಗೂ ಮುಖ್ಯ ರಸ್ತೆಗೆ ಬಾರದಂತಹ ಸ್ಥಿತಿ ಎದುರಾಯಿತು.

ಏಳನೇ ಮೈಲು, ಬೋಯಿಕೇರಿ, ಕಿಬ್ಬೆಟ್ಟ, ಗರಗಂದೂರು,ಮಳೂರು, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಹರದೂರು ಸೇರಿದಂತೆ ಹಲವಡೆ ಉತ್ತಮ ಮಳೆಯಾಗಿದೆ

ಸೋಮವಾರಪೇಟೆ; ಕೆಲವೆಡೆ ಭಾರಿ ಮಳೆ

ಸೋಮವಾರಪೇಟೆ: ತಾಲ್ಲೂಕು ವ್ಯಾಪ್ತಿಯ ಹಿರಿಕರ, ಹೆಗ್ಗುಳ, ಗೌಡಳ್ಳಿ, ಶುಂಟಿ, ನಂದಿಗುಂದ ಸೇರಿಂತೆ ಹಲವೆಡೆ ಭಾರಿ ಗಾಳಿಯೊಂದಿಗೆ ಮಳೆ ಸುರಿಯಿತು. ಗುಡುಗು, ಸಿಡಿಲಿನೊಂದಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಾಧಾರಣ ಮಳೆಯಾಯಿತು.

ಹೆಗ್ಗುಳ ಗ್ರಾಮದ ಕೂಗೂರು ರಸ್ತೆಯ ವಿದ್ಯುತ್ ಮಾರ್ಗದ ಮೇಲೆ ಮರವೊಂದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಪರದಾಡಿದರು.

ಹಿರಿಕರ ಗ್ರಾಮದಲ್ಲಿ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದು, ಮಕ್ಕಳು ಕೊಡೆ ಹಿಡಿದು ಆಲಿಕಲ್ಲು ಆಯ್ದುಕೊಂಡರು.

ಗೌಡಳ್ಳಿ, ದೊಡ್ಡಮಳ್ತೆ ವ್ಯಾಪ್ತಿಯಲ್ಲಿ ಉತ್ತಮ ಮಳೆ

ಶನಿವಾರಸಂತೆ: ಹೋಬಳಿ ವ್ಯಾಪ್ತಿಯ ಗೌಡಳ್ಳಿ, ದೊಡ್ಡಮಳ್ತೆ, ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಜನರಲ್ಲಿ ಸಂತಸ ತರಿಸಿತು.

ಬುಧವಾರ 5.30ಕ್ಕೆ ಆರಂಭವಾದ ಮಳೆ ಗೌಡಳ್ಳಿ ಪಂಚಾಯತಿಯ ಹೆಗ್ಗುಳ, ನಂದಿಗುಂದ, ಹಿರಿಕರ, ಚಿಕ್ಕಾರ, ಶುಂಠಿ, ಕೂಗ್ಗೆಕೂಡಿ, ದೊಡ್ಡಮಳ್ತೆ, ಮಾಲಂಬಿ ಆಲೂರು ಸಿದ್ದಾಪುರ, ಗಣಗೂರು ಗ್ರಾಮದ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಆದರೆ, ಶನಿವಾರಸಂತೆ, ದುಂಡಳ್ಳಿ, ಕೊಡ್ಲಿಪೇಟೆ ಕಡೆ ಮಳೆ ನಿರೀಕ್ಷೆಯಲ್ಲಿ ಜನರು ಇದ್ದರು. ಮಳೆ ಬರದೇ ಜನರಲ್ಲಿ ನಿರಾಸೆ ಮೂಡಿಸಿತು.

ನಾಪೋಕ್ಲು ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಪಟ್ಟಣ ಕತ್ತಲಲ್ಲಿ ಮುಳುಗಿತು. ಮಡಿಕೇರಿ, ವಿರಾಜಪೇಟೆ ಹಾಗೂ ಸಿದ್ದಾಪುರ ಭಾಗದಲ್ಲೂ ಸಾಧಾರಣ ಮಳೆಯಾಯಿತು.

ಕೆದಕಲ್‌ನಲ್ಲಿ ಸುರಿಯಿತು 4 ಸೆಂ.ಮೀ ಮಳೆ

ಕೊಡಗು ಜಿಲ್ಲೆಯ ಕೆದಕಲ್‌ ವ್ಯಾಪ್ತಿಯಲ್ಲಿ 4 ಸೆಂ.ಮೀಗೂ ಅಧಿಕ ಮಳೆ ಸುರಿದಿದೆ. ಉಳಿದಂತೆ ಹೊದ್ದೂರು ಹಾಗೂ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 2 ಸೆಂ.ಮೀ ಕಡಗದಾಳು 1.8 ಆಲೂರು ಸಿದ್ದಾಪುರ 1.6 ನಿಡುಗುಂದ 1.2 ಕಂಬಿಬಾಣೆ 1.2  ಕಾಕೋಟುಪರಂಬು 1.1 ಬೇಲೂರು 1 ಸೆಂ.ಮೀ ಮಳೆಯಾಯಿತು ಎಂದು ರಾಜ್ಯ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. ಜೊತೆಗೆ ಇನ್ನೂ ಒಂದೆರಡು ದಿನಗಳ ಕಾಲ ಇದೇ ಬಗೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT