ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಬೆಳಗಬೇಕಿದೆ ಟ್ರಾಫಿಕ್‌ ಸಿಗ್ನಲ್‌ ಲೈಟ್!

ಇನ್ನೂ ಪೂರ್ಣಗೊಳ್ಳದ ಕಾಮಗಾರಿ, ವಾಹನ ದಟ್ಟಣೆ ನಿರ್ವಹಣೆಯ ಸವಾಲು
ಶಿವಪ್ರಸಾದ್‌ ರೈ
Published 6 ಮೇ 2024, 6:09 IST
Last Updated 6 ಮೇ 2024, 6:09 IST
ಅಕ್ಷರ ಗಾತ್ರ

ಮೈಸೂರು: ನಗರದ ಜನದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು, ಸರ್ವೇ ಸಾಮಾನ್ಯವಾಗಿರುವ ವಾಹನ ದಟ್ಟಣೆಯನ್ನು ಸುಲಲಿತವಾಗಿ ನಿರ್ವಹಿಸಲು ಪೊಲೀಸ್‌ ಇಲಾಖೆ ಸುಮಾರು ಇಪ್ಪತ್ತು ಟ್ರಾಫಿಕ್‌ ಸಿಗ್ನಲ್‌ ಪಾಯಿಂಟ್‌ ಗುರುತಿಸಿದೆ. ಅದರಲ್ಲಿ ಹತ್ತು ಕಡೆ ಪಾಲಿಕೆ ವತಿಯಿಂದ ನಡೆದಿರುವ ಕಾಮಗಾರಿ ಕುಂಟುತ್ತಿದೆ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೈಸೂರಿನ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದೆ. ಕೈಗಾರಿಕೆ ಹಾಗೂ ಕಂಪೆನಿಗಳ ಕಾರ್ಯಾರಂಭದ ಬಳಿಕ ವರ್ತುಲ ರಸ್ತೆಗಳಲ್ಲೂ ವಾಹನ ಸಂಚಾರ ಹೆಚ್ಚಿದೆ. ನಗರ ಭಾಗದ ಹಲವೆಡೆ ದಟ್ಟಣೆ ಉಂಟಾಗುತ್ತಿದ್ದು, ನಿರ್ವಹಣೆಗಾಗಿ ಟ್ರಾಫಿಕ್‌ ಸಿಗ್ನಲ್‌ ಪಾಯಿಂಟ್‌ ನಿರ್ಮಿಸುವಂತೆ ಪೊಲೀಸ್‌ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು.

ಪಾಲಿಕೆಯು ಕಳೆದ ಮಾರ್ಚ್‌ನಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ನಗರದಲ್ಲಿ ಐದು ಹಾಗೂ ವರ್ತುಲ ರಸ್ತೆಯ ಐದು ಪಾಯಿಂಟ್‌ಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ನಿರ್ಮಿಸಲು ಗುತಿಸಲಾಗಿತ್ತು. ಆರ್‌ಟಿಒ ವೃತ್ತ, ಅಗ್ರಹಾರ ವೃತ್ತ, ಕೌಟಿಲ್ಯ ವೃತ್ತ, ಆರ್‌.ಆರ್‌ ನಗರ, ಜೆ.ಪಿ ನಗರ ಜಂಕ್ಷನ್‌ (ಅಕ್ಕಮಹಾದೇವಿ ರಸ್ತೆ), ದೇವೇಗೌಡ ವೃತ್ತ, ಸಾತಗಳ್ಳಿ ಡಿಪೋ ಜಂಕ್ಷನ್‌, ವಿಜಯ ನಗರ ನಾಲ್ಕನೇ ಹಂತದ ವರ್ತುಲ ರಸ್ತೆ (ಬಸವನಹಳ್ಳಿ ಜಂಕ್ಷನ್), ಹಿನಕಲ್‌ ರಸ್ತೆ ಜಂಕ್ಷನ್‌, ನಜರ್‌ ಬಾದ್ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗುತ್ತಿದೆ.

ವರ್ಷದ ಹಿಂದೆ ಆರಂಭವಾಗಿದ್ದ ಈ ಕಾಮಗಾರಿ ಗುತ್ತಿಗೆದಾರರ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಜಿಲ್ಲಾಧಿಕಾರಿಗಳ ಸೂಚನೆಯಂತೆ ಚುರುಕು ಪಡೆದಿದ್ದು, ಕೆಲವಡೆ ಕಂಬಗಳನ್ನು ಅಳವಡಿಸಲಾಗಿದೆ. ಇದು ತ್ವರಿತವಾಗಿ ಮುಗಿದರೆ ವಾಹನ ಸಂಚಾರಕ್ಕೆ ಸಹಕಾರಿಯಾಗಲಿದೆ ಎಂಬ ಭಾವನೆ ಸಾರ್ವಜನಿಕರದ್ದು. ಆದರೆ, ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದರೆ ಸಿಗ್ನಲ್‌ ದೀಪಗಳು ಬೆಳಗುವ ದಿನವೂ ಮುಂದೆ ಹೋಗುತ್ತದೆ ಎಂಬ ಆತಂಕವೂ ಇದೆ.

‘ಈಗಾಗಲೇ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ಉದ್ದೇಶಿಸಲಾಗಿರುವ ಪ್ರದೇಶಗಳಲ್ಲಿ ಜನರ ಓಡಾಟವೂ ಹೆಚ್ಚಿದೆ. ಈ ಭಾಗದಲ್ಲಿ ಹಲವು ಅಪಘಾತಗಳೂ ನಡೆಯುತ್ತಿವೆ. ಸಿಗ್ನಲ್‌ ಕೆಲಸ ಆರಂಭಿಸಿದರೆ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಈಗ ಇಲ್ಲಿ ವಾಹನಗಳನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಲಾಗುವುದು. ಅವರ ಶ್ರಮವೂ ಕಡಿಮೆಯಾಗಲಿದೆ’ ಎಂಬುದು ಪೊಲೀಸ್‌ ಇಲಾಖೆಯ ಅಭಿಪ್ರಾಯ.

‘ಇನ್ನೂ ಕೆಲವೆಡೆ ಮರದ ರೆಂಬೆ, ಕೊಂಬೆಗಳ ನಡುವೆ ಟ್ರಾಫಿಕ್‌ ಸಿಗ್ನಲ್‌ ಕಂಬ ನೆಡಲಾಗಿದ್ದು, ವಾಹನ ಸವಾರರಿಗೆ ಕಾಣಿಸದಂತಿದೆ. ಕಾರ್ಯಾರಂಭಿಸಿದ ನಂತರ ಸಮಸ್ಯೆಯಾಗಿ ಮರಗಳನ್ನು ಕಡಿಯುವ ಬದಲು ಕಾಮಗಾರಿಯ ಸಂದರ್ಭದಲ್ಲೇ ಅವನ್ನು ನಿವಾರಿಸಿಕೊಳ್ಳಬೇಕು’ ಎನ್ನುತ್ತಾರೆ ಪರಿಸರ ಪ್ರೇಮಿಗಳು. ಪ್ರತಿಕ್ರಿಯೆಗೆ ಪಾಲಿಕೆ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯರಾಗಿಲ್ಲ.

ವಾಹನ ದಟ್ಟಣೆ ನಿವಾರಣೆಗೆ ಸಿಗ್ನಲ್‌ ವರ್ಷದಿಂದ ನಡೆಯುತ್ತಿರುವ ಕಾಮಗಾರಿ ಹತ್ತು ಸ್ಥಳಗಳಲ್ಲಿ ನಿರ್ಮಾಣ

‘ಇಪ್ಪತ್ತು ಸ್ಥಳಗಳ ಗುರುತು’ ‘ನಗರ ಪೊಲೀಸ್ ಇಲಾಖೆಯು ಸಂಚಾರ ದಟ್ಟಣೆ ಉಂಟಾಗಬಹುದಾದ ಇಪ್ಪತ್ತು ಸ್ಥಳಗಳನ್ನು ನಗರದಲ್ಲಿ ಗುರುತಿಸಲಾಗಿದೆ. ಪಾಲಿಕೆ ವತಿಯಿಂದ ಹತ್ತು ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವುದರಿಂದ ಸಂಚಾರ ದಟ್ಟಣೆಯನ್ನು ಸುಲಲಿತವಾಗಿ ನಿರ್ವಹಿಸಲು ಸಾಧ್ಯ. ಸಂಚಾರ ನಿಯಮ ಪಾಲನೆಯ ಬಗ್ಗೆಯೂ ನಿಯಂತ್ರಣ ಸಾಧ್ಯ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT