ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಂಬು ಹಿಡಿದು ಪ್ರಧಾನಿ ಎದುರು ರಾಜ್ಯ ಸರ್ಕಾರ ಭಿಕ್ಷೆ: ಕುಮಾರಸ್ವಾಮಿ ಟೀಕೆ

Published 20 ಏಪ್ರಿಲ್ 2024, 6:56 IST
Last Updated 20 ಏಪ್ರಿಲ್ 2024, 6:56 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಸರ್ಕಾರವು ಚೊಂಬು ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಭಿಕ್ಷೆ ಬೇಡುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಇಲ್ಲಿನ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಶನಿವಾರ ಭೇಟಿಯಾಗಿ ಆಶೀರ್ವಾದ ಪಡೆದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಸರ್ಕಾರದ ಖಜಾನೆ ಖಾಲಿಯಾಗಿದೆ. ಅದನ್ನ ದಯವಿಟ್ಟು ತುಂಬಿಸಿಕೊಡಿ ಎಂದು ಮೋದಿ ಅವರ ಬಳಿ ಕೇಳುತ್ತಿದ್ದಾರೆ. ಕೋವಿಡ್ ಸಂಕಷ್ಟದ ಕಾಲದಲ್ಲೂ ರಾಜ್ಯದ ಖಜಾನೆ ಸುಭಿಕ್ಷವಾಗಿತ್ತು. ಕಾಂಗ್ರೆಸ್‌ನ ಅಪಪ್ರಚಾರದ ನಡುವೆಯೂ ಬಿಜೆಪಿಯವರು ಖಜಾನೆಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಖಾಲಿಯಾಗಿದೆ. ಕನ್ನಡಿಗರ ಕೈಗೆ ಖಾಲಿ ಚೊಂಬು ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಜನರು ಕಟ್ಟಿದ ತೆರಿಗೆ ಹಣವನ್ನೆಲ್ಲಾ ಸಂಪೂರ್ಣ ನುಂಗಿದ್ದೇವೆ. ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದೇವೆ ಎನ್ನುವ ಚಿಹ್ನೆಯನ್ನು ಅವರು ತೋರಿಸಿದ್ದಾರೆ’ ಎಂದು ಟೀಕಿಸಿದರು.

‘ಸಂಸದೆ ಸುಮಲತಾ ಅವರು ನನ್ನ ಪರವಾಗಿ ಹೇಳಿಕೆ ನೀಡಿದಾಕ್ಷಣ ಬೆಂಬಲ ಎಂದರ್ಥವೇ? ಹೇಳಿಕೆ ನೀಡದೆಯೂ ಬೆಂಬಲ ಕೊಡಬಹುದಲ್ಲವೇ? ಪ್ರಚಾರಕ್ಕೆ ಇನ್ನೂ ಕೆಲವು ದಿನಗಳು ಅವಕಾಶವಿದೆ. ಏನು ಮಾಡುತ್ತಾರೆಯೋ ನೋಡೋಣ. ಅವರು ಬಿಜೆಪಿ ಸೇರಿದ್ದಾರೆ. ನಾನೂ ಎನ್‌ಡಿಎ ಅಭ್ಯರ್ಥಿ. ಆದ್ದರಿಂದ ಅವರ ಸಹಕಾರ ಇರುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಇತ್ತೀಚೆಗೆ ಜ್ಯೋತಿಷಿಯಾಗಿದ್ದಾರೆ. ಪ್ರತಿ ನಿತ್ಯ ಭವಿಷ್ಯ ನುಡಿಯುತ್ತಿದ್ದಾರೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲುವುದೂ ಅಷ್ಟೇ ಸತ್ಯ ಎಂದೂ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಜನರು ಆಶೀರ್ವಾದ ಮಾಡಿ ನಾನು ಗೆದ್ದರೆ ಸೂರ್ಯ, ಚಂದ್ರನ ಕಥೆ ಏನಾಗುತ್ತದೆ ಎಂದು ಯೋಚಿಸುತ್ತಿದ್ದೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಜೆಡಿಎಸ್‌ ಮುಗಿಸಬೇಕು ಎನ್ನುವುದೇ ಸಿದ್ದರಾಮಯ್ಯ ಗುರಿ. ಈ ಮಟ್ಟಕ್ಕೆ ಬರಲು ಹಾಗೂ ಅವರನ್ನು ಕಾಂಗ್ರೆಸ್‌ ಪಕ್ಷದವರು ಗುರುತಿಸಲು ಯಾವ ಪಕ್ಷ ಕಾರಣ ಎಂಬುದನ್ನು ಮರೆತಿದ್ದಾರೆ. ಏಣಿ ಹತ್ತಿಸಿದವರನ್ನೇ ಸರ್ವನಾಶ ಮಾಡುವುದು ಅವರ ಹುಟ್ಟುಗುಣ. ಈಗ ಜೆಡಿಎಸ್‌ ಮುಗಿಸುತ್ತೇನೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಸರ್ವನಾಶವಾಗುತ್ತದೆ ಎಂದು ಅವರೇ ಹೇಳಿಕೆ ನೀಡುವ ದಿನಗಳೇನು ದೂರವಿಲ್ಲ’ ಎಂದು ತಿರುಗೇಟು ನೀಡಿದರು.

‘ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಸಮರ್ಪಕ ಮಾಹಿತಿ ಪಡೆಯದೇ, ಒಂದು ಸಮಾಜದ ಓಲೈಕೆಗಾಗಿ ಏಕಾಏಕಿ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ಇರುವುದು ಕೇವಲ ಒಂದು ಸಮಾಜದ ರಕ್ಷಣೆ ಮಾಡಲು ಮಾತ್ರವೇ’ ಎಂದು ಟೀಕಿಸಿದರು. ‘ಸಿಎಂ ಹಾಗೂ ಡಿಸಿಎಂ ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಅವರ ಹೇಳಿಕೆಯಿಂದ ಕಂಡುಬಂದಿದೆ. ಕಾಂಗ್ರೆಸ್‌ ಪಾಲಿಕೆ ಸದಸ್ಯನ ಕುಟುಂಬಕ್ಕೆ ರಕ್ಷಣೆ ಕೊಡಲಾಗದ ಈ ಸರ್ಕಾರ ಇಡೀ ರಾಜ್ಯಕ್ಕೆ ರಕ್ಷಣೆ ಕೊಡುತ್ತದೆಯೇ?’ ಎಂದು ಕೇಳಿದರು.

‘ಹುಬ್ಬಳ್ಳಿಯಲ್ಲಿ ಅಮಾಯಕ ಹೆಣ್ಣು ಮಗಳನ್ನು ಬಲಿ ತೆಗೆದುಕೊಂಡು, ಪ್ರಮಾಣಪತ್ರವನ್ನೂ ನೀಡಿದ್ದಾರೆ. ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಯಾಗಿದೆ. ಮೈಸೂರಿನಲ್ಲಿ ಮೋದಿ ಹಾಡು ಬರೆದನೆಂಬ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆದಿದೆ. ಕೊಡಗಿನಲ್ಲೂ ವ್ಯಕ್ತಿಯ ಕೊಲೆಯಾಗಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಅಪರಾಧ ಪ್ರಕರಣ ನಡೆಯುತ್ತಿದೆ. ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿದವರ ಸಂತತಿಯನ್ನು ಬೆಳೆಸಲು ಈ ಸರ್ಕಾರ ಇದೆಯೇನೋ ಎನಿಸುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಆರೋಪಿಸಿದರು.

ಮುಖಂಡರಾದ ಸಿ.ಎಸ್. ಪುಟ್ಟರಾಜು, ಎಂ.ಜೆ. ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT