ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ‘ಸ್ಕ್ವೇರ್‌ಫೀಟ್‌’ ವಸೂಲಿ: ಅಶೋಕ ಆರೋಪ

ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಆರೋಪ ಪಟ್ಟಿ
Published 20 ಏಪ್ರಿಲ್ 2024, 0:01 IST
Last Updated 20 ಏಪ್ರಿಲ್ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ‘ಸ್ಕ್ವೇರ್‌ಫೀಟ್‌’ ಎಂಬ ಹೊಸ ‘ತೆರಿಗೆ’ಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಕಿದ್ದು, ಈ ಮೂಲಕ ಬಿಲ್ಡರ್‌ಗಳಿಂದ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದ್ದಾರೆ. ಸರ್ಕಾರದ ದಿವಾಳಿತನಕ್ಕೆ ಇದು ಸಾಕ್ಷಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರೋಪಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಸ್ಕ್ವೇರ್‌ಫೀಟ್‌’ ಎಂಬ ಪದ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಇದು ಏನೆಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಬಿಲ್ಡರ್‌ಗಳಿಂದ ಸುಲಿಗೆಗಾಗಿ ಬಳಸುತ್ತಿರುವ ‘ಕೋಡ್‌ವರ್ಡ್‌’ ಅದು ಎಂದು ಅವರು ಹೇಳಿದರು.

ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಬಿಲ್ಡರ್‌ಗಳು ಪ್ರತಿ ಚದರಡಿಗೆ ₹100 ರಂತೆ ನೀಡಬೇಕು. ಪ್ರತಿ ಅಪಾರ್ಟ್‌ಮೆಂಟ್‌ಗಳಿಂದಲೂ ತಲಾ ಕನಿಷ್ಠ ₹7 ಕೋಟಿಯಿಂದ ₹10 ಕೋಟಿಯಷ್ಟು ವಸೂಲಿ ಮಾಡುತ್ತಿದ್ದಾರೆ. ಸಾವಿರಾರು ಬಿಲ್ಡರ್‌ಗಳಿಂದ ವಸೂಲಿಗೆ ಇಳಿದಿದ್ದಾರೆ ಎಂದು ದೂರಿದರು.

ಜನರ ಹಣವನ್ನೇ ಸುಲಿಗೆ ಮಾಡಿ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆಯೇ ಹೊರತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ರಾಹುಲ್‌ ಗಾಂಧಿಯವರ ಜೇಬಿನಿಂದ ಹಣವನ್ನೇನೂ ಕೊಡುತ್ತಿಲ್ಲ. ಒಬ್ಬ ಗೃಹಣಿಗೆ ₹2,000 ಕೊಡಲು ಆ ಮನೆಯ ಯಜಮಾನನಿಂದ ₹5,000 ಕಸಿದುಕೊಳ್ಳುತ್ತಿದೆ. ಹಾಲು, ಮದ್ಯ, ವಿದ್ಯುತ್‌ ಶುಲ್ಕದ ದರವನ್ನು ವಿಪರೀತವಾಗಿ ಏರಿಕೆ ಮಾಡಿದೆ. ಜೆಸಿಬಿ ಹಾಕಿ ಬಾಚುವಂತೆ ಜನರಿಂದ ಹಣವನ್ನು ಬಾಚುತ್ತಿದೆ. ಈ ರೀತಿಯಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಚೊಂಬು ಕೊಟ್ಟಿದೆ ಎಂದು ಅಶೋಕ ಕಿಡಿ ಕಾರಿದರು.

ಸರ್ಕಾರದ ವಿರುದ್ಧದ ದೋಷಾರೋಪಗಳು:

*ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಸಚಿವರು ಮತ್ತು ಅವರ ಕುಟುಂಬದ ಸದಸ್ಯರಿಂದ ಆಡಳಿತದಲ್ಲಿ ಮಿತಿ ಮೀರಿದ ಹಸ್ತಕ್ಷೇಪ. ಕಾಮಗಾರಿ ಮಂಜೂರಾತಿಗೂ ಲಂಚ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರಿಗೆ ಬಿಲ್‌ ನೀಡಲೂ ಲಂಚ. ಶೇ 50ರ ಲಂಚದ ಸರ್ಕಾರವಾಗಿದೆ

*ಅಬಕಾರಿ ಆದಾಯ ₹36 ಸಾವಿರ ಕೋಟಿ ನಿಗದಿ ಮಾಡಿ ಈ ಮೊತ್ತ ಸಂಗ್ರಹಿಸಲು ಬಿಯರ್‌ ಮೇಲೆ ಶೇ10 ಇನ್ನುಳಿದ ಮದ್ಯದ ಮೇಲೆ ಶೇ 20ರಷ್ಟು ದರ ಏರಿಕೆ ಮಾಡಿದೆ. 

*ಜನನ ಪ್ರಮಾಣ ಪತ್ರ ಪಡೆಯಲು ಇದ್ದ ಶುಲ್ಕವನ್ನು ವಿಪರೀತ ಏರಿಸಿದೆ. ವರ್ಷದ ಬಳಿಕ ಪ್ರಮಾಣ ಪತ್ರ ಪಡೆಯಲು ಇದ್ದ ಶುಲ್ಕದ ಮೊತ್ತ ₹10 ಅನ್ನು ₹1000 ಕ್ಕೆ ಏರಿಸಿದೆ.

*ಮುದ್ರಾಂಕ ಶುಲ್ಕದಲ್ಲೂ ಏರಿಕೆ. ದತ್ತು ಡೀಡ್‌ ₹500ರಿಂದ ₹1000ಕ್ಕೆ ಏರಿಕೆ ಪ್ರಮಾಣ ಪತ್ರ ₹20 ಇದ್ದದ್ದು ₹100ಕ್ಕೆ ಏರಿಕೆ ₹10 ಲಕ್ಷದೊಳಗಿನ ಅಗ್ರಿಮೆಂಟ್‌ಗೆ ₹100 ರಿಂದ ₹200ಕ್ಕೆ ಏರಿಕೆ ₹1000 ವರೆಗಿನ ಬಾಂಡ್‌ ಪವರ್ ಆಫ್‌ ಅಟಾರ್ನಿ ಶುಲ್ಕವನ್ನೂ ಏರಿಸಿದೆ.

*ಸರ್ಕಾರದ ಬರ ನಿರ್ವಹಣೆ ವೈಫಲ್ಯದಿಂದ ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 692 ರೈತರ ಆತ್ಮಹತ್ಯೆ ನಡೆದಿದೆ. ಪಿಎಂ ಕಿಸಾನ್‌ ಯೋಜನೆಯಡಿ ರೈತರಿಗೆ ನೀಡುತ್ತಿದ್ದ ₹4000 ಅನ್ನು ಕಾಂಗ್ರೆಸ್‌ ಸರ್ಕಾರ ನಿಲ್ಲಿಸಿದೆ.

*ಕಾಂಗ್ರೆಸ್ ಅವಧಿಯ ಒಂದೇ ವರ್ಷದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 176 ಅತ್ಯಾಚಾರ ಪ್ರಕರಣಗಳು ನಡೆದಿವೆ. 1135 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ

*ಎಸ್‌ಸಿ– ಎಸ್‌ಟಿ ಸಮುದಾಯಕ್ಕೆ ಮೀಸಲಾದ ₹11 ಸಾವಿರ ಕೋಟಿಯನ್ನು ಕಾಂಗ್ರೆಸ್‌ ಸರ್ಕಾರದ ಇತರ ಯೋಜನೆಗಳು ಬಳಸಿಕೊಂಡು ಶೋಷಿತ ಸಮುದಾಯಕ್ಕೆ ಅನ್ಯಾಯವೆಸಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT