ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮಾರ್ದನಿಸಿದ ಮೋದಿ...ಮೋದಿ ‘ನಾಮಬಲ’

ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ
Published 20 ಏಪ್ರಿಲ್ 2024, 15:13 IST
Last Updated 20 ಏಪ್ರಿಲ್ 2024, 15:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಹೊರವಲಯದ ಚೊಕ್ಕಹಳ್ಳಿ ಬಳಿ ಶನಿವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ಹಿಡಿದು ನಿರ್ಗಮನದವರೆಗೂ ಕೇಳಿದ್ದು ಮೋದಿ ಮೋದಿ ಎನ್ನುವ ಹೆಸರು. 

ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಮತ್ತು  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರವಾಗಿ ಮತಯಾಚಿಸಲು ಪ್ರಧಾನಿ ಬಂದಿದ್ದರು. 

ಮಧ್ಯಾಹ್ನ 3.30ರ ಸುಮಾರಿಗೆ ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳ ಮೂಲಕ ಮೋದಿ ಅವರ ಹೆಸರು ಕೂಗಿದರು. ವೇದಿಕೆಗೆ ಬಂದ ಅವರನ್ನು ಎರಡೂ ಪಕ್ಷದ ನಾಯಕರು ಸನ್ಮಾನಿಸಿದರು. ಮೋದಿ ಮತ್ತು ದೇವೇಗೌಡ ಅವರ ಕಟೌಟ್‌ಗಳನ್ನು ಹಿಡಿದು ಕಾರ್ಯಕರ್ತರು ಸಂಭ್ರಮಿಸಿದರು.

ನರೇಂದ್ರ ಮೋದಿ ಅವರಿಗೆ ಡಾ.ಕೆ.ಸುಧಾಕರ್‌ ನಂದಿ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿದರು. 

ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ‘ದೇವೇಗೌಡ ಅವರು ಎನ್‌ಡಿಎಗೆ ಬೆಂಬಲ ನೀಡಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಸಂದೇಶವನ್ನು ಚಿಕ್ಕಬಳ್ಳಾಪುರದ ಈ ಸಮಾವೇಶ ಸಾರುತ್ತಿದೆ’ ಎಂದರು.

‘ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದೇವೆ. ನಿಮ್ಮ ಕನಸೇ ನನ್ನ ಸಂಕಲ್ಪ. ದಿನದ 24 ಗಂಟೆಯೂ ನಿಮಗಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು. 

‘ದೇಶದ ಬಡವರು ಉಚಿತವಾಗಿ ಪಡಿತರ ದೊರೆಯುತ್ತದೆ ಎಂದು ಯೋಚಿಸಿರಲಿಲ್ಲ. ಬಡವರ ಮನೆಯ ಮಗನಾದ ನಾನು ಉಚಿತ ಪಡಿತರ ನೀಡಿದೆ. ಚಿಕ್ಕಬಳ್ಳಾಪುರದ ಎಂಟು ಲಕ್ಷ ಮಂದಿ ಇದರ ಫಲಾನುಭವಿಗಳಾಗಿದ್ದಾರೆ’ ಎಂದರು. 

ಕಳೆದ 10 ವರ್ಷಗಳಲ್ಲಿ ಕೋಲಾರ ಕ್ಷೇತ್ರದಲ್ಲಿ 20 ಸಾವಿರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 14 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 3 ಕೋಟಿ ಮನೆ ನಿರ್ಮಾಣ ಗ್ಯಾರಂಟಿ ಎಂದರು.

ಎನ್‌ಡಿಎ ಸರ್ಕಾರವು ಡ್ರೋನ್ ದೀದಿ ಪೈಲಟ್ ಯೋಜನೆ ಜಾರಿಗೊಳಿಸಿದೆ. ಆ ಮೂಲಕ ವ್ಯವಸಾಯಕ್ಕೆ ಡ್ರೋನ್ ತಂತ್ರಜ್ಞಾನ ಬಳಸಿಕೊಳ್ಳಬಹುದು. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರು ಮಾವು, ಹಾಲು, ರೇಷ್ಮೆಯನ್ನು ಹೆಚ್ಚು ಉತ್ಪಾದಿಸುವರು. ಇಲ್ಲಿನ ರೈತರನ್ನು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.

ದೇಶದ ಸಹಕಾರ ಕ್ಷೇತ್ರವನ್ನು ಎನ್‌ಡಿಎ ಸರ್ಕಾರ ವಿಸ್ತರಿಸಿದೆ. ಸಿರಿಧಾನ್ಯಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ಸಿರಿಧಾನ್ಯಗಳ ಮೂಲಕ ಆದಾಯ ಹೆಚ್ಚಳ ಮಾಡಲಾಗುವುದು ಎಂದರು. 

ಕೋಲಾರ ಮತ್ತು ಚಿಕ್ಕಬಳ್ಳಾಪುರದ ನೀರಿನ ಸಮಸ್ಯೆ ಪರಿಹರಿಸಲು 150 ಅಮೃತ ಸರೋವರ ರೂಪಿಸಲಾಗಿದೆ. ಈ ಭಾಗದಲ್ಲಿ 2.70 ಲಕ್ಷ ಜನರಿಗೆ ಕೊಳಾಯಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ನಂದಿ ಬೆಟ್ಟವಿದೆ, ತಾಯಿ ಭುವನೇಶ್ವರಿ, ತಾಯಿ ಕೋಲಾರಮ್ಮನ ಅನುಗ್ರಹವೂ ಇದೆ. ಈ ಸ್ಥಳಗಳನ್ನು ನಮ್ಮ ಸರ್ಕಾರ ತೀರ್ಥಕ್ಷೇತ್ರಗಳಾಗಿ, ವಾರಾಂತ್ಯದ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಲಿದೆ ಎಂದು ಭರವಸೆ ನೀಡಿದರು.

ಅಭ್ಯರ್ಥಿಗಳಾದ ಡಾ.ಕೆ.ಸುಧಾಕರ್, ಮಲ್ಲೇಶ್ ಬಾಬು, ಶಾಸಕ ಎಸ್‌.ಆರ್.ವಿಶ್ವನಾಥ್, ಧೀರಜ್ ಮುನಿರಾಜು, ಸಮೃದ್ಧಿ ಮಂಜುನಾಥ್, ಬಿ.ಎನ್.ರವಿಕುಮಾರ್, ಸಿ.ಎನ್.ಅಶ್ವತ್ಥನಾರಾಯಣ, ವೈ.ಎ.ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಟಿ.ಬಿ.ನಾಗರಾಜ್, ಸಿ.ಮುನಿರಾಜು, ಸಂಸದ ಎಸ್.ಮುನಿಸ್ವಾಮಿ, ಜೆಡಿಎಸ್, ಬಿಜೆಪಿಯ ಮಾಜಿ ಶಾಸಕರು, ಪಕ್ಷದ ಪ್ರಮುಖರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದವರು
ಸಮಾವೇಶದಲ್ಲಿ ಪಾಲ್ಗೊಂಡಿದ್ದವರು

ಕೈವಾರ ತಾತಯ್ಯ ಅಂಬೇಡ್ಕರ್ ಸ್ಮರಿಸಿದ ಮೋದಿ ‘ಚಿಕ್ಕಬಳ್ಳಾಪುರದ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಸಂತ ಕೈವಾರ ತಾತಯ್ಯ ವಿಶ್ವೇಶ್ವರಯ್ಯ ನಾಡಪ್ರಭು ಕೆಂ‍ಪೇಗೌಡರು ಮತ್ತು ಬಿ.ಆರ್.ಅಂಬೇಡ್ಕರ್ ಅವರನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿದರು.

‘ದೇಶದ ಭವಿಷ್ಯಕ್ಕಾಗಿ ಮತ’ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎನ್ನುವು ನಿಶ್ಚಯ ಮಾಡಲಾಗಿದೆ. ಆ ನಿಶ್ಚಯ ನನಸಾಗುತ್ತದೆ. ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೂತ್ರಿಗೆ ಗೆಲುವಾಗಲಿದೆ. ದೇಶದ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು. 

-ಮಲ್ಲೇಶ್ ಬಾಬು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

ಖರ್ಗೆಯವರನ್ನೇಕೆ ಪ್ರಧಾನಿ ಅಭ್ಯರ್ಥಿ ಮಾಡಲಿಲ್ಲ?

ಕಾಂಗ್ರೆಸ್‌ನವರು ಪರಿಶಿಷ್ಟ ಸಮುದಾಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಏಕೆ ಪ್ರಧಾನಿ ಅಭ್ಯರ್ಥಿ ಮಾಡಲಿಲ್ಲ.   ನಮ್ಮ ತಂಡದ ನಾಯಕ ನಾಯಕ ಮೋದಿ ಇಂಡಿಯಾ ಕೂಟಕ್ಕೆ ನಾಯಕ ಯಾರು ಎನ್ನುವುದೇ ಗೊತ್ತಿಲ್ಲ. ಈ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸುವ ಚುನಾವಣೆ.  ನಿಮ್ಮ ಒಂದು ಮತ ದೇಶದ 140 ಕೋಟಿ ಜನರನ್ನು ರಕ್ಷಿಸುವ ಪ್ರಧಾನಿ ಆಯ್ಕೆಗೆ ಕಾರಣವಾಗುತ್ತದೆ. ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT