ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ನವೋಲ್ಲಾಸ
Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ
ಯೂರೋಪಿನ ಹೃದಯಭಾಗದಲ್ಲಿರುವ ಜೆಕ್‌ನ ರಾಜಧಾನಿ ಪ್ರಾಗ್‌, ಅತ್ಯಂತ ಸುಂದರ ನಗರ. ಪಾರಂಪರಿಕ ಕಟ್ಟಡಗಳು, ವಿಭಿನ್ನ ವಾಸ್ತುಶಿಲ್ಪಗಳು, ಅಪರೂಪದ ಹತ್ತಾರು ಮ್ಯೂಸಿಯಂಗಳಿಂದ ಗಮನ ಸೆಳೆಯುತ್ತದೆ. ಪ್ರವಾಸಿಗರ ಸ್ನೇಹಿಯಂತಿರುವ ಪ್ರಾಗ್‌ ಹೆಚ್ಚು ವಿದೇಶಿಯರನ್ನು ಆಕರ್ಷಿಸುತ್ತಿದೆ.

ಈಚೆಗೆ ನಾನು ಮತ್ತು ಪತ್ನಿ ಝೆಕ್‌ ರಿಪಬ್ಲಿಕ್‌ ದೇಶದ ರಾಜಧಾನಿ ಪ್ರಾಗ್‌ ಪ್ರವಾಸ ಮಾಡಿದೆವು. ಇದು ನಮ್ಮ ಮೊದಲ ವಿದೇಶ ಪ್ರವಾಸವೇನೂ ಅಲ್ಲ, ಈಗಾಗಲೇ ಹತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದೇವೆ. ಆದರೆ, ಪ್ರಾಗ್‌ನಷ್ಟು ಮೋಡಿ ಮಾಡಿದ ದೇಶ ಇನ್ನೊಂದಿಲ್ಲ!

ಪ್ರಾಗ್‌ ನಗರ ಮೂಲದಲ್ಲಿ ಬೊಹೆಮಿಯಾ ರಾಜರ ಐತಿಹಾಸಿಕ ರಾಜಧಾನಿ. ವ್ಲಾತಾವಾ ನದಿಯ ಎರಡೂ ದಡಗಳಲ್ಲೂ ಪಸರಿಸಿದೆ. ಇದು ಯುರೋಪ್‌ನ ಹೃದಯಭಾಗದಲ್ಲಿರುವ ಅತ್ಯಂತ ಸುಂದರ ನಗರ. ಶ್ರೀಮಂತ ರೋಮನೆಸ್ಕ್, ಗೋಥಿಕ್, ನವೋದಯ ಮತ್ತು ಬರೋಕ್ ವಾಸ್ತುಶಿಲ್ಪಗಳೊಂದಿಗೆ ಮಧ್ಯಯುರೋಪ್‌ನ ಅತಿಮುಖ್ಯ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರ.

ಪ್ರಾಗ್‌ನ ಕೋಟೆ, ಚಾರ್ಲ್ಸ್ ಸೇತುವೆ, ಹಳೆ ನಗರದ ವೃತ್ತ, ಖಗೋಳ ಗಡಿಯಾರ, ಯಹೂದಿ ಕ್ವಾಟರ‍್ಸ್, ಪೆಟ್ರಿನ್ ಹಿಲ್ಸ್-ಅಲ್ಲಿರುವ ಕಬ್ಬಿಣದ ಗೋಪುರ ಮತ್ತು ವೈಸ್‌ಹ್ರಾಡ್ ಪ್ರಮುಖವಾಗಿವೆ. 1992ರಲ್ಲಿ ಐತಿಹಾಸಿಕ ಪ್ರಾಗ್‌ ನಗರವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು. ನಗರದಲ್ಲಿ ಹಲವಾರು ಕಲಾ ಗ್ಯಾಲರಿಗಳು ಮತ್ತು ಐತಿಹಾಸಿಕ ಪ್ರದರ್ಶನಗಳೊಂದಿಗೆ ಹತ್ತಕ್ಕೂ ಹೆಚ್ಚು ಉನ್ನತ ದರ್ಜೆಯ ವಸ್ತುಸಂಗ್ರಹಾಲಯಗಳಿವೆ. ಅತ್ಯಾಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲಾ ಕಡೆಗಳಿಂದಲೂ ವ್ಯಾಪಕವಾಗಿ ನಗರವನ್ನು ಸಂಪರ್ಕಿಸುತ್ತದೆ. 

ಪ್ರಾಗ್‌, ಬೊಹೆಮಿಯಾ ಸಾಮ್ರಾಜ್ಯದ ಕಾಲದಲ್ಲಿ ಪವಿತ್ರ ರೋಮನ್ ಚಕ್ರವರ್ತಿಗಳ ನೆಲೆಯಾಗಿತ್ತು. ಮುಖ್ಯವಾಗಿ ಚಾರ್ಲ್ಸ್-4 (1346-1378) ಮತ್ತು ರುಡಾಲ್ಫ್-2 (1575-1611). ಜೊತೆಗೆ ಹ್ಯಾಬ್ಸ್‌ಬರ್ಗ್‌ ರಾಜಪ್ರಭುತ್ವ ಮತ್ತು ಆಸ್ಟ್ರೋ -ಹಂಗೇರಿಯನ್ ಸಾಮ್ರಾಜ್ಯದ ಪ್ರಮುಖ ನಗರವೂ ಆಗಿತ್ತು. ಇದು ಬೊಹೆಮಿಯನ್ ಮತ್ತು ಪ್ರೊಟೆಸ್ಟಂಟ್ ಸುಧಾರಣೆಗಳು, 30 ವರ್ಷಗಳ ಸುದೀರ್ಘ ಯುದ್ಧ (ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್‌ರ ನಡುವೆ), ಎರಡು ವಿಶ್ವ ಮಹಾಯುದ್ಧಗಳು ಹಾಗೂ ಕಮ್ಯುನಿಸ್ಟ್ ಅವಧಿಯಲ್ಲಿ ಝೆಕೊಸ್ಲೊವಾಕಿಯಾದ (ಜೆಕ್ ಮತ್ತು ಯುಗೊಸ್ಲಾವಿಯಾ) ರಾಜಧಾನಿಯಾಗಿ ಪ್ರಮುಖ ಪಾತ್ರ ವಹಿಸಿತ್ತು. ಪ್ರಾಗ್‌ ಹಲವಾರು ಪ್ರಸಿದ್ಧ ಕಲೆ-ಸಾಂಸ್ಕೃತಿಕ ಆಕರ್ಷಣೆಗಳ ನೆಲೆಯಾಗಿದ್ದು 20ನೇ ಶತಮಾನದಲ್ಲಿ ನಡೆದ ಹಿಂಸೆ ಮತ್ತು ವಿನಾಶವನ್ನು ಮೆಟ್ಟಿ ಉಳಿದುಕೊಂಡಿದೆ.

ಮೊದಲ ದಿನ ಪ್ರಾಗ್‌ ಮಧ್ಯಭಾಗದ ವೆನ್ಸೆಸ್ಲಾಸ್‌ ಸ್ಕ್ವೇರ್‌ ತಲುಪಿದಾಗ ಜನರು ತುಂಬಿಹೋಗಿದ್ದರು. ಅಲ್ಲಿಂದ ಪ್ರಾಗ್‌ ಕ್ಯಾಸೆಲ್‌ ನೋಡಲು ಹೊರಟೆವು. ದೂರದಿಂದಲೇ ವೈಭವವಾಗಿ  ವಿಶಾಲವಾದ ಪ್ರಾಂಗಣ, ನಾಲ್ಕಾರು ಚರ್ಚ್‌ಗಳು ಮತ್ತು ಅರಮನೆಗಳ ಸಂಕೀರ್ಣ ಕಾಣಿಸುತ್ತಿದ್ದವು. ಈ ಪುರಾತನ ಕೋಟೆ ಗಿನ್ನಿಸ್ ಪುಸ್ತಕದಲ್ಲಿ ವಿಶ್ವದ ಅತಿದೊಡ್ಡ ಪ್ರಾಚೀನ ಕೋಟೆ ಎಂದು ದಾಖಲಾಗಿದೆ. ಪ್ರತಿ ವರ್ಷ 1.8 ದಶಲಕ್ಷ ಜನರು ಕೋಟೆಯನ್ನು ವೀಕ್ಷಿಸಲು ಬರುತ್ತಾರೆ.

ಕ್ರಿ.ಶ. 870ರಲ್ಲಿ ಇಲ್ಲಿ ವರ್ಜಿನ್ ಮೇರಿ ಚರ್ಚ್‌ ಅನ್ನು ಕಟ್ಟಲಾಯಿತು. 10ನೇ ಶತಮಾನದ ಮೊದಲಾರ್ಧದಲ್ಲಿ ರಾಜ ವ್ರಟಿಕಾಸ್-1, ಡ್ಯೂಕ್ ಆಫ್ ಬೊಹೆಮಿಯಾ ಮತ್ತು ಅವರ ಮಗ ಸೇಂಟ್ ವೆನ್ಸೆಸ್ಲಾಸ್ ಆಳ್ವಿಕೆಯಲ್ಲಿ ಸೇಂಟ್ ಬೆಸಿಲಿಕಾ ಮತ್ತು ಸೇಂಟ್ ವಿಟಸ್ ಬೆಸಿಲಿಕಾ ಕಟ್ಟಲಾಯಿತು. ಇದರ ಜೊತೆಗೆ 12ನೇ ಶತಮಾನದಲ್ಲಿ ರೋಮನೆಸ್ಕ್ ಅರಮನೆಯನ್ನು ನಿರ್ಮಿಸಲಾಯಿತು. ವೈಭವದಿಂದ ಕೂಡಿದ ಚರ್ಚ್‌ಗಳು ಮತ್ತು ಅರಮನೆಗಳು ನಮ್ಮಲ್ಲಿ ಬೆರಗು ಹುಟ್ಟಿಸಿದವು.

ಚಾರ್ಲ್ಸ್ ಬ್ರಿಜ್‌

ಪ್ರಾಗ್‌ನ ಮಧ್ಯಭಾಗದಲ್ಲಿ ಹರಿಯುವ ವ್ಲಾತಾವಾ ನದಿಯ ಮೇಲೆ ಗ್ರಾನೈಟ್ ಕಲ್ಲುಗಳಲ್ಲಿ ಚಾರ್ಲ್ಸ್ ಸೇತುವೆಯನ್ನು ಕಟ್ಟಲಾಗಿದೆ. ಸೇತುವೆ ಮೇಲೆ 30 ಶಿಲ್ಪಕಲಾಕೃತಿಗಳನ್ನು ಇರಿಸಲಾಗಿದೆ. ಹೆಚ್ಚಿನ ಶಿಲ್ಪಗಳು ಬರೋಕ್‌ ಶೈಲಿಯಿಂದ ಕೂಡಿದ್ದು ಕ್ರಿ.ಶ.1700ರ ಸುಮಾರಿಗೆ ಇವುಗಳನ್ನು ಕೆತ್ತಲಾಗಿದೆ. ಆನಂತರ ಶಿಥಿಲಗೊಂಡ ಕಾರಣ ಮರುರೂಪಿಸಲಾಗಿದೆ. ಆದರೆ ಈಗ ಅವೆಲ್ಲ ಮತ್ತೆ ಬಣ್ಣ ಕಳೆದುಕೊಂಡಿವೆ. 30 ಶಿಲ್ಪಕಲಾಕೃತಿಗಳ ಬಗೆಗಿನ ಮಾಹಿತಿಯನ್ನು ಕೆದಕಿದಾಗ ವಿವರಣೆ ಮತ್ತು ಅವುಗಳನ್ನು ಕೆತ್ತಿದ ಕಲಾವಿದರ ಹೆಸರು ಮತ್ತು ಕಾಲವನ್ನು ಕರಾರುವಕ್ಕಾಗಿ ದಾಖಲಿಸಿರುವುದು ಕಾಣಿಸುತ್ತದೆ. ಇದೊಂದು ಅಪರೂಪದ ಪ್ರಾಚೀನ ಸೇತುವೆ.

ಪ್ರಾಗ್‌ ನಗರದಲ್ಲಿ ಹೆಜ್ಜೆ ಹಾಕುತ್ತಿದ್ದರೆ ಇಂತಹ ಕಲಾಕೃತಿಗಳು ಸೆಳೆಯುತ್ತವೆ
ಪ್ರಾಗ್‌ ನಗರದಲ್ಲಿ ಹೆಜ್ಜೆ ಹಾಕುತ್ತಿದ್ದರೆ ಇಂತಹ ಕಲಾಕೃತಿಗಳು ಸೆಳೆಯುತ್ತವೆ

ಮ್ಯೂಸಿಯಂ ಆಫ್ ಕಮ್ಯುನಿಸಂ: 1968ರ ಆಗಸ್ಟ್ 20ರಂದು ರಷ್ಯನ್ ಸೈನ್ಯವು ಯಾವುದೇ ಸೂಚನೆಗಳಿಲ್ಲದೆ ಟ್ಯಾಂಕರುಗಳ ಸಮೇತ ಝೆಕೊಸ್ಲೊವಾಕಿಯಾ (ಝೆಕಿಯಾ ಮತ್ತು ಸ್ಲೊವಾಕಿಯಾ) ಒಳಕ್ಕೆ ನುಗ್ಗಿ ಬಂದಿತ್ತು. ಝೆಕೊಸ್ಲೊವಾಕಿಯಾ ಸರ್ಕಾರ ಯಾವುದೇ ತಯಾರಿ ಇಲ್ಲದ ಕಾರಣ ಸಂಪೂರ್ಣವಾಗಿ ಶರಣಾಗಬೇಕಾಯಿತು. ಪರಿಣಾಮ ಪ್ರಾಗ್‌ನ ಯಾವುದೇ ಪಾರಂಪರಿಕ ಕಟ್ಟಡಗಳು ನಾಶವಾಗಲಿಲ್ಲ. ಎರಡು ದಶಕಗಳ ಕಮ್ಯುನಿಸ್ಟ್ ಹಿಂಸೆಯ ನಂತರ 1991ರಲ್ಲಿ ರಷ್ಯಾ ಹೊರನಡೆದಾಗ 1992ರಲ್ಲಿ ಝೆಕಿಯಾ ಮತ್ತು ಸ್ಲೊವಾಕಿಯಾ ಎರಡೂ ದೇಶಗಳು ಬೇರ್ಪಟ್ಟವು. ಈ ಮ್ಯೂಸಿಯಂನಲ್ಲಿ ರಾಜಕೀಯ ನಾಯಕರ ಕಪ್ಪುಬಿಳುಪು ಬಣ್ಣದ ಚಿತ್ರಗಳಿವೆ. ಅದರಲ್ಲಿ 1979ರಲ್ಲಿ ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರ ವಿಶೇಷವಾಗಿದೆ. ಅದು ಸಮಾಜವಾದಿ ಸಹೋದರರ ಚುಂಬನವಾಗಿದ್ದು ಲಿಯೊನಿಡ್ ಬ್ರೆಜ್ನೇವ್‌ (ಯುಎಸ್‌ಎಸ್‌ಆರ್) ಮತ್ತು ಎರಿಕ್ ಹೊನೆಕರ್ (ಜರ್ಮನ್ ಡೆಮಾಕ್ರಟಿಕ್ ಆಫ್ ಈಸ್ಟ್ ಜರ್ಮನಿ) ಅವರದು. ಇದು ಎರಡನೇ ವಿಶ್ವ ಮಹಾಯುದ್ಧದ ನಂತರದ ಕಮ್ಯುನಿಸ್ಟ್ ಆಡಳಿತದ ಕರಾಳಕಥೆಗಳನ್ನು ಪ್ರಸ್ತುತಪಡಿಸಲು ಮೀಸಲಿಟ್ಟಿರುವ ವಸ್ತು ಸಂಗ್ರಹಾಲಯವಾಗಿದೆ.

ಕಮ್ಯನಿಸಂನ ಕಬ್ಬಿಣದ ಪರದೆಯ ಹಿಂದಿನ ಭೀಕರ ದೃಶ್ಯಗಳನ್ನು ಅನಾವರಣಗೊಳಿಸಿರುವ ಕಲಾಕೃತಿಗಳು, ಸಂದರ್ಶನಗಳು, ಆರ್ಕೈವ್ ಛಾಯಾಚಿತ್ರಗಳು, ಐತಿಹಾಸಿಕ ದಾಖಲೆಗಳನ್ನು ಇಲ್ಲಿ ಇಡಲಾಗಿದೆ. ನಗರದಲ್ಲಿ ಇನ್ನೂ ಹಲವಾರು ಮ್ಯೂಸಿಯಂಗಳಿದ್ದು ಅದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ ಅತ್ಯದ್ಭುತ.

ಇಲ್ಲಿನ ಜನರ ತುಟಿಗಳ ಮೇಲೆ ಸದಾ ಕಿರುನಗೆ ಕಾಣಿಸುತ್ತದೆ. ಅದನ್ನು ಕಂಡ ನಾವೂ ಕೂಡ ತುಟಿಗಳ ಮೇಲೆ ನಗು ತರಿಸಿಕೊಂಡೆವು. ಈ ಜನರು ಮೆಲುಧ್ವನಿಯಲ್ಲಿ ಮಾತನಾಡುತ್ತಾರೆ. ಒಮ್ಮೆ ಹೀಗಾಯಿತು, ಆ ಪರಿಸರದಲ್ಲಿ ನಾವೇ ಜೋರುಧ್ವನಿಯಲ್ಲಿ ಮಾತನಾಡುತ್ತಿರುವುದು ನಮ್ಮದೇ ಗಮನಕ್ಕೆ ಬಂದಿತು. ಸ್ವಲ್ಪ ಸಂಕೋಚವಾಯಿತು. ಆನಂತರ ನಾವೂ ಮೆಲ್ಲಗೆ ಮಾತನಾಡತೊಡಗಿದೆವು. ಅವರಲ್ಲಿನ ಶಿಸ್ತು ಮತ್ತು ಸಂಯಮ ನನಗೆ ತುಂಬಾ ಇಷ್ಟವಾಯಿತು. ವಿಶೇಷವೆಂದರೆ ಶೇಕಡ 48 ರಷ್ಟು ಚೆಕ್ ಪ್ರಜೆಗಳು ಧರ್ಮ ಇಲ್ಲದವರು ಅಥವಾ ಧರ್ಮವನ್ನು ನೋಂದಾಯಿಸಿಕೊಳ್ಳದವರು!

ಪ್ರಾಗ್‌ ನಗರವನ್ನು ವಿಶ್ವದ 69ನೇ ವಾಸಯೋಗ್ಯ ನಗರವೆಂದು ಗುರುತಿಸಲಾಗಿದೆ. ಲಂಡನ್, ಪ್ಯಾರಿಸ್, ರೋಮ್ ಮತ್ತು ಇಸ್ತಾನ್‌ಬುಲ್‌ ನಂತರ ಪ್ರಾಗ್‌ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಯುರೋಪ್‌ನ ಐದನೇ ನಗರವಾಗಿದೆ. 

ಜೊತೆಗಿದ್ದ ಮಗ ‘ನೀವು ಏಪ್ರಿಲ್‌–ಮೇ ತಿಂಗಳಲ್ಲಿ ಬಂದಿದ್ದರೆ ವಸಂತನ ಆಗಮನವಾಗಿರುತ್ತಿತ್ತು. ಆಗ ಇಡೀ ನಗರ ಹೂವಿನಿಂದ ಸಿಂಗರಿಸಿಕೊಂಡ ಸುಂದರಿಯಂತೆ ಕಾಣಿಸುತ್ತದೆ. ರಸ್ತೆಗಳ ಮೇಲೆ ಹೂಮಳೆ. ಆಗ ಪ್ರಾಗ್‌ ನೋಡುವುದೇ ಬಲುಚಂದ’ ಎಂದು ಹೇಳಿದ. ನಮಗೆ ವಸಂತ ಕಾಲದಲ್ಲಿ ಪ್ರಾಗ್‌ ನೋಡುವುದು ಮಿಸ್‌ ಆಗಿದ್ದಕ್ಕೆ ಬೇಸರವಾಯಿತು.

ಹತ್ತು ದಿನಗಳ ಪ್ರವಾಸದ ನಂತರ ಬೆಂಗಳೂರಿಗೆ ಹೊರಟು ನಿಂತಾಗ ಪದೇ ಪದೇ ಅಲ್ಲಿಯ ಜನರ ನಗು, ಮೆಲುಧ್ವನಿ, ತಮ್ಮ ನಗರದ ಮೇಲಿರುವ ಅಪಾರ ಪ್ರೀತಿ ಮತ್ತು ಕಾಳಜಿ, ಸಾವಧಾನದ ಬದುಕು, ಪ್ರವಾಸಿಗರಿಗೆ ಕೊಡುವ ಗೌರವ ಎಲ್ಲವೂ ನೆನಪಾಗುತ್ತಲೇ ಇದ್ದವು.

ಪ್ರಾಗ್‌ ಮಧ್ಯಭಾಗದಲ್ಲಿರುವ ವೆನ್ಸೆಸ್ಲಾಸ್‌ ಸ್ಕ್ವೇರ್‌ನ ಮೋಹಕ ನೋಟ
ಪ್ರಾಗ್‌ ಮಧ್ಯಭಾಗದಲ್ಲಿರುವ ವೆನ್ಸೆಸ್ಲಾಸ್‌ ಸ್ಕ್ವೇರ್‌ನ ಮೋಹಕ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT