ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Published 9 ಮೇ 2024, 16:09 IST
Last Updated 9 ಮೇ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪಗಳಿದ್ದು, ಈ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಅದೇ ರೀತಿ, ಪ್ರಚಾರ ಭಾಷಣ ಮಾಡಿರುವವರ ಪೈಕಿ ಕೆಲ ರಾಜಕೀಯ ನಾಯಕರು ವಿಶೇಷವಾಗಿ ಬಿಜೆಪಿ ಪರವಾಗಿ ಮತ ಯಾಚನೆ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಇ.ಎ.ಎಸ್‌.ಶರ್ಮಾ ಹಾಗೂ ಐಐಎಂನ ನಿವೃತ್ತ ಡೀನ್‌ ತ್ರಿಲೋಚನ ಶಾಸ್ತ್ರಿ ಎಂಬುವವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ ಎಂದು ಆನ್‌ಲೈನ್‌ ಸುದ್ದಿ ಪೋರ್ಟಲ್ ‘ಲೈವ್‌ ಲಾ ಡಾಟ್‌ ಇನ್‌’ ವರದಿ ಮಾಡಿದೆ.

ಏಪ್ರಿಲ್‌ 21ರಂದು ಮೋದಿ ಹಾಗೂ ಏಪ್ರಿಲ್‌ 27ರಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್ ಮಾಡಿರುವ ಭಾಷಣಗಳನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

‘ತೆಲಂಗಾಣದ ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದ ಸಂಸದ ಬಿಜೆಪಿಯ ಅರವಿಂದ ಧರ್ಮಪುರಿ ಅವರ ಅಧಿಕೃತ ಖಾತೆಯಿಂದ, ಇನ್‌ಸ್ಟಾಗ್ರಾಮ್ ಹಾಗೂ ‘ಎಕ್ಸ್‌’ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ  ಇವರಿಬ್ಬರ ಭಾಷಣಗಳನ್ನು ಪದೇಪದೇ ಹಂಚಿಕೊಳ್ಳಲಾಗಿದೆ’ ಎಂದೂ ಅರ್ಜಿದಾರರು ವಿವರಿಸಿದ್ದಾರೆ.

‘ಪ್ರಧಾನಿ ಮೋದಿ ಹಾಗೂ ಸಚಿವ ಠಾಕೂರ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ರೂಢಿಗತವಾದ ಮಾದರಿಯ ಹಾಗೂ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುವಂತಹ ಭಾಷಣಗಳನ್ನು ಮಾಡಿದ್ದಾರೆ. ಇವರ ಭಾಷಣಗಳು ವಿವಿಧ ಮಾಧ್ಯಮಗಳ ಮೂಲಕ ದೇಶದಾದ್ಯಂತ ಪ್ರಸಾರಗೊಂಡಿವೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

‘ದ್ವೇಷ ಭಾಷಣಗಳ ಮೂಲಕ ಈ ಇಬ್ಬರು ಮಾದರಿ ನೀತಿ ಸಂಹಿತೆ, ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ್ದಾರೆ. ಐಪಿಸಿ ಅಡಿ ಶಿಕ್ಷಿಸಬಹುದಾದಂತಹ ಉಲ್ಲಂಘನೆ ಮಾಡಿದ್ದರೂ, ಇವರ ಬಗ್ಗೆ ಚುನಾವಣಾ ಆಯೋಗ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ’ ಎಂದು ವಿವರಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ, ಆಮ್ ಆದ್ಮಿ ಪಕ್ಷ, ಬಿಆರ್‌ಎಸ್‌ ಸೇರಿದಂತೆ ಇತರ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಸ್ವಯಂ ಪ್ರೇರಿತ ಕ್ರಮ ತೆಗೆದುಕೊಂಡಿರುವ ಆಯೋಗವು ಪ್ರಧಾನಿ ಮೋದಿ ಮತ್ತು ಸಚಿವ ಠಾಕೂರ್‌ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅರ್ಜಿದಾರರು ಮನವಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT