ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂದಿನಿ’ಗೆ ಹೆಚ್ಚು ಬೇಡಿಕೆ ಇದೆ, ಟೆಂಡರ್ ಕೈತಪ್ಪಿದರೂ ನಷ್ಟವಿಲ್ಲ: ಕಾಂಗ್ರೆಸ್

Published 1 ಆಗಸ್ಟ್ 2023, 6:15 IST
Last Updated 1 ಆಗಸ್ಟ್ 2023, 6:15 IST
ಅಕ್ಷರ ಗಾತ್ರ

ಬೆಂಗಳೂರು: ತಿರುಪತಿಯ ತಿರುಮಲ ದೇವಸ್ಥಾನದ (ಟಿಟಿಡಿ) ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಕೆಗೆ ಕೆಎಂಎಫ್‌ನ ನಂದಿನಿ ತುಪ್ಪವನ್ನು ಪೂರೈಸಲು ಆಗುವುದಿಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಇತ್ತೀಚೆಗೆ ಬಳ್ಳಾರಿಯಲ್ಲಿ ಹೇಳಿದ್ದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ತಿರುಪತಿಯಲ್ಲಿ ಪ್ರಸಾದದ ರೂಪದಲ್ಲಿ ವಿತರಿಸುವ ಪ್ರಸಿದ್ಧ ಲಡ್ಡುಗಳ ತಯಾರಿಕೆಗೆ ಬಳಸುತ್ತಿದ್ದ ನಂದಿನಿ ತುಪ್ಪದ ಖರೀದಿಯನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ ನಿಲ್ಲಿಸಿದೆ. ಕೆಎಂಎಫ್ ಸಲ್ಲಿಸಿರುವ ತುಪ್ಪದ ದರ ಪ್ರಸ್ತಾವವನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ಅದರ ಬದಲಾಗಿ ಬೇರೆ ಕಂಪನಿಯಿಂದ ತುಪ್ಪ ಖರೀದಿಸಲು ಮುಂದಾಗಿದೆ.

ನಂದಿನಿ ತುಪ್ಪದ ಖರೀದಿ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನಮ್ಮ ಹೆಮ್ಮೆಯ ‘ನಂದಿನಿ’ಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವಿದೆ, ಉತ್ತಮ ಹೆಸರಿದೆ. ಗುಣಮಟ್ಟ, ಬೆಲೆಯಲ್ಲಿ ರಾಜಿಯಾಗುವುದಿಲ್ಲ. ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ’ ಎಂದು ಕೆಎಂಎಫ್ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

‘ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪ ಪೂರೈಸಲು ಟಿಟಿಡಿ ಟೆಂಡರ್‌ ಕರೆದಿತ್ತು. ಆದರೆ, ನಮ್ಮ ಉತ್ಪನ್ನದ ಗುಣಮಟ್ಟ ಹಾಗೂ ಅದಕ್ಕೆ ತಕ್ಕಂತೆ ದರ ಹೆಚ್ಚಿರುವುದರಿಂದ ಪಾಲ್ಗೊಂಡಿಲ್ಲ’ ಎಂದು ಕೆಎಂಎಫ್‌ ಅಧ್ಯಕ್ಷ ಭೀಮನಾಯ್ಕ ತಿಳಿಸಿದ್ದಾರೆ.

‘2005ರಿಂದಲೂ ಕೆಎಂಎಫ್‌ ತುಪ್ಪವನ್ನು ಪೂರೈಸುತ್ತಿತ್ತು. ತಿರುಪತಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೆ ಶೇ 45ರಷ್ಟು ನಂದಿನಿ ಬ್ರ್ಯಾಂಡ್‌ ತುಪ್ಪವನ್ನೇ ಬಳಸಲಾಗುತ್ತಿತ್ತು. 2022ರಲ್ಲಿ ಕೋರಿಕೆಯ ಮೇರೆಗೆ ಮಾತ್ರ ಪ್ರತಿ ಕೆ.ಜಿ.ಗೆ ₹349ರಂತೆ 345 ಟನ್‌ ತುಪ್ಪ ಪೂರೈಸಲಾಗಿತ್ತು. ಆದರೆ, ಈ ಬಾರಿ ತುಪ್ಪದ ಬೇಡಿಕೆ ನಮ್ಮ ರಾಜ್ಯದಲ್ಲೇ ಹೆಚ್ಚಾಗಿದ್ದು, ಸಂಗ್ರಹದ ಕೊರತೆಯೂ ಇದೆ. ಜತೆಗೆ, ನಿರೀಕ್ಷೆಗೆ ತಕ್ಕಂತೆ ನಮಗೆ ದರ ದೊರೆತಿಲ್ಲ. ಟಿಟಿಡಿ ಟೆಂಡರ್‌ನಲ್ಲಿ ನಾವು ನಿಗದಿಪಡಿಸಿದ ದರ ಮೂರನೇ ಸ್ಥಾನದಲ್ಲಿದೆ. ಹೀಗಾಗಿ, ಕೆಎಂಎಫ್‌ ತುಪ್ಪ ಪೂರೈಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಬಿಜೆಪಿ ಮುಖಂಡ ಸಿ.ಟಿ. ರವಿ ಈ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಅವರಿಗೆ ಈಗ ಕೆಲಸವಿಲ್ಲ. ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ ಕಾಂಗ್ರೆಸ್‌ ನೀತಿಯಿಂದಾಗಿ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಂಡಿದೆ. ತಿರುಪತಿಯೊಂದಿಗಿನ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದ್ದು, ಹಿಂದೂಗಳೆಡಗಿನ ಸಿಎಂ ಸಿದ್ದರಾಮಯ್ಯ ಅವರ ತಾತ್ಸಾರ ನೀತಿ ರುಜುವಾತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಕಿಡಿಕಾರಿದ್ದಾರೆ.

ಇದ‌ನ್ನೂ ಓದಿ... ತಿರುಪತಿ ಲಡ್ಡುಗೆ ನಂದಿನಿ ತುಪ್ಪ: KMF ಅಧ್ಯಕ್ಷರ ಹೇಳಿಕೆ ಸರಿಯಲ್ಲ ಎಂದ ಟಿಟಿಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT