ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ಮತ ಚಲಾಯಿಸುವವರ ಅರ್ಧ ಭಾಗದಷ್ಟಿರುವ ಮಹಿಳೆಯರ ಪ್ರಶ್ನೆಗಳು ಎಲ್ಲಿವೆ?
Published 22 ಏಪ್ರಿಲ್ 2024, 19:15 IST
Last Updated 22 ಏಪ್ರಿಲ್ 2024, 19:15 IST
ಅಕ್ಷರ ಗಾತ್ರ

ಹಿಂದೆಲ್ಲ ರಾಜಕೀಯ ಪಕ್ಷಗಳ ಜನ ಕಾರು, ಜೀಪುಗಳಲ್ಲಿ ಮೈಕ್ ಹಾಕಿಕೊಂಡು ನಡೆಸುತ್ತಿದ್ದ ಚುನಾವಣಾ ಪ್ರಚಾರ ಆರಂಭದ ವಾಕ್ಯ ನಿಮಗೆ ನೆನಪಿರಬಹುದು: ‘ಮಾನ್ಯ ಮತದಾರ ಬಾಂಧವರೇ!’ ಎಷ್ಟೋ ಸಲ ಈ ಸಂಬೋಧನೆಗಳು ‘ಮಾನ್ಯ ಮತಬಾಂಧವರೇ’ ಎಂದು ಕೂಡ ಶುರುವಾಗುತ್ತಿದ್ದವು! ಈ ಎರಡೂ ಬಗೆಯ ಸಂಬೋಧನೆಗಳಲ್ಲಿ ಮಹಿಳೆಯರು ಲೆಕ್ಕಕ್ಕೇ ಇರಲಿಲ್ಲ ಎಂಬುದು ಮೇಲ್ನೋಟಕ್ಕೇ ಕಾಣುತ್ತಿತ್ತು. ರಾಜಕೀಯ ಪಕ್ಷಗಳ ಆ ಧೋರಣೆ ಇಂದಿಗೂ ಬದಲಾಗಿಲ್ಲ.

ಆಸ್ಟ್ರೇಲಿಯಾದ ಸ್ತ್ರೀವಾದಿ ಡೇಲ್ ಸ್ಪೆಂಡರ್‌ ತಮ್ಮ ‘ಮ್ಯಾನ್‌‌‌ ಮೇಡ್ ಲ್ಯಾಂಗ್ವೇಜ್’ ಪುಸ್ತಕದಲ್ಲಿ, ಪುರುಷರು ನಿರ್ಮಿಸಿದ ಭಾಷೆಯು ಮಹಿಳೆಯರನ್ನು ಹೇಗೆ ಹೊರಗಿಡುತ್ತದೆ ಎಂಬುದನ್ನು ತೋರಿಸಿದ್ದಾರೆ. ಪುರುಷನಿರ್ಮಿತ ಭಾಷೆಯಿಂದಾಗಿ ಕನ್ನಡದಲ್ಲಿ ‘ಮತದಾರ’ ಎಂಬ ಪದವೇ ಚಾಲ್ತಿಯಲ್ಲಿದೆ, ‘ಮತದಾರ್ತಿ’ ಎಂಬ ಪದವೇ ಇಲ್ಲ. ಹಿಂದಿಯಲ್ಲೂ ‘ಮತದಾತ’ ಎಂಬ ಪದವೇ ಇದೆ. ಸಮಾಜದ ಮನಸ್ಸಿನಲ್ಲಿ ಇಲ್ಲದಿರುವುದು ಭಾಷೆಯಲ್ಲಿ ಬರುವುದಿಲ್ಲ. ಆದ್ದರಿಂದಲೇ ರಾಜಕಾರಣಿಗಳ ಬಾಯಲ್ಲೂ ಮಹಿಳಾ ಮತದಾರರ ಅಗತ್ಯಗಳ ಮಾತೇ ಬರುವುದಿಲ್ಲ. ಇದನ್ನು ಸರಿಮಾಡುವ ಮೊದಲ ಹೆಜ್ಜೆಯೆಂದರೆ, ಮಹಿಳೆಯನ್ನು ಅದೃಶ್ಯವಾಗಿಸುವ ಭಾಷೆಯ ಪೂರ್ವಗ್ರಹವನ್ನು ತೊಡೆಯುವುದು.

ಭಾರತದ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವರ ಒಟ್ಟು ಸಂಖ್ಯೆ (ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ ಸಂದರ್ಭದಲ್ಲಿ ನೀಡಿದ ವಿವರದಂತೆ): 96.8 ಕೋಟಿ. ಮಹಿಳಾ ಮತದಾರರು: 47.1 ಕೋಟಿ. ಪುರುಷ ಮತದಾರರು: 49.7 ಕೋಟಿ.

ಅಂದರೆ, ಈ ಚುನಾವಣೆಯಲ್ಲಿ ಅರ್ಧ ಭಾಗದಷ್ಟು ಮಹಿಳಾ ಮತದಾರರ ಮತಗಳಿವೆ! ಆದರೆ ಚುನಾವಣಾ ಪ್ರಣಾಳಿಕೆಗಳಲ್ಲಿ ಈ ಅರ್ಧ ಭಾಗದಷ್ಟು ವರ್ಗದ ಉದ್ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಇಲ್ಲ. ಚುನಾವಣಾ ಭಾಷಣಗಳಲ್ಲಂತೂ ನಾಯಕ, ನಾಯಕಿಯರು ಮಹಿಳೆಯರ ನಿಜವಾದ ಪ್ರಶ್ನೆಗಳನ್ನು ಉದ್ದೇಶಿಸಿ ಮಾತಾಡುವುದೇ ಕಡಿಮೆ. ಅಗ್ಗದ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡಲೆತ್ನಿಸುವಾಗ ಮಾತ್ರ ನಾಯಕರಿಗೆ ಮಹಿಳೆಯರು ನೆನಪಾಗುತ್ತಾರೆ. ಇವರ ಪ್ರಕಾರ ಮಹಿಳೆಯರು ವೋಟಿಗುಂಟು; ಅಧಿಕಾರ, ಅವಕಾಶಕ್ಕಿಲ್ಲ.

ಬಹುತೇಕ ಚುನಾವಣಾ ಸಮೀಕ್ಷೆಗಳಲ್ಲಿ ಕೂಡ ಆಯಾ ಸಲದ ಮತದಾನದ ಒಲವುಗಳನ್ನು ಗುರುತಿಸಲು ಸಂಪರ್ಕಿಸಿದ ಮಹಿಳೆಯರೆಷ್ಟು ಎಂಬ ಅಂಕಿಅಂಶವೇ ಇಲ್ಲ. ಅರ್ಧಭಾಗ ಭಾರತ ಹೇಗೆ ಯೋಚಿಸುತ್ತದೆ, ಹೇಗೆ ಮತ ಹಾಕುತ್ತದೆ ಎಂಬ ಅರಿವಿಲ್ಲದ ಸಮೀಕ್ಷೆಗಳು ಮಹಿಳಾ ಮತದಾರರ ಒಲವು ನಿಲುವುಗಳು, ಅವರ ಬೇಡಿಕೆಗಳು, ನಿರೀಕ್ಷೆಗಳು ಲೆಕ್ಕಕ್ಕೇ ಇಲ್ಲವೆಂಬಂತೆ ವರ್ತಿಸುತ್ತಿವೆ.

ಈ ಪುರುಷಾಹಂಕಾರದ ರಾಜಕೀಯ ಧೋರಣೆ ಸ್ವಾತಂತ್ರ್ಯ ದೊರೆತ ತಕ್ಷಣದಿಂದಲೇ ಶುರುವಾಯಿತು. ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹ ಅಷ್ಟು ದೊಡ್ಡ ಚಳವಳಿಯಾಗಿದ್ದಕ್ಕೆ ಮಹಿಳೆಯರು ಭಾಗಿಯಾಗಿದ್ದು ಕಾರಣವಾಗಿದ್ದನ್ನು ಆನಂತರ ಅಧಿಕಾರ ಹಿಡಿದ ನಾಯಕರು ಮರೆತರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಹಿಳೆಯರು, ಕಾಲೇಜು ಹುಡುಗಿಯರು ಭೂಗತ ಹೋರಾಟಗಳಲ್ಲಿ ಭಾಗಿಯಾಗಿದ್ದನ್ನು, ಭೂಗತ ಸ್ವಾತಂತ್ರ‍್ಯ ಹೋರಾಟಗಾರರನ್ನು ಮನೆಯಲ್ಲಿಟ್ಟುಕೊಂಡು ರಕ್ಷಿಸಿದ್ದನ್ನು, ಆ ಮಹಿಳಾ ರಾಜಕೀಯ ತಯಾರಿಯನ್ನು ದೇಶವೇ ಮರೆಯಿತು.

ಅಷ್ಟೇ ಅಲ್ಲ, ದೇಶದ ಸ್ತ್ರೀ– ಪುರುಷರ ಸ್ವಾತಂತ್ರ್ಯ ಹೋರಾಟದ ಫಲವಾಗಿ ಅಧಿಕಾರ ಹಿಡಿದ ನಾಯಕರಲ್ಲಿ ಬಹುತೇಕರು ಅಂಬೇಡ್ಕರ್‌ ಅವರು ಹಿಂದೂ ಕೋಡ್ ಬಿಲ್ ಮಂಡಿಸಿ ಮಹಿಳೆಯರಿಗೆ ಆಸ್ತಿಯ ಹಕ್ಕು ದೊರಕಿಸಿಕೊಡಲು ಹೊರಟಾಗ ತಡೆಯೊಡ್ಡಿದರು. ಜಾತಿ ಮನಸ್ಸು ಲಿಂಗಭೇದದಲ್ಲೂ ತೊಡಗುವುದನ್ನು ಕಂಡಿದ್ದ ಅಂಬೇಡ್ಕರ್‌ ಮೊದಲು ಜಾತಿವಿನಾಶದ ಕಾರ್ಯಕ್ರಮಗಳನ್ನು ಆರಂಭಿಸಿದರು, ನಂತರ ಮಹಿಳಾ ಸಮಾನತೆಗಾಗಿ ಆಸ್ತಿಯ ಹಕ್ಕಿನ ಮಸೂದೆ ಮಂಡಿಸಿದರು. ಮುಂದೆ ಅದು ಮಹಿಳೆಯರ ರಾಜಕೀಯಾಧಿಕಾರಕ್ಕೂ ಎಡೆ ಮಾಡಿಕೊಡಲಿತ್ತು. ಆ ಮಸೂದೆ ಕಾಯ್ದೆಯಾಗಿದ್ದು ಮುಂದೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಕಾಲದಲ್ಲಿ; ಅದಕ್ಕೂ ಮೊದಲು ಕರ್ನಾಟಕದಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರದ ಕಾಲದಲ್ಲಿ.

ಆದರೆ ಈ ಹಕ್ಕುಗಳು ದಕ್ಕಿವೆ ಎಂಬುದನ್ನು ಮಹಿಳಾ ಸಮುದಾಯಕ್ಕೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡಬಲ್ಲ ನಾಯಕಿಯರಿಗೆ ರಾಜಕೀಯ ವೇದಿಕೆಗಳಲ್ಲಿ ಅವಕಾಶವೇ ಕಡಿಮೆ. ರಾಜಕೀಯ ಸಭೆಗಳಲ್ಲಿ ವೇದಿಕೆಯಲ್ಲಿ ಇರಬೇಕಾದ ಮಹಿಳಾ ಪದಾಧಿಕಾರಿಗಳ ಹೆಸರಿರುತ್ತದೆ. ಆದರೆ, ಪುರುಷ ರಾಜಕಾರಣಿಗಳು ಬಿಟ್ಟ ಅಂಚಿನ ಸೀಟು ಮಾತ್ರ ಮಹಿಳೆಯರಿಗೆ. ಉದ್ಘಾಟನೆಯ ಫೋಟೊಗಳಲ್ಲಿ ಕಾಣಿಸಿಕೊಳ್ಳಲು ಗೂಳಿಯಂತೆ ನುಗ್ಗುವ ಪುರುಷರ ಜೊತೆಗೆ ಮಹಿಳೆಯರು ಹೇಗೆ ಸ್ಪರ್ಧಿಸಬಲ್ಲರು?! ಮಹಿಳೆಯರಿಗೆ ಚುನಾವಣಾ ಭಾಷಣಗಳ ಅವಕಾಶವೂ ಇಲ್ಲ, ಸಭೆಯ ವರದಿಗಳಲ್ಲೂ ಮಹಿಳೆ ಇಲ್ಲ. ಪಕ್ಷವೊಂದರ ಅಖಿಲ ಭಾರತ ಆನ್‌ಲೈನ್ ಮೀಟಿಂಗಿನಲ್ಲೂ ಇದೇ ಸ್ಥಿತಿ. ಪಕ್ಷದ ಅಧ್ಯಕ್ಷರು ಮಹಿಳೆಯರನ್ನು ‘ಚುಟುಕಾಗಿ ಮಾತಾಡಿ’ ಎನ್ನುತ್ತಿದ್ದರು. ಮಾತಾಡುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆಯಿತ್ತು.

ಆದರೆ ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ಆಣೆ ಪ್ರಮಾಣ, ಕುಂಕುಮ, ವೀಳ್ಯದೆಲೆಗಳ ಮೂಲಕ ಮಾಡುವ ಮತ ಯಾಚನೆಗೆ, ಮಹಿಳೆಯರನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡುವುದಕ್ಕೆ ಮಹಿಳೆಯರೇ ಬೇಕು! ಇಂಥ ಸಂದರ್ಭಗಳಲ್ಲಿ ಮಹಿಳಾ ಮತದಾರರನ್ನು ಪುರುಷ ಅಭ್ಯರ್ಥಿಯ ಪತ್ನಿಯು ಭಾವನಾತ್ಮಕವಾಗಿ ಸೆಳೆಯಲು ಮುಂದಾದಂತಹ ಉದಾಹರಣೆಗಳಿವೆ.

ಇಡೀ ಸಮಸ್ಯೆಗೆ ಇನ್ನೊಂದು ಮುಖವೂ ಇದೆ. ಬಹುತೇಕ ಮಹಿಳೆಯರು ಅಧಿಕಾರ ರಾಜಕಾರಣದ ಬಗ್ಗೆ ಯೋಚಿಸುವ, ಮಾತಾಡುವ ಆಸಕ್ತಿ ತೋರುವುದಿಲ್ಲ. ಈ ದೃಷ್ಟಿಯಿಂದಲಾದರೂ ನಮ್ಮ ಸ್ತ್ರೀವಾದಿ ಚಿಂತನೆಗಳೊಳಗೆ ಸಮಕಾಲೀನ ರಾಜಕೀಯ ಅಧಿಕಾರದ ಪ್ರಶ್ನೆಗಳು ದೊಡ್ಡ ಮಟ್ಟದಲ್ಲಿ ಬೆಸೆದುಕೊಳ್ಳುವ ಅಗತ್ಯವಿದೆ. ಸ್ತ್ರೀವಾದಿ ಚಿಂತಕಿಯರು ರಾಜಕೀಯದಲ್ಲಿ ಆಸಕ್ತಿಯಿರುವ ಮಹಿಳೆಯರನ್ನು ಉದ್ದೇಶಿಸಿ ಸರಳವಾಗಿ ಮಾತಾಡಬೇಕಾಗುತ್ತದೆ. ಮಹಿಳೆಯರ ಬಗ್ಗೆ ಅಡ್ಡ ಮಾತಾಡುವ ರಾಜಕಾರಣಿಗಳನ್ನು ಎದುರಿಸುವ ತಾತ್ವಿಕ ರೀತಿಗಳನ್ನು ಸಾಮಾಜಿಕ ಚಿಂತಕಿಯರು ರಾಜಕೀಯ ಪಕ್ಷಗಳಲ್ಲಿರುವ ಮಹಿಳೆಯರಿಗೆ ಹೇಳಿಕೊಡಬೇಕಾಗುತ್ತದೆ. ಆದರೆ ಅಷ್ಟಿಷ್ಟು ಪ್ರಗತಿಪರ ಧೋರಣೆಯಿರುವ ರಾಜಕೀಯ ಪಕ್ಷಗಳಲ್ಲಿರುವ ನಾಯಕಿಯರು ಕೂಡ ಸಾಮಾಜಿಕ ಚಿಂತಕಿಯರ ವಲಯಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿರುವುದು ಕಡಿಮೆ.

ಇನ್ನು ಚುನಾವಣೆಗಳ ನಂತರದ ಮಂತ್ರಿಮಂಡಲಗಳಲ್ಲಿ ಮಹಿಳೆಯರಿಗೆ ಸಿಗುವ ಸ್ಥಾನ ಹಾಗೂ ಖಾತೆಗಳ ಪರಿ ನೋಡಿದರಂತೂ ಪುರುಷ ರಾಜಕಾರಣಿಗಳ ಲಜ್ಜೆಗೆಟ್ಟ ಸ್ವಾರ್ಥ ಎಲ್ಲರಿಗೂ ಗೊತ್ತಾಗುತ್ತದೆ. ಸದ್ಯದ ಚುನಾವಣಾ ರಾಜಕಾರಣ, ಚುನಾವಣಾ ನಂತರದ ಅಧಿಕಾರ ರಾಜಕಾರಣ ಎರಡೂ ಹೀಗಿರುವಾಗ, 2029ಕ್ಕೆ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಬರುವ ಹೊತ್ತಿಗೆ ಮಹಿಳೆಯರ ರಾಜಕೀಯ ತಯಾರಿ ಯಾವ ರೀತಿ ಇರಬಲ್ಲದು ಎಂಬ ದೊಡ್ಡ ಪ್ರಶ್ನೆ ನಮ್ಮೆದುರಿಗಿದೆ.

ಈ ಹಿನ್ನೆಲೆಯಲ್ಲಿ ರಾಜಕೀಯ ಅವಕಾಶವಂಚಿತ ಮಹಿಳೆಯರೇ ಒಂದು ವರ್ಗವಾಗಿ ತಮ್ಮ ರಾಜಕೀಯ ಹಕ್ಕುಗಳಿಗಾಗಿ, ಮುನ್ನಡೆಗಾಗಿ ಸಂಘಟಿತರಾಗದಿದ್ದರೆ ಸೂಕ್ತ ಮಹಿಳಾ ಪ್ರಾತಿನಿಧ್ಯ ದಕ್ಕಲಾರದು. ಮಹಿಳಾ ಮತದಾರರು ಎಂಬ ವಿಶಿಷ್ಟ ವರ್ಗವನ್ನು ಬರೀ ಚುನಾವಣೆಗಾಗಿ ಸೃಷ್ಟಿಸಿದರೆ ಪ್ರಯೋಜನವಿಲ್ಲ. ಅವರನ್ನು ನಾಯಕಿಯರನ್ನಾಗಿ ತಯಾರು ಮಾಡುವ ದೊಡ್ಡ ಸವಾಲು ಇಲ್ಲಿದೆ. ಈ ಥರದ ಪ್ರಶ್ನೆಗಳು ಈ ಚುನಾವಣೆಯಲ್ಲಿ ಬಗೆಹರಿಯುವಂಥವಲ್ಲ. ಆದರೆ ಚುನಾವಣಾ ಕಾಲ ಎಲ್ಲರಲ್ಲೂ ಒಂದು ಬಗೆಯ ರಾಜಕೀಯ ಎಚ್ಚರ ಮೂಡಿಸುವ ಕಾಲ. ಈಗಲಾದರೂ ಇಂಥ ಪ್ರಶ್ನೆಗಳನ್ನು ಚರ್ಚೆಗೆ ತರದಿದ್ದರೆ ಮಹಿಳಾ ಮತದಾರರ ರಾಜಕೀಯ ಪ್ರಜ್ಞೆ ಮೊನಚಾಗಲಾರದು.

ಕೊನೆಯದಾಗಿ, ಈಚೆಗೆ ಎರಡು ರಾಜಕೀಯ ಬಿಕ್ಕಟ್ಟುಗಳ ಸಮಯದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ಪ್ರವೇಶಿಸಿದ ಇಬ್ಬರು ಉದಯೋನ್ಮುಖ ನಾಯಕಿಯರು ಕುತೂಹಲ ಹುಟ್ಟಿಸುತ್ತಿದ್ದಾರೆ. ಅರವಿಂದ ಕೇಜ್ರಿವಾಲರ ಬಂಧನ ಖಂಡಿಸಲು ದೆಹಲಿಯಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಹಾಗೂ ಮೊನ್ನೆ ರಾಂಚಿಯ ಚುನಾವಣಾ ಸಭೆಯಲ್ಲಿ ಕೇಜ್ರಿವಾಲ್ ಪತ್ನಿ ಸುನೀತಾ, ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಇಬ್ಬರೂ ದಿಟ್ಟವಾಗಿ ಮಾತಾಡಿದ್ದಾರೆ. ಇದೊಂದು ರಾಜಕೀಯ ಸ್ಟ್ರ್ಯಾಟಿಜಿಯೇ ಇರಬಹುದು. ಆದರೂ ಈವರೆಗೆ ಹಿನ್ನೆಲೆಯಲ್ಲೇ ಇದ್ದ ಈ ಇಬ್ಬರೂ ವಿದ್ಯಾವಂತ ಮಹಿಳೆಯರು ಚುನಾವಣಾಕಾಲದ ರಾಜಕೀಯ ಬಿಕ್ಕಟ್ಟಿನ ವೇಳೆಯಲ್ಲಿ ತೋರುತ್ತಿರುವ ದಿಟ್ಟತನ, ಮಹಿಳಾ ರಾಜಕೀಯದ ಹೊಸ ಹೆಜ್ಜೆಯೊಂದನ್ನು ರೂಪಿಸಬಲ್ಲದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT