ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಕರ್ನಾಟಕದ 25 ವರ್ಷಗಳ ಮುನ್ನೋಟ: ಸಾಂಸ್ಕೃತಿಕ ಕರ್ನಾಟಕ ಸವಾಲು–ಸಾಧ್ಯತೆ
ಕರ್ನಾಟಕದ 25 ವರ್ಷಗಳ ಮುನ್ನೋಟ: ಸಾಂಸ್ಕೃತಿಕ ಕರ್ನಾಟಕ ಸವಾಲು–ಸಾಧ್ಯತೆ
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಈಚಿನ ಸಾರ್ವಜನಿಕ ಚರ್ಚೆಗಳಲ್ಲಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಮತ್ತು ಕವಿರಾಜಮಾರ್ಗದ ‘ಪರ ಧರ್ಮಮುಮಂ ಪರ ವಿಚಾರಮುಮಂ ನೆರೆ ಸೈರಿಸಲಾರ್ಪುದು’ ಹೇಳಿಕೆಗಳು ಬಳಕೆಯಾದವು ಎಂಬುದು ಗಮನಾರ್ಹ. ರಾಜಪ್ರಭುತ್ವದೊಳಗೆ ಹುಟ್ಟಿದ ಕವಿರಾಜಮಾರ್ಗವು ಪ್ರಸ್ತಾಪಿಸುತ್ತಿರುವ ಈ ಸೈರಣೆ, ಬಹುಭಾಷೆ ಬಹುಧರ್ಮ ಬಹುಸಂಸ್ಕೃತಿಗಳಿರುವ ಸಮಾಜದಲ್ಲಿ ಇರಬೇಕಾದ ಸಾಂಸ್ಕೃತಿಕ ಡೆಮಾಕ್ರಸಿಗೆ ಸಂಬಂಧಿಸಿದ ಮೌಲ್ಯ. ಸ್ತ್ರೀಸಂವೇದನೆ ಮತ್ತು ಅಂಬೇಡ್ಕರ್ ಚಿಂತನೆಗಳ ಮೂಲಕ ಲೋಕವನ್ನು ನೋಡುವ ದೃಷ್ಟಿಕೋನಗಳು, ಹಿಂದಿಗಿಂತ ಹೆಚ್ಚು ಮುಂಚೂಣಿಗೆ ಬರುತ್ತಿವೆ.

*****

ಕೆಂಗಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರವು ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಿತು. ಇಲಾಖೆಯ ಮೂಲಕ ಪ್ರಾಚೀನ ಕಾವ್ಯಗಳನ್ನು ಮುದ್ರಿಸಿ ಕಡಿಮೆ ಬೆಲೆಗೆ ವಿತರಿಸಲು ನಿರ್ಧರಿಸಿತು. ಆದರೆ ಸಂಸ್ಕೃತಿ ಹೆಸರಲ್ಲಿ ಸರ್ಕಾರದ ಕೆಲಸ ಸಾಂಪ್ರದಾಯಿಕ ಜೀವನ ಮೌಲ್ಯಗಳನ್ನು ಹರಡುವ ಪುಸ್ತಕಗಳನ್ನು ಮುದ್ರಿಸಿ ಒದಗಿಸುವುದಲ್ಲ ಎಂದು ಅನೇಕರು ಟೀಕಿಸಿದರು. ನಾಗರಿಕ ಸರ್ಕಾರವು ಪ್ರಜೆಗಳಲ್ಲಿ ಆಧುನಿಕ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಡಿಎಂಕೆ ಪಕ್ಷವು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಾಗ ಜಗತ್ತಿನ ಚಿಂತಕರನ್ನು ಕುರಿತ ಪುಸ್ತಕಗಳನ್ನು ತಮಿಳಿನಲ್ಲಿ ಪ್ರಕಟಿಸಿದ್ದು, ಅವರ ಗಮನದಲ್ಲಿದ್ದಿರಬಹುದು.

ಇದೇ ಕಾಲಕ್ಕೆ ಸಂಸ್ಕೃತಿ ಇಲಾಖೆಯಿಂದ ಸಂಸ್ಕೃತಿ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವ ಪುಸ್ತಕಗಳು ಪ್ರಕಟವಾದವು. ಪ್ರಾಚೀನ ಪ್ರಭುತ್ವಗಳು ಕಲಾಪೋಷಣೆ ಮಾಡಿದ ಇತಿಹಾಸವನ್ನು ಕಟ್ಟಿಕೊಡುತ್ತ, ಈ ಕಾರ್ಯವನ್ನು ಆಧುನಿಕ ಸರ್ಕಾರಗಳೂ ಮಾಡಬೇಕೆಂಬುದು ಅವುಗಳ ಸಾರವಾಗಿತ್ತು. ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಹುತೇಕ ಕಾರ್ಯಕ್ರಮಗಳು ಈ ವ್ಯಾಖ್ಯೆಯ ಚೌಕಟ್ಟಿನಲ್ಲೇ ಇರುವುದು ಗಮನಾರ್ಹ. ಆದರೆ ಉಚ್ಚವರ್ಗಗಳ ಜೀವನ ಮೌಲ್ಯಗಳ ನೆಲೆಯಿಂದ ರೂಪುಗೊಂಡಿದ್ದ ಈ ಸಂಸ್ಕೃತಿ ವ್ಯಾಖ್ಯೆ ಸಮಸ್ಯಾತ್ಮಕವಾಗಿತ್ತು. ಇದು ಸಾಹಿತ್ಯ ಸಂಗೀತ ನೃತ್ಯವೇ ಮೊದಲಾದ ಲಲಿತಕಲೆಗಳನ್ನು ತನ್ನ ಕಣ್ಣೆದುರು ಇರಿಸಿಕೊಂಡಿತ್ತು. ಸಂಸ್ಕೃತಿಯ ವಿಮರ್ಶಾತ್ಮಕ ಅನುಸಂಧಾನಕ್ಕೆ ಬದಲಾಗಿ ವೈಭವೀಕರಣ ಮಾಡುತ್ತಿತ್ತು. ನಾಡಿನ ದುಡಿವ ವರ್ಗದ ವಿವಿಧ ಜನಸಮದಾಯಗಳಲ್ಲಿರುವ ಜೀವನಪದ್ಧತಿಯ್ನನಾಗಲಿ ಅಲ್ಲಿರುವ ಲೋಕದೃಷ್ಟಿಗಳನ್ನಾಗಲಿ ಒಳಗೊಂಡಿರಲಿಲ್ಲ.

ಸಂಸ್ಕೃತಿಯ ಈ ಸಾಂಪ್ರದಾಯಿಕ ಚೌಕಟ್ಟನ್ನು ಭಗ್ನಗೊಳಿಸಿ, ಅದಕ್ಕೆ ಹೊಸ ತಿರುವು ಕೊಟ್ಟಿದ್ದು ಬಸವಲಿಂಗಪ್ಪನವರ ಬೂಸಾಸಾಹಿತ್ಯ ಪ್ರಕರಣ. ಈ ಪ್ರಕರಣದಿಂದ ಹೊಮ್ಮಿದ ಚಿಂತನೆಗಳಿಂದ ಪ್ರೇರಿತರಾಗಿ, ಲಂಕೇಶ್, ತೇಜಸ್ವಿ, ಚಂಪಾ, ಆಲನಹಳ್ಳಿ ಮೊದಲಾದ ಲೇಖಕರು ‘ಬರೆಹಗಾರ ಮತ್ತು ಕಲಾವಿದರ ಒಕ್ಕೂಟ’ದ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಂಡರು. ಇದನ್ನು ಉದ್ಘಾಟಿಸುತ್ತ ಕುವೆಂಪು ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಭಾಷಣ ಮಾಡಿದರು. ಇಲ್ಲಿ ಸಾಮಾಜಿಕ ಅಥವಾ ರಾಜಕೀಯ ಪರಿಕಲ್ಪನೆಗಳಿಗೆ ಲಗತ್ತಾಗುವ ‘ಕ್ರಾಂತಿ’ ವಿಶೇಷಣವನ್ನು ಸಂಸ್ಕೃತಿಗೆ ಜೋಡಿಸಿದ್ದು ವಿಶೇಷವಾಗಿತ್ತು. ಕುವೆಂಪು ಪ್ರಕಾರ, ಜನರ ಚಿಂತನ ಕ್ರಮವನ್ನು ಪ್ರಭಾವಿಸುವ ಧರ್ಮ, ಸಾಹಿತ್ಯ, ಲಲಿತಕಲೆ, ನಂಬಿಕೆ, ಆಚರಣೆ, ಪುರಾಣಗಳಿಗೆ ವರ್ತಮಾನವು ತೋರಬೇಕಾದ್ದು, ಕುರುಡು ಅನುಸರಣೆಯಲ್ಲ. ಒರಟು ನಿರಾಕರಣೆಯೂ ಅಲ್ಲ. ಅವನ್ನು ವಿಮರ್ಶಾತ್ಮಕ ನೆಲೆಯಲ್ಲಿ ಮುಖಾಮುಖಿ ಮಾಡುತ್ತ, ಹೊಸ ಮೌಲ್ಯಪ್ರಜ್ಞೆಯನ್ನು ಸೃಷ್ಟಿಸಬೇಕು. ಬಳಿಕ ಮುಂದೆ ಅನಂತಮೂರ್ತಿಯವರ ಜತೆಗಿನ ತೀಕ್ಷ್ಣ ವಾಗ್ವಾದದಲ್ಲಿ ತೇಜಸ್ವಿಯವರು ‘ಕರ್ನಾಟಕ ಸಂಸ್ಕೃತಿಯ ವಿಶ್ಲೇಷಣೆ’ ಲೇಖನ ಬರೆದರು.

ಮುಂದೆ ಸಂಸ್ಕೃತಿ ಎಂದರೆ, ನಾಡಿನ ಜನ ಸಮುದಾಯಗಳ ಆಲೋಚನಕ್ರಮ, ಜೀವನವಿಧಾನ ಹಾಗೂ ಮೌಲ್ಯಪ್ರಜ್ಞೆಯ ಅಭಿವ್ಯಕ್ತಿ ಎಂಬ ಗ್ರಹಿಕೆ ಮುನ್ನೆಲೆಗೆ ಬಂದಿತು. ಇದು ನಾಡಿನ ಸಮಸ್ತ ಸಮುದಾಯಗಳ ಭಾಷೆ, ಧರ್ಮ, ಆಚರಣೆ, ನಂಬಿಕೆ, ಕಲಾಭಿವ್ಯಕ್ತಿಯ ಲೋಕಗಳನ್ನು ಒಳಗೊಳ್ಳಲು ಯತ್ನಿಸಿತು. ಸಂಸ್ಕೃತಿಯ ಭಾಗವಾಗಿರುವ ಸಂಗತಿಗಳು ಹಿಂದೆಂದೊ ರೂಪುಗೊಂಡ ಪರಿಯಲ್ಲೇ ಇರುವುದಿಲ್ಲ. ಚಾರಿತ್ರಿಕ ಒತ್ತಡಗಳಲ್ಲಿ ಬದಲಾಗುತ್ತ ಇರುತ್ತವೆ. ಪ್ರಭಾವಶಾಲಿ ಚಿಂತಕರ, ಸಾಮಾಜಿಕ- ರಾಜಕೀಯ ಸಿದ್ಧಾಂತ ಮತ್ತು ಸಂಘಟನೆಗಳ ಮೂಲಕ ಅನುಸಂಧಾನಗೊಳ್ಳುತ್ತ ರೂಪಾಂತರ ಪಡೆಯುತ್ತವೆ ಎಂದು ಭಾವಿಸಿತ್ತು. ಇಂತಹ ಸಾಂಸ್ಕೃತಿಕ ಮಧ್ಯಪ್ರವೇಶವನ್ನು ಯಾರು ಮಾಡಬೇಕು, ಅದರ ಹಿಂದಿನ ತತ್ವ ಯಾವುದು, ನಾಡಿನ ಮೇಲೆ ಅದರ ಪರಿಣಾಮ ಯಾವುವು ಎಂಬ ಪ್ರಶ್ನೆಗಳನ್ನೂ ಇದು ಹುಟ್ಟಿಸಿತು.

ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ವೆಂದು ನಾಮಕರಣವಾದ ಆಸುಪಾಸಲ್ಲಿ ಹುಟ್ಟಿದ ಈ ವಾಗ್ವಾದಗಳು, ಸಂಸ್ಕೃತಿಯನ್ನು ಪ್ರಶ್ನೆ ಮತ್ತು ಎಚ್ಚರದಲ್ಲಿ ಅನುಸಂಧಾನ ಮಾಡುವುದನ್ನು ತಿಳಿಸಿದವು. ಅವುಗಳಲ್ಲಿ ನಾಡನ್ನು ಸಮಾನತೆ, ವೈಚಾರಿಕತೆಯ ಮೂಲಕ ಪ್ರಜಾಸತ್ತಾತ್ಮಕವಾಗಿ ಕಟ್ಟುವ ಮುಂಗಾಣ್ಕೆಯಿತ್ತು. ಇದೇ ಕಾಲಕ್ಕೆ ಅವುಗಳಿಂದ ಪ್ರಭಾವಿತರಾದ ಕೆಲವು ತಳಸ್ತರದ ಚಿಂತಕರು, ಪ್ರಚಲಿತದಲ್ಲಿರುವ ಸಂಸ್ಕೃತಿಯ ಚೌಕಟ್ಟಿನಲ್ಲಿ, ತಮ್ಮ ಸಮುದಾಯಗಳ ಜೀವನಕ್ರಮಗಳ ಗೈರುಹಾಜರಿಯನ್ನು ಗುರುತಿಸಿದರು. ದಲಿತ, ಮುಸ್ಲಿಂ, ಮಹಿಳಾ ನೆಲೆಗಳಿಂದ ಬಂದ ಲೇಖಕರು, ತಮ್ಮ ಅನುಭವ ಲೋಕದ ಮೂಲಕ ಬರೆಯಲು ಆರಂಭಿಸಿದರು. ತಮ್ಮ ಸಮುದಾಯಗಳ ಸಂಸ್ಕೃತಿ, ಚರಿತ್ರೆ, ಪರಂಪರೆಗಳಲ್ಲಿ ಹೊಸ ಜೀವನಮೌಲ್ಯ ವಿಮರ್ಶಾತ್ಮಕವಾಗಿ ಹುಡುಕಿದರು. ಇರುವುದು ಸಂಸ್ಕೃತಿಯಲ್ಲ, ಸಂಸ್ಕೃತಿಗಳು ಎಂದು ಕಾಣಿಸಿದರು. ಅವರ ಯತ್ನಗಳಿಗೆ ಬೌದ್ಧಿಕ ಚೌಕಟ್ಟನ್ನು ಕೊಡುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಿದವು.

ಸಂಸ್ಕೃತಿ ಪರಿಕಲ್ಪನೆಯ ವಿಮರ್ಶಾತ್ಮಕ ಅನುಸಂಧಾನ ಮತ್ತು ಒಳಗೊಳ್ಳುವಿಕೆಯ ಪ್ರಕ್ರಿಯೆಯು, ಕೇವಲ ಅಕಡೆಮಿಕ್ ಪ್ರಯತ್ನ ಆಗಿರಲಿಲ್ಲ. ಜಾತ್ಯತೀತತೆ, ಸಮಾನತೆ, ಸ್ವಾತಂತ್ರ್ಯ, ಸೌಹಾರ್ದತೆ, ಮಾನವೀಯ ಪ್ರಜ್ಞೆಯನ್ನು ಒಳಗೊಂಡ ಹೊಸ ಸಮಾಜ ಕಟ್ಟುವ ಯತ್ನವೂ ಆಗಿತ್ತು. ಇದಕ್ಕೆ ಇದೇ ದಶಕಗಳಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಯಿಂದ ಹುಟ್ಟಿದ ರಾಜಕೀಯ ಸಾಮಾಜಿಕ ಚಳವಳಿಗಳು ಇಂಬಾದವು. ಸಂಸ್ಕೃತಿಯ ಮರುವ್ಯಾಖ್ಯಾನ, ನಾಗರಿಕ ಆಂದೋಲನ ಮತ್ತು ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗಳ ಮರುರಚನೆಗಳು ಸಾಮಾನ್ಯವಾಗಿ ಒಟ್ಟೊಟ್ಟಿಗೆ ನಡೆಯುತ್ತವೆ.

20ನೇ ಶತಮಾನದ ಕೊನೆಯ ವರ್ಷಗಳಲ್ಲಿ ಭಾರತ ಮುಕ್ತಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಗೆ ಪ್ರವೇಶಿಸಿತು. ಈ ಕಾಲಘಟ್ಟದಲ್ಲಿ ಧರ್ಮ, ನಂಬಿಕೆ, ಶ್ರದ್ಧೆ ಹೆಸರಲ್ಲಿ ಭಾವನಾತ್ಮಕ ಅಲೆಗಳನ್ನು ಎಬ್ಬಿಸಿದ ರಾಜಕೀಯ ಚಳವಳಿಯೂ ಪ್ರಧಾನಧಾರೆಗೆ ಬಂದಿತು. ಇದು ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಲ್ಲಿ ಮೇಲ್ಜಾತಿ-ಮೇಲ್ವರ್ಗಗಳ ಧರ್ಮ ಭಾಷೆ ಆಚರಣೆ ನಂಬಿಕೆಗಳನ್ನು ದೇಶದ ಸಂಸ್ಕೃತಿಯೆಂದು ಮಂಡಿಸಿತು. ಇದಕ್ಕೆ ಹೊಂದುವಂತೆ, ತಳಸ್ತರದ ಸಮುದಾಯಗಳ ಮತ್ತು ಬುಡಕಟ್ಟುಗಳ ಲೋಕಗಳನ್ನು ಪಳಗಿಸಿತು. ಬೌದ್ಧ, ಇಸ್ಲಾಂ, ಕ್ರೈಸ್ತ ಧಾರ್ಮಿಕ-ಸಾಮಾಜಿಕ ಸಮುದಾಯಗಳ ಚರಿತ್ರೆ ಪರಂಪರೆ ಸಂಸ್ಕೃತಿಗಳು ಅನ್ಯೀಕರಣಗೊಂಡವು. ಈ ಪ್ರಕ್ರಿಯೆಯಲ್ಲಿ ಸಿನಿಮಾ, ರಂಗಭೂಮಿ, ಸಾಹಿತ್ಯ, ಭಾಷೆ, ಧಾರ್ಮಿಕ ಆಚರಣೆ ಸೋಂಕಿಗೆ ಒಳಗಾದವು. ಈ ಸೋಂಕು ಯಕ್ಷಗಾನದಲ್ಲಿ ಹೆಚ್ಚು ಕಾಣಿಸಿತು. ವೈಚಾರಿಕತೆ, ಸಹನಶೀಲತೆ ಮತ್ತು ವಿವೇಚನೆ ಕಳೆದುಕೊಂಡ, ದ್ವೇಷ ಹರಡುವ ಜ್ಞಾನವಿರೋಧಿ ಯುವ ತಲೆಮಾರು ಸೃಷ್ಟಿಯಾಯಿತು. ಮಾಧ್ಯಮಗಳು ಮಾರುಕಟ್ಟೆ ಸಂಸ್ಕೃತಿಯ ಭಾಗವಾದವು. ಜಾತಿ ಸಮುದಾಯಗಳು ಅಸ್ಮಿತೆಯ ರಾಜಕಾರಣದ ಹಾದಿಯಲ್ಲಿ ತಮ್ಮದೇ ಸಾಂಸ್ಕೃತಿಕ ನಾಯಕರನ್ನು ರೂಪಿಸಿಕೊಂಡು ಸಂಘಟಿತವಾದವು; ಕರ್ನಾಟಕದ ಶಕ್ತಿರಾಜಕಾರಣವು ದಂಧೆಯ ಲಕ್ಷಣವನ್ನು ಮೈಗೊಡಿಸಿಕೊಂಡಿತು. ಹೊಸಚಿಂತನೆ ಹುಟ್ಟಿಸಬೇಕಿದ್ದ ವಿಶ್ವವಿದ್ಯಾಲಯಗಳು ನಿಷ್ಕ್ರಿಯವಾದವು.

ಆದರೆ ಇಂತಹ ಪ್ರತಿಕ್ರಾಂತಿಕಾರಕ ಬೆಳವಣಿಗೆಗಳ ಜತೆಯಲ್ಲೆ, ಸಮಾಜವನ್ನು ಮರುಕಟ್ಟುವ ಸಾಂಸ್ಕೃತಿಕ ಯತ್ನಗಳು ನಿಲ್ಲಲಿಲ್ಲ. ಈಚಿನ ಸಾರ್ವಜನಿಕ ಚರ್ಚೆಗಳಲ್ಲಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಮತ್ತು ಕವಿರಾಜಮಾರ್ಗದ ‘ಪರ ಧರ್ಮಮುಮಂ ಪರ ವಿಚಾರಮುಮಂ ನೆರೆ ಸೈರಿಸಲಾರ್ಪುದು’ ಹೇಳಿಕೆಗಳು ಬಳಕೆಯಾದವು ಎಂಬುದು ಗಮನಾರ್ಹ. ರಾಜಪ್ರಭುತ್ವದೊಳಗೆ ಹುಟ್ಟಿದ ಕವಿರಾಜಮಾರ್ಗವು ಪ್ರಸ್ತಾಪಿಸುತ್ತಿರುವ ಈ ಸೈರಣೆ, ಬಹುಭಾಷೆ ಬಹುಧರ್ಮ ಬಹುಸಂಸ್ಕೃತಿಗಳಿರುವ ಸಮಾಜದಲ್ಲಿ ಇರಬೇಕಾದ ಸಾಂಸ್ಕೃತಿಕ ಡೆಮಾಕ್ರಸಿಗೆ ಸಂಬಂಧಿಸಿದ ಮೌಲ್ಯ. ಸ್ತ್ರೀಸಂವೇದನೆ ಮತ್ತು ಅಂಬೇಡ್ಕರ್ ಚಿಂತನೆಗಳ ಮೂಲಕ ಲೋಕವನ್ನು ನೋಡುವ ದೃಷ್ಟಿಕೋನಗಳು, ಹಿಂದಿಗಿಂತ ಹೆಚ್ಚು ಮುಂಚೂಣಿಗೆ ಬರುತ್ತಿವೆ. ಪಶುಪಕ್ಷಿಗಳ ಬದುಕುವ ಹಕ್ಕನ್ನು ಮನ್ನಿಸುವ, ಲೈಂಗಿಕ ಅಲ್ಪಸಂಖ್ಯಾತರ ಸಂವೇದನೆಗೆ ಮಿಡಿವ ಸಂವೇದನಶೀಲತೆ ಹೆಚ್ಚುತ್ತಿದೆ. ಕೂಡುಬಾಳಿನ ಆಶಯದಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಂಡು ಸಮಾಜವನ್ನು ಕಟ್ಟುವ ಬಹುತ್ವದ ಪ್ರಜ್ಞೆಯನ್ನು ಮತ್ತು ಅಸಮಾನತೆ ತೊಡೆಯಲು ಬೇಕಾದ ಸಂಘರ್ಷ ತತ್ವವನ್ನು ಏಕಕಾಲಕ್ಕೆ ಜಾಗೃತಗೊಳಿಸುವುದು ಕುವೆಂಪು ಹೇಳುವ ‘ಸಂಸ್ಕೃತಿ ಕ್ರಾಂತಿ’ಯ ಕೆಲಸ. ಈ ಹಿನ್ನೆಲೆಯಲ್ಲಿ ಬರುವ ದಶಕಗಳಲ್ಲಿ ಕರ್ನಾಟಕವು ಕೈಗೊಳ್ಳಬೇಕಾದ ಕೆಲವು ಹೊಣೆಗಳನ್ನು ಹೀಗೆ ಹೇಳಬಹುದು:

ಒಕ್ಕೂಟ ಸರ್ಕಾರವು ರಾಜ್ಯಗಳ ಮೇಲೆ ಭಾಷೆ, ಶಿಕ್ಷಣನೀತಿ, ಕಾನೂನುಗಳನ್ನು ಹೇರಿಕೆ ಮಾಡುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದ ಅಸ್ಮಿತೆ-ಸ್ವಂತಿಕೆ ಉಳಿಸುವ ಕ್ರಮ ಕೈಗೊಳ್ಳುವುದು; ನಾಡಿನ ಸಮಾಜ, ರಾಜಕಾರಣ, ಧರ್ಮ, ಆರ್ಥಿಕತೆಗಳ ಪ್ರಜಾಪ್ರಭುತ್ವೀಕರಣ ಮಾಡುವ ಚಿಂತನೆಗಳನ್ನು ಪಸರಿಸುವುದು (ಇದಕ್ಕಾಗಿ ಆರೋಗ್ಯಕರ ಚಿಂತನೆಯುಳ್ಳ ಪುಸ್ತಿಕೆಗಳನ್ನು ಪ್ರಕಟಿಸಬಹುದು; ವಿಡಿಯೊಗಳನ್ನು ಹಂಚಬಹುದು); ದಿಟ್ಟವಾಗಿ ಪ್ರಶ್ನೆ ಕೇಳುವ, ಭಿನ್ನಮತ ಹೇಳಲು ಹಿಂಜರಿಯದ ಮತ್ತು ಅದನ್ನು ಆಲಿಸುವ ಸಹನೆಯುಳ್ಳ ‘ನಿರಂಕುಶಮತಿ’ತ್ವದ ವಾತಾವರಣ ನಿರ್ಮಿಸುವುದು; ದ್ವೇಷಭಾಷಣ ಮಾಡದಂತೆ, ಸಾಮಾಜಿಕ ಜಾಲತಾಣಗಳು ದ್ವೇಷಸಾಧನೆಯ ಉಪಕರಣಗಳಾಗದಂತೆ ನಿಯಮ ರೂಪಿಸುವುದು; ನಾಡಿನ ಸಾಮಾಜಿಕ ಧಾರ್ಮಿಕ ಬುಡಕಟ್ಟು ಸಮುದಾಯಗಳ ಆರೋಗ್ಯಕರ ಲೋಕದೃಷ್ಟಿ ಮತ್ತು ಸೃಜನಶೀಲತೆ ಒಳಗೊಂಡಿರುವಂತಹ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಶೈಕ್ಷಣಿಕ ವಲಯದಲ್ಲಿ ಅಳವಡುವಂತೆ ಮಾಡುವುದು; ಸಾರ್ವಜನಿಕ ಉತ್ಸವಗಳಲ್ಲಿ ಜನಪದ ಕಲಾವಿದರನ್ನು ನಡೆಸಿಕೊಳ್ಳುವುದರಲ್ಲೂ ಕಾಣುವ ಕಲಾಲೋಕದ ತರತಮಗಳನ್ನು ಇಲ್ಲವಾಗಿಸುವುದು (ತಮಗೆ ಘೋಷಿತವಾಗಿದ್ದ ಗುಬ್ಬಿವೀರಣ್ಣ ಪ್ರಶಸ್ತಿ ಪ್ರದಾನ ಮಾಡಿ ಎಂದು ಕೊರಗುತ್ತಲೆ ತೀರಿಕೊಂಡಿದ್ದು ಇಲ್ಲಿ ಸ್ಮರಿಸಬಹುದು); ಮತೀಯ ಜಾತೀಯ ದ್ವೇಷ, ಲಿಂಗತಾರತಮ್ಯ ಹಾಗೂ ಹಿಂಸೆಯನ್ನು ಪ್ರಚೋದಿಸುವ ಬರೆಹ ಸಿನಿಮಾ ರಂಗಪ್ರದರ್ಶನಗಳನ್ನು ಬಹಿಷ್ಕರಿಸುವ ಪ್ರಜ್ಞೆ ಕಾಮನ್‌ಸೆನ್ಸಾಗುವಂತೆ ಮಾಡುವುದು; ಸಂವಿಧಾನದ ಪ್ರಸ್ತಾವನೆಯಲ್ಲಿರುವ ಮೌಲ್ಯಾದರ್ಶಗಳು ಜನರ ಪ್ರಜ್ಞೆಯ ಆಲೋಚನಕ್ರಮದ ಭಾಗವಾಗುವಂತೆ ಕಾರ್ಯಕ್ರಮ ಏರ್ಪಡಿಸುವುದು; (ಕಳೆದ ಕೆಲವು ವರ್ಷಗಳಿಂದ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಈ ಕೆಲಸ ಮಾಡಿ ಹಾದಿ ರೂಪಿಸಿದ್ದಾರೆ); ಪದವಿ ನೀಡಿಕೆಗೆ ಸೀಮಿತವಾಗುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಮಾಧ್ಯಮಗಳು ಕರ್ನಾಟಕದ ಹದುಳವನ್ನು ಸಾಧಿಸುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಣೆಗಾರಿಕೆಯ ವೇದಿಕೆಗಳಾಗುವುದು.

ಈ ಮುನ್ನೋಟವು ಕಷ್ಟಕರವಾದ ಕನಸಿನಂತೆ ಕಾಣುತ್ತವೆ. ಈ ಕನಸನ್ನು ಕರ್ನಾಟಕದ ಮುಂಬರುವ ದಶಕಗಳು ಹೇಗೆ ಆವಾಹಿಸಿಕೊಳ್ಳುತ್ತವೆ ಮತ್ತು ನಿಭಾಯಿಸುತ್ತವೆ ಎಂಬುದರ ಮೇಲೆ, ನಾಡಿನ ಚಹರೆ ನಿಶ್ವಯವಾಗಲಿದೆ. ಈ ಕೆಲಸದಲ್ಲಿ ಪ್ರಭುತ್ವದ ಪಾತ್ರವಿದೆ, ನಿಜ. ಆದರೆ ಮತಗಳಿಕೆಯ ರಾಜಕಾರಣದಲ್ಲೇ ಎಲ್ಲವನ್ನು ನೋಡುವ ಸರ್ಕಾರಗಳಿಂದ ಇದನ್ನೆಲ್ಲ ಬಯಸುವುದು ಕಷ್ಟ. ನಾಗರಿಕ ಸಮಾಜವು ಪ್ರಭುತ್ವದ ಮೇಲೆ ನೈತಿಕವಾದ ಒತ್ತಡ ನಿರ್ಮಿಸುವುದು ಮತ್ತು ಪ್ರಭುತ್ವವನ್ನು ಸಂವೇದನಶೀಲಗೊಳಿಸುವುದು ಸಾಧ್ಯವಿದೆ. ಹೀಗೆ ಮಾಡುವುದಕ್ಕೆ ಮೊದಲು ಸ್ವತಃ ಅದು ಸಂವೇದನಶೀಲಗೊಳ್ಳುವುದು ಕೂಡ ಅಗತ್ಯವಾಗಿದೆ.

ರಹಮತ್ ತರೀಕೆರೆ

ರಹಮತ್ ತರೀಕೆರೆ

ಸಾಂಸ್ಕೃತಿಕ ರಾಜಕಾರಣ ಕಟ್ಟಬೇಕು: ರಾಜೇಂದ್ರ ಚೆನ್ನಿ

ಭಾರತೀಯ ಸಂಸ್ಕೃತಿಯೇ ಶ್ರೇಷ್ಠ ಎಂಬ ಸಂಕಥನವನ್ನು ಅತ್ಯಂತ ಪ್ರಚಂಡ ರೀತಿಯಲ್ಲಿ ಇಂದು ಮುನ್ನೆಲೆಗೆ ತರಲಾಗುತ್ತಿದೆ. ಕರ್ನಾಟಕ ಮತ್ತು ಇನ್ಯಾವುದೇ ರಾಜ್ಯಗಳ ಪ್ರಾದೇಶಿಕ ಸಂಸ್ಕೃತಿಗಳನ್ನು ಭಾರತೀಯ ಸಂಸ್ಕೃತಿಯೊಳಗೆ ಸೇರಿಸಿಬಿಡುವ ಅಥವಾ ಅದರ ಒಂದು ಸಣ್ಣ ಭಾಗ ಅನ್ನುವ ಹಾಗೆ ಮಾಡಲಾಗುತ್ತಿದೆ. ಕರ್ನಾಟಕವು ಸಾಂಸ್ಕೃತಿಕವಾಗಿ ಉಳಿದು ಮುಂದುವರಿಯಬೇಕಾದರೆ, ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯ ಮತ್ತು ಸಂವಿಧಾನವು ನಮಗೆ ಹೇಳಿಕೊಟ್ಟಿರುವಂತೆ ತಳ ಸಂಸ್ಕೃತಿಗಳು, ಪ್ರಾದೇಶಿಕ ಸಂಸ್ಕೃತಿಗಳು ಕೂಡಿಯೇ ಭಾರತೀಯ ಸಂಸ್ಕೃತಿ ಎಂಬುದು ರೂಪುಗೊಂಡಿದೆ ಎಂಬುದನ್ನು ನಾವು ಪ್ರತಿಪಾದಿಸಬೇಕಿದೆ. ಈ ಮೂಲಕ ಭಾರತೀಯ ಸಂಸ್ಕೃತಿ ಎಂಬ ತೀರಾ ಸೀಮಿತವಾದ ಮತ್ತು ವರ್ಣಾಧಾರಿತವಾದಂತಹ ಪರಿಕಲ್ಪನೆಯನ್ನು ವಿರೋಧಿಸಬೇಕಾಗಿದೆ.

ಸಾಂಸ್ಕೃತಿಕ ಆಗುಹೋಗುಗಳು ಇಂದು ಇವೆಂಟ್‌ ಮ್ಯಾನೇಜ್‌ಮೆಂಟ್‌ಗಳಾಗುತ್ತಿವೆ. ಒಂದು ಪುಸ್ತಕ ಬಿಡುಗಡೆ, ವಿಮರ್ಶೆ, ಸಾಮಾಜಿಕ ಜಾಲತಾಣಗಳಲ್ಲಿ ಆ ಪುಸ್ತಕಕ್ಕೆ ಒಂದು ವೇದಿಕೆ ಕಟ್ಟಿಕೊಡುವವರೆಗೆ ಎಲ್ಲವೂ ವ್ಯಾಪಾರವಾಗಿ ಹೋಗಿದೆ. ಇಂತಹ ವ್ಯಾಪಾರದ ಮೂಲಕ ಬರುವ ಸಂಸ್ಕೃತಿ ಮತ್ತು ಸಾಹಿತ್ಯ ಬಹಳ ತೆಳುವಾಗಿರುತ್ತವೆ. ಅವು ಯಾವ ಆಳವಾದ ಪ್ರಶ್ನೆಗಳನ್ನೂ ಎತ್ತಿಕೊಳ್ಳುವುದಿಲ್ಲ. ಇದು ಕರ್ನಾಟಕದ ಸಂಸ್ಕೃತಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಈ ಬಗ್ಗೆಯೂ ನಾವು ಎಚ್ಚರಿಕೆಯಿಂದ ಇರಬೇಕು ಮತ್ತು ಅದಕ್ಕೆ ಬಲವಾದ ಪ್ರತಿರೋಧವನ್ನು ಕಟ್ಟಿಕೊಳ್ಳಬೇಕು. ಕರ್ನಾಟಕ ಸಂಸ್ಕೃತಿಯನ್ನು ಸಂಘರ್ಷವಿಲ್ಲದ ಸಂಸ್ಕೃತಿಯನ್ನಾಗಿ ರೂಪಿಸಲಾಗುತ್ತಿದೆ. ದಲಿತ ಸಂಸ್ಕೃತಿ, ಸ್ತ್ರೀ ಸಂವೇದನೆ, ಲೈಂಗಿಕ ಅಲ್ಪಸಂಖ್ಯಾತತ್ವ... ಇವ್ಯಾವುವೂ ಬೇಡ. ಚರ್ಚೆ, ವಾದ–ವಿವಾದವೇ ಇಲ್ಲದ ಸಂಸ್ಕೃತಿ ನಮ್ಮದು ಎನ್ನುವಂತಹ ಚಟುವಟಿಕೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಸಹಿಷ್ಣುತೆ ಮತ್ತು ಬಹುತ್ವ ಎಂಬುದು ಜನಸಾಮಾನ್ಯರ ‘ಕಾಮನ್‌ಸೆನ್ಸ್‌’ನಿಂದಲೇ ಹೊರಟುಹೋಗಿದೆ. ಇವೆಲ್ಲವನ್ನೂ ನಾವು ನೇರವಾಗಿ ಎದುರಿಸಬೇಕು.

ನಮ್ಮ ಸಂಸ್ಕೃತಿಯ ಆರೋಗ್ಯಕ್ಕೆ ಬೇಕಾಗಿರುವಂತಹ ನಂಬಿಕೆ, ನಿಲುವು, ನಡವಳಿಕೆಗಳನ್ನು ನಾವು ಸ್ಪಷ್ಟವಾಗಿ ಹೇಳಿಕೊಂಡು ಅದಕ್ಕೆ ಪೂರಕವಾದ ಕ್ರಿಯೆಗಳನ್ನು ಮಾಡುವುದೇ ಸಾಂಸ್ಕೃತಿಕ ರಾಜಕಾರಣ. ಸಾಮುದಾಯಿಕವಾಗಿ ಈ ದಿಸೆಯಲ್ಲಿ ನಡೆಯುವಂತಹ ಕೆಲಸವನ್ನು ನಾವು ಮಾಡಬೇಕಾಗುತ್ತದೆ. ಹೀಗೆ ಈ ಸಾಂಸ್ಕೃತಿಕ ರಾಜಕಾರಣವನ್ನು ನಾವು ಮುಂದಿನ 25 ವರ್ಷಗಳಲ್ಲಿ ಬಹಳ ಗಟ್ಟಿಯಾಗಿ ಕಟ್ಟಿಕೊಡಬೇಕಾಗಿದೆ.

ರಾಜೇಂದ್ರ ಚೆನ್ನಿ, ವಿಮರ್ಶಕ

ರಾಜೇಂದ್ರ ಚೆನ್ನಿ, ವಿಮರ್ಶಕ

ಕನ್ನಡವಾಗಬೇಕು: ಲಲಿತಾ ಸಿದ್ಧಬಸವಯ್ಯ

ಸಾಂಸ್ಕೃತಿಕವಾಗಿ ಮುಂದಿನ 25 ವರ್ಷಗಳಲ್ಲಿ ಕರ್ನಾಟಕ ಹೇಗಾಗಬೇಕೆಂದು ನೀವು ಆಶಿಸುವಿರಿ ಎಂಬ ಪ್ರಶ್ನೆಗೆ ನನ್ನ ಒಂದೇ ಸಾಲಿನ ಉತ್ತರ ‘ಕನ್ನಡವಾಗಬೇಕು’

ಕನ್ನಡ ಎನ್ನುವಾಗ ಕನ್ನಡದ ಮಣ್ಣು, ಅನ್ನ, ನೀರು, ಗಾಳಿ, ಆರೋಗ್ಯ, ಅಕ್ಷರ, ಉದ್ಯಮ, ಕಲೆ, ವಿಜ್ಞಾನ, ಮನರಂಜನೆ ಮತ್ತೊಂದೂ ಸೇರುತ್ತವೆ. ಈ ಎಲ್ಲವೂ ಸಂಪೂರ್ಣವಾಗಿ ಕನ್ನಡದ ಹಿಡಿತಕ್ಕೆ ದಕ್ಕಬೇಕು. ನಮ್ಮದಾದ ಮೇಲೆ ಇತರರ ಭೋಗ. ಗಣರಾಜ್ಯ ಒಕ್ಕೂಟದ ಮೂಲಮಂತ್ರ ಇದು. ನೀನು ಬೆಳೆದು ದೇಶವನ್ನೂ ಬೆಳೆಯಗೊಡು, ನೀನು ದಿವಾಳಿಯಾಗಿ ದೇಶ ಬೆಳೆಸು ಎಂದಲ್ಲ. ಕನ್ನಡದ ನೀರಿಗೆ ಜಲ ಪ್ರಾಧಿಕಾರಗಳ ಮುಂದೆ ಬೋಸಿ ಹಿಡಿದು ಅಂಗಲಾಚುವ ದೈನೇಸಿ ಸ್ಥಿತಿ, ಕನ್ನಡದ ತೆರಿಗೆ ದಾಯಕ್ಕೆ ಗೋಗರೆಯುವ ಪರದೇಸಿತನ, ಕನ್ನಡ ಭಾಷೆಯ ಸಹಜ ಸಾರ್ವಭೌಮತ್ವವನ್ನು ಸಾಮಂತತನಕ್ಕಿಳಿಸಿರುವ ಲಜ್ಜೆಗೇಡಿತನ ನಾಶಗೊಂಡು ಇವು ನನ್ನ ಹಕ್ಕು ಎಂದು ಕಾನೂನಿನ ಅನ್ವಯವೇ ಗಟ್ಟಿಸಿ ಕೇಳುವ ಕೆಚ್ಚು ಕನ್ನಡದ್ದಾಗಬೇಕು.

ಕನ್ನಡವನ್ನು ನಾಲ್ಕನೆಯ ತರಗತಿಯವರಿಗೆ ಶಿಕ್ಷಣ ಮಾಧ್ಯಮವಾಗಿಯೂ ಅಥವಾ ಹತ್ತನೆಯ ತರಗತಿಯವರೆಗೆ ಪ್ರಥಮ ಭಾಷೆಯಾಗಿಯೂ ಓದಿರುವ ವಿದ್ಯಾರ್ಥಿಗೆ ಮಾತ್ರವೆ ಕನ್ನಡ ನೆಲದ ಪದವಿ ತರಗತಿಗೆ ಮೊಮ್ಮೊದಲ ಪ್ರವೇಶ ಹಾಗೂ ಎಲ್ಲ ವರ್ಗದ ಉದ್ಯೋಗಗಳಲ್ಲಿ ಮೊದಲ ಆದ್ಯತೆ , ತರುವಾಯವೇ ಇತರರಿಗೆ ಮಣೆ ಎಂಬುದನ್ನು ಸರ್ಕಾರ ಮೊದಲು ತನಗೆ ತಾನು ಹೇಳಿಕೊಂಡು ತದನಂತರ ಕೋರ್ಟಿಗೆ ಒಪ್ಪಿಸಬೇಕಾಗಿದೆ. ಇದೊಂದು ಆದುದೇ ಆದರೆ ಯಾರ ಸೇವೆಯೂ ಇಲ್ಲದೆ ಕನ್ನಡ ಸಿಂಹಾಸನವೇರುತ್ತದೆ. ಜಾತಿ ಮೀಸಲಾತಿಯ ಕೋಷ್ಟಕದ ನಿಯಮದಲ್ಲೆ ಈ ಎರಡೂ ಆದ್ಯತೆಗಳನ್ನು ಯಾವ ಭಾದಕವೂ ಇರದೆ ಜಾರಿಗೆ ತರುವುದು ನೂರಕ್ಕೆ ನೂರು ಸಾಧ್ಯ.

ಆದರೆ ಈ ವಿಷಯದಲ್ಲಿ ಪದೇ ಪದೇ ನ್ಯಾಯಾಲಯದಲ್ಲಿ ನಾವು ಸೋಲು ಅನುಭವಿಸುತ್ತಿರುವುದರ ಹಿಂದೆ ಇರುವುದು ಅಪ್ಪಟ ರಾಜಕೀಯ. ಈ ಕಾರ್ಕೋಟಕ ವಿಷ ಕನ್ನಡ ನೆಲವನ್ನು ಸಾವಿರ ವರ್ಷದ ತನಕ ಬಂಜರು ಮಾಡುತ್ತದೆಂಬುದರ ಅರಿವು ನಮಗಿಲ್ಲ. ಇದು ಸರಿಹೋಗದ ಹೊರತು ಎಷ್ಟು ಮಾತನಾಡಿದರೂ ಅದು ಸುಣ್ಣ ಬಿರೆಹುಯ್ದ ಬಾನಿಗೆ ಕನ್ನಡ ಶಿಶು ತಳ್ಳಿ ದೂರ ನಿಂತು ಬಾಯಿ ಬಡಕೊಂಡಂತೆ. ಮುತ್ತುರತ್ನಗಳನು ಬಳ್ಳದಲ್ಲಳೆದು ಮಾರಬೇಕೆಂಬ ಅತಿಯಾಸೆ, ನೀರ ಮೇಲೆ ಬಿಟ್ಟ ಎಣ್ಣೆಯಂತೆ ಪ್ರತ್ಯೇಕ ನಿಲ್ಲುವ ಉದ್ಧಟತನ ನಮಗೆ ಬೇಡ. ಸಾಲಿನ ಕೊನೆಯಲ್ಲಿ ನಿಂತ ಕನ್ನಡ ವ್ಯಕ್ತಿಯೂ ಅತ್ಮಗೌರವದಿಂದ ಬಾಳಬೇಕೆಂಬುದಷ್ಟೆ ಆಶಯ.

ಲಲಿತಾ ಸಿದ್ಧಬಸವಯ್ಯ, ಕವಯತ್ರಿ

ಲಲಿತಾ ಸಿದ್ಧಬಸವಯ್ಯ, ಕವಯತ್ರಿ

ಅನ್ನದ ಭಾಷೆಯಾಗಿಸಿ: ಚಿದಾನಂದ ಸಾಲಿ

* ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಗೆ ಸ್ವಾಯತ್ತೆ ದೊರಕಿಸಿಕೊಡಬೇಕು. ಸಂಸ್ಥೆಯು ಪ್ರಾಚೀನ ಸಾಹಿತ್ಯಕ್ಕಷ್ಟೇ ಸೀಮಿತವಾಗದೆ, ಹೊಸಗನ್ನಡದ ಇತ್ತೀಚಿನ ಬೆಳವಣಿಗೆಗಳನ್ನೂ ಒಳಗೊಳ್ಳುವಂತೆ ಇದನ್ನು ರೂಪಿಸಬೇಕು

* ಕನ್ನಡೇತರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಇರುವ ಕನ್ನಡ ಅಧ್ಯಯನ ಪೀಠಗಳಿಗೆ ಯಾವ ಕಾಲಕ್ಕೂ ಅಧ್ಯಾಪಕರ ಕೊರತೆಯಾಗದಂತೆ ನಿಯಮ ರೂಪುಗೊಳ್ಳಬೇಕು

* ಪಂಪ, ರನ್ನ, ಕುಮಾರವ್ಯಾಸರ ಜೊತೆಗೇ ಆಧುನಿಕ ಸಾಹಿತ್ಯದ ಪಥನಿರ್ಮಾತೃ ಲೇಖಕರನ್ನು ಇಂಗ್ಲಿಷಿಗೆ ಅನುವಾದಿಸಲು ಆದ್ಯತೆ ನೀಡಬೇಕು

* ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಮೀಸಲಾತಿ ಸಿಗುವಂತೆ ಮಾಡುವ ಮೂಲಕ ಕನ್ನಡವನ್ನು ಅನ್ನದ ಭಾಷೆಯಾಗಿ ಮಾರ್ಪಡಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು

* ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ಕನ್ನಡದ ಕೆಲಸದಲ್ಲಿ ತನ್ನದೂ ಮಹತ್ವದ ಪಾತ್ರವಿದೆ ಎನ್ನುವ ಭಾವನೆ ಬಲಗೊಳ್ಳುವಂತೆ ಅಕಾಡೆಮಿಗಳು ಬೆಂಗಳೂರಿನಾಚೆ ಬೇರೆ ಬೇರೆ ಕಡೆ ವಿಕೇಂದ್ರೀಕರಣಗೊಳ್ಳಬೇಕು

* ಸದ್ಯ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿರುವಂತೆ, ಸರ್ಕಾರ ಬದಲಾದರೂ ಆ ಸಮಿತಿಗಳೇ ಅವಧಿ ಪೂರ್ಣಗೊಳಿಸಬೇಕು. ಈ ದಿಸೆಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಸಲ್ಲಿಸಿರುವ ಸಾಂಸ್ಕೃತಿಕ ನೀತಿಯು ನಿಜಾರ್ಥದಲ್ಲಿ ಜಾರಿಗೆ ಬರುವಂತಾಗಬೇಕು

* ಸರ್ಕಾರಗಳು ಬದಲಾದಂತೆ ಪಠ್ಯಕ್ರಮಗಳು ಬದಲಾಗುವುದು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಬದಲಾಗುವುದು ತಪ್ಪಿ ತಜ್ಞತೆಗೆ ಹೆಚ್ಚಿನ ಪ್ರಾಧಾನ್ಯ ದೊರೆಯಬೇಕು. ಅದಕ್ಕಿಂತ ಮುಖ್ಯವಾಗಿ ರಾಜಕಾರಣಿಗಳು ಮತ್ತು ಉದ್ಯಮಿಗಳು ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತುಗಳಿಗೆ ನೇಮಕಗೊಳ್ಳದಂತೆ ನಿಯಮ ರೂಪಿಸಬೇಕು.

ಚಿದಾನಂದ ಸಾಲಿ, ಲೇಖಕ

ಚಿದಾನಂದ ಸಾಲಿ, ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT