ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ದ್ವಂದ್ವ ಧೋರಣೆ ಬದಲಾಗಲಿ

ಶಿಕ್ಷಕ ವೃತ್ತಿ ತುಂಬಾ ಜವಾಬ್ದಾರಿಯುತವಾದುದು ಎಂಬ ಪ್ರಜ್ಞೆಯನ್ನು ನಾವು ಎಚ್ಚರಿಕೆಯಿಂದ ರೂಢಿಸಿಕೊಳ್ಳಬೇಕಿದೆ
Published 26 ಜನವರಿ 2024, 21:40 IST
Last Updated 26 ಜನವರಿ 2024, 21:40 IST
ಅಕ್ಷರ ಗಾತ್ರ

‘ಗುರು ಪರಂಪರೆ: ಬದಲಾಯಿತೇ ವ್ಯಾಖ್ಯಾನ?!’ ಎಂಬ ದೀಪಾ ಹಿರೇಗುತ್ತಿ ಅವರ ಲೇಖನ (ಸಂಗತ, ಜ. 24), ಗುರು- ಶಿಷ್ಯ ಸಂಬಂಧದಲ್ಲಿನ ಇತ್ತೀಚೆಗಿನ ಬದಲಾವಣೆಗಳನ್ನು ಅಥವಾ ಬೆಳವಣಿಗೆಗಳನ್ನು ಕುರಿತದ್ದಾಗಿದ್ದು, ಚಿಂತನಾರ್ಹವಾಗಿದೆ.

ಮಲೆನಾಡಿನ ಕೆಲವು ಶಾಲಾ ವಾಹನಗಳಲ್ಲಿ ಮಕ್ಕಳು ಬಸ್ ಹತ್ತಿದಾಗ, ಸೀಟು ಖಾಲಿ ಇಲ್ಲದಿದ್ದರೆ ಶಿಕ್ಷಕರೇ ಎದ್ದು ಮಕ್ಕಳಿಗೆ ಸೀಟು ಕೊಡಬೇಕಾದ ಸ್ಥಿತಿ ತಲೆದೋರಿದೆ ಎಂದೂ, ಒಂದುವೇಳೆ ಶಿಕ್ಷಕರು ಸೀಟು ಬಿಟ್ಟುಕೊಡದಿದ್ದರೆ ಪೋಷಕರೇ ಮುಖ್ಯೋಪಾಧ್ಯಾಯರಿಗೆ ಅಥವಾ ಆಡಳಿತ ಮಂಡಳಿಗೆ ದೂರು ಸಲ್ಲಿಸುವ ಸ್ಥಿತಿ ಇದೆ ಎಂದೂ ಹೇಳಿದ್ದಾರೆ. ಇದು, ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನದ ವಿಷಯದಲ್ಲಿ ಇರುವ ವಾಸ್ತವ ಸಂಗತಿ!

ಮತ್ತೊಂದು ಕಡೆ, ‘ಗುರುಬ್ರಹ್ಮ ಗುರುವಿಷ್ಣು...’, ಎಂದೂ, ‘ನಹಿ ಗುರೋಃ ಪರಂ ದೈವತಂ’ ಎಂದೆಲ್ಲಾ ಗುರುವನ್ನು ದೈವತ್ವಕ್ಕೆ ಏರಿಸುವ ಉತ್ಪ್ರೇಕ್ಷಿತ ಭಾಷಣೋಕ್ತಿಗಳಿಗೂ ನಾವು ಸಾಕ್ಷಿಗಳಾಗಿದ್ದೇವೆ.

ಈ ಸಂದರ್ಭದಲ್ಲಿ, 12ನೇ ಶತಮಾನದಲ್ಲಿದ್ದ ಅಲ್ಲಮಪ್ರಭುವಿನ ವಚನವೊಂದು ನೆನಪಿಗೆ ಬರುತ್ತಿದೆ:

‘ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ, ಆಗಲಿ ಮಹಾಪ್ರಸಾದವೆಂದೆನಯ್ಯಾ|

ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ, ಆಗಲಿ
ಮಹಾಪ್ರಸಾದವೆಂದೆನಯ್ಯಾ|

ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ, ಆಗಲಿ
ಮಹಾಪ್ರಸಾದವೆಂದೆನಯ್ಯಾ|

ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ, ಆಗಲಿ
ಮಹಾಪ್ರಸಾದವೆಂದೆನಯ್ಯಾ|
ಗುಹೇಶ್ವರಾ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ 
ಆನು ಬೆರಗಾದೆನು|’

ಕಾಲಾನುಕಾಲಕ್ಕೆ ಸಂಭವಿಸುವ ಸ್ಥಿತ್ಯಂತರಗಳನ್ನು ಅರಿತು ನಡೆಯಬೇಕೆಂಬ ಸೂಚನೆಯನ್ನು ಈ ವಚನದಲ್ಲಿ ಸರಳವಾಗಿ ನಿರೂಪಿಸಲಾಗಿದೆ.

ಮನೆಗಳಲ್ಲಿ ಪೋಷಕರಾದವರು ಮಕ್ಕಳ ಮುಂದೆ ಉಪಾಧ್ಯಾಯರ ಬಗೆಗೆ ಕೇವಲವಾಗಿ ಮಾತನಾಡಿಕೊಳ್ಳುವುದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಉದಾಸೀನ ಭಾವ ಬೆಳೆಯುತ್ತದೆ. ಪೋಷಕರೇ ಏಕೆ, ಶಿಕ್ಷಣ ಕ್ಷೇತ್ರದ ರೂವಾರಿಗಳಾದ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ, ಸಿಬ್ಬಂದಿ ವರ್ಗದಲ್ಲಿ ಮತ್ತು ಆಡಳಿತ ಮಂಡಳಿಯವರಲ್ಲಿ ಕೂಡ ಶಿಕ್ಷಕರ ಬಗ್ಗೆ ಅಗೌರವ ಮತ್ತು ಉದಾಸೀನ ಭಾವ ಇರುವುದನ್ನು ಕಾಣುತ್ತೇವೆ. ಸ್ಥಿತಿವಂತ ಕುಟುಂಬಗಳಲ್ಲಿ ಹೆಚ್ಚಿನವರು ತಮ್ಮ ಮಗಳನ್ನು ಶಿಕ್ಷಕನಿಗೆ ಕೊಟ್ಟು ಮದುವೆ ಮಾಡುವುದನ್ನು ಆದ್ಯತೆಯನ್ನಾಗಿ ಇಟ್ಟುಕೊಂಡಿರುವುದಿಲ್ಲ. ಶಿಕ್ಷಣದ ವ್ಯಾಪಾರೀಕರಣ ಸಹ ಈ ಬದಲಾವಣೆಗಳಿಗೆ ಕಾರಣವಾಗಿದೆ. ‌ನಮ್ಮ ಸಮಾಜದಲ್ಲಿ ಇರುವ ಈ ಇಬ್ಬಂದಿತನ ಅಥವಾ ದ್ವಂದ್ವ ಮನೋಭಾವವನ್ನು ಮೊದಲು ಸರಿಪಡಿಸಿಕೊಳ್ಳಬೇಕಾಗುತ್ತದೆ.

ಸಮಾಜದ ಹಿತಕ್ಕೆ ಅಗತ್ಯವಿರುವ ಎಲ್ಲ ವೃತ್ತಿಗಳೂ ಹುದ್ದೆಗಳೂ ಪವಿತ್ರವೆ. ಸಮಾಜದ ಸ್ವಾಸ್ಥ್ಯಕ್ಕೆ ಘಾತವನ್ನು ಉಂಟುಮಾಡುವ ಯಾವುದೇ ಚಟುವಟಿಕೆ ಅಪವಿತ್ರ ಎಂದು ಭಾವಿಸಬೇಕಾಗುತ್ತದೆ. ಆದರೆ ಶಿಕ್ಷಕರಾದವರು, ಎಳೆಯರಾದ ಜೀವಂತ ಚೇತನಗಳೊಂದಿಗೆ ವ್ಯವಹರಿಸುತ್ತಾರಾದ್ದರಿಂದ ವಿಶೇಷ ತರಬೇತಿ ಹಾಗೂ ಮುನ್ನೆಚ್ಚರಿಕೆ ಬೇಕಾಗುತ್ತದೆ. ಪೋಷಕರು ತಮ್ಮ ಮಕ್ಕಳ ಪುರೋಭಿವೃದ್ಧಿಯ ದೃಷ್ಟಿಯಿಂದ ಹಣ, ಅಧಿಕಾರವೆಂಬ ಪ್ರತಿಷ್ಠೆಯಾಚೆಗೆ ಶಿಕ್ಷಕರ ಹುದ್ದೆಯ ಘನತೆಯನ್ನು ಪರಿಗಣಿಸಬೇಕಾಗುತ್ತದೆ.

ಶಿಕ್ಷಕರೂ ತಮ್ಮನ್ನು ತಾವು ಆ ಅರ್ಹತೆಗೆ ಅಣಿ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಇಲ್ಲಿ ಮಕ್ಕಳ ತಪ್ಪು ಏನೂ ಇರುವುದಿಲ್ಲ. ಮಕ್ಕಳ ಎಲ್ಲ ವರ್ತನೆಗಳಿಗೆ ಪೋಷಕರು, ಸಮಾಜ ಹಾಗೂ ಶಿಕ್ಷಕರ ಪ್ರಭಾವವೇ ಕಾರಣವಾಗಿರುತ್ತದೆ. ‘ಮೇಷ್ಟ್ರು’ ಮತ್ತು ‘ಮಕ್ಕಳ’ ನಡುವಿನ ಸಂಬಂಧ ಒಂದು ವಿಶಿಷ್ಟವಾದ ಸಾಮರಸ್ಯದಿಂದ ಸಾಗಬೇಕಾಗುತ್ತದೆ.

ಮೇಷ್ಟ್ರು ತಾನು ‘ಗುರು’ವು, ವಿಷ್ಣು, ಬ್ರಹ್ಮ ಎಂಬ ಭ್ರಮೆಯನ್ನು ವರ್ಜಿಸಬೇಕಾಗಿದೆ. ಸಮಾಜವು ‘ಶಿಕ್ಷಕ- ವಿದ್ಯಾರ್ಥಿ’ ಸಂಬಂಧದ ಸೂಕ್ಷ್ಮವನ್ನು ಗ್ರಹಿಸಿ ಮೇಷ್ಟ್ರುಗಳ ಬಗೆಗಿನ ನಿಕೃಷ್ಟ ಭಾವವನ್ನು ತೊಲಗಿಸಿಕೊಳ್ಳಬೇಕಿದೆ. ರಾಮಕೃಷ್ಣ ಪರಮಹಂಸ- ವಿವೇಕಾನಂದ, ವ್ಯಾಸರಾಯರು- ಕನಕ, ಪುರಂದರರು ಅಂತೆಯೇ ಸಾಕ್ರಟೀಸ್- ಪ್ಲೇಟೊ- ಅರಿಸ್ಟಾಟಲ್‌ ಅವರಂತಹ ಅಪರೂಪದಲ್ಲಿ ಅಪರೂಪವಾದ ಸಂಬಂಧಗಳ ಕುರಿತಂತೆ ‘ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ’ ಎಂಬಂತಹ ರೂಪಕಗಳು ಹುಟ್ಟಿಕೊಂಡಿರಬಹುದು ಮತ್ತು ಅವು ನಿಜವೂ ಆಗಿರಬಹುದು. ಆದರೆ ಅದನ್ನೇ ಇಂದಿನ ಶಿಕ್ಷಣ ವ್ಯವಸ್ಥೆಯ ಶಿಕ್ಷಕರು– ವಿದ್ಯಾರ್ಥಿಗಳ ನಡುವಿನ ಸಂಬಂಧಕ್ಕೆ ಅನ್ವಯಿಸುವುದು ಸರಿಯಾಗಲಾರದು.

ಇದನ್ನು ಅರಿತಾಗ ಮಾತ್ರ ಮಕ್ಕಳು ಮತ್ತು ಮೇಷ್ಟ್ರುಗಳ ನಡುವಿನ ಬಾಂಧವ್ಯ ಸಹಜವಾದುದು, ಮಾನವೀಯವಾದುದು ಹಾಗೂ ಮಧುರವಾದುದು ಆಗುತ್ತದೆ. ಆಗ, ಗೌರವ ಕೊಡಲಿಲ್ಲ, ನಮಸ್ಕಾರ ಹಾಕಲಿಲ್ಲ, ಎದ್ದೇಳಲಿಲ್ಲ ಎಂಬಂತಹ ಸಣ್ಣಪುಟ್ಟ ಸಮಸ್ಯೆಗಳು ಉದ್ಭವವೇ ಆಗುವುದಿಲ್ಲ.

ಲೇಖಕ: ನಿವೃತ್ತ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT