ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚುನಾವಣಾ ಬಾಂಡ್‌ಗೆ ಸಮರ್ಥನೆ– ಪ್ರಧಾನಿ ಮಾತು ದುರದೃಷ್ಟಕರ

ಸಂಪಾದಕೀಯ
Published 19 ಏಪ್ರಿಲ್ 2024, 23:50 IST
Last Updated 19 ಏಪ್ರಿಲ್ 2024, 23:50 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್‌ ಈ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ರದ್ದುಗೊಳಿಸಿದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥಿಸಿಕೊಂಡಿದ್ದು ಹಾಗೂ ಆ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಸೂಕ್ತವಾದ ನಡೆ ಅಲ್ಲ. ಕೋರ್ಟ್‌ ತೀರ್ಪಿನ ಪರಿಣಾಮದಿಂದಾಗಿ, ರಾಜಕೀಯ ಪಕ್ಷಗಳಿಗೆ ಹಣ ದೇಣಿಗೆ ನೀಡುವಾಗ ಕಪ್ಪುಹಣವನ್ನು ಬಳಸುವುದು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅರ್ಥದ ಮಾತನ್ನು ಮೋದಿ ಅವರು ಆಡಿದ್ದಾರೆ. 2017ರಲ್ಲಿ ಚುನಾವಣಾ ಬಾಂಡ್ ಯೋಜನೆಯು ಜಾರಿಗೆ ಬರುವುದಕ್ಕೆ ಮೊದಲು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಚಾರವಾಗಿ ಇದ್ದ ವ್ಯವಸ್ಥೆಯನ್ನು ಉಲ್ಲೇಖಿಸಿ ಅವರು ಈ ಮಾತು ಆಡಿದ್ದಾರೆ. ‘ಪ್ರಾಮಾಣಿಕವಾಗಿ ಆಲೋಚನೆ ಮಾಡಿದಾಗ, ಎಲ್ಲರೂ ಒಂದು ದಿನ ವಿಷಾದಪಡಬೇಕಾಗುತ್ತದೆ’ ಎಂದು ಕೂಡ ಅವರು ಹೇಳಿದ್ದಾರೆ. ಕೋರ್ಟ್‌ ತೀರ್ಪು ಬಂದ ನಂತರವೂ ಬಿಜೆಪಿಯು ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಆದರೆ, ಪ್ರಧಾನಿ ಮೋದಿ ಅವರು ಇಷ್ಟು ಸಮಗ್ರವಾಗಿ ಈ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದು ಇದೇ ಮೊದಲು. ರಾಜಕೀಯ ಪಕ್ಷ ಹಾಗೂ ಅದರ ಮುಖಂಡರು ಕಾನೂನೊಂದನ್ನು ಸಮರ್ಥಿಸಿಕೊಳ್ಳಲು, ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಳ್ಳಲು ಅಥವಾ ಕೋರ್ಟ್‌ ತೀರ್ಪನ್ನು ಟೀಕಿಸಲು ಮುಂದಾಗುವುದು ಒಂದು ಬಗೆ. ಆದರೆ, ಕೋರ್ಟ್‌ ರದ್ದುಪಡಿಸಿದ ಯೋಜನೆಯೊಂದನ್ನು ಪ್ರಧಾನಿಯವರು ಸಮರ್ಥಿಸಿ ಕೊಳ್ಳಲು ಮುಂದಾಗುವುದು ಸಂಪೂರ್ಣವಾಗಿ ಇನ್ನೊಂದು ಬಗೆ.

ಪ್ರಧಾನಿಯವರ ವಾದವು ಸರಿಯಾಗಿಲ್ಲ, ಸೂಕ್ತವಾಗಿಯೂ ಇಲ್ಲ. ಹಿಂದೆ ಜಾರಿಯಲ್ಲಿ ಇದ್ದ ವ್ಯವಸ್ಥೆಗಿಂತ ಚುನಾವಣಾ ಬಾಂಡ್ ವ್ಯವಸ್ಥೆಯು ಹೆಚ್ಚು ಪಾರದರ್ಶಕ ಆಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ಈ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ ಎಂಬುದೇ ಸುಪ್ರೀಂ ಕೋರ್ಟ್‌ ಅದನ್ನು ರದ್ದುಪಡಿಸುವುದಕ್ಕೆ ಮುಖ್ಯವಾದ ಒಂದು ಕಾರಣ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದವರು ಯಾರು ಎಂಬುದನ್ನು ತಿಳಿಯುವ ಸಾರ್ವಜನಿಕರ ಹಕ್ಕನ್ನು ಈ ಯೋಜನೆಯು ಗೌರವಿಸುವುದಿಲ್ಲ, ಹಾಗಾಗಿ ಈ ಯೋಜನೆಯು ಪಾರದರ್ಶಕ ಅಲ್ಲ ಎಂದು ಕೋರ್ಟ್ ಹೇಳಿದೆ. ಕಪ್ಪುಹಣವನ್ನು ತಡೆಯುವ ಉದ್ದೇಶ ಕೂಡ ಇದೆ ಎಂದು ಈ ಯೋಜನೆಯ ಸಮರ್ಥನೆಗೆ ಸರ್ಕಾರ ಮುಂದಾದಾಗ, ಅದನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಕಪ್ಪುಹಣವನ್ನು ನಿಯಂತ್ರಿಸುವು ದಕ್ಕೆ ಪರ್ಯಾಯಗಳು ಲಭ್ಯವಿವೆ ಎಂದು ಹೇಳಿತ್ತು. ರಾಜಕೀಯ ಪಕ್ಷಗಳು ತಾವು ಸ್ವೀಕರಿಸುವ ದೇಣಿಗೆಯ ವಿವರಗಳನ್ನು ದಾಖಲಿಸದೇ ಇರುವುದಕ್ಕೆ ಹಾಗೂ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಎಷ್ಟು ಮೊತ್ತದ ಹಣವನ್ನಾದರೂ ದೇಣಿಗೆಯ ರೂಪದಲ್ಲಿ ನೀಡುವುದಕ್ಕೆ ಸರ್ಕಾರವು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿತ್ತು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಅವಕಾಶಗಳು ಪಾರದರ್ಶಕತೆಯ ಪರವಾಗಿ ಇರುವುದಿಲ್ಲ. ಅಲ್ಲದೆ, ಇಂತಹ ವ್ಯವಸ್ಥೆಗಳು ಆಳುವ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುತ್ತವೆ.

ಚುನಾವಣಾ ಬಾಂಡ್ ಮೂಲಕ ಹಣವನ್ನು ದೇಣಿಗೆ ನೀಡಿದವರ ಹೆಸರುಗಳನ್ನು ಬಹಿರಂಗ
ಪಡಿಸುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ (ಎಸ್‌ಬಿಐ) ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ತಾಕೀತು ಮಾಡಿದ ನಂತರದಲ್ಲಿ ಬಹಿರಂಗವಾದ ವಿವರಗಳು, ಇಡೀ ಯೋಜನೆಯನ್ನು ರದ್ದುಪಡಿಸಿದ್ದಕ್ಕೆ
ಸಮರ್ಥನೆಗಳನ್ನು ಒದಗಿಸಿಕೊಟ್ಟಿವೆ. ಯೋಜನೆಯ ದುರ್ಬಳಕೆ ಆಗಿದೆ ಎಂಬ ಆರೋಪಗಳನ್ನು ಅಲ್ಲಗಳೆದ ಪ್ರಧಾನಿಯವರು, ವಿರೋಧ ಪಕ್ಷಗಳು ಕೂಡ ಈ ಯೋಜನೆಯ ಮೂಲಕ ಕಂಪನಿಗಳಿಂದ ದೇಣಿಗೆ ಸ್ವೀಕರಿಸಿವೆ ಎಂದು ಹೇಳಿದ್ದಾರೆ. ಆದರೆ ಹಲವು ಕಂಪನಿಗಳು ತಮ್ಮ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳಿಂದ ದಾಳಿ ನಡೆದ ನಂತರದಲ್ಲಿ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿವೆ ಎಂಬುದು ಕೂಡ ಈಗ ಬಹಿರಂಗವಾಗಿದೆ. ಈ ರೀತಿ ಆಗಿರುವುದನ್ನು ಬಾಂಡ್ ಯೋಜನೆಯ ದುರ್ಬಳಕೆ ಎಂದು ಮಾತ್ರವೇ ಅರ್ಥೈಸಲು ಸಾಧ್ಯ. ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ತಾವು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಯಾವುದೇ ಕಂಪನಿಗಳಿಗೆ ದೇಣಿಗೆ ನೀಡಲು ಒತ್ತಡ ತಂದಿದ್ದಲ್ಲಿ, ಅದು ಕೂಡ ಯೋಜನೆಯ ದುರ್ಬಳಕೆಯೇ ಆಗುತ್ತದೆ. ಸುಧಾರಣೆ ತಂದುಕೊಳ್ಳುವ, ಹೊಸದೊಂದು ವ್ಯವಸ್ಥೆಯನ್ನು
ರೂಪಿಸುವ ಅಗತ್ಯ ಇದೆ ಎಂದು ಪ್ರಧಾನಿ ಹೇಳಿದ್ದಾರೆ. ಇದು ಸ್ವಾಗತಾರ್ಹವಾದ ಮಾತು. ಆದರೆ ‘ಅಸಾಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವ ಹಾಗೂ ವ್ಯಾಪಕವಾಗಿ ದುರ್ಬಳಕೆ ಆಗಿರುವ ಯೋಜನೆಯೊಂದನ್ನು ಪ್ರಧಾನಿ ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT