ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮತ ಚಲಾವಣೆ: ಪೂರಕ ಉಪಕ್ರಮ

ಮತ ಚಲಾವಣೆಗೆ ನಿರುತ್ಸಾಹ ತೋರುವ ಮಹಾನಗರಗಳ ನಿವಾಸಿಗಳಲ್ಲಿ ಉತ್ಸಾಹ ತುಂಬಲು ಇವೆ ಹಲವು ಮಾರ್ಗೋಪಾಯಗಳು
ಎಚ್‌.ಬಿ.ಚಂದ್ರಶೇಖರ್
Published 30 ಏಪ್ರಿಲ್ 2024, 23:36 IST
Last Updated 30 ಏಪ್ರಿಲ್ 2024, 23:36 IST
ಅಕ್ಷರ ಗಾತ್ರ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 26ರಂದು ನಡೆದ ಮತದಾನದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮತ ಚಲಾವಣೆ ಪ್ರಮಾಣ ಕಡಿಮೆ ದಾಖಲಾಗಿರುವ ಕುರಿತು ಎಲ್ಲೆಡೆ ಆಕ್ರೋಶ, ಅಸಮಾಧಾನ ವ್ಯಕ್ತವಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಹಲವು ಮಹಾನಗರಗಳ ಮತಕ್ಷೇತ್ರಗಳಲ್ಲಿಯೂ ಮತ ಚಲಾವಣೆಯ ಪ್ರಮಾಣ ಕಡಿಮೆ ಇತ್ತು ಎಂಬುದನ್ನು ದತ್ತಾಂಶದ ವಿಶ್ಲೇಷಣೆಯಿಂದ ಗಮನಿಸಬಹುದು.

2019ರಲ್ಲಿ ದೇಶದ ಒಟ್ಟು ಮತ ಚಲಾವಣೆ ಪ್ರಮಾಣ ಶೇಕಡ 67.4ರಷ್ಟು ಇತ್ತು. ರಾಜ್ಯದಲ್ಲಿ ಈ ಪ್ರಮಾಣ ತುಸು ಹೆಚ್ಚು ಅಂದರೆ ಒಟ್ಟು ಶೇ 68.81ರಷ್ಟು ಇತ್ತು. ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಾಜ್ಯದ ಒಟ್ಟು ಮತ ಚಲಾವಣೆ ಪ್ರಮಾಣಕ್ಕಿಂತ ಕ್ರಮವಾಗಿ
ಶೇ 14.05, ಶೇ 14.49 ಹಾಗೂ ಶೇ 15.11ರಷ್ಟು ಕಡಿಮೆ ದಾಖಲಾಗಿತ್ತು.

ತಮಿಳುನಾಡಿನ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆ ರಾಜ್ಯದ ಒಟ್ಟು ಮತ ಚಲಾವಣೆ ಪ್ರಮಾಣಕ್ಕಿಂತ ಶೇ 15.37ರಷ್ಟು ಕಡಿಮೆ ದಾಖಲಾಗಿತ್ತು. ತೆಲಂಗಾಣ ರಾಜ್ಯದ ಹೈದರಾಬಾದ್‌ ಮತ್ತು ಸಿಕಂದರಾಬಾದ್‌ ಕ್ಷೇತ್ರಗಳಲ್ಲಿ ಆ ರಾಜ್ಯದ ಒಟ್ಟು ಮತಚಲಾವಣೆ ಪ್ರಮಾಣಕ್ಕಿಂತ ಕ್ರಮವಾಗಿ ಶೇ 17.93 ಹಾಗೂ ಶೇ 16.27ರಷ್ಟು ಕಡಿಮೆ ಮತ ಚಲಾವಣೆ ಪ್ರಮಾಣ ದಾಖಲಾಗಿತ್ತು. ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತ ಉತ್ತರ ಕ್ಷೇತ್ರದಲ್ಲಿ ಆ ರಾಜ್ಯದ ಒಟ್ಟು ಮತಚಲಾವಣೆ ಪ್ರಮಾಣಕ್ಕಿಂತ ಶೇ 15.93ರಷ್ಟು ಕಡಿಮೆ ಮತ ಚಲಾವಣೆ ಪ್ರಮಾಣ ದಾಖಲಾಗಿತ್ತು.

ಮಹಾನಗರಗಳಲ್ಲಿ ಇತರೆಡೆಗಿಂತ ಮತ ಚಲಾವಣೆ ಪ್ರಮಾಣ ಕಡಿಮೆ ದಾಖಲಾಗುವುದಕ್ಕೆ ಹಲವಾರು ಕಾರಣಗಳನ್ನು ಗುರುತಿಸಬಹುದು. ದೇಶ ಮತ್ತು ರಾಜ್ಯದ ವಿವಿಧೆಡೆಗಳಿಂದ ಬಂದ ಜನರು ಮಹಾನಗರ ಗಳಲ್ಲಿ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನೆಲೆಸಿ ರುತ್ತಾರೆ. ಹಲವು ವರ್ಷಗಳಿಂದ ಮಹಾನಗರ
ಗಳಲ್ಲಿ ವಾಸಿಸುತ್ತಿದ್ದರೂ ಆಯಾ ನಗರದ ಜೊತೆ ಹೆಚ್ಚಿನ ಬಂಧ, ಬೆಸುಗೆ ರೂಪುಗೊಂಡಿರುವುದಿಲ್ಲ.

ಹಳ್ಳಿ ಅಥವಾ ಚಿಕ್ಕ ಪಟ್ಟಣಗಳಲ್ಲಿ ಇರುವಂತೆ ಮಹಾನಗರಗಳಲ್ಲಿ ಸ್ಥಳೀಯ ಸಮುದಾಯ
ಇರುವುದಿಲ್ಲ. ಒಂದು ರೀತಿಯಲ್ಲಿ ಮಹಾನಗರಗಳು ಎಲ್ಲರಿಗೂ ಸೇರಿದ ಮತ್ತು ಯಾರಿಗೂ ಸೇರದ ಊರುಗಳು ಎನ್ನಬಹುದೇನೊ! ಮಹಾನಗರಗಳ ಕಾಸ್ಮೊ ಸಂಸ್ಕೃತಿಯು ತಾವು ವಾಸಿಸುವ ಊರಿನ ಸಮಸ್ಯೆ ಮತ್ತು ಅವುಗಳ ನಿವಾರಣೆಯಲ್ಲಿ ಜನರು ಹೆಚ್ಚಾಗಿ ತೊಡಗಿಕೊಳ್ಳದೇ ಇರುವಂತೆ ಮಾಡಿರುವ ಸಾಧ್ಯತೆಯೂ ಇರುತ್ತದೆ. ಸಮಸ್ಯೆಗಳನ್ನು ಯಾರೋ ಹೇಗೋ ಪರಿಹರಿಸುತ್ತಾರೆ ಎಂಬ ಉದಾಸೀನ ಧೋರಣೆ ಮಹಾನಗರಗಳ ಜನರಲ್ಲಿ ಮೊಳೆತಿರುವ ಸಂಭವ ಇರುತ್ತದೆ.

ಮಹಾನಗರಗಳಲ್ಲಿ ಒಂದಷ್ಟು ಕುಟುಂಬಗಳು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರ
ಗೊಳ್ಳುತ್ತಿರುತ್ತವೆ. ಇದಕ್ಕೆ ಪೂರಕವಾಗಿ ಮತದಾನದ ನೋಂದಣಿಯನ್ನು ಅವರ ವಾಸಸ್ಥಳಕ್ಕೆ ಸ್ಥಳಾಂತರಿಸಿರು ವುದಿಲ್ಲ. ಈ ಕಾರಣ, ತಮ್ಮ ವಾಸಸ್ಥಳದಿಂದ ನಗರದ ಇನ್ನೊಂದು ಮೂಲೆಯಲ್ಲಿರುವ ಮತಗಟ್ಟೆಗೆ ಬಿರು ಬಿಸಿಲಿನಲ್ಲಿ ಪಯಣಿಸಿ, ಮತ ಚಲಾವಣೆ ಮಾಡದೇ ಇರುವ ಸಾಧ್ಯತೆಯೂ ಇರುತ್ತದೆ. ತಮ್ಮ ಮತಗಟ್ಟೆಗಳ ವಿವರ ಆನ್‌ಲೈನ್‌ನಲ್ಲಿ ಲಭ್ಯವಿದ್ದಾಗ್ಯೂ ಮತಗಟ್ಟೆ
ಇರುವ ವಿಳಾಸವನ್ನು ಹುಡುಕುವುದೂ ಮಹಾನಗರ ಗಳಲ್ಲಿ ಕಷ್ಟಸಾಧ್ಯವೇ ಸರಿ. ಈ ಎಲ್ಲ ಅಂಶಗಳಿಗೂ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬೇಕಿದೆ.

ಮಹಾನಗರಗಳಲ್ಲಿ ಗಣನೀಯ ಪ್ರಮಾಣದ ನಿವಾಸಿಗಳು ಬೃಹತ್‌ ವಸತಿ ಸಮುಚ್ಚಯಗಳಲ್ಲಿ ವಾಸಿಸುತ್ತಾರೆ. ಇಂತಹ ಕಡೆ ಮತ ಚಲಾವಣೆಯ ಪ್ರಮಾಣ ಹೆಚ್ಚಿಸಲು ನಿವಾಸಿಗಳ ಸಂಘದ ನೆರವು ಪಡೆಯುವುದು ಸಹಕಾರಿಯಾಗಬಲ್ಲದು. ಈ ದಿಸೆಯಲ್ಲಿ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿನ ಅಪಾರ್ಟ್‌ ಮೆಂಟೊಂದರಲ್ಲಿ ಕೈಗೊಂಡ ಪ್ರಯತ್ನ ಮಾದರಿ
ಆಗುವಂತಿದೆ. ಸಮಾಜಮುಖಿ ಚಿಂತನೆಯ ಆಸಕ್ತ ಕೆಲವು ನಿವಾಸಿಗಳು ಸಂಘಟಿತರಾಗಿ ಮತದಾನದ ದಿನ ಎಲ್ಲರನ್ನೂ ಮತ ಚಲಾಯಿಸಲು ಪ್ರೇರೇಪಿಸಿದರು. ಅಪಾರ್ಟ್‌ಮೆಂಟ್‌ನ ಪ್ರವೇಶ ದ್ವಾರದಲ್ಲಿ ಒಂದು ಸಹಾಯವಾಣಿ ತೆರೆದು, ಮತ ಚಲಾಯಿಸಿ ಬಂದ ನಿವಾಸಿಗಳ ಫೋಟೊ ತೆಗೆದು ನಿವಾಸಿಗಳ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಹಾಕುತ್ತಿದ್ದರು. ಅಪಾರ್ಟ್‌ಮೆಂಟ್‌ನ ಯಾವ ಮನೆಯಲ್ಲಿ ಎಷ್ಟು ಮತಗಳಿವೆ ಮತ್ತು ಯಾವ ವೇಳೆಗೆ ಎಷ್ಟು ಮತಗಳು ಚಲಾವಣೆ ಆಗಿವೆ ಎಂಬ ಕುರಿತು ನಿರಂತರ ನಿಗಾ ವಹಿಸಲಾಯಿತು. ಮತ ಹಾಕದೇ ಇದ್ದವರಿಗೆ ಫೋನ್‌ ಕರೆ ಮಾಡಿ ವಿಚಾರಿಸುವುದು, ಮನೆ ಮನೆಗೆ ಭೇಟಿ ನೀಡಿ ಮತ ಹಾಕಲು ಮನವಿ ಮಾಡುವಂತಹ ಕೆಲಸ ನಡೆದಿದೆ. ‘ನೀವು ಯಾವ ಪಕ್ಷಕ್ಕೆ ಬೇಕಾದರೂ ಮತ ಹಾಕಿ, ಒಟ್ಟಿನಲ್ಲಿ ಮತ ಚಲಾಯಿಸಿ’ ಎಂದು ಪಕ್ಷಾತೀತವಾಗಿ ನಿರಂತರವಾಗಿ ಮನವಿ ಮಾಡಿದ್ದರ ಫಲವಾಗಿ, ಒಟ್ಟು 335 ಮತಗಳಲ್ಲಿ 314 ಮತಗಳು (ಶೇ 94ರಷ್ಟು) ಚಲಾವಣೆ ಆಗಿವೆ. ಮತ ಚಲಾವಣೆಗೆ ಜಡತ್ವ ತೋರುವ ಮಹಾನಗರಗಳ ಜನರಿಗೆ ಈ ರೀತಿ ನವಿರಾಗಿ ಬಿಸಿ ಮುಟ್ಟಿಸಬೇಕು.

ಮಹಾನಗರಗಳಲ್ಲಿ ಸ್ಥಳೀಯವಾಗಿ ಸಕ್ರಿಯವಾಗಿ ರುವ, ಪಕ್ಷಾತೀತವಾಗಿ ನಡೆದುಕೊಳ್ಳುವಂತಹ ಸಮಾಜ ಮುಖಿ ವ್ಯಕ್ತಿಗಳನ್ನು ಗುರುತಿಸಿ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮತ ಚಲಾವಣೆ ಪ್ರಮಾಣ ಹೆಚ್ಚಳಕ್ಕೆ ಅವ ರಿಂದ ನೆರವು ಪಡೆಯಬಹುದು. ಬೇರೆ ಬೇರೆ ಕ್ಷೇತ್ರಗಳ ಸಾಧಕರನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳ
ಬಹುದು. ಇಂತಹ ಉಪಕ್ರಮಗಳು ನಗರ ಪ್ರದೇಶಗಳಲ್ಲಿ ಮತ ಚಲಾವಣೆ ಪ್ರಮಾಣ ಹೆಚ್ಚಿಸಲು ನೆರವಾಗಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT