ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನೀತಿ ಸಂಹಿತೆ; ಸಾಮಾನ್ಯರಿಗೆ ತೊಂದರೆಯಾಗದಿರಲಿ

Published 24 ಮಾರ್ಚ್ 2024, 22:32 IST
Last Updated 24 ಮಾರ್ಚ್ 2024, 22:32 IST
ಅಕ್ಷರ ಗಾತ್ರ

ನೀತಿ ಸಂಹಿತೆ: ಸಾಮಾನ್ಯರಿಗೆ ತೊಂದರೆಯಾಗದಿರಲಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆಯ ಹೆಸರಿನಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಮನೆ ನಿರ್ಮಾಣ, ಮದುವೆ, ಗೃಹ ಪ್ರವೇಶ, ವ್ಯಾಪಾರ ವ್ಯವಹಾರದಂತಹ ಕಾರ್ಯಗಳಿಗೆ ಹಣ ರವಾನೆಯಾಗುತ್ತಿರುತ್ತದೆ. ಆದರೆ ಎಷ್ಟೋ ಬಾರಿ ಸಣ್ಣಪ್ರಮಾಣದಲ್ಲಿ ಸಾಗಿಸುವ ಇಂತಹ ಹಣಕ್ಕೆಲ್ಲ ದಾಖಲೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗೊಂದುವೇಳೆ ಇದನ್ನು ಕೊಂಡೊಯ್ಯುವಾಗ ಸೀಜ್ ಮಾಡಿದರೆ ಅಂತಹವರ ಗತಿ ಏನು? ಅವರು ಮುಂದಿನ ಮೂರು ತಿಂಗಳ ಕಾಲ ವ್ಯವಹಾರ ಮಾಡುವುದಾದರೂ ಹೇಗೆ?

ಚುನಾವಣಾ ಆಯೋಗವು ಕಾನೂನಿನ ಪ್ರಕಾರ ಅಕ್ರಮ ತಡೆಗಟ್ಟಲಿ. ಆದರೆ ಚುನಾವಣಾ ಅಧಿಕಾರಿಗಳು ವಿವೇಚನೆಯಿಂದ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಬಹುದು.

-ದಡದಹಳ್ಳಿ ರಮೇಶ್, ಚಂದಕವಾಡಿ, ಚಾಮರಾಜನಗರ

ಪೊಲೀಸರಿಗೆ ಶಿಕ್ಷೆ: ಬೆಕ್ಕಿಗೆ ಗಂಟೆ ಕಟ್ಟುವವರಾರು?

ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಹಿರಿಯ ಅಧಿಕಾರಿಗಳು ಈಗ ಆದೇಶಿಸಿರುವುದರಿಂದ, ‘ಪೊಲೀಸರಿಗೆ ಈವರೆಗೆ ಅಂತಹದ್ದೊಂದು ನಿಯಮ ಇರಲಿಲ್ಲವೇ?’ ಎಂದು ಜಿ.ಬೈರೇಗೌಡ ಪ್ರಶ್ನಿಸಿದ್ದಾರೆ (ವಾ.ವಾ., ಮಾರ್ಚ್‌ 23). ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ಮಾಡುವ ಪೊಲೀಸರು ಸ್ವತಃ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಎರಡು ಪಟ್ಟು ದಂಡ ಮತ್ತು ಶಿಕ್ಷೆಯನ್ನು ವಿಧಿಸಲು ಅದೇ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರಾರು?

-ಪಿ.ಜೆ.ರಾಘವೇಂದ್ರ, ಮೈಸೂರು

ಪ್ರಶ್ನೆಪತ್ರಿಕೆ ಸೋರಿಕೆ: ಗಂಭೀರವಾಗಿ ಪರಿಗಣಿಸಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಕಾಂ. ಎರಡನೇ ಸೆಮಿಸ್ಟರ್‌ನ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ್ದರಿಂದ ಇತ್ತೀಚೆಗೆ ಪರೀಕ್ಷೆ ರದ್ದುಪಡಿಸಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾದ ಪ್ರಸಂಗ ಪತ್ರಿಕೆಗಳಲ್ಲಿ ವರದಿಯಾಗಿದೆ. ಕೆಲವು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ವಿಷಯ ಈಗ ಸಾಮಾನ್ಯವಾಗಿದೆ. ಇಂತಹ ಬೆಳವಣಿಗೆಯು ಕಷ್ಟಪಟ್ಟು ಪರೀಕ್ಷೆಗೆ ತಯಾರಾಗಿ, ದೂರದ ಊರುಗಳಿಗೆ ಪ್ರಯಾಣಿಸಿ, ಸರಿಯಾಗಿ ಊಟ, ನಿದ್ದೆ ಇಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಮತ್ತು ಪರೀಕ್ಷಾ ಮಂಡಳಿಗಳ ಮೇಲಿನ ಗೌರವವನ್ನು ಕಡಿಮೆ ಮಾಡುತ್ತದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಇಂತಹ ಕೀಳು ವಿದ್ಯಮಾನಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.

-ಸುರೇಶ ಅರಳಿಮರ, ಬಾದಾಮಿ

ಟಿ.ಎಂ.ಕೃಷ್ಣ ವರ್ಸಸ್‌ ಸಂಪ್ರದಾಯವಾದ

ಮದ್ರಾಸ್‌ ಸಂಗೀತ ಅಕಾಡೆಮಿಯು ಗಾಯಕ ಟಿ.ಎಂ.ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ ಘೋಷಿಸಿದ್ದರಿಂದ ಅವರ ವಿರುದ್ಧ ಎತ್ತಿದ್ದ ಎಲ್ಲ ಧ್ವನಿಗಳಿಗೂ ತಮಿಳುನಾಡಿನ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಇದು ಸಂಗೀತದ ಸಮಸ್ಯೆಯಲ್ಲ, ರಾಜಕೀಯದ್ದು ಎಂಬುದು ಸ್ಪಷ್ಟ. ಕೃಷ್ಣ ಅವರು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧದ ರಾಜಕೀಯ ನಿಲುವು ಹೊಂದಿರುವುದೂ ಅಷ್ಟೇ ಸ್ಪಷ್ಟ. ಕೃಷ್ಣ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿಲುವುಗಳು ಎಲ್ಲರಿಗೂ ಗೊತ್ತಿರುವಂತಹವೇ. ಶಾಸ್ತ್ರೀಯ ಸಂಗೀತ ಸದ್ಯದ

ಪರಿಸ್ಥಿತಿಯಲ್ಲಿ ಬರೀ ಮೇಲ್ವರ್ಗಕ್ಕೆ ಅದರಲ್ಲೂ ಬ್ರಾಹ್ಮಣ ವರ್ಗಕ್ಕೆ ಸೀಮಿತವಾಗಿದೆ. ಹಾಡುವವರೂ ಅವರೇ ಕೇಳುವವರೂ ಅವರೇ. ಇಂಥ ಅದ್ಭುತ ಕಲಾಪ್ರಕಾರ ಬಾವಿಗಪ್ಪೆಯ ಥರ ಇದ್ದಲ್ಲೇ ಕೊಳೆಯಬಾರದು, ಅದು ಎಲ್ಲ ಜನಸಮುದಾಯವನ್ನೂ ತಲುಪಬೇಕು ಮತ್ತು ಮತ್ತಷ್ಟು ಬೆಳೆಯಬೇಕು ಎಂಬ ಹಾದಿಯಲ್ಲಿ ಕೃಷ್ಣ

ಶ್ರಮಿಸುತ್ತಿದ್ದಾರೆ. ಇದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅವರ ಅಭಿಪ್ರಾಯದಲ್ಲಿ ಶಾಸ್ತ್ರೀಯ ಸಂಗೀತ ಕಲೆ ಮಾತ್ರವಲ್ಲ ಅದಕ್ಕೆ ಧಾರ್ಮಿಕ ನಂಟೂ ಇದೆ. ನಮ್ಮ ಕಲೆ ನಮ್ಮಲ್ಲೇ ಉಳಿಯಬೇಕು ಎಂಬುದು ಒಂದು ಬಗೆಯ ಶ್ರೇಷ್ಠತೆಯ ವ್ಯಸನ ಎಂಬುದು ಕೃಷ್ಣ ಅವರ ನಿಲುವು.

ಇನ್ನು ಅವರ ಪ್ರಗತಿಪರ ಸಾಮಾಜಿಕ ದೃಷ್ಟಿಕೋನವೂ ಸಂಪ್ರದಾಯಸ್ಥ ಸನಾತನಿಗಳಿಗೆ ಅಪಥ್ಯವಾಗಿದೆ. ಅವರು ಎಲ್ಲ ಪ್ರಗತಿಪರರಂತೆ ಹಿಂದೂ ಸನಾತನ ಧರ್ಮದ ಅವಿಭಾಜ್ಯ ಅಂಗವಾದ ಬ್ರಾಹ್ಮಣ್ಯದ (ಎಂದರೆ ಮೇಲು ಕೀಳಿನ ಜಾತಿಪದ್ಧತಿ, ಮನುಪ್ರಣೀತ ವರ್ಣಾಶ್ರಮ ಪದ್ಧತಿ ಎಂಬ ಸೀಮಿತ ಅರ್ಥದಲ್ಲಿ) ವಿರುದ್ಧ ಸ್ವತಃ ಬ್ರಾಹ್ಮಣರಾಗಿ ಮಾತು, ಕೃತಿಗಳ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲೇ ಸಮಸ್ಯೆ ಇರುವುದು! ಈ ನಿಲುವಿನ ಹಿನ್ನೆಲೆಯಲ್ಲಿ ಪೆರಿಯಾರ್ ಅವರ ಅನೇಕ ವಿಚಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಪೆರಿಯಾರ್‌ ಒಮ್ಮೆ ಭಾಷಣದಲ್ಲಿ ಬ್ರಾಹ್ಮಣ ಜಾತಿಯನ್ನೇ ನಾಶ ಮಾಡಲು ಕರೆ ಕೊಟ್ಟರು ಎನ್ನಲಾಗಿದೆ. ಇದನ್ನೇ ಕೃಷ್ಣ ಅವರ ವಿರುದ್ಧ ಈಗ ಬಳಸಲಾಗುತ್ತಿದೆ. ಪೆರಿಯಾರ್‌ ಅವರು ಬ್ರಾಹ್ಮಣ ಜಾತಿಯ ಬಗ್ಗೆ ಹೇಳಿದರೋ ಅಥವಾ ಬ್ರಾಹ್ಮಣ್ಯದ ಬಗ್ಗೆ ಹೇಳಿದರೋ ಗೊತ್ತಿಲ್ಲ. ಜಾತಿಯ ಬಗ್ಗೆ ಹೇಳಿದ್ದರೆ ಅದು ಖಂಡನಾರ್ಹವೇ ಸರಿ. ಆದರೆ ಅದನ್ನೇ ಕೃಷ್ಣ ಅವರ ಮೇಲೆ ಆರೋಪಿಸಿ ಹೇಳುವುದು ಎಷ್ಟು ಸರಿ?

ಕೆಲವು ಸನಾತನಿ ಸಂಗೀತಗಾರ್ತಿಯರು ತಮ್ಮ ಬಹಿಷ್ಕಾರದ ಹೇಳಿಕೆಯಲ್ಲಿ, ತ್ಯಾಗರಾಜರು ಮತ್ತು ಎಂ.ಎಸ್‌.ಸುಬ್ಬುಲಕ್ಷ್ಮಿ ಅವರನ್ನು ಕೃಷ್ಣ ಅವಹೇಳನ ಮಾಡಿದ್ದಾರೆ ಎಂಬ ಹುಸಿ ಆರೋಪ ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಕುರಿತಾದ ವಿಮರ್ಶೆಯು ಅವಮಾನ ಹೇಗಾಗುತ್ತದೆ? ಒಬ್ಬ ಸಂಗೀತಗಾರ ಸಂಗೀತ ದಿಗ್ಗಜರನ್ನು ಅವಮಾನಿಸಿದರು ಎಂಬುದೇ ಹಾಸ್ಯಾಸ್ಪದ ವಿಷಯ. ಒಟ್ಟಿನಲ್ಲಿ ಕೃಷ್ಣ ಅವರ ಅಸಾಮಾನ್ಯ ಪ್ರತಿಭೆ, ಜನಪ್ರಿಯತೆಯನ್ನು ಸಹಿಸಲಾಗದ ಮನಃಸ್ಥಿತಿಗಳು ಈ ಅನಗತ್ಯ ವಿವಾದವನ್ನು ಹುಟ್ಟುಹಾಕಿವೆ.

-ಎಸ್.ಶ್ರೀನಿವಾಸ ರಂಗನ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT