ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 ವಿಶ್ವಕಪ್: ಪ್ರಯೋಗಕ್ಕಿಂತ ಸಿದ್ಧಸೂತ್ರಕ್ಕೆ ಒತ್ತು, ಗಿಲ್–ಜೈಸ್ವಾಲ್ ‍ಪೈಪೋಟಿ

ಭಾರತ ತಂಡದ ಆಯ್ಕೆಯ ರೂಪುರೇಷೆ
Published 17 ಏಪ್ರಿಲ್ 2024, 14:35 IST
Last Updated 17 ಏಪ್ರಿಲ್ 2024, 14:35 IST
ಅಕ್ಷರ ಗಾತ್ರ

ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡವನ್ನು ಮೇ 1ರೊಳಗೆ ಪ್ರಕಟಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿಯು ಸಿದ್ಧವಾಗಿದೆ.  

ಈ ಬಾರಿಯ ತಂಡದ ಆಯ್ಕೆಯಲ್ಲಿ ಕೆಲವು ಅನುಭವಿ ಆಟಗಾರರು ಅವಕಾಶ ಕಳೆದುಕೊಂಡರೆ ಅಚ್ಚರಿಯಿಲ್ಲ. ಹಾಗೆಂದು ತೀರಾ ಹೊಸ ಆಟಗಾರರಿಗೂ ಅವಕಾಶ ನಿರೀಕ್ಷಿಸುವಂತಿಲ್ಲ. ಆದರೆ ಫಿಟ್‌ನೆಸ್ ಮತ್ತು ಆಟ ಎರಡರಲ್ಲೂ ಉತ್ತಮವಾಗಿರುವ ಆಟಗಾರರಿಗೆ ಮಣೆ ಹಾಕುವತ್ತ ಚಿತ್ತ ನೆಟ್ಟಿದೆ.  ಅಜಿತ್ ಆಗರಕರ್ ನೇತೃತ್ವದ ಆಯ್ಕೆ ಸಮಿತಿಯು ಐಪಿಎಲ್‌ನಲ್ಲಿ ಆಡುತ್ತಿರುವ ಕೆಲವು ಆಟಗಾರರ ಮೇಲೆ ನಿಗಾ ಇರಿಸಿದೆ ಎನ್ನಲಾಗಿದೆ.

‘ಯಾವುದೇ ಹೊಸ ಪ್ರಯೋಗಗಳನ್ನು ನಡೆಸುವ ಸಾಧ್ಯತೆಗಳಿಲ್ಲ. ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಈಗಾಗಲೇ ಆಡಿರುವ ಮತ್ತು ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮವಾಗಿ ಆಡುತ್ತಿರುವವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

15 ಆಟಗಾರರ ತಂಡವನ್ನು ಮೇ 1ರೊಳಗೆ ಪ್ರಕಟಿಸಲು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಸೂಸಿದೆ. 

ಆರಂಭಿಕ ಬ್ಯಾಟರ್‌ಗಳಾದ ಶುಭಮನ್ ಗಿಲ್ ಅಥವಾ ಯಶಸ್ವಿ ಜೈಸ್ವಾಲ್ ಅವರಲ್ಲಿ ಒಬ್ಬರು ಮಾತ್ರ ಸ್ಥಾನ ಪಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಅವರಿಬ್ಬರೂ ತಂಡದಲ್ಲಿ ಸ್ಥಾನ ಗಳಿಸಿದರೆ, ಫೀನಿಷರ್‌ಗಳಾದ ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಲ್ಲಿ ಒಬ್ಬರಷ್ಟೇ ಸ್ಥಾನ ನಿರೀಕ್ಷಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ದುಬೆ ಆಲ್‌ರೌಂಡ್‌ ಆಟವಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ವಿಕೆಟ್‌ಕೀಪಿಂಗ್‌ನಲ್ಲಿ ರಿಷಭ್ ಪಂತ್ ಮರಳುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಎರಡನೇ ವಿಕೆಟ್‌ಕೀಪರ್ ಆಗಿ ಆಡಲು ಜಿತೇಶ್ ಶರ್ಮಾ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ಅವರಲ್ಲಿ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಈ ಐಪಿಎಲ್‌ನಲ್ಲಿ ರಾಹುಲ್ ಮತ್ತು ಇಶಾನ್ ಅವರು ಆರಂಭಿಕ ಬ್ಯಾಟರ್‌ಗಳಾಗಿ ಆಡುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಅವರನ್ನು ಆಡಿಸುವ ಪ್ರಯತ್ನ ಇದುವರೆಗೆ ಮಾಡಿಲ್ಲ. ಈ ಸ್ಥಾನಕ್ಕೆ ಸಂಜು ಕೂಡ ಪೈಪೋಟಿಯಲ್ಲಿದ್ದಾರೆ. 

ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ನಿಖರತೆ ಮತ್ತು ಫಿಟ್‌ನೆಸ್‌ಗೆ ಮರಳದಿದ್ದರೆ ಸ್ಥಾನ ಪಡೆಯುವುದು ಕಷ್ಟವಾಗಲಿದೆ. ಆದರೆ ವಿರಾಟ್ ಕೊಹ್ಲಿ, ಸೂರ್ಯ, ರೋಹಿತ್, ಜಡೇಜ, ಸಿರಾಜ್, ಬೂಮ್ರಾ, ಆರ್ಷದೀಪ್ ಮತ್ತು ಕುಲದೀಪ್ ಸ್ಥಾನ ಪಡೆಯುವುದು ಖಚಿತವಾಗಲಿದೆ. 

ಸ್ಪಿನ್ನರ್ ಯಜುವೇಂದ್ರ ಚಾಹಲ್ ರಾಷ್ಟ್ರೀಯ ತಂಡಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಿವೆ. 

ಪ್ರತಿಭಾನ್ವಿತರಾದ  ರಿಯಾನ್ ಪರಾಗ್, ಮಯಂಕ್ ಯಾದವ್, ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರತ್ತಲೂ ಆಯ್ಕೆ ಸಮಿತಿಯ ಚಿತ್ತ ಇದೆ.

ಸಂಭವನೀಯ 20 ಆಟಗಾರರು:

ಬ್ಯಾಟರ್‌ಗಳು: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್.

ಆಲ್‌ರೌಂಡರ್ಸ್: ರವೀಂದ್ರ ಜಡೇಜ, ಶಿವಂ ದುಬೆ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ. 

ಸ್ಪಿನ್ನರ್ಸ್: ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯಿ  

ವಿಕೆಟ್‌ಕೀಪರ್ಸ್: ರಿಷಭ್ ಪಂತ್, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್

ವೇಗಿಗಳು: ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆರ್ಷದೀಪ್ ಸಿಂಗ್, ಆವೇಶ್ ಖಾನ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT