ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖನೌ ಸೂಪರ್‌ಜೈಂಟ್ಸ್ ನಾಯಕತ್ವ ತ್ಯಜಿಸುವರೇ ಕೆ.ಎಲ್‌ ರಾಹುಲ್?

Published 9 ಮೇ 2024, 14:10 IST
Last Updated 9 ಮೇ 2024, 14:10 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡಿಗ ಕೆ.ಎಲ್. ರಾಹುಲ್ ಅವರು ಐಪಿಎಲ್‌ ಟೂರ್ನಿಯಲ್ಲಿ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆ ಇದೆ. 

ಬುಧವಾರ ನಡೆದ ಪಂದ್ಯದಲ್ಲಿ ಲಖನೌ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ಎದುರು 10 ವಿಕೆಟ್‌ಗಳಿಂದ ಸೋತಿತ್ತು. ಪಂದ್ಯದ ನಂತರ  ಇದರ ನಂತರ ಫ್ರ್ಯಾಂಚೈಸಿಯ ಮಾಲೀಕ ಸಂಜೀವ್ ಗೊಯೆಂಕಾ ಅವರು ತಂಡದ ನಾಯಕ ಕೆ.ಎಲ್. ರಾಹುಲ್ ಅವರನ್ನು ವಾಚಾಮಗೋಚರವಾಗಿ ‘ತರಾಟೆ’ ತೆಗೆದುಕೊಂಡಂತೆ ಕಂಡ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. 

ಪಂದ್ಯದಲ್ಲಿ ರಾಹುಲ್ ಬಳಗವು 167 ರನ್‌ಗಳ ಗುರಿ ನೀಡಿತ್ತು. ಹೈದರಾಬಾದ್ ತಂಡದ ಆರಂಭಿಕ ಜೋಡಿ ಟ್ರಾವಿಸ್ ಹೆಡ್ (ಔಟಾಗದೆ 89; 30ಎಸೆತ) ಮತ್ತು ಅಭಿಷೇಕ್ ಶರ್ಮಾ (75; 28ಎಸೆತ) ಕೇವಲ ಹತ್ತು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಜಯದ ಕಾಣಿಕೆ ನೀಡಿದ್ದರು. ಅಲ್ಲದೇ ರಾಹುಲ್ ಅವರು ಬ್ಯಾಟಿಂಗ್‌ನಲ್ಲಿಯೂ ಪರದಾಡಿದ್ದರು. 33 ಎಸೆತಗಳಲ್ಲಿ 29 ರನ್‌ ಗಳಿಸಿದ್ದರು. ಟೂರ್ನಿಯಲ್ಲಿ ಅವರು 12 ಪಂದ್ಯಗಳಲ್ಲಿ 460 ರನ್ ಗಳಿಸಿದ್ದಾರೆ. ಆದರೆ ಅವರ ಸ್ಟ್ರೈಕ್‌ರೇಟ್ (136.09) ಕೂಡ ಸಾಧಾರಣವಾಗಿದೆ. 

ತಂಡದ ಖಾತೆಯಲ್ಲಿ 12 ಅಂಕಗಳಿವೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆಯೂ ಇದೆ. ಆದರೆ ನೆಟ್‌ ರನ್‌ರೇಟ್ (–0760) ಕೂಡ ಹೆಚ್ಚಿಸಿಕೊಳ್ಳಬೇಕಿದೆ.  ಮೇ 14 (ಡೆಲ್ಲಿ ಕ್ಯಾಪಿಟಲ್ಸ್ ) ಹಾಗೂ ಮೇ 17 (ಮುಂಬೈಇಂಡಿಯನ್ಸ್‌) ರಂದು ಪಂದ್ಯಗಳನ್ನು ಆಡಲಿದೆ.

ಈ ಹೊತ್ತಿನಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬಂದಿದೆ. 

‘ಮುಂದಿನ ಪಂದ್ಯಕ್ಕೆ ಇನ್ನೂ ಐದು ದಿನಗಳ ಸಮಯ ಇದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಾಹುಲ್ ಅವರು ತಮ್ಮ ಬ್ಯಾಟಿಂಗ್ ಮೇಲಷ್ಟೇ ಗಮನ ಕೇಂದ್ರಿಕರಿಸಲು ನಿರ್ಧರಿಸಿದರೆ ನಾಯಕತ್ವ ಬಿಡಬಹುದು. ಈ ಬಗ್ಗೆ ಮ್ಯಾನೆಜ್‌ಮೆಂಟ್ ಕೂಡ ತಕರಾರು ಮಾಡುವುದಿಲ್ಲ’ ಎಂದು ಐಪಿಎಲ್ ಮೂಲಗಳು ತಿಳಿಸಿವೆ. 

ಒಂದೊಮ್ಮೆ ರಾಹುಲ್ ನಾಯಕತ್ವ ಬಿಟ್ಟುಕೊಟ್ಟರೆ ಉಪನಾಯಕ ನಿಕೊಲಸ್ ಪೂರನ್  ನಾಯಕತ್ವ ವಹಿಸಬಹುದು. ಈ ಟೂರ್ನಿಯಲ್ಲಿ ಪೂರನ್ ಅಮೋಘವಾಗಿ ಬ್ಯಾಟಿಂಗ್ ಮಾಡಿದ್ಧಾರೆ. 

ಕ್ರಿಕೆಟ್ ಅಭಿಮಾನಿಗಳ ಆಕ್ರೋಶ

ಲಖನೌ ಸೂಪರ್ ಜೈಂಟ್ಟ್‌ ಫ್ರ್ಯಾಂಚೈಸಿ ಮಾಲೀಕರಾದ ಸಂಜೀವ ಗೊಯೆಂಕಾ ಅವರು ಕೆ.ಎಲ್. ರಾಹುಲ್ ಅವರನ್ನು ‘ತರಾಟೆ’ಗೆ ತೆಗೆದುಕೊಂಡಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. 

ಸನ್‌ರೈಸರ್ಸ್‌ ಎದುರಿನ ಪಂದ್ಯದ ನಂತರ ಕ್ರೀಡಾಂಗಣದ ಬೌಂಡರಿಗೆರೆಯ ಸಮೀಪದಲ್ಲಿಯೇ ಗೊಯೆಂಕಾ ಅವರು ರಾಹುಲ್ ಅವರೊಂದಿಗೆ ಮಾತನಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿದೆ.  ಗೊಯೆಂಕಾ ಅವರ ಹಾವಭಾವಗಳನ್ನು ನೋಡಿದರೆ ರಾಹುಲ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರ ಬಗ್ಗೆ ತರಾಟೆ ತೆಗೆದುಕೊಂಡಂತೆ ಕಾಣುತ್ತಿದೆ. 

‘ಸೋಲು ಗೆಲುವು ಆಟದ ಅವಿಭಾಜ್ಯ ಅಂಗಗಳು. ಅದರಲ್ಲೂ ರಾಹುಲ್ ಭಾರತ ತಂಡದ ಆಟಗಾರ. ಅಲ್ಲದೇ ಭಾರತ ತಂಡವನ್ನು ಹಲವು ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದವರು. ಸಭ್ಯ ವ್ಯಕ್ತಿತ್ವದವರು. ಗೊಯೆಂಕಾ ಅಷ್ಟು ಜೋರಾಗಿ ಮಾತನಾಡಿದರೂ ರಾಹುಲ್ ಸಮಾಧಾನದಿಂದಲೇ ಪ್ರತಿಕ್ರಿಯಿಸಿದಂತೆ ಕಾಣುತ್ತಿದೆ. ಆಟಗಾರರನ್ನು ಸಾರ್ವಜನಿಕವಾಗಿ ಹಾಗೂ ಟಿ.ವಿ. ಕ್ಯಾಮೆರಾಗಳ ಮುಂದೆ ಈ ರೀತಿ ನಡೆಸಿಕೊಳ್ಳೂವುದು ಸರಿಯಲ್ಲ. ಈ ಮಾತುಕತೆಯನ್ನು ಡ್ರೆಸಿಂಗ್‌ ರೂಮ್‌ನೊಳಗೆ ಮಾಡಬಹುದಿತ್ತಲ್ಲ’ ಎಂದು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. 

ಆರ್‌ಸಿಬಿಗೆ ಬನ್ನಿ ರಾಹುಲ್..

‘ರಾಹುಲ್ ನಿಮ್ಮನ್ನು ಈ ರೀತಿ ನೋಡಲು ನಮಗೆ ಬೇಸರವಾಗುತ್ತಿದೆ. ದಯವಿಟ್ಟು ರಾಯಲ್ ಚಾಲೆಂಜರ್ಸ್‌ ಬೆಂಗಳೂರಿಗೆ ಬನ್ನಿ’ ಎಂದು ಹಲವು ಕ್ರಿಕೆಟ್‌ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.  ‘ರಾಹುಲ್ ನೀವು  ತಂಡದಿಂದ ಹೊರಬರಬೇಕು. ಮೇಗಾ ಹರಾಜಿಗೆ ಲಭ್ಯರಾಗಬೇಕು. ಅಲ್ಲಿ ಆರ್‌ಸಿಬಿಯು ಯಾವುದೇ ಮೌಲ್ಯ ನೀಡಿಯಾದರೂ ರಾಹುಲ್ ಅವರನ್ನು ಖರೀದಿಸಬೇಕು’ ಎಂದು ಕೆಲವು ಅಭಿಮಾನಿಗಳು ಆರ್‌ಸಿಬಿಯ ಎಕ್ಸ್‌ ಖಾತೆಯನ್ನು ಟ್ಯಾಗ್ ಮಾಡಿ ಸಂದೇಶ ಹಾಕಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT