ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಬರ್ ಕಪ್ ಬ್ಯಾಡ್ಮಿಂಟನ್ | ಚೀನಾಕ್ಕೆ ಮಣಿದ ಭಾರತ

Published 30 ಏಪ್ರಿಲ್ 2024, 13:22 IST
Last Updated 30 ಏಪ್ರಿಲ್ 2024, 13:22 IST
ಅಕ್ಷರ ಗಾತ್ರ

ಚೆಂಗ್ಡು (ಚೀನಾ): ಪ್ರಮುಖ ಆಟಗಾರ್ತಿಯರಿಲ್ಲದೇ ಟೂರ್ನಿಗೆ ಬಂದಿದ್ದ ಭಾರತ ಬ್ಯಾಡ್ಮಿಂಟನ್ ತಂಡ ಉಬರ್ ಕಪ್ ಟೂರ್ನಿಯ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ಮಂಗಳವಾರ 0–5 ರಿಂದ ಆತಿಥೇಯ ಚೀನಾಕ್ಕೆ ಮಣಿಯಿತು.

ಹದಿಹರೆಯದ ಪ್ರತಿಭಾನ್ವಿತೆ ಅನ್ಮೋಲ್ ಖಾರ್ಬ್ ಪಾದದ ಉಳುಕಿನಿಂದ ನೋವು ತಾಳಲಾಗದೇ ಕಣ್ಣೀರಿಡುತ್ತಾ ಅಂಕಣದಿಂದ ನಿರ್ಗಮಿಸಿದರು. ಈ ಹಿಂದಿನ ಪಂದ್ಯಗಳಲ್ಲಿ ಕೆನಡಾ ಮತ್ತು ಸಿಂಗಪುರ ಮೇಲೆ ಜಯಗಳಿಸಿದ್ದ ಭಾರತ ತಂಡ ಈಗಾಗಲೇ ಎಂಟರ ಘಟ್ಟಕ್ಕೆ ಸ್ಥಾನ ಕಾದಿರಿಸಿದೆ.

15 ಬಾರಿಯ ಚಾಂಪಿಯನ್ ತಂಡದ ವಿರುದ್ಧ ಅಸ್ಮಿತಾ ಚಾಲಿಹಾ ವಿಶ್ರಾಂತಿ ಪಡೆದರು. ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರ ಅನುಪಸ್ಥಿತಿಯಲ್ಲಿ ತಂಡವು ಸೊರಗಿದೆ. ಹೀಗಾಗಿ ಎಳೆಯರಿಂದ ಕೂಡಿದ ತಂಡಕ್ಕೆ ಇಲ್ಲಿ ಸತ್ವಪರೀಕ್ಷೆ ಎದುರಾಗಿದೆ.

ಎರಡನೇ ಸಿಂಗಲ್ಸ್‌ನಲ್ಲಿ 17 ವರ್ಷದ ಅನ್ಮೋಲ್‌, ಪಾದ ಉಳುಕಿದ ಕಾರಣ ಪಂದ್ಯದಿಂದ ನಿವೃತ್ತರಾದರು.

ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದ ಎರಡನೇ ನಂಬರ್ ಆಟಗಾರ್ತಿ ಚೆನ್‌ ಯು ಫೀ ಮೊದಲ ಸಿಂಗಲ್ಸ್‌ನಲ್ಲಿ 21–12, 21–10 ರಿಂದ 83ನೇ ಕ್ರಮಾಂಕದ ಇಶಾರಾಣಿ ಬರೂವಾ ಅವರ ಮೇಲೆ ಗೆಲ್ಲಲು ಕಷ್ಟಪಡಲಿಲ್ಲ.

ರಾಷ್ಟ್ರೀಯ ಚಾಂಪಿಯನ್ನರಾದ ಪ್ರಿಯಾ ಕೊಂಜೆಂಗ್‌ಬಮ್ ಮತ್ತು ಶ್ರುತಿ ಮಿಶ್ರಾ ಅವರು ಹಾಲಿ ವಿಶ್ವ ಚಾಂಪಿಯನ್ ಜೋಡಿಯಾದ ಚೆನ್‌ ಕ್ವಿಂಗ್‌ ಚೆಸ್‌ –ಜಿಯಾ ಯಿ ಫಾನ್ ಜೋಡಿಗೆ ಸವಾಲಾಗಲಿಲ್ಲ. ಚೀನಾದ ಆಟಗಾರ್ತಿಯರು 21–13, 21–12ರಲ್ಲಿ ಜಯಪಡೆದರು.

ಹಾನ್‌ ಯು ಎದುರು ಮೊದಲ ಗೇಮ್‌ಅನ್ನು 9–21ರಲ್ಲಿ ಕಳೆದುಕೊಂಡಿದ್ದ ಅನ್ಮೋಲ್‌, ಎರಡನೇ ಗೇಮ್‌ನಲ್ಲಿ 1–4ರಿಂದ ಹಿಂದೆಯಿದ್ದಾಗ ಪಾದದ ಉಳುಕಿಗೆ ಒಳಗಾದರು. ಅವರು ವೈದ್ಯಕೀಯ ವಿರಾಮ ಪಡೆದರೂ, ಆಟ ಮುಂದುವರಿಸಲು ಆಗಲಿಲ್ಲ. ಚೀನಾ ಇದರಿಂದ 3–0 ಮುನ್ನಡೆ ಪಡೆಯಿತು.

ಉಳಿದ ಎರಡು ಪಂದ್ಯಗಳನ್ನೂ ಚೀನಾ ಆಟಗಾರ್ತಿಯರು ನೇರ ಗೇಮ್‌ಗಳಿಂದ ಗೆದ್ದುಕೊಂಡರು. ಲಿಯು ಶೆನ್‌ ಶು– ತಾನ್‌ ನಿಂಗ್‌ ಜೋಡಿ 21–9, 21–10 ರಿಂದ ಸಿಮ್ರಾನ್ ಸಿಂಗ್0 ರಿತಿಕಾ ಠಕ್ಕರ್ ಅವರನ್ನು ಸೋಲಿಸಿತು. ತನ್ವಿ ಶರ್ಮಾ ಕೊನೆಯ ಸಿಂಗಲ್ಸ್‌ನಲ್ಲಿ 7–21, 16–21ರಲ್ಲಿ ವಾಂಗ್‌ ಝಿ ಯಿ ಅವರಿಗೆ ಮಣಿದರು.

‘ಎ’ ಗುಂಪಿನಲ್ಲಿ ಚೀನಾ ಮೊದಲ ಸ್ಥಾನ ಪಡೆದರೆ, ಭಾರತ ಎರಡನೇ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT