ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

Published 13 ಫೆಬ್ರುವರಿ 2024, 23:31 IST
Last Updated 13 ಫೆಬ್ರುವರಿ 2024, 23:31 IST
ಅಕ್ಷರ ಗಾತ್ರ

ವಿದ್ಯುಚ್ಚಾಲಿತ ವಾಹನಗಳ ಚಾಲಕರಿಗೆ ವಾಹನದ ಒಟ್ಟಾರೆ ರೇಂಜ್ ಎಷ್ಟು ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ. ಅಧಿಕ ದೂರ ಕ್ರಮಿಸಬಲ್ಲ ಶಕ್ತಿವಾಹನಕ್ಕೆ ಇದೆಯೇ ಇಲ್ಲವೇ ಎಂಬುದರ ಮೇಲೆ ಅದರ ಖರೀದಿ ನಿರ್ಧಾರವಾಗುತ್ತದೆ. ಅಂತೆಯೇ, ವಾಹನದ ಬ್ಯಾಟರಿಯ ಚಾರ್ಜಿಂಗ್ ವೇಗವೆಷ್ಟು ಎಂಬುದೂ ದೊಡ್ಡ ಪ್ರಶ್ನೆಯೇ. ಬೇಗನೇ ಚಾರ್ಜ್‌ ಆಗುವುದು ಚಾರ್ಜರ್‌ನ ಸಾಮರ್ಥ್ಯದ ಮೇಲೂ ಅವಲಂಬಿತವಾಗಿರುತ್ತದೆ. ಇವೆಲ್ಲದಕ್ಕೂ ಪರಿಹಾರ ಎಂಬಂತೆ ಅಮೆರಿಕದ ಕಾರ್ನೆಲ್‌ ವಿಶ್ವವಿದ್ಯಾನಿಲಯದ ಎಂಜಿನಿಯರುಗಳು ಕೇವಲ 5 ನಿಮಿಷದಲ್ಲಿ ಪೂರ್ಣ ಚಾರ್ಜ್‌ ಆಗಬಲ್ಲ ಲಿಥಿಯಂ ಅಯಾನ್ ಬ್ಯಾಟರಿಯನ್ನು ಸಂಶೋಧಿಸಿದ್ದಾರೆ.

ಈ ಸಂಶೋಧನೆ ವಿದ್ಯುಚ್ಚಾಲಿತ ವಾಹನಗಳ ಪಾಲಿಗೆ ದೊಡ್ಡ ಸುದ್ದಿಯಾಗಿದೆ. ಏಕೆಂದರೆ ಕಾರ್‌, ಬೈಕ್, ಸ್ಕೂಟರ್‌ ಇತ್ಯಾದಿ ವಾಹನಗಳು ಹೆಚ್ಚು ದೂರ ಕ್ರಮಿಸಬಲ್ಲವು ಎಂಬ ಪ್ರಲೋಬನೆಯನ್ನು ಒಡ್ಡಿ ವಾಹನದ ಬೆಲೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ತಂತ್ರವನ್ನು ಕಂಪೆನಿಗಳು ಮಾಡುತ್ತವೆ. ಈ ಹೊಸ ಸಂಶೋಧನೆಯಿಂದ ಬ್ಯಾಟರಿಯ ಅಥವಾ ವಾಹನದ ರೇಂಜ್‌ ಎಷ್ಟು ಎಂಬ ಸಾಮರ್ಥ್ಯದ ಪ್ರಶ್ನೆಯೇ ಇಲ್ಲದಂತಾಗುತ್ತದೆ. ಏಕೆಂದರೆ, ಬ್ಯಾಟರಿ ಖಾಲಿಯಾಗುತ್ತಿರುವಂತೆ ಕೇವಲ 5 ನಿಮಿಷದಲ್ಲಿ ಬ್ಯಾಟರಿ ಚಾರ್ಜ್‌ ಆಗುವಾಗ, ಅದು ಅತಿ ಹೆಚ್ಚು ದೂರ ಕ್ರಮಿಸುವ ಸಂಗ್ರಹಣ ಸಾಮರ್ಥ್ಯ ಹೊಂದಿರಬೇಕು ಎಂಬುದು ಮುಖ್ಯವಾಗುವುದೇ ಇಲ್ಲ ಎಂಬುದು ವಾಹನತಜ್ಞರ ಹಾಗೂ ಚಾಲಕರ ಅಭಿಪ್ರಾಯವಾಗಿದೆ.

‘ಟೆಸ್ಲಾ’, ‘ಮರ್ಸಿಡೆಸ್ ಬೆನ್ಸ್‌’ ಇತ್ಯಾದಿ ಪ್ರೀಮಿಯಂ ಕಾರ್‌ ಕಂಪೆನಿಗಳು ಒಂದು ಬಾರಿ ಚಾರ್ಜ್‌ ಮಾಡಿದರೆ 800 ಕಿಲೋಮೀಟರ್‌ವರೆಗೂ ರೇಂಜ್‌ ನೀಡಬಲ್ಲ ವಾಹನಗಳನ್ನು ಮಾರುತ್ತಿವೆ. ಕಿಯಾ, ಟಾಟಾ ಮೋಟಾರ್ಸ್‌ನಂತಹ ಮಧ್ಯಮ ಗುಣಮಟ್ಟದ ವಾಹನಗಳೂ ದೊಡ್ಡ ರೇಂಜ್‌ ಬಗ್ಗೆ ಮಾತನಾಡುತ್ತಿವೆ. ಇನ್ನು ಮುಂದೆ ಈ ಮಾನದಂಡವು ಬದಲಾಗಿ, ಹೆಚ್ಚು ರೇಂಜ್‌ ಅನ್ನುವುದಕ್ಕಿಂತ ಅತಿ ಕಡಿಮೆ ಸಮಯದಲ್ಲಿ ಮರು ಚಾರ್ಜ್‌ ಆಗುವ ಬ್ಯಾಟರಿ ಸಿಗಲಿದೆ ಎನ್ನುವ ಚರ್ಚೆ ಶುರುವಾಗಿದೆ.

ಏನಿದು ತಂತ್ರಜ್ಞಾನ?:

ಲಿಥಿಯಂ ಅಯಾನ್‌ ಸಾಮಾನ್ಯವಾಗಿ ಬ್ಯಾಟರಿಯಲ್ಲಿ ಬಳಕೆಯಾಗುವ ರಾಸಾಯನಿಕ. ಅತಿ ಬೇಗನೇ ವಿದ್ಯುತ್‌ ಅನ್ನು ಮರು ಸಂಗ್ರಹಿಸಿಕೊಳ್ಳುವ ಶಕ್ತಿ ಈ ರಾಸಾಯನಿಕಕ್ಕೆ ಇದೆ. ಲಿಥಿಯಂ ಲೋಹ ಇದಕ್ಕೆ ಮೂಲ. ನಿಕ್ಕಲ್‌ ಕ್ಯಾಡ್ಮಿಯಂ ಹಾಗೂ ನಿಕ್ಕಲ್‌ ಮೆಟಲ್‌ ಹೈಡ್ರೇಟ್ ಬ್ಯಾಟರಿಗಳನ್ನು ಇದಕ್ಕೂ ಮುನ್ನ ಬಳಸಲಾಗುತ್ತಿತ್ತು. ಇವುಗಳ ಸಾಮರ್ಥ್ಯ ಕಡಿಮೆ ಎಂಬ ಕಾರಣದಿಂದ ಅವನ್ನು ಕೈಬಿಡಲಾಗಿದೆ. ಈಗಲೂ ಗಡಿಯಾರ, ರಿಮೋಟ್ ಕಂಟ್ರೋಲರ್ ಇತ್ಯಾದಿ ಉಪಕರಣಗಳಲ್ಲಿ ಬಳಸುವ ಬ್ಯಾಟರಿಗಳಲ್ಲಿ ನಿಕ್ಕಲ್‌ ಕ್ಯಾಡ್ಮಿಯಂ ಹಾಗೂ ನಿಕ್ಕಲ್‌ ಮೆಟಲ್‌ ಹೈಡ್ರೇಟ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.

ಇದೀಗ ಲಿಥಿಯಂ ಅಯಾನ್‌ ಬ್ಯಾಟರಿಗಳ ಚಾರ್ಜಿಂಗ್ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಹೊಸದೊಂದು ಲೋಹವನ್ನು ಬೆರೆಸುವ ಪ್ರಯೋಗವನ್ನು ಮಾಡಲಾಗಿದೆ. ಇಂಡಿಯಂ ಲೋಹ ಈ ಸಂಶೋಧನೆಯ ಹಿಂದೆ ಇರುವ ಪ್ರಮುಖ ಪಾತ್ರಧಾರಿಯಾಗಿದೆ. ಇಂಡಿಯಂ ಲೋಹವನ್ನು ಹಾಗೂ ಅದರಿಂದ ಸಿಗುವ ರಾಸಾಯನಿಕವನ್ನು ಹಾಲಿ, ಕಂಪ್ಯೂಟರ್‌, ಟಿವಿ ಪರದೆಗಳು, ಸೋಲಾರ್‌ ಫಲಕಗಳಲ್ಲಿ ಬಳಸಲಾಗುತ್ತಿವೆ. ಈ ಲೋಹದ ವಿದ್ಯುತ್ಕಾಂತೀಯ ಶಕ್ತಿ ಹೆಚ್ಚು. ಅಂದರೆ, ಅತಿ ವೇಗವಾಗಿ, ಹಾಗೂ ಅಷ್ಟೇ ನಿಖರವಾಗಿ ವಿದ್ಯುತ್‌ ಅನ್ನು ಇದು ತನ್ನ ಮೂಲಕ ಹರಿಯುಂತೆ ಮಾಡಬಲ್ಲದು. ಹಾಗಾಗಿಯೇ, ಎಲ್‌ಸಿಡಿ ಅಥವಾ ಎಲ್‌ಇಡಿ ಪರದೆಗಳಲ್ಲಿ ಸ್ಪಷ್ಟವಾದ ಬೆಳಕು, ನಿಖರತೆ ಇರುತ್ತದೆ.

ಇದನ್ನು ಗಮನಿಸಿದ ಕಾರ್ನೆಲ್‌ ವಿಶ್ವವಿದ್ಯಾನಿಲಯದ ಕಾರ್ನೆಲ್ ಎಂಜಿನಿಯರಿಂಗ್ ಕಾಲೇಜಿನ ಡೀನ್‌ ಹಾಗೂ ಪ್ರಾಧ್ಯಾಪಕರಾದ ಲಿಂಡೆನ್‌ ಆರ್ಚರ್ ಅವರ ತಂಡವು ಇಂಡಿಯಂ ಬಳಸಿಕೊಂಡು ಲಿಥಿಯಂ ಅಯಾನ್ ಬ್ಯಾಟರಿಗಳ ಜೊತೆಗೆ ಪ್ರಯೋಗಿಸಿದ್ದಾರೆ. ‘ಇಂಡಿಯಂ ಹಾಗೂ ಲಿಥಿಯಂ ಮಿಶ್ರಣದಿಂದ ನಾವು ಕಂಡುಕೊಂಡಿದ್ದು ಅತಿ ವೇಗದ ವಿದ್ಯುತ್‌ ಮರು ಸಂಗ್ರಹಣ ಸಾಮರ್ಥ್ಯ. ಒಂದು ಸ್ಪೋರ್ಟ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ನಲ್ಲಿ ಇರುವ ಬ್ಯಾಟರಿಯು ಕೇವಲ 5 ನಿಮಿಷದ ಒಳಗೆ ಸಂಪೂರ್ಣವಾಗಿ ಚಾರ್ಜ್‌ ಆಯಿತು. ಇದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ, ಈ ಬ್ಯಾಟರಿಯ ವಿದ್ಯುತ್‌ ಹೊರ ಬಿಡುವ ಸಾಮರ್ಥ್ಯ. ತುಂಬಾ ನಿಧಾನವಾಗಿ, ಸಮತೋಲಿತವಾಗಿ ವಿದ್ಯುತ್‌ ಈ ಬ್ಯಾಟರಿಯಿಂದ ಹೊರಬರುತ್ತದೆ. ಅಂದರೆ, ಬ್ಯಾಟರಿಯ ಒಟ್ಟು ಜೀವ ಹೆಚ್ಚಾಗುತ್ತದೆ’ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಲಿಂಡೆನ್ ಆರ್ಚರ್‌ ಹೇಳಿದ್ದಾರೆ.

‘ಹಾಗಾಗಿ, ವಾಹನ ಎಷ್ಟು ದೂರ ಕ್ರಮಿಸಬಲ್ಲದು ಎಂಬುದು ದೊಡ್ಡ ಸವಾಲಾಗಿ ಭವಿಷ್ಯದಲ್ಲಿ ಉಳಿಯಲಾರದು. ಎಷ್ಟೇ ಕಡಿಮೆ ಸಂಗ್ರಹಣ ಸಾಮರ್ಥ್ಯ ಇರುವ ವಾಹನವೂ ಕನಿಷ್ಠ 100 ಕಿಲೋಮೀಟರ್‌ ಕ್ರಮಿಸಬಲ್ಲದು. ಒಂದು ಟೀ ಅಥವಾ ಕಾಫಿ ಕುಡಿಯಲು ಕನಿಷ್ಠವೆಂದರೂ 10 ನಿಮಿಷ ಬೇಕೇ ಬೇಕು. ಅಷ್ಟರಲ್ಲಿ ಬ್ಯಾಟರಿ ಪೂರ್ಣ ಚಾರ್ಜ್‌ ಆದರೆ, ಚಿಂತೆಯ ಮಾತೇ ಬರುವುದಿಲ್ಲವಲ್ಲ. ಅಲ್ಲದೇ, ವಿದ್ಯುತ್‌ ಚಾರ್ಜಿಂಗ್‌ ಕೇಂದ್ರಗಳಲ್ಲಿ ಈಗ ಮೂಲಸೌಕರ್ಯದ ಕೊರತೆ ಇದೆ. ಒಂದೇ ಒಂದು ಚಾರ್ಜರ್‌ ಇದ್ದರೆ, ಸಾಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಇದೆ. ಈ ತಂತ್ರಜ್ಞಾನ ಜಾರಿಯಾದರೆ, 5 ನಿಮಿಷಕ್ಕೆ ಒಂದರಂತೆ ವಾಹನಗಳು ಚಾರ್ಜ್‌ ಆಗಿ ಜಾಗ ಖಾಲಿಮಾಡುತ್ತವೆ. ಇದು ಸಮಸ್ಯೆಗೆ ಪರಿಹಾರ ಅಲ್ಲವೇ?’ ಎಂದು ಆರ್ಚರ್‌ ಪ್ರಶ್ನಿಸಿದ್ದಾರೆ.

ಅಲ್ಲದೇ, ಟೊಯೊಟಾ, ಮರ್ಸಿಡೆಸ್ ಬೆನ್ಸ್‌ ಮುಂತಾದ ಕಂಪೆನಿಗಳು ಇದೀಗ ಜಲಜನಕ ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ವಾಹನಗಳಿಗೂ ಬ್ಯಾಟರಿ ಬೇಕೇ ಬೇಕು. ಕಾರಿನಲ್ಲಿರುವ ಜಲಜನಕ ಬಳಕೆಯಾಗಿ ಅದು ಬ್ಯಾಟರಿಗೆ ವರ್ಗಾವಣೆಯಾಗುವ ತಂತ್ರಜ್ಞಾನವದು. ನಮ್ಮ ಬ್ಯಾಟರಿಯು ಅತಿ ಬೇಗನೇ ಸ್ಪಂದಿಸುವ ಗುಣ ಹೊಂದಿರುವ ಕಾರಣ, ಭವಿಷ್ಯದಲ್ಲಿ ಈ ಬಗೆಯ ಬ್ಯಾಟರಿಗಳು ಸ್ಥಾನ ಪಡೆಯಲಿವೆ ಎಂದು ಆರ್ಚರ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT