ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CAPTCHA: ನೀವು ಮನುಷ್ಯರೇ?

ಗಣೇಶ್‌ ಭಟ್‌ ನೆಲಮಾವ್‌
Published 14 ಫೆಬ್ರುವರಿ 2024, 0:00 IST
Last Updated 14 ಫೆಬ್ರುವರಿ 2024, 0:00 IST
ಅಕ್ಷರ ಗಾತ್ರ

ಮನುಷ್ಯನನ್ನು ಮನುಷ್ಯ ಎಂದು ಕರೆಯಬಹುದಾದದ್ದು ಯಾವಾಗ? ಈ ಪ್ರಶ್ನೆಗೆ, ಆಲೋಚನಾಶಕ್ತಿ, ಸ್ವಯಂಪ್ರಜ್ಞೆ, ಭಾವನೆಗಳು ಇತ್ಯಾದಿ ಗುಣಗಳನ್ನು ತೋರಿದಾಗ ಎಂದು ಹೇಳಬಹುದು. ಆದರೆ ಇಪ್ಪತ್ತೊಂದನೇ ಶತಮಾನಕ್ಕೆ ತಕ್ಕಂತೆ ಉತ್ತರಿಸುವುದಾದರೆ, ‘ಟ್ರಾಫಿಕ್ ಲೈಟು, ಬಸ್ಸು-ಕಾರುಗಳಿರುವ ಚಿತ್ರಗಳ ಮೇಲೆ ಸರಿಯಾಗಿ ಕ್ಲಿಕ್ಕಿಸಿದಾಗ’ ಎನ್ನಬೇಕಾಗುತ್ತದೆ!

ನೀವು ಅಂತರ್ಜಾಲದಲ್ಲಿ ಯಾವುದಾದರೂ ಸೇವೆಯನ್ನು ಬಳಸುತ್ತಿರುವಾಗ ಕೆಲವೊಮ್ಮೆ ಹೀಗೊಂದು
ಪರೀಕ್ಷೆ ನಿಮಗೆದುರಾಗಿರುತ್ತದೆ. ಒಂದಷ್ಟು ತಿರುಚಿದ, ಗೋಜಲುಗೋಜಲಾದ ಅಕ್ಷರಗಳನ್ನು ಕೊಟ್ಟು, ಆ ಅಕ್ಷರಗಳನ್ನು ಗುರುತಿಸುವಂತೆ ಕೇಳಲಾಗುತ್ತದೆ. ಅಥವಾ ಸಣ್ಣ ಸಣ್ಣ ಚೌಕಗಳಿಂದಾದ ಒಂದು ಚಿತ್ರವನ್ನು ತೋರಿಸಿ ಯಾವುದೋ ನಿರ್ದಿಷ್ಟ ವಸ್ತುವಿರುವ ಚೌಕಗಳನ್ನು ಆಯ್ಕೆ ಮಾಡುವಂತೆ ಕೇಳಲಾಗುತ್ತದೆ. ಇಂಥ ಪರೀಕ್ಷೆಗಳ ಹೆಸರೇ ‘ಕ್ಯಾಪ್ಚಾ’ (CAPTCHA). ಇದು, ‘Completely Automated Public Turing test to tell Computers and Humans Apart ’ ಎಂಬುದರ ಹ್ರಸ್ವರೂಪ. ಈ ಮಾರುದ್ದದ ಹೆಸರಿನ ಸರಳ ಅರ್ಥವೆಂದರೆ, ‘ಮನುಷ್ಯ ಮತ್ತು ಯಂತ್ರಗಳನ್ನು ಗುರುತಿಸಲು ನಡೆಸುವ ಪರೀಕ್ಷೆ’ ಎಂದು. ಆಧುನಿಕ ಕಂಪ್ಯೂಟರ್ ವಿಜ್ಞಾನದ ಪಿತಾಮಹ ಅಲನ್ ಟ್ಯೂರಿಂಗ್, ಆಲೋಚನಾಶಕ್ತಿಯಲ್ಲಿ ಯಂತ್ರಗಳು ಮನುಷ್ಯನನ್ನು ಸರಿಗಟ್ಟುವ ಸಂದರ್ಭ ಬಂದಾಗ ಯಂತ್ರಗಳು ಮತ್ತು ಮನುಷ್ಯರನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆಯನ್ನು ತನಗೆ ತಾನೇ ಹಾಕಿಕೊಂಡು, ಸುಮಾರು 70 ವರ್ಷಗಳ ಹಿಂದೆಯೇ ಕೆಲವು ನಿರ್ದೇಶನಗಳನ್ನು ನೀಡಿದ್ದ. ಆ ನಿರ್ದೇಶನಗಳನ್ನು ಆಧಾರವಾಗಿಟ್ಟುಕೊಂಡು ಕೆಲವು ಪರೀಕ್ಷೆಗಳನ್ನು ಸಿದ್ಧಪಡಿಸಲಾಯಿತು. ಅಂತಹ ಪರೀಕ್ಷೆಗಳನ್ನು ‘ಟ್ಯೂರಿಂಗ್ ಪರೀಕ್ಷೆ’ ಎಂದು ಕರೆಯುತ್ತೇವೆ. ಕ್ಯಾಪ್ಚಾ ಅಂತಹುದೇ ಟ್ಯೂರಿಂಗ್ ಪರೀಕ್ಷೆಗಳಲ್ಲೊಂದು.

ಈ ಕ್ಯಾಪ್ಚಾ ಒಡ್ಡುವ ಪ್ರಶ್ನೆಗಳಿಗೆ ‘ಏಕೆ ಉತ್ತರಿಸಬೇಕು?’, ‘ಅದರ ಅವಶ್ಯಕತೆ ಏನು?’ – ಎಂಬ ಪ್ರಶ್ನೆಗಳು ನಿಮಗೆ ಅವನ್ನು ಎದುರಿಸುವಾಗೆಲ್ಲ ಬಂದಿರಬಹುದು. ಕ್ಯಾಪ್ಚಾದ ಮೂಲ ಉದ್ದೇಶ ಸುರಕ್ಷತೆ. ಮನುಷ್ಯರ ಸೋಗಿನಲ್ಲಿ ಬರುವ ಸಾಫ್ಟ್ವೇರ್‌ಗಳನ್ನು ಗುರುತಿಸಿ ತಡೆಯುವುದೇ ಈ ಕ್ಯಾಪ್ಚಾದ ಕೆಲಸ. ವೆಬ್‌ಸೈಟ್‌ಗಳನ್ನು ನಾವು ಸಾಮಾನ್ಯವಾಗಿ ಬಳಸುವುದು ಯಾವುದಾದರೂ ಸೇವೆ ಅಥವಾ ಮಾಹಿತಿಯನ್ನು ಪಡೆಯಲು. ಹಲವು ಬಾರೀ ಹ್ಯಾಕರ್‌ಗಳು ಅಥವಾ ಇನ್ನಾವುದೋ ರೀತಿಯ ಕಿಡಿಗೇಡಿಗಳು ವೆಬ್‌ಸೈಟ್‌ಗಳಿಗೆ ಲಗ್ಗೆ ಇಡಲೆಂದು ಸಾಫ್ಟ್‌ಫೇರ್‌ಗಳನ್ನು ತಯಾರಿಸುತ್ತಾರೆ. ಇವುಗಳಿಗೆ ‘ಬಾಟ್’ (bot) ಎಂದು ಹೆಸರು. ಈ ಬಾಟ್‌ಗಳು ಒಂದು ನಿರ್ದಿಷ್ಟ ಕೆಲಸವನ್ನು ಸ್ವಯಂಚಾಲಿತವಾಗಿ ಮಾಡಬಲ್ಲವು. ಇವನ್ನು ಬಳಸಿ ಆನ್ಲೈನ್ ಟಿಕೆಟ್ ಬುಕ್ ಮಾಡುವುದು, ಇ-ಮೇಲ್ ವಿಳಾಸವನ್ನು ಸೃಷ್ಟಿಸುವುದು, ಸೋಶಿಯಲ್ ಮೀಡಿಯಾ ಅಕೌಂಟನ್ನು ರಚಿಸುವುದು ಮುಂತಾಗಿ ಹಲವು ಕೆಲಸಗಳನ್ನು ಮಾಡಬಹುದು. ಮನುಷ್ಯರಿಗೆ ಹೋಲಿಸಿದರೆ ಇವುಗಳು ಕೆಲಸ ಮಾಡುವ ವೇಗ ಮತ್ತು ಪ್ರಮಾಣ ಅತ್ಯಂತ ಹೆಚ್ಚಿರುತ್ತದೆ. ಇದರಿಂದಾಗಿ ಈ ಬಾಟ್‌ಗಳು ಗುರಿಯಾಗಿಸಿದ ವೆಬ್‌ಸೈಟ್‌ಗಳು ಸಾಮಾನ್ಯ ಜನರಿಗೆ ಬಳಕೆಗೆ ಸಿಗದಂತೆ ಹೋಗಬಹುದು. ಆನ್‌ಲೈನ್‌ ವೇದಿಕೆಗಳಲ್ಲಿ ನಿಷ್ಪ್ರಯೋಜಕ ಮಾಹಿತಿಯನ್ನು ಅಥವಾ ಕುತಂತ್ರಾಂಶ ಒಂದರ ಕೊಂಡಿಯನ್ನು ಸೇರಿಸಿಬಿಡಬಹುದು. ಕಾರ್ಯಕ್ರಮವೊಂದರ ಟಿಕೇಟುಗಳನ್ನೆಲ್ಲ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಬಹುದು. ಇಂತಹ ಕೆಲಸಗಳನ್ನೆಲ್ಲ ತಡೆಯುವ ಕಾವಲುಗಾರನಾಗಿ ಕ್ಯಾಪ್ಚಾ ನಿಲ್ಲುತ್ತದೆ. ಈ ಬಾಟ್‌ಗಳಿಗೆ ತಿರುಚಲ್ಪಟ್ಟ ಅಕ್ಷರಗಳನ್ನು ಓದುವುದು, ಚಿತ್ರಗಳಲ್ಲಿರುವ ಕಾರು, ಟ್ರಾಫಿಕ್ ಲೈಟ್ ಮುಂತಾದ ವಸ್ತುಗಳನ್ನು ಗುರುತಿಸುವುದು ಕಷ್ಟದ ಕೆಲಸ. ನಮಗೆ ಅತ್ಯಂತ ಸರಳವಾದ ಈ ಕೆಲಸಗಳು ಯಂತ್ರಗಳ ಪಾಲಿಗೆ ಅತಿ ಸಂಕೀರ್ಣವಾದಂತಹ ಸಮಸ್ಯೆಗಳಾಗುತ್ತವೆ, ಮತ್ತು ಬಾಟ್‌ಗಳ ಕುಕೃತ್ಯಕ್ಕೆ ಕಡಿವಾಣ ಬೀಳುತ್ತದೆ.

ಆದರೆ ತಂತ್ರಜ್ಞಾನವೂ ನಿಂತ ನೀರೇನಲ್ಲವಲ್ಲ. ಸಮಯ ಕಳೆದಂತೆ ಯಂತ್ರಗಳು ಕೂಡ ಈ ಕ್ಯಾಪ್ಚಾಗಳನ್ನು ಪರಿಹರಿಸುವಲ್ಲಿ ದಕ್ಷತೆಗಳಿಸಿತೊಡಗಿದವು. ಅಲ್ಲದೆ ಜನರಿಗೂ ಈ ಕ್ಯಾಪ್ಚಾಗಳನ್ನು ಪರಿಹರಿಸುತ್ತಾ ಕೂರುವುದು ಕಿರಿಕಿರಿಯ ವಿಷಯವಾಯಿತು. ಇದಕ್ಕೆ ಪರಿಹಾರವಾಗಿ ಗೂಗಲ್ ‘ No CAPTCHA’ ಎಂಬ ಹೊಸ ತಂತ್ರವನ್ನು ಕಂಡುಕೊಂಡಿದೆ. ಈ ತಂತ್ರವನ್ನು ಬಳಸುವ ವೆಬ್‌ಸೈಟ್‌ಗಳಲ್ಲಿ ತಿರುಚಿದ ಅಕ್ಷರಗಳು ಅಥವಾ ವಿವಿಧ ವಸ್ತುಗಳ ಚಿತ್ರಗಳು ಇರುವುದಿಲ್ಲ. ಪರದೆಯ ಮೇಲೆ ನಾವು ಮೌಸ್‌ನ ಪಾಯಿಂಟರನ್ನು ಹೇಗೆ ಓಡಾಡಿಸುತ್ತೇವೆ, ಅಂತರ್ಜಾಲದಲ್ಲಿ ನಾವು ಹುಡುಕಿದ ವಿಷಯಗಳು, ತೆರೆದ ವೆಬ್‌ಸೈಟ್‌ಗಳು ಮುಂತಾದ ಮಾಹಿತಿಯನ್ನು ವಿಶ್ಲೇಷಿಸಿ ಗೂಗಲ್ ನಮ್ಮ ಮಾನವತ್ವವನ್ನು ಪತ್ತೆ ಮಾಡುತ್ತದೆ. ಏಕೆಂದರೆ ಬ್ರೌಸರ್ ಹಿಸ್ಟರಿಯಲ್ಲಿ ನಾವು ಬಿಡುವ ಹೆಜ್ಜೆ ಗುರುತುಗಳಿಂದ ನಮ್ಮ ಕಿರು ವ್ಯಕ್ತಿತ್ವವನ್ನೇ ರೂಪಿಸಲು ಗೂಗಲ್‌ಗೆ ಸಾಧ್ಯವಾಗುತ್ತದೆ. ಆದರೆ ಬಾಟ್‌ಗಳು ಇಂತಹ ಹೆಜ್ಜೆ ಗುರುತುಗಳನ್ನು ಬಿಡಲಾರವು. ಹೀಗಾಗಿ, ಒಂದು ದೃಷ್ಟಿಯಲ್ಲಿ ನಾವು ಮಾಡುವ ಕ್ಲಿಕ್ಕುಗಳಿಂದಲೇ ನಮ್ಮ ಮಾನವತ್ವ ಸಾಬೀತಾಗುತ್ತದೆ. ವಿಜ್ಞಾನಿ-ತತ್ವಜ್ಞಾನಿ ರೆನೇ ದೆಕಾರ್ತೆ ಈಗ ಇದ್ದಿದ್ದರೆ ‘I click therefore I am’ ಎನ್ನುತ್ತಿದ್ದನೋ ಏನೋ!

ಇಷ್ಟಾದರೂ ಈ ಪರಿಹಾರ ಅಂತಿಮವೆಂದೇನೂ ಅಲ್ಲ. ತಂತ್ರಜ್ಞಾನ ಮುಂದುವರಿದಂತೆ ಈ ತಂತ್ರವನ್ನೂ ಎದುರಿಸುವ ಸಾಮರ್ಥ್ಯವನ್ನು ಯಂತ್ರಗಳು ಗಳಿಸಬಹುದು. ಮನುಷ್ಯ ಮತ್ತು ಯಂತ್ರಗಳನ್ನು ಬೇರ್ಪಡಿಸುವ ಗೆರೆಯು ತೆಳುವಾಗುತ್ತಿರುವ ಈ ಕಾಲದಲ್ಲಿ ಇದೊಂದು ಮುಗಿಯದ ಓಟ. ಇಲ್ಲಿ ಓಟವನ್ನು ಗೆಲ್ಲುವುದು ಸಾಧ್ಯವಿಲ್ಲದಿರಬಹುದು; ಆದರೆ ಪ್ರತಿಸ್ಪರ್ಧಿಗಿಂತ ಸದಾ ಎರಡು ಹೆಜ್ಜೆ ಮುಂದೆ ಇರಬೇಕಾದುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT