ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ | ವೈರ್‌ಲೆಸ್ ಟೆಲಿವಿಷನ್ ಬಂತು ನೋಡಿ

ಪೃಥ್ವಿರಾಜ್
Published 2 ಜನವರಿ 2024, 20:30 IST
Last Updated 2 ಜನವರಿ 2024, 20:30 IST
ಅಕ್ಷರ ಗಾತ್ರ

ಹಲವು ಮನೆಗಳಲ್ಲಿ ಮನರಂಜನೆಗೆ ಪ್ರಮುಖ ಸಾಧನ ಟೆಲಿವಿಷನ್, ಎಲ್ಲರೂ ಮುದ್ದಾಗಿ ಟಿವಿ ಎಂದು ಕರೆಯುವ ಈ ಸಾಧನ ಕಾಲಕಾಲಕ್ಕೆ ಹೊಸ ರೂಪ ಪಡೆಯುತ್ತಾ ಮೇಜಿನಿಂದ ಗೋಡೆಗೇರಿ ವಿಶ್ವದ ಆಗುಹೋಗುಗಳನ್ನೆಲ್ಲಾ ತೋರಿಸುತ್ತಿದೆ. ಈಗ ಹೊಸ ತಂತ್ರಜ್ಞಾನದ ಪ್ರಭಾವದಿಂದ ಗೋಡೆಯಿಂದ ಜೋಪಾನವಾಗಿ ಕೆಳಗಿಳಿಯುವ ತಂತ್ರವನ್ನೂ ಕಲಿತಿದೆ! ಈ ವಿಶೇಷ ಟಿವಿಯ ಮಾಹಿತಿ ಇಲ್ಲಿದೆ.

ಟೆಲಿವಿಷನ್ ಎಂದರೆ ಕಣ್ಣಮುಂದೆಯೇ ಪ್ರಪಂಚದ ವಿದ್ಯಮಾನಗಳೆಲ್ಲಾ ನಡೆಯುತ್ತಿವೆ ಎಂಬಂತೆ ತೋರಿಸುವ ಉತ್ತಮ ಡಿಸ್‌ಪ್ಲೇ, ಕೋಣೆಯ ಮೂಲೆ ಮೂಲೆಗೆ ಪಸರಿಸುವ ಶಬ್ದ, ಬೇರೆ ಬೇರೆ ಚಾನೆಲ್‌ಗಳನ್ನು ನೋಡಲು ನೆರವಾಗುವ ಉತ್ತಮ ರಿಮೋಟ್… ಹೀಗೆ ಕೆಲವು ವೈಶಿಷ್ಟ್ಯಗಳಿದ್ದರೆ ಸಾಕು ಎಂಬುದರಿಂದ ಹಿಡಿದು ಕರ್ವ್ಡ್‌ ಡಿಸ್‌ಪ್ಲೇ, ಒಎಲ್‌ಡಿ ಸ್ಕ್ರೀನ್ ಟಿ.ವಿ, ಸ್ಮಾರ್ಟ್‌ ಟಿ.ವಿ, ಡಿಜಿಟಲ್ ಟಿ.ವಿ… ಹೀಗೆ ವಿವಿಧ ತಂತ್ರಜ್ಞಾನದ ಟಿ.ವಿಗಳು ಬಳಕೆಗೆ ಬಂದಿವೆ. ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಸಾಮಾನ್ಯವೆಂಬಂತೆ ಬಾಕ್ಸ್‌ ಟಿ.ವಿಗಳು, ರೋಲೆಬಲ್ ಟಿ.ವಿಗಳೂ ರಾರಾಜಿಸಲಿವೆ.

ಪ್ರಸ್ತುತ ನಮಗೆಲ್ಲರಿಗೂ ಪರಿಚಯವಿರುವ ಟಿ.ವಿಗಳಿಗಿಂತ ಭಿನ್ನವಾದ, ಹಲವು ಹೊಸ ವೈಶಿಷ್ಟ್ಯಗಳುಳ್ಳ ಟಿ.ವಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಹೆಸರು ಡಿಸ್‌ಪ್ಲೇಸ್. ಇದರ ಬಳಕೆ, ಉಪಯೋಗ, ತಂತ್ರಜ್ಞಾನ, ವಿನ್ಯಾಸ ಎಲ್ಲವೂ ಭಿನ್ನವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವದ ಮೊದಲ ವೈರ್‌ಲೆಸ್‌ ತಂತ್ರಜ್ಞಾನವಿರುವ ಟಿ.ವಿ ಇದಾಗಿದ್ದು ಬ್ಯಾಟರಿಗಳ ನೆರವಿನಿಂದ ಕೆಲಸ ಮಾಡುತ್ತದೆ.

ಎಲ್ಲ ಟಿ.ವಿಗಳಂತೆ ಇದನ್ನು ಗೋಡೆಗೆ ಅಳವಡಿಸಲು ರಂಧ್ರ ಕೊರೆಯುವ ಅಥವಾ ಇದಕ್ಕಾಗಿ ಪ್ರತ್ಯೇಕ ಕಪಾಟು ಮಾಡಿಸುವ ಅಗತ್ಯವಿಲ್ಲ, ಸ್ಟ್ಯಾಂಡ್ ಕೂಡ ಬೇಕಿಲ್ಲ. ಇದರಲ್ಲಿ ಸೆಲ್ಫ್ ಮೌಂಟೆಬಲ್ ತಂತ್ರಜ್ಞಾನ ಅಳವಡಿಸಲಾಗಿದ್ದು, ಮನೆಯ ಗೋಡೆ ಅಥವಾ ಗಾಜಿನ ಗೋಡೆಗಳಿಗೆ ವ್ಯಾಕ್ಯುಮ್ ಸೆಲ್ಫ್ ಸೆಕ್ಷನ್ ಕಪ್‌ಗಳ ನೆರವಿನಿಂದ ಅಂಟಿಕೊಳ್ಳುವಂತೆ ತಯಾರಿಸಲಾಗಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ವಿದ್ಯುತ್ ಸಂಪರ್ಕ ಕೊಡುವ ಅವಶ್ಯಕತೆ ಇಲ್ಲ. ಇದರಲ್ಲಿ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದ್ದು , ಬ್ಯಾಟರಿ ಶಕ್ತಿ ಕ್ಷೀಣಿಸಿದಾಗ ಟಿ.ವಿಯಿಂದ ಹೊರ ತೆಗೆದು ರೀಚಾರ್ಜ್ ಮಾಡಿಕೊಳ್ಳಬಹುದು.

ಎಲ್ಲ ಬ್ಯಾಟರಿಗಳನ್ನು ಒಮ್ಮೆ ರೀಚಾರ್ಜ್ ಮಾಡಿದರೆ ದಿನಕ್ಕೆ ಸರಾಸರಿ ಆರು ಗಂಟೆ ವೀಕ್ಷಿಸಿದರೂ ಒಂದು ತಿಂಗಳವರೆಗೆ ಬ್ಯಾಟರಿ ಬ್ಯಾಕಪ್ ಇರುತ್ತದೆ. ನಾಲ್ಕೂ ಬ್ಯಾಟರಿಗಳನ್ನು ಒಮ್ಮೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ ಒಂದು ಬ್ಯಾಟರಿ ಶಕ್ತಿ ಹೀನವಾದಾಗ ಕೇವಲ ಅದನ್ನೇ ಹೊರತೆಗೆದು ರೀಚಾರ್ಜ್ ಮಾಡಿ ಇಡಬಹುದು. ಹೀಗೆ ಒಂದರ ನಂತರ ಮತ್ತೊಂದನ್ನು ರೀಚಾರ್ಜ್ ಮಾಡಿಕೊಳ್ಳುತ್ತಾ ನಿರಂತರವಾಗಿ ಟಿ.ವಿ ನೋಡಬಹುದು.

* ರೆಸಲ್ಯೂಷನ್: 4ಕೆ
* ಡಿಸ್‌ಪ್ಲೇ ಸ್ಕ್ರೀನ್ ಗಾತ್ರ: 55 ಇಂಚು
* ತೂಕ: ಸುಮಾರು 9 ಕೆ.ಜಿ.

ಬ್ಯಾಟರಿ ಶಕ್ತಿ ಸಂಪೂರ್ಣ ಕುಂದಿದಾಗ ತಾನಾಗಿಯೇ ಗೋಡೆಯಿಂದ ಸುರಕ್ಷಿತವಾಗಿ ಇಳಿಯುವಂತೆ ಸೆಲ್ಫ್ ಲ್ಯಾಂಡಿಂಗ್ ತಂತ್ರಜ್ಞಾನದ ಮೋಟಾರ್ ಸೆಲ್ಫ್ ಮೆಕ್ಯಾನಿಸಂ ಇದರಲ್ಲಿ ಅಳವಡಿಸಲಾಗಿದೆ. ಇದರಿಂದ ಡಿಸ್‌ಪ್ಲೇ ಸ್ಕ್ರೀನ್‌ಗೆ ಯಾವುದೇ ಹಾನಿಯಾಗದಂತೆ ಜಿಪ್‌ಲೈನ್ ಹಾಗೂ ಫೋಮ್ ಮೆಕ್ಯಾನಿಸಂ ಇದರಲ್ಲಿದೆ. ಇದು ಈ ಟಿ.ವಿಯ ಮತ್ತೊಂದು ವಿಶೇಷ. ಇದರ ನಿಯಂತ್ರಣಕ್ಕೆ ಯಾವುದೇ ರಿಮೋಟ್ ಇರುವುದಿಲ್ಲ, ಕೈ ಸನ್ನೆಗಳಿಂದಲೇ ನಿಯಂತ್ರಿಸಬಹುದು.

ಇಷ್ಟವಾಗುವ ಚಾನೆಲ್ ನೋಡಬಹುದು ಅಗತ್ಯಕ್ಕೆ ತಕ್ಕಂತೆ ಸೌಂಡ್‌ ನಿಯಂತ್ರಿಸಬಹುದು. ಇದರಲ್ಲಿ ಅಳವಡಿಸಿರುವ ಕ್ಯಾಮೆರಾ ಇದಕ್ಕೆ ಪೂರಕವಾಗಿ ನಮ್ಮ ಸನ್ನೆಗಳನ್ನು ಗ್ರಹಿಸುತ್ತದೆ. ನಮ್ಮ ಧ್ವನಿಯಿಂದಲೂ ನಿಯಂತ್ರಿಸಬಹುದು, ತೀರಾ ಕಷ್ಟವಾದರೆ ಸ್ಮಾರ್ಟ್‌ಫೋನ್‌ಗಳ ಟಚ್‌ಸ್ಕ್ರೀನ್ ಮುಟ್ಟಿ ಬೇಕೆನಿಸಿದ ಆ್ಯಪ್‌ ಹೇಗೆ ಬಳಸುತ್ತಿದ್ದೇವೆಯೊ ಇದರ ಸ್ಕ್ರೀನ್ ಮೇಲೆ ಬೆರಳು ಸ್ಪರ್ಶಿಸಿ ಉಪಯೋಗಿಸಲು ನೆರವಾಗುವಂತೆ ವಾಯ್ಸ್ ಮತ್ತು ಟಚ್ ಬೇಸ್ಡ್ ಕಂಟ್ರೋಲ್ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ಪ್ರಸ್ತುತ ಬಳಕೆಯಲ್ಲಿರುವ ಟಿ.ವಿಗಳ ಹಿಂದುಗಡೆ ಅದರ ಕಾರ್ಯನಿರ್ವಹಣೆಗೆ ನೆರವಾಗುವಂತೆ ಪಿಸಿಬಿ ಯೂನಿಟ್, ಸ್ಪೀಕರ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ಟಿ.ವಿಯ ತೂಕ ಹೆಚ್ಚಾಗಿರುತ್ತದೆ. ಆದರೆ ಈ ಟಿ.ವಿಯನ್ನು ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಲಾಗಿರುವುದರಿಂದ ಇದು ಹಗುರವಾಗಿ ಇರಬೇಕು. ಹೀಗಾಗಿ ಇದರಲ್ಲಿ ಕೇವಲ ಡಿಸ್‌ಪ್ಲೇ ಪ್ಯಾನೆಲ್ ಹಾಗೂ ವೈರ್‌ಲೆಸ್ ರಿಸೀವರ್ ಮಾತ್ರ ಅಳವಡಿಸಲಾಗಿದೆ. ಆದರೆ ಇದು ಕೆಲಸ ನಿರ್ವಹಿಸಲು ಕನ್‌ಸೋಲ್ ನೀಡಲಾಗುತ್ತದೆ. ಇದು ಟಿ.ವಿಯಿಂದ ಪ್ರತ್ಯೇಕವಾಗಿರುತ್ತದೆ. ಈ ರೀತಿಯ ಒಂದು ಕನ್‌ಸೋಲ್‌ನಿಂದ ಡಿಸ್‌ಪ್ಲೇಸ್‌ನಂತಹ ನಾಲ್ಕು ಟಿ.ವಿಗಳನ್ನು ನಿಯಂತ್ರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT