ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ವನಿತೆಯರ ಶುಭಾರಂಭ

Published 27 ಏಪ್ರಿಲ್ 2024, 14:02 IST
Last Updated 27 ಏಪ್ರಿಲ್ 2024, 14:02 IST
ಅಕ್ಷರ ಗಾತ್ರ

ಚೆಂಗ್ಡು, ಚೀನಾ: ಭಾರತದ ಮಹಿಳಾ ತಂಡವು ಶನಿವಾರ ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು 4–1 ಅಂತರದಿಂದ ಕೆನಡಾ ತಂಡವನ್ನು ಮಣಿಸಿದರು.

ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವದ 53ನೇ ಕ್ರಮಾಂಕದ ಅಶ್ಮಿತಾ ಚಾಲಿಹಾ ಅವರು 26-24, 24-22ರಿಂದ 25ನೇ ಕ್ರಮಾಂಕದ ಮಿಚೆಲ್ ಲೀ ಅವರಿಗೆ ಆಘಾತ ನೀಡಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಅಶ್ಮಿತಾ ಅವರು  ಅನುಭವಿ ಆಟಗಾರ್ತಿಯನ್ನು 42 ನಿಮಿಷದಲ್ಲಿ ಮಣಿಸಿ, ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.

ಫೆಬ್ರುವರಿಯಲ್ಲಿ ಚೊಚ್ಚಲ ಏಷ್ಯಾ ಟೀಂ ಚಾಂಪಿಯನ್‌ಷಿಪ್‌ ಗೆದ್ದ ಭಾರತ ತಂಡದ ಭಾಗವಾಗಿದ್ದ ಅಶ್ಮಿತಾ ಅವರು ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಮತ್ತೆ ಲಯಕ್ಕೆ ಮರಳಿದ್ದಾರೆ.

ಡಿಸೆಂಬರ್‌ನಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಪಿಪ್ ಪ್ರಶಸ್ತಿ ಗೆದ್ದುಕೊಂಡಿದ್ದ ಪ್ರಿಯಾ ಕೊಂಜೆಂಗ್‌ಬಾಮ್ ಮತ್ತು ಶ್ರುತಿ ಮಿಶ್ರಾ ಜೋಡಿಯು ನಂತರ ನಡೆದ ಡಬಲ್ಸ್‌ ಪಂದ್ಯದಲ್ಲಿ 21-12, 21-10ರಿಂದ ಕ್ಯಾಥರೀನ್ ಚೋಯ್ ಮತ್ತು ಜೆಸ್ಲಿನ್ ಚೌ ಅವರನ್ನು ಸೋಲಿಸಿ ಭಾರತದ ಮುನ್ನಡೆಯನ್ನು 2-0 ಗೆ ಹಿಗ್ಗಿಸಿತು.

ಎರಡನೇ ಸಿಂಗಲ್ಸ್‌ ಪಂದ್ಯದಲ್ಲಿ ಇಶಾರಾಣಿ ಬರೂವಾ ಅವರು 21-13, 21-12ರಿಂದ ವೆನ್ ಯು ಝಾಂಗ್ ಅವರನ್ನು ಕೇವಲ 29 ನಿಮಿಷಗಳ ಹೋರಾಟದಲ್ಲಿ ಮಣಿಸಿ ಭಾರತದ ಮುನ್ನಡೆಯನ್ನು 3–0 ಗೆ ವಿಸ್ತರಿಸಿದರು.

ಆದರೆ, ಎರಡನೇ ಡಬಲ್ಸ್‌ನ ಪಂದ್ಯದಲ್ಲಿ ಭಾರತದ ಯುವ ಆಟಗಾರ್ತಿಯರು ಮುಗ್ಗರಿಸಿದರು. ಸಿಮ್ರಾನ್‌ ಸಿಂಘಿ ಮತ್ತು ರಿತಿಕಾ ಥಾಕರ್‌ ಜೋಡಿಯು 19-21, 15-21 ರಿಂದ ಜಾಕಿ ಡೆಂಟ್ ಮತ್ತು ಕ್ರಿಸ್ಟಲ್ ಜೋಡಿಗೆ ಶರಣಾಯಿತು.

ನಂತರದ ನಡೆದ ಮೂರನೇ ಸಿಂಗಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ ಅನ್ಮೋಲ್‌ ಖರ್ಬ್‌ 21-15, 21-11ರಿಂದ ಎಲಿಯಾನಾ ಜಾಂಗ್ ಅವರನ್ನು ಸೋಲಿಸಿ ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು.

‘ಎ’ ಗುಂಪಿನಲ್ಲಿರುವ ಭಾರತ ತಂಡವು ಭಾನುವಾರ ಸಿಂಗಪುರ ತಂಡದ ವಿರುದ್ಧ, ಮಂಗಳವಾರ ಆತಿಥೇಯ ಚೀನಾ ವಿರುದ್ಧ ಸೆಣಸಲಿದೆ.

ಥಾಮಸ್‌ ಕಪ್‌ನಲ್ಲಿ ‘ಸಿ’ ಗುಂಪಿನಲ್ಲಿರುವ ಭಾರತದ ಪುರುಷರ ತಂಡವು ಥಾಯ್ಲೆಂಡ್‌ ವಿರುದ್ಧ ಅಭಿಯಾನ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT