ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅತಿ ದೊಡ್ಡ ಹಗರಣ!

Published 28 ಏಪ್ರಿಲ್ 2024, 0:24 IST
Last Updated 28 ಏಪ್ರಿಲ್ 2024, 0:24 IST
ಅಕ್ಷರ ಗಾತ್ರ

ಅಮದಳ್ಳಿ ಎಂಬುದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಪುಟ್ಟ ಊರು. ಅಲ್ಲಿ ನಡೆಯುವ ನಾರಾಯಣ ದೇವರ ಜಾತ್ರೆಯ ವೇಳೆ ರಾತ್ರಿಯ ಕಗ್ಗತ್ತಲಿನಲ್ಲಿ ಗದ್ದೆಬಯಲಿಗೆ ಹೆಲಿಕಾಪ್ಟರ್ ಬಂದಿಳಿಯಿತು. ಅದನ್ನು ಕಂಡು ಜನ ಗಾಬರಿ ಆಗಬೇಕಿತ್ತು. ಆದರೆ, ಹಾಗಾಗಲಿಲ್ಲ. ಅವರ ಕಣ್ಣುಗಳು ಅರಳಿದ್ದವು, ಕೈಗಳು ನಿರಂತರವಾಗಿ ಚಪ್ಪಾಳೆ ತಟ್ಟುತ್ತಿದ್ದವು!

ಅಂಕೋಲಾ ತಾಲ್ಲೂಕಿನ ಬಡಗೇರಿಯಲ್ಲಿ ಮತ್ತೊಂದು ಕುತೂಹಲಕಾರಿ ಪ್ರಸಂಗ ನಡೆಯಿತು. ಅಲ್ಲಿ ಇಳಿಸಂಜೆಯಲ್ಲಿ ಏಲಿಯನ್‍ಗಳು (ಅನ್ಯಗ್ರಹ ಜೀವಿಗಳು) ಸಾವಿರಾರು ಜನರ ಮಧ್ಯೆಯೇ ಬಂದಿಳಿದವು! ಅಲ್ಲದೇ ಗ್ರಾಮದ ರಸ್ತೆಯಲ್ಲಿ ತಾಸುಗಟ್ಟಲೆ ಓಡಾಡಿದವು. ಅವುಗಳನ್ನು ಅಚ್ಚರಿ ಬೆರೆತು ನೋಡುತ್ತಿದ್ದ ಜನರು ತಮಗೆ ತಾವೇ ಮೈಮರೆತಿದ್ದರು.

ಇವೆರಡೂ ಪ್ರಸಂಗಗಳೂ ನಿಜವಲ್ಲ. ಆದರೆ ‘ನೈಜತೆ ಸೃಷ್ಟಿಸುವ’ ಇಂತಹ ಕಲಾವಿದರ ಚಾಕಚಕ್ಯತೆಯನ್ನು ಜನರು ಕೊಂಡಾಡುವಂತಿತ್ತು. ಮೈಸೂರು ದಸರಾದಲ್ಲಿ ನಡೆಯುವ ಸ್ತಬ್ಧಚಿತ್ರಗಳು ಹೇಗೆ ದೇಶದ ಗಮನ ಸೆಳೆಯುತ್ತವೆಯೋ, ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಮನಸೆಳೆಯುವ ‘ಹಾಲಕ್ಕಿ ಹಗರಣ’ ಇಂತಹ ನೈಜತೆಯ ಸೃಷ್ಟಿಗೆ ವೇದಿಕೆ ಆಗುತ್ತದೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅನಿಕೇತ್ ಬೇಸಿಗೆ ರಜೆಯಲ್ಲಿ ಅಂಕೋಲಾದ ಬೇಲೆಕೇರಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ಸಮೀಪದ ಬಡಗೇರಿಯಲ್ಲಿ ನಡೆಯುವ ಹಗರಣ ನೋಡಲು ಅಜ್ಜ, ಅಜ್ಜಿ ಜೊತೆ ಹೋಗಿದ್ದ ಆತನಿಗೆ ಅಲ್ಲಿನ ದೃಶ್ಯಗಳು ನೆನಪಿನಲ್ಲಿ ಉಳಿಯುವಂತೆ ಮಾಡಿದ್ದವು. ವಿಡಿಯೊ ಗೇಮ್‍ ಆಡುವ, ಹಾಲಿವುಡ್ ಸಿನಿಮಾಗಳನ್ನು ನೋಡುವ ಗೀಳು ಅಂಟಿಸಿಕೊಂಡಿದ್ದ ಆತ ಅಲ್ಲೆಲ್ಲೂ ಕಾಣದಷ್ಟು ವಿಚಿತ್ರಗಳನ್ನು ಬಡಗೇರಿ ಎಂಬ ಪುಟ್ಟ ಹಳ್ಳಿಯ ಬೀದಿಯಲ್ಲಿ ನೋಡಿದ್ದ. ಈಗ ಸತತ ಐದು ವರ್ಷದಿಂದಲೂ ಆತ ‘ಹಗರಣ’ದ ಕಾಯಂ ಪ್ರೇಕ್ಷಕ! 

ಯುಗಾದಿ ಹಬ್ಬದ ದಿನದಂದು ಅಂಕೋಲಾದ ಬಡಗೇರಿಯಲ್ಲಿ ‘ಹಗರಣ’ ನಡೆಯುತ್ತದೆ. ಇದು ಈ ಭಾಗದ ಖ್ಯಾತ ‘ಹಗರಣ’. ಗ್ರಾಮದ ಬೀದಿಯುದ್ದಕ್ಕೂ ಸಾವಿರಾರು ಜನರು ಇದನ್ನು ನೋಡಲು ಮಧ್ಯಾಹ್ನದಿಂದಲೇ ಕಾದು ನಿಲ್ಲುತ್ತಾರೆ. ಗ್ರಾಮದ ಯುವಕ ಮಂಡಳಿಗಳು, ಸಂಘ–ಸಂಸ್ಥೆಗಳು ಪ್ರದರ್ಶಿಸುವ ಕಲಾಕೃತಿಗಳ ಸೊಬಗು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಬದಿಗಳಲ್ಲಿ ಹಾಗೂ ಕಟ್ಟಡ ಏರಿ ನಿಲ್ಲುತ್ತಾರೆ.

ಸಾಮಾಜಿಕ ಸಂದೇಶಗಳನ್ನು ಸಾರುವ ಜತೆಗೆ ಜನರನ್ನು ರಂಜಿಸಲು ಗ್ರಾಮದ ಯುವಕರೇ ಗುಂಪುಗೂಡಿ ರಚಿಸುವ ಕಲಾಕೃತಿಗಳು ಮೈನವಿರೇಳಿಸುತ್ತವೆ. ಸರಿಯಾಗಿ ಬಸ್ ಸಂಚಾರವನ್ನೇ ಕಾಣದ ಗ್ರಾಮಗಳಲ್ಲಿ ಹೆಲಿಕಾಪ್ಟರ್, ವಿಮಾನ, ಹಡಗುಗಳನ್ನು ತಂದಿಳಿಸುವ ಸಾಮರ್ಥ್ಯ ಇಲ್ಲಿನ ಯುವಕರಲ್ಲಿದೆ.

ರಾಕ್ಷಸ ಅಬ್ಬರಿಸುತ್ತ ಒಮ್ಮೆಲೇ ನುಗ್ಗುತ್ತಿದ್ದರೆ ಜನರು ಬೆಚ್ಚಿ ಬೀಳುತ್ತಿರುತ್ತಾರೆ. ರಕ್ಕಸನ ಬೆನ್ನಿಗೇ ಜನರು ಊಹೆ ಮಾಡದಂತಹ ದೈತ್ಯ ಕಾಡುಪ್ರಾಣಿಯೊಂದು ಊರಿನೊಳಕ್ಕೆ ನುಗ್ಗಿ ಓಡಾಡುತ್ತದೆ. ಅದನ್ನು ಕುತೂಹಲದಿಂದ ನೋಡುತ್ತಿರುವಾಗಲೇ ವಿಚಿತ್ರರೂಪದ ಕಾಡು ಮನುಷ್ಯರು, ಕ್ರೂರಮೃಗಗಳು ಒಂದರ ಹಿಂದೆ ಒಂದರಂತೆ ಓಡೋಡಿ ಬರಲಾರಂಭಿಸುತ್ತವೆ. ಈ ದೃಶ್ಯಗಳನ್ನು ರಸ್ತೆಯ ಬದಿಯಲ್ಲಿ ನಿಂತ ಜನರು ಹುಸಿ ದಿಗಿಲಿನೊಂದಿಗೆ ಆನಂದಿಸುತ್ತಾರೆ. ಜನರನ್ನು ಹೆದರಿಸಿದ ರಕ್ಕಸರು, ವನ್ಯಜೀವಿಗಳ ಹಿಂದೆಯೇ ಪ್ರತ್ಯಕ್ಷವಾಗುವ ದೇವಾನುದೇವತೆಗಳು ಜನರ ಮೊಗದಲ್ಲಿ ಮಂದಹಾಸ ಮೂಡಿಸುತ್ತಾರೆ. ಜನರಿಗೆ ವರ ನೀಡದಿದ್ದರೂ ಅವರಲ್ಲಿ ಕೊಂಚ ಧೈರ್ಯ ಉಂಟುಮಾಡುತ್ತಾರೆ. ದೇವರುಗಳ ಹಿಂದೆಯೇ ವೇಗವಾಗಿ ಬರುವ ಹೆಲಿಕಾಪ್ಟರ್, ಅದರಿಂದ ಇಳಿದು ಬರುವ ಸೈನಿಕರು ಆತ್ಮವಿಶ್ವಾಸ ತುಂಬುತ್ತಾರೆ. ಅವರ ಬೆನ್ನ ಹಿಂದೆಯೇ ಯಕ್ಷಗಾನ ಕಲಾವಿದರು ವೇಷಕಟ್ಟಿ ಕುಣಿಯುತ್ತ ಬರುತ್ತಿದ್ದರೆ ಜನರ ಕೇಕೆ, ಚಪ್ಪಾಳೆ ಸದ್ದು ಮುಗಿಲು ಸ್ಪರ್ಶಿಸಿ ಬರುತ್ತದೆ.

ಹೀಗೆ, ಅಂಕೋಲಾದ ಬಡಗೇರಿಯಲ್ಲಿ ‘ಹಗರಣ’ ಎಂಬ ಮಾಯಾಲೋಕ ತೆರೆದುಕೊಳ್ಳುತ್ತದೆ.

ಪ್ರಸ್ತುತವಾಗಿರುವ ಸಾಮಾಜಿಕ ಸಮಸ್ಯೆಗಳು, ಜನರ ಗಮನ ಸೆಳೆಯಬಹುದಾದ ಸಂಗತಿಗಳು, ವನ್ಯಲೋಕದ ವೈಶಿಷ್ಟ್ಯಗಳನ್ನು ಕಲಾಕೃತಿಗಳು ಮತ್ತು ರೂಪಕದಲ್ಲಿ ಪ್ರದರ್ಶಿಸುವ ಕಲೆಯೇ ‘ಹಗರಣ’. (‘ಹಗರಣ’ ಹೆಸರು ಏಕೆ ಬಂದಿತು ಎನ್ನುವ ಕುರಿತು ಮಾಹಿತಿ ಇಲ್ಲ.) ಕಾರವಾರ, ಅಂಕೋಲಾ ತಾಲ್ಲೂಕಿನ ಕೆಲವು ಗ್ರಾಮೀಣ ಭಾಗದಲ್ಲಿ ಈ ವಿಶಿಷ್ಟ ಕಲೆ ಪ್ರದರ್ಶನಗೊಳ್ಳುತ್ತದೆ. ನೂರಾರು ವರ್ಷಗಳಿಂದ ಆಚರಣೆಯಲ್ಲಿರುವ ‘ಹಗರಣ’ಕ್ಕೆ ಈಚಿನ ವರ್ಷದಲ್ಲಿ ಹೊಸಸ್ಪರ್ಶ ಸಿಕ್ಕಿದೆ.

‘ಹಗರಣ’ ಕೇವಲ ವಿಚಿತ್ರ, ರೋಮಾಂಚನಕಾರಿ ಕಲಾಕೃತಿಗಳಿಂದ ಜನರನ್ನು ರಂಜಿಸುವುದಷ್ಟೇ ಅಲ್ಲದೇ, ಪ್ರಸ್ತುತ ಸಮಾಜದಲ್ಲಿ ಚರ್ಚೆಯಲ್ಲಿರುವ, ಟ್ರೆಂಡ್ ಆಗಿರುವ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ರೂಪಕಗಳು ಸೃಷ್ಟಿಯಾಗುತ್ತವೆ. 

ಕೆಲವು ದಿನದ ಹಿಂದೆ ಅಂಕೋಲಾ ಪಟ್ಟಣದಲ್ಲಿ ಸುಗ್ಗಿ ಕುಣಿತದ ಸಮಾರೋಪದ ವೇಳೆ ನಡೆದ ಹಗರಣದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗ್ಯಾರಂಟಿ’ ಯೋಜನೆಗಳ ಸಾಧಕ–ಬಾಧಕಗಳನ್ನು ಕಲಾಕೃತಿಗಳ ಮೂಲಕ ಜನರಿಗೆ ಮನದಟ್ಟು ಮಾಡಿಸುವ ಪ್ರಯತ್ನ ನಡೆಯಿತು. ಮಹಿಳೆಯೊಬ್ಬಳು ಉಚಿತ ಪ್ರಯಾಣಕ್ಕೆ ಬಸ್ ಏರಲು ಹರಸಾಹಸಪಡುವ ರೂಪಕವನ್ನು ಗಂಡಸರೇ ಪ್ರದರ್ಶಿಸಿದ್ದರು. ಅಂದಹಾಗೆ ಹಗರಣದ ಯಾವ ರೂಪಕದಲ್ಲಿಯೂ ಮಹಿಳೆಯರು ಪಾತ್ರ ಧರಿಸುವುದಿಲ್ಲ. ಇಲ್ಲಿ ಪುರುಷರೇ ಮಹಿಳಾ ವೇಷಧಾರಿಗಳಾಗಿ ಗಮನಸೆಳೆಯುವ ಪದ್ಧತಿ ಇದೆ. ಬ್ರಿಟಿಷರ ಕಾಲದಲ್ಲಿನ ದಬ್ಬಾಳಿಕೆಯಿಂದ ಹಿಡಿದು ಈಗಿನ ಗ್ಯಾರಂಟಿ ಯೋಜನೆಗಳವರೆಗೆ ‘ಹಗರಣ’ ಹತ್ತಾರು ವಿಷಯಗಳನ್ನು ಜನರೆದುರು ಪ್ರಸ್ತುತಪಡಿಸಿದೆ. ವರ್ಷದಿಂದ ವರ್ಷಕ್ಕೆ ಭಿನ್ನ ವಿಷಯಗಳ ಆಧಾರದಲ್ಲಿ ಪ್ರದರ್ಶನ ನಡೆಯುವ ಕಾರಣದಿಂದಲೇ ಹಗರಣದ ಪ್ರಸಿದ್ಧಿ ಹೆಚ್ಚುತ್ತಿದೆ.

‘ಹಗರಣ’ ಹುಟ್ಟುಹಾಕಿದರು...

ಹಗರಣ ಆಚರಣೆ ಹುಟ್ಟಲು ‘ಭಾಷೆಯ ಅರಿವಿಲ್ಲದಿರುವುದು’ ಮುಖ್ಯ ಕಾರಣ ಎಂಬ ನಂಬಿಕೆ ಹಾಲಕ್ಕಿ ಸಮುದಾಯದಲ್ಲಿದೆ. ಬ್ರಿಟಿಷ್ ಆಡಳಿತದಲ್ಲಿ ಅವರಿಂದ ಉಂಟಾಗುತ್ತಿದ್ದ ದಬ್ಬಾಳಿಕೆ, ಊರಿನಲ್ಲಿದ್ದ ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಕಂದಾಚಾರ–ಹೀಗೆ ಹಲವು ಸಮಸ್ಯೆಗಳನ್ನು ಬಿಂಬಿಸುವ ಜತೆಗೆ ಬ್ರಿಟಿಷರನ್ನು ವಿರೋಧಿಸುವ ಸಲುವಾಗಿಯೇ ಹಗರಣದ ಪರಿಕಲ್ಪನೆ ಹುಟ್ಟಿಕೊಂಡಿತು.

‘ಬ್ರಿಟಿಷ್ ಅಧಿಕಾರಿಗಳಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ನಮ್ಮ ಜನರಿಗೆ ಇಂಗ್ಲಿಷ್ ತಿಳಿದಿರಲಿಲ್ಲ. ಸಂವಹನ ಸಮಸ್ಯೆ ಉಂಟಾದಾಗ ಹಗರಣ ಆಚರಿಸಲು ನಿರ್ಧರಿಸಲಾಯಿತು. ಈ ಮೂಲಕ ಜಾತ್ರೆ, ಸುಗ್ಗಿ ಕುಣಿತದ ಸಂದರ್ಭದಲ್ಲಿ ಹಗರಣ ಏರ್ಪಡಿಸಿ ರೂಪಕಗಳ ಮೂಲಕ ಬ್ರಿಟಿಷರಿಗೆ ಸಮಸ್ಯೆಗಳನ್ನು ಅರ್ಥಮಾಡಿಸಲು ಕಲಾವಿದರು ಪ್ರಯತ್ನಿಸುತ್ತಿದ್ದರು’ ಎಂದು ಶಿರವಾಡದ ಹಾಲಕ್ಕಿ ಸಮುದಾಯದ ರವಿಗೌಡ ಅಭಿಪ್ರಾಯಪಡುತ್ತಾರೆ.

‘ಬ್ರಿಟಿಷರ ಕಾಲದ ಹಗರಣ ಕಲೆಯ ಆರಂಭಿಕ ಹಂತವಾಗಿತ್ತು. ಕಾಲ ಕಳೆದಂತೆ ಈ ಕಲೆಗೂ ಹೊಸಸ್ಪರ್ಶ ಸಿಕ್ಕಿದೆ. ಈಗಿನ ತಲೆಮಾರಿನ ಯುವಕರ ಕ್ರಿಯಾಶೀಲತೆ, ವಿಚಾರಧಾರೆಗಳು ಕಲಾಕೃತಿಗಳಾಗಿ ರೂಪುಗೊಳ್ಳುತ್ತಿವೆ. ಅದಕ್ಕಾಗಿಯೇ ಹಗರಣ ಹೊಸ ಮೆರಗು ಪಡೆದುಕೊಂಡಿದೆ’ ಎಂದು ಅವರು ವಿವರಿಸಿದರು.

ತೀರಾ ಈಚಿನ ವರ್ಷದವರೆಗೂ ಹಾಲಕ್ಕಿ ಸಮುದಾಯದವರಷ್ಟೇ ‘ಹಗರಣ’ ಪ್ರದರ್ಶಿಸುತ್ತಿದ್ದರು. ಈಗ ಅದು ಇತರ ಸಮುದಾಯಗಳಿಗೂ ವಿಸ್ತರಿಸಿದೆ. ಜಾತಿಭೇದವಿಲ್ಲದೆ ಗ್ರಾಮದವರೆಲ್ಲ ಒಗ್ಗೂಡಿ ಹಗರಣ ಆಯೋಜಿಸುತ್ತಿದ್ದಾರೆ. ದುಡಿಯುವ ಜನರ ಅನಿವಾರ್ಯತೆ ಹೊಸದೊಂದು ಪರಿಕಲ್ಪನೆ ಹುಟ್ಟಿಗೆ ಕಾರಣವಾಗಿದ್ದು, ಶತಮಾನಗಳು ಕಳೆದರೂ ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸುತ್ತಾ, ಮನರಂಜಿಸುತ್ತಿದೆ!

ಇಲ್ಲೆಲ್ಲಾ ‘ಹಗರಣ’!

ಡಿಸೆಂಬರ್, ಜನವರಿ ವೇಳೆಯಲ್ಲಿ ಕಾರವಾರ ತಾಲ್ಲೂಕಿನ ನಗೆ ಗ್ರಾಮದ ಮಹಾದೇವ ದೇವಸ್ಥಾನ, ತೊಡೂರಿನ ಗೋವಿಂದದೇವ ದೇವಸ್ಥಾನ, ಅಮದಳ್ಳಿಯ ನಾರಾಯಣ ದೇವಸ್ಥಾನದಲ್ಲಿ ಆಚರಿಸಲ್ಪಡುವ ಜಾತ್ರೆಗಳಲ್ಲಿ ‘ಹಗರಣ’ ಪ್ರದರ್ಶನಗೊಳ್ಳುತ್ತದೆ.

ಅಂಕೋಲಾ ಪಟ್ಟಣದಲ್ಲಿ ಹೋಳಿ ಹುಣ್ಣಿಮೆಯ ಮುನ್ನಾದಿನ ನಡೆಯುವ ಸುಗ್ಗಿ ಕುಣಿತದ ಸಮಾರೋಪದ ವೇಳೆ, ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿ ಯುಗಾದಿ ದಿನ, ಅವರ್ಸಾದಲ್ಲಿ ದುರ್ಗಾದೇವಿ ವಿಸರ್ಜನೆ ಮೆರವಣಿಗೆ ವೇಳೆ, ಹನುಮ ಜಯಂತಿ ವೇಳೆ ಗೋಕರ್ಣದ ಬಿಜ್ಜೂರಿನಲ್ಲಿ ಹಗರಣ ಪ್ರದರ್ಶನಗೊಳ್ಳುತ್ತದೆ. 

ಕೂಲಿ ದುಡಿಮೆಯಲ್ಲಿ ಕಲಾಕೃತಿ

ಹಗರಣ ಎಂಬ ಅದ್ದೂರಿ ಆಚರಣೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇಲ್ಲಿ ಪ್ರದರ್ಶನಗೊಳ್ಳುವ ದೊಡ್ಡಗಾತ್ರದ ಕಲಾಕೃತಿಗಳ ತಯಾರಿಕೆಗೆ ಕನಿಷ್ಠ ₹20 ರಿಂದ ₹50 ಸಾವಿರ ಬೇಕು. ಅದನ್ನು ಊರಿನ ಯುವಕರೇ ಭರಿಸುತ್ತಾರೆ. ಬಹುತೇಕ ಯುವಕರು ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ, ಕೃಷಿ ಕಾರ್ಮಿಕರಾಗಿ, ವಿವಿಧ ವಲಯಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾರೆ.

‘ಹಗರಣದ ವೇಳೆ ಅದ್ಭುತ ಕಲಾಕೃತಿ ಸಿದ್ಧಪಡಿಸಬೇಕು ಎಂಬ ಹಠಕ್ಕೆ ಬೀಳುವ ಯುವಕರು ತಾವೇ ಸಮಾನ ಮನಸ್ಕರ ತಂಡ ಕಟ್ಟಿಕೊಳ್ಳುತ್ತಾರೆ. ಯಾರ ಬಳಿಯೂ ಅವರು ಕೈಚಾಚುವುದಿಲ್ಲ. ವರ್ಷದುದ್ದಕ್ಕೂ ತಾವು ದುಡಿದು ಕೂಡಿಟ್ಟ ಹಣದಲ್ಲಿ ಒಂದು ಪಾಲನ್ನು ಹಗರಣ ಆಯೋಜನೆಗೆ ಮೀಸಲಿಡುತ್ತಾರೆ. ತಮ್ಮ ತಂಡ ಸಿದ್ಧಪಡಿಸಿದ ಕಲಾಕೃತಿ ಜನರಿಂದ ‘ಭೇಷ್’ ಎನಿಸಿಕೊಳ್ಳಬೇಕು ಎಂಬುದಷ್ಟೇ ಅವರ ಆಸೆ. ಇದೇ ಕಾರಣಕ್ಕೆ ಕಲಾಕೃತಿಗಳಿಗೆ ಬಹುಮಾನ ನೀಡಲು ಬಹುತೇಕರು ವಿರೋಧಿಸುತ್ತಾರೆ’ ಎನ್ನುತ್ತಾರೆ ಅಮದಳ್ಳಿಯ ಪುರುಷೋತ್ತಮ ಗೌಡ.

ದೈತ್ಯಾಕಾರದ ವಿಚಿತ್ರ ಜೀವಿಯು ಪ್ರತ್ಯಕ್ಷವಾದಾಗ!
ದೈತ್ಯಾಕಾರದ ವಿಚಿತ್ರ ಜೀವಿಯು ಪ್ರತ್ಯಕ್ಷವಾದಾಗ!
ಹಾಲಕ್ಕಿ ಹಗರಣದಲ್ಲಿ ಗಮನಸೆಳೆದ ಅಘೋರಿ ವೇಷಧಾರಿಗಳು...
ಹಾಲಕ್ಕಿ ಹಗರಣದಲ್ಲಿ ಗಮನಸೆಳೆದ ಅಘೋರಿ ವೇಷಧಾರಿಗಳು...
ಕಾರವಾರ ತಾಲ್ಲೂಕಿನ ಅಮದಳ್ಳಿಯಲ್ಲಿ ನಡೆದ ಹಗರಣದಲ್ಲಿ ದೈತ್ಯಗಾತ್ರದ ಜೀವಿಯೊಂದರ ಕಲಾಕೃತಿ ಗಮನಸೆಳೆದಿತ್ತು.
ಕಾರವಾರ ತಾಲ್ಲೂಕಿನ ಅಮದಳ್ಳಿಯಲ್ಲಿ ನಡೆದ ಹಗರಣದಲ್ಲಿ ದೈತ್ಯಗಾತ್ರದ ಜೀವಿಯೊಂದರ ಕಲಾಕೃತಿ ಗಮನಸೆಳೆದಿತ್ತು.
ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿ ಯುಗಾದಿ ವೇಳೆ ನಡೆದ ಹಗರಣದಲ್ಲಿ ಜನಪದ ಕಲೆಗಳನ್ನು ಉಳಿಸುವಂತೆ ಸಂದೇಶ ಸಾರುವ ಸ್ತಬ್ಧಚಿತ್ರಗಳು ನೂರಾರು ಜನರು ತುಂಇದ್ದ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಸಾಗಿದವು.
ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿ ಯುಗಾದಿ ವೇಳೆ ನಡೆದ ಹಗರಣದಲ್ಲಿ ಜನಪದ ಕಲೆಗಳನ್ನು ಉಳಿಸುವಂತೆ ಸಂದೇಶ ಸಾರುವ ಸ್ತಬ್ಧಚಿತ್ರಗಳು ನೂರಾರು ಜನರು ತುಂಇದ್ದ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಸಾಗಿದವು.
ಹಗರಣದಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಪ್ರದರ್ಶಿಸಲು ಸಾಹಸಮಯವಾಗಿ ನಿಂತ ಕಲಾವಿದರು.
ಹಗರಣದಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಪ್ರದರ್ಶಿಸಲು ಸಾಹಸಮಯವಾಗಿ ನಿಂತ ಕಲಾವಿದರು.

ಕೂಲಿ ದುಡಿಮೆಯಲ್ಲಿ ಕಲಾಕೃತಿ

ಹಗರಣ ಎಂಬ ಅದ್ದೂರಿ ಆಚರಣೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇಲ್ಲಿ ಪ್ರದರ್ಶನಗೊಳ್ಳುವ ದೊಡ್ಡಗಾತ್ರದ ಕಲಾಕೃತಿಗಳ ತಯಾರಿಕೆಗೆ ಕನಿಷ್ಠ ₹20 ರಿಂದ ₹50 ಸಾವಿರ ಬೇಕು. ಅದನ್ನು ಊರಿನ ಯುವಕರೇ ಭರಿಸುತ್ತಾರೆ. ಬಹುತೇಕ ಯುವಕರು ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೃಷಿ ಕಾರ್ಮಿಕರಾಗಿ ವಿವಿಧ ವಲಯಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾರೆ.

ಹಗರಣದ ವೇಳೆ ಅದ್ಭುತ ಕಲಾಕೃತಿ ಸಿದ್ಧಪಡಿಸಬೇಕು ಎಂಬ ಹಠಕ್ಕೆ ಬೀಳುವ ಯುವಕರು ತಾವೇ ಸಮಾನ ಮನಸ್ಕರ ತಂಡ ಕಟ್ಟಿಕೊಳ್ಳುತ್ತಾರೆ. ಯಾರ ಬಳಿಯೂ ಅವರು ಕೈಚಾಚುವುದಿಲ್ಲ. ವರ್ಷದುದ್ದಕ್ಕೂ ತಾವು ದುಡಿದು ಕೂಡಿಟ್ಟ ಹಣದಲ್ಲಿ ಒಂದು ಪಾಲನ್ನು ಹಗರಣ ಆಯೋಜನೆಗೆ ಮೀಸಲಿಡುತ್ತಾರೆ. ತಮ್ಮ ತಂಡ ಸಿದ್ಧಪಡಿಸಿದ ಕಲಾಕೃತಿ ಜನರಿಂದ ‘ಭೇಷ್’ ಎನಿಸಿಕೊಳ್ಳಬೇಕು ಎಂಬುದಷ್ಟೇ ಅವರ ಆಸೆ. ಇದೇ ಕಾರಣಕ್ಕೆ ಕಲಾಕೃತಿಗಳಿಗೆ ಬಹುಮಾನ ನೀಡಲು ಬಹುತೇಕರು ವಿರೋಧಿಸುತ್ತಾರೆ’ ಎನ್ನುತ್ತಾರೆ ಅಮದಳ್ಳಿಯ ಪುರುಷೋತ್ತಮ ಗೌಡ. 

ಇಲ್ಲೆಲ್ಲಾ ‘ಹಗರಣ’!

ಡಿಸೆಂಬರ್ ಜನವರಿ ವೇಳೆಯಲ್ಲಿ ಕಾರವಾರ ತಾಲ್ಲೂಕಿನ ನಗೆ ಗ್ರಾಮದ ಮಹಾದೇವ ದೇವಸ್ಥಾನ ತೊಡೂರಿನ ಗೋವಿಂದದೇವ ದೇವಸ್ಥಾನ ಅಮದಳ್ಳಿಯ ನಾರಾಯಣ ದೇವಸ್ಥಾನದಲ್ಲಿ ಆಚರಿಸಲ್ಪಡುವ ಜಾತ್ರೆಗಳಲ್ಲಿ ‘ಹಗರಣ’ ಪ್ರದರ್ಶನಗೊಳ್ಳುತ್ತದೆ.

ಅಂಕೋಲಾ ಪಟ್ಟಣದಲ್ಲಿ ಹೋಳಿ ಹುಣ್ಣಿಮೆಯ ಮುನ್ನಾದಿನ ನಡೆಯುವ ಸುಗ್ಗಿ ಕುಣಿತದ ಸಮಾರೋಪದ ವೇಳೆ ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿ ಯುಗಾದಿ ದಿನ ಅವರ್ಸಾದಲ್ಲಿ ದುರ್ಗಾದೇವಿ ವಿಸರ್ಜನೆ ಮೆರವಣಿಗೆ ವೇಳೆ ಹನುಮ ಜಯಂತಿ ವೇಳೆ ಗೋಕರ್ಣದ ಬಿಜ್ಜೂರಿನಲ್ಲಿ ಹಗರಣ ಪ್ರದರ್ಶನಗೊಳ್ಳುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT