ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ. ಬಂಗಾಳ ಸಚಿವರು, ಸಂಸದರು ಲಂಚ ಪಡೆದ ವಿಡಿಯೊ ಬಿಡುಗಡೆ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದ ಮೂವರು ಸಚಿವರು, ಕೆಲವು ಸಂಸದರು ಮತ್ತು ಶಾಸಕರು ಕಂಪೆನಿಯೊಂದರಿಂದ ಲಂಚ ಪಡೆಯುತ್ತಿರುವುದನ್ನು ಮಾರುವೇಷದ ಕಾರ್ಯಾಚರಣೆ ನಡೆಸಿ ಚಿತ್ರಿಸಲಾಗಿದೆ ಎಂದು ಅಂತರ್ಜಾಲ ಸುದ್ದಿ ಪೋರ್ಟಲ್‌ ಹೇಳಿದೆ. ಆದರೆ ಇದು ‘ಮಾರ್ಪಡಿಸಲಾದ’ ವಿಡಿಯೊ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹೇಳಿದೆ.

ನಾರದ ನ್ಯೂಸ್‌ ಎಂಬ ಸುದ್ದಿ ಪೋರ್ಟಲ್‌ ಈ ವಿಡಿಯೊವನ್ನು ಬಿಡುಗಡೆ ಮಾಡಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಸುದ್ದಿ ಪೋರ್ಟಲ್ ಹೇಳಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಿಂಗಳಷ್ಟೇ ಇರುವಾಗ ಈ ವಿಡಿಯೊ ಬಿಡುಗಡೆಯಾಗಿದೆ.

‘ಇಂಪೆಕ್ಸ್‌ ಕನ್ಸಲ್ಟೆನ್ಸಿ’ ಎಂಬ ಕಾಲ್ಪನಿಕ ಕಂಪೆನಿಯ ಪರವಾಗಿ ಲಾಬಿ ಮಾಡುವುದಕ್ಕೆ ಕೆಲವು ಸಚಿವರು, ಸಂಸದರು ಮತ್ತು ಶಾಸಕರು ತಲಾ ₹5 ಲಕ್ಷ ವರೆಗೆ ಲಂಚ ಪಡೆಯುವ ದೃಶ್ಯಗಳು ವಿಡಿಯೊದಲ್ಲಿ ಇವೆ. ನಾರದ ನ್ಯೂಸ್‌ನ ಪತ್ರಕರ್ತರೊಬ್ಬರು ಇಂಪೆಕ್ಸ್‌ ಕನ್ಸಲ್ಟೆನ್ಸಿಯ ಪ್ರತಿನಿಧಿ ಎಂದು ಹೇಳಿಕೊಂಡು, ಸಚಿವರು, ಸಂಸದರು, ಶಾಸಕರಿಗೆ ಲಂಚ ನೀಡಿದ್ದಾರೆಂದು ನ್ಯೂಸ್‌ ಪೋರ್ಟಲ್ ಹೇಳಿದೆ.

ವಿಡಿಯೊ ಬಹಿರಂಗವಾದ ಕೂಡಲೇ ಪ್ರತಿಕ್ರಿಯೆ ನೀಡಿರುವ ಟಿಎಂಸಿ, ಇದು ‘ಮಾರ್ಪಡಿಸಲಾದ’ ವಿಡಿಯೊ ಎಂದು ಹೇಳಿದೆ. ರಾಜಕೀಯ ಪ್ರತಿಸ್ಪರ್ಧಿಗಳು ಈ ಅಪಪ್ರಚಾರದ ಹಿಂದೆ ಇದ್ದಾರೆ ಎಂದು ಆರೋಪಿಸಿದೆ.

ಚುನಾವಣೆಯ ಸಂದರ್ಭದಲ್ಲಿಯೇ ವಿಡಿಯೊ ಬಿಡುಗಡೆಯಾಗಿರುವುದು ‘ಕಾಕತಾಳೀಯ’ ಎಂದು ಮಾರುವೇಷದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪತ್ರಕರ್ತ ಮ್ಯಾಥ್ಯೂ ಸ್ಯಾಮುವೆಲ್‌ ಹೇಳಿದ್ದಾರೆ. ಕಾರ್ಯಾಚರಣೆಯ ಹಿಂದೆ ಯಾವುದೇ ರಾಜಕೀಯ ಪಕ್ಷ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT