ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹೆಸರಿನಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಎನ್‌ಸಿಆರ್

Published 26 ಏಪ್ರಿಲ್ 2024, 11:27 IST
Last Updated 26 ಏಪ್ರಿಲ್ 2024, 11:27 IST
ಅಕ್ಷರ ಗಾತ್ರ

ಬೆಂಗಳೂರು: ಬಹಿರಂಗ ಪ್ರಚಾರ ನಿರ್ಬಂಧಿತ ಸಮಯದಲ್ಲಿ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ್ದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

‘ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿರುವ ತಮ್ಮ ಖಾತೆಯಲ್ಲಿ ತೇಜಸ್ವಿ ಸೂರ್ಯ ಅವರು ಮತಯಾಚಿಸಿ ಪೋಸ್ಟ್ ಮಾಡಿದ್ದರು. ಅದನ್ನು ಗಮನಿಸಿದ್ದ ಚುನಾವಣಾಧಿಕಾರಿ ದೂರು ನೀಡಿದ್ದಾರೆ. ಸದ್ಯ ಎನ್‌ಸಿಆರ್ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.


‘ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಗೆ ಸೂರ್ಯ ಕಿರಣ ಸ್ಪರ್ಶಿಸುವ ವಿಡಿಯೊವನ್ನು ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ ತೇಜಸ್ವಿ ಸೂರ್ಯ, ‘500 ವರ್ಷಗಳ ಕಾಯುವಿಕೆ ಮತ್ತು ಕೋಟ್ಯಂತರ ಭಾರತೀಯರ ಆಶಯವನ್ನು ಪ್ರಧಾನಿ ಈಡೇರಿಸಿದ್ದಾರೆ. ಭಾರತೀಯತೆ ಉಳಿಯಲು ಬಿಜೆಪಿಗೆ ಮತ ನೀಡಿ’ ಎಂಬುದಾಗಿ ಮತಯಾಚನೆ ಮಾಡಿದ್ದರು.


‘ಮತದಾನ ದಿನದ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರಕ್ಕೆ ನಿರ್ಬಂಧವಿದೆ. ಇದೇ ಅವಧಿಯಲ್ಲಿಯೇ ತೇಜಸ್ವಿ ಸೂರ್ಯ ಅವರು ಧರ್ಮದ ಆಧಾರದಲ್ಲಿ ಬಹಿರಂಗ ಪೋಸ್ಟ್ ಪ್ರಕಟಿಸಿ ಮತಯಾಚನೆ ಮಾಡಿರುವುದು ಗೊತ್ತಾಗಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ–1951 (ಆರ್‌ಪಿಎ) ಸೆಕ್ಷನ್ 123 (ಬಿ) ಹಾಗೂ ಸೆಕ್ಷನ್ 126 ಅಡಿ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಚುನಾವಣಾಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿಸಿದರು.

ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮರುಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT