ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಲ್. ಶಂಕರ್ ಸದಸ್ಯತ್ವ ವಿವಾದ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ 2013ರಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಅವರು, 2015ರ ಜುಲೈನಲ್ಲಿ ತಮ್ಮ ಸದಸ್ಯತ್ವವನ್ನು ಸ್ಥಿರೀಕರಿಸಿಕೊಂಡಿದ್ದು ಏಕೆ?’

ಇದು ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕರಾದ ಪ್ರೊ. ನಂಜುಂಡರಾವ್ ಅವರ ಪುತ್ರಿ ಶ್ರೀದೇವಿ ರಾವ್ ಕೇಳುತ್ತಿರುವ ಪ್ರಶ್ನೆ. ಅಷ್ಟೇ ಅಲ್ಲ,  ಕಾರ್ಯಕಾರಿ ಸಮಿತಿಯ ಕೋರಂ ವಿಚಾರದಲ್ಲಿ ನಿಯಮ ಬಾಹಿರ ತಿದ್ದುಪಡಿ ತರಲಾಗಿದೆ ಎಂದೂ ಶ್ರೀದೇವಿ ಆರೋಪಿಸಿದ್ದಾರೆ.

ಚಿತ್ರಕಲಾ ಪರಿಷತ್ತಿಗೆ 2013ರ ಜೂನ್‌ನಲ್ಲಿ ಚುನಾವಣೆ ನಡೆಯಿತು. ಕಾರ್ಯಕಾರಿ ಸಮಿತಿಗೆ ಶಂಕರ್ ಸೇರಿದಂತೆ 15 ಜನ ಅವಿರೋಧವಾಗಿ ಆಯ್ಕೆಯಾದರು. ಪರಿಷತ್ತಿನ ಅಂದಿನ ಅಧಿಕಾರಿಯಾಗಿದ್ದ ಎಂ.ಕೆ. ಶಂಕರಲಿಂಗೇಗೌಡ ಅವರು ಕಾರ್ಯಕಾರಿ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.

‘ಕಾರ್ಯಕಾರಿ ಸಮಿತಿಯ ಆರು ಸದಸ್ಯರು ಪರಿಷತ್ತಿನ ಸದಸ್ಯರಲ್ಲ. ಹಾಗಾಗಿ ಅವರಿಗೆ ಸಮಿತಿಯ ಸದಸ್ಯರಾಗುವ ಅರ್ಹತೆ ಇಲ್ಲ’ ಎಂದು ಶ್ರೀದೇವಿ ಅವರು ನೀಡಿದ ದೂರು ಆಧರಿಸಿ, ಹೆಬ್ಬಾಳ ಉಪ ನೋಂದಣಿ ಕಚೇರಿಯ ಹಿರಿಯ ಉಪ ನೋಂದಣಾಧಿಕಾರಿ ಎಂ. ಪುಟ್ಟಸ್ವಾಮಿ ಅವರು ವಿಚಾರಣೆ ನಡೆಸಿದರು.

ಪುಟ್ಟಸ್ವಾಮಿ ಅವರು 2014ರ ಅಕ್ಟೋಬರ್‌ನಲ್ಲಿ ನೀಡಿದ ವರದಿಯಲ್ಲಿ ಶಂಕರ್‌ ಅವರ ಸದಸ್ಯತ್ವದ ಬಗ್ಗೆ ಉಲ್ಲೇಖ ಇಲ್ಲ. ಆದರೆ, ಉಮಾ ಪಾಟೀಲ್ ಅವರ ಸದಸ್ಯತ್ವ ಕ್ರಮಬದ್ಧವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ, ಕುತೂಹಲಕರ ಅಂಶವೆಂದರೆ 2005ರ ಜೂನ್‌ನಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಶಂಕರ್ ಅವರನ್ನು ವಿಶೇಷ ಅತಿಥಿ ಎಂದು ದಾಖಲಿಸಲಾಗಿದೆ.

ಶಂಕರ್‌ ಸದಸ್ಯತ್ವ ಕ್ರಮಬದ್ಧ ಅಲ್ಲ: ಆದರೆ, ಮೊದಲನೆಯ ವಿಚಾರಣಾ ವರದಿ ಕ್ರಮಬದ್ಧ ಆಗಿಲ್ಲ ಎಂದು ಕಂಡುಬಂದ ಕಾರಣ ಪುಟ್ಟಸ್ವಾಮಿ ಅವರು ಇನ್ನೊಂದು ಬಾರಿ ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಿದರು. ‘ಶಂಕರ್ ಅವರು ಪೋಷಕ ಸದಸ್ಯತ್ವ ಶುಲ್ಕ ₹ 50 ಸಾವಿರವನ್ನು ಪಾವತಿಸಿದ್ದರೂ, ಅವರ ಸದಸ್ಯತ್ವವನ್ನು ಕಾರ್ಯಕಾರಿ ಸಮಿತಿಯಲ್ಲಿ ಅಂಗೀಕರಿಸಿರುವುದು ಕಂಡುಬಂದಿಲ್ಲ. ಹಾಗಾಗಿ, ಶಂಕರ್ ಅವರ ಸದಸ್ಯತ್ವ ಕ್ರಮಬದ್ಧ ಅಲ್ಲ’ ಎಂದು ಎರಡನೆಯ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಶಂಕರ್ ಅವರ ಸದಸ್ಯತ್ವ ಕ್ರಮಬದ್ಧ ಅಲ್ಲ ಎಂಬ ವರದಿಯನ್ನು ಪುಟ್ಟಸ್ವಾಮಿ ಅವರು ನೀಡಿದ್ದು 2015ರ ಜೂನ್‌ 29ರಂದು. ಅದೇ ವರ್ಷದ ಜುಲೈ 22ರಂದು ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಶಂಕರ್‌ ಸೇರಿದಂತೆ ಆರು ಜನರ ಸದಸ್ಯತ್ವ ಸ್ಥಿರೀಕರಿಸುವ ನಿರ್ಣಯ ಕೈಗೊಳ್ಳಲಾಯಿತು.
ಪುಟ್ಟಸ್ವಾಮಿ ಅವರು ನೀಡಿದ ವರದಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಂಕರ್, ‘ನನ್ನ ಸದಸ್ಯತ್ವ ಕ್ರಮಬದ್ಧ ಎಂಬುದನ್ನು ಸಮರ್ಥಿಸಿಕೊಳ್ಳಲು ಅವಕಾಶ ಕೊಡಲಿಲ್ಲ. ಹಾಗಾಗಿ, ವಿಚಾರಣೆಮತ್ತೆ ನಡೆಸಬೇಕು’ ಎಂದು ಕೋರಿದರು.

ಇದರ ಅನ್ವಯ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ ಬಿ.ಎಸ್. ಹರೀಶ್ ಅವರಿಗೆ ವಿಚಾರಣೆ ನಡೆಸಲು ಆದೇಶಿಸಲಾಯಿತು. ‘ಶಂಕರ್ ಅವರು ₹ 50 ಸಾವಿರದ ಚೆಕ್ಕನ್ನು 1995ರಲ್ಲೇ ಪರಿಷತ್ತಿಗೆ ಕೊಟ್ಟಿದ್ದಾರೆ. ಶಂಕರ್ ಅವರು ಪೋಷಕ ಸದಸ್ಯರು ಎಂದು ಕಾರ್ಯಕಾರಿ ಸಮಿತಿ 2013ರಲ್ಲಿ ನಿರ್ಣಯಿಸಿದೆ. ಹಾಗೆಯೇ ಉಮಾ ಪಾಟೀಲ್ ಕೂಡ ಪರಿಷತ್ತಿನ ಸದಸ್ಯರು’ ಎಂದು ಹರೀಶ್ ಅವರು ನೀಡಿದ ವರದಿ ಹೇಳುತ್ತದೆ.

ಹರೀಶ್‌ ವರದಿ ಅಂತಿಮ
ಶ್ರೀದೇವಿ ರಾವ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಎಲ್. ಶಂಕರ್ ಅವರು, ‘ನನ್ನ ಸದಸ್ಯತ್ವದ ಬಗ್ಗೆ ಹರೀಶ್ ಅವರು ನೀಡಿರುವ ವರದಿ ಅಂತಿಮ. ಅದರಲ್ಲಿ ನನ್ನ ಸದಸ್ಯತ್ವವನ್ನು ಪ್ರಶ್ನಿಸಿಲ್ಲ’ ಎಂದು ತಿಳಿಸಿದರು.

ಸದಸ್ಯತ್ವ ಸ್ಥಿರೀಕರಿಸಿಕೊಳ್ಳುವುದರ ಹಿಂದೆ ದುರುದ್ದೇಶ ಇರಲಿಲ್ಲ. ಕಾನೂನು ದೃಷ್ಟಿಯಿಂದ ಸದಸ್ಯತ್ವ ಸ್ಥಿರೀಕರಣ ಮಾಡಿಕೊಳ್ಳಬೇಕು ಎಂದು ತಜ್ಞರು ನೀಡಿದ ಸಲಹೆ ಆಧರಿಸಿ ಹಾಗೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

‘ನಿಯಮ ತಪ್ಪು’
ಚಿತ್ರಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿಯ 15 ಸದಸ್ಯರ ಪೈಕಿ ಐದು ಜನ ಇದ್ದರೆ ಕೋರಂ ಆಗುತ್ತದೆ ಎಂದು 2004ರಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.

‘ಈ ತಿದ್ದುಪಡಿ ತಪ್ಪು. ಏಕೆಂದರೆ, ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ಅನ್ವಯ, ಕಾರ್ಯಕಾರಿ ಸಮಿತಿಯ ಶೇಕಡ 50ರಷ್ಟು ಜನ ಇದ್ದರೆ ಮಾತ್ರ ಕೋರಂ ಆಗುತ್ತದೆ’ ಎಂದು ಶ್ರೀದೇವಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT