ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

Published 1 ಮಾರ್ಚ್ 2024, 16:21 IST
Last Updated 1 ಮಾರ್ಚ್ 2024, 16:21 IST
ಅಕ್ಷರ ಗಾತ್ರ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.

ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಹಾಗೂ ಹೊಂಡಾ ಕಾರ್ಸ್‌ನ ಕಾರುಗಳ ಮಾರಾಟವೂ ಗಣನೀಯವಾಗಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ವಾಹನ ಪ್ರಪಂಚವು ಈವರೆಗೂ ದಾಖಲಿಸಿರುವ ಅತ್ಯುತ್ತಮ ತಿಂಗಳುಗಳಲ್ಲಿ ಸತತ ಮೂರನೇ ತಿಂಗಳು ಇದಾಗಿದೆ.

ಕಳೆದ ಜನವರಿಯಲ್ಲಿ ಒಟ್ಟು 3.94 ಲಕ್ಷ ಕಾರುಗಳು ಮಾರಾಟವಾಗಿವೆ. 2023ರ ಅಕ್ಟೋಬರ್‌ನಲ್ಲಿ 3.91 ಲಕ್ಷ ಕಾರುಗಳು ಮಾರಾಟವಾಗಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ಶಶಾಂಕ ಶ್ರೀವಾಸ್ತವ, ‘ದೇಶದಲ್ಲಿ ಕಾರುಗಳ ಮಾರಾಟ ಶೇ 9ರ ದರದಲ್ಲಿ ವೃದ್ಧಿಸುತ್ತಿದೆ. 2023ರ ಫೆಬ್ರುವರಿಯಲ್ಲಿ 1.47 ಲಕ್ಷ ಕಾರುಗಳ ಮಾರಾಟವಾಗಿದ್ದವು. 2024ರ ಫೆಬ್ರುವರಿಯಲ್ಲಿ 1.60ಲಕ್ಷ ಕಾರುಗಳು ಮಾರಾಟವಾಗಿವೆ. ಇದರಲ್ಲಿ ಬ್ರೀಜಾ, ಎರ್ಟಿಗಾ, ಗ್ಯಾಂಡ್ ವಿಟೆರಾ, ಎಕ್ಸ್‌ಎಲ್‌6 ಕಾರುಗಳ ಮಾರಾಟ ಶೇ 82ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಈ ಕಾರುಗಳ ಒಟ್ಟು ಮಾರಾಟ 33,550 ಇತ್ತು. ಈ ವರ್ಷ ಫೆಬ್ರುವರಿಯಲ್ಲಿ ಒಟ್ಟು 61,234 ಕಾರುಗಳು ಮಾರಾಟವಾಗಿವೆ’ ಎಂದಿದೆ.

‘ಆದರೆ ಇದೇ ಅವಧಿಯಲ್ಲಿ ಸಣ್ಣ ಕಾರುಗಳ ಮಾರಾಟ ಕುಸಿದಿದೆ. ಆಲ್ಟೊ ಹಾಗೂ ಎಸ್‌–ಪ್ರೆಸ್ಸೊ ಕಾರುಗಳನ್ನು ಪರಿಗಣಿಸಿದರೆ 2023ರ ಫೆಬ್ರುವರಿಯಲ್ಲಿ 21 ಸಾವಿರ ಕಾರುಗಳು ಮಾರಾಟವಾಗಿದ್ದರೆ, ಈ ವರ್ಷ 14 ಸಾವಿರ ಕಾರುಗಳು ಮಾರಾಟವಾಗಿವೆ. ಮಧ್ಯಮ ಗಾತ್ರದ ಕಾರುಗಳಲ್ಲಿ ಬಲೆನೊ, ಸೆಲೆರಿಯೊ, ಡಿಜೈರ್‌, ಇಗ್ನಿಸ್, ಸ್ವಿಫ್ಟ್‌, ಟೂರ್ ಎಸ್‌ ಹಾಗೂ ವ್ಯಾಗನ್‌ ಆರ್‌ ಕಾರುಗಳ ಮಾರಾಟವೂ ಶೇ 10ರಷ್ಟು ಕುಸಿದಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ 79 ಸಾವಿರ ಕಾರುಗಳು ಮಾರಾಟವಾದರೆ, ಈ ವರ್ಷ 71 ಸಾವಿರ ಕಾರುಗಳು ಮಾರಾಟವಾಗಿವೆ. ಕಂಪೆನಿ ಉತ್ಪಾದಿಸಿದ ಒಟ್ಟು ಕಾರುಗಳಲ್ಲಿ ಎಸ್‌ಯುವಿ ವಿಭಾಗದ ಪಾಲು ಶೇ 21.5ರಷ್ಟಿದೆ’ ಎಂದಿದ್ದಾರೆ.

ಟಾಟಾ ಮೋಟಾರ್ಸ್‌ ಕೂಡಾ ಫೆಬ್ರುವರಿಯಲ್ಲಿ ಒಟ್ಟು 51 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಆ ಮೂಲಕ ಶೇ 19ರ ವೃದ್ಧಿ ಕಂಡಿದೆ. ಹ್ಯೂಂಡೇ ಮೋಟಾರ್ ಇಂಡಿಯಾ ಸಹ 50 ಸಾವಿರ ಕಾರುಗಳ ಮಾರಾಟ ಮಾಡಿದ್ದು ಶೇ 7ರ ಬೆಳವಣಿಗೆ ದಾಖಲಿಸಿದೆ.

‘ಎಸ್‌ಯುವಿ ವಿಭಾಗವು ಶೇ 67ರಷ್ಟು ಪ್ರಗತಿ ಕಂಡಿದೆ. ಗ್ರಾಮೀಣ ಭಾಗದಲ್ಲೂ ಕಾರುಗಳ ಮಾರಾಟ ಶೇ 20ರಷ್ಟು ಹೆಚ್ಚಳವಾಗಿದೆ’ ಎಂದು ಹ್ಯೂಂಡೇ ಮೋಟಾರ್ ಇಂಡಿಯಾದ ಸಿಒಒ ತರುಣ್ ಗರ್ಗ್ ಹೇಳಿದ್ದಾರೆ.

ಮಹೀಂದ್ರ ಆ್ಯಂಡ್ ಮಹೀಂದ್ರ ಕೂಡಾ ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರುವರಿಯಲ್ಲಿ 42 ಸಾವಿರ ಕಾರುಗಳು ಮಾರಾಟವಾಗಿದ್ದು, ಶೇ 40ರ ವೃದ್ಧಿ ಕಂಡಿದೆ. ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪೆನಿಯು ಫೆಬ್ರುವರಿಯಲ್ಲಿ 25 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಹೊಂಡಾ ಕಾರ್ಸ್‌ 7 ಸಾವಿರ ಕಾರುಗಳನ್ನು ಮಾರಾಟ ಮಾಡಿದ್ದು ಶೇ 7ರ ಬೆಳವಣಿಗೆ ದಾಖಲಿಸಿದೆ. ಎಂಜಿ ಮೋಟಾರ್ಸ್ ಇಂಡಿಯಾ ಮಾರಾಟವೂ ಶೇ 8ರಷ್ಟು ಹೆಚ್ಚಳವಾಗಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಸಾಕಷ್ಟು ಪ್ರಗತಿ ದಾಖಲಾಗಿದೆ. ಹೀರೊ ಮೋಟಾರ್‌ಕಾರ್ಪ್‌ ಶೇ 19ರ ಬೆಳವಣಿಗೆ ದಾಖಲಿಸಿದೆ. ಕಂಪೆನಿಯು ಒಟ್ಟು 4.68 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿದೆ. ಹೊಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪೆನಿಯು ಶೇ 86ರಷ್ಟು ವೃದ್ಧಿ ದಾಖಲಿಸಿದೆ. ಟಿವಿಎಸ್ ಮೋಟಾರ್ ಕಂಪೆನಿಯು ಶೇ 33ರಷ್ಟು ಬೆಳವಣಿಗೆ ದಾಖಲಿಸಿದೆ. ರಾಯಲ್‌ ಎನ್‌ಫೀಲ್ಡ್ ಕಂಪೆನಿಯು ಶೇ 6ರಷ್ಟು, ಸುಜುಕಿ ಮೋಟಾರ್‌ಸೈಕಲ್‌ ಇಂಡಿಯಾ ಶೇ 38ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT