ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಮೊದಲ ಬಾರಿಗೆ ಅರಳಿದ್ದ ಕಮಲ

Published 19 ಏಪ್ರಿಲ್ 2024, 5:08 IST
Last Updated 19 ಏಪ್ರಿಲ್ 2024, 5:08 IST
ಅಕ್ಷರ ಗಾತ್ರ

ಬಾಗಲಕೋಟೆ: ಕೆಲವೊಮ್ಮೆ ಸ್ವತಂತ್ರವಾಗಿ, ಕೆಲವೊಮ್ಮೆ ಜನಸಂಘಕ್ಕೆ ಬೆಂಬಲ ಕೊಟ್ಟು ಬಂದಿದ್ದ ಬಿಜೆಪಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗಳ ಆರಂಭದ 54 ವರ್ಷಗಳ ನಂತರ ಮೊದಲ ಬಾರಿಗೆ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

ರಾಜ್ಯದಲ್ಲಿ ಸಂಘಟನೆ ಆರಂಭವಾಗಿ ಹಲವು ದಶಕಗಳೇ ಕಳೆದಿದ್ದವು. ವಿಧಾನಸಭೆಗೆ ಹಲವರು ಆಯ್ಕೆ ಕೂಡ ಆಗಿದ್ದರು. ಲೋಕಸಭೆಗೆ ಆಯ್ಕೆಯಾಗಿರಲಿಲ್ಲ. ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ನಡುವಿನ ಪೈಪೋಟಿ ಎಂದೇ ಪರಿಗಣಿಸಲಾಗುತ್ತಿತ್ತು. ಮೊದಲ ಬಾರಿಗೆ ಗೆದ್ದ ಬಿಜೆಪಿ ಅಭ್ಯರ್ಥಿ ಹಿಂದಿನ ಚುನಾವಣೆಗಳಲ್ಲಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ದಾಖಲಿಸಿ ಹೊಸ ದಾಖಲೆ ಬರೆದಿದ್ದರು.

ಜನತಾ ಪರಿವಾರದ ಬಣಗಳ ನಡುವಿನ ಕಚ್ಚಾಟದಿಂದ ಗೊಂದಲಕ್ಕೆ ಒಳಗಾಗಿದ್ದ ಜಿಲ್ಲೆಯ ನಾಯಕರು ಸೇರಿದಂತೆ ಹಲವು ನಾಯಕರು ಕಾಂಗ್ರೆಸ್‌, ಬಿಜೆಪಿಯತ್ತ ಮುಖ ಮಾಡಿದರು. ಆಗಲೇ ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಕೆ.ಬಿ. ಶಾಣಪ್ಪ ಸೇರಿದಂತೆ ಹಲವು ನಾಯಕರನ್ನು ಬಿಜೆಪಿ ನಾಯಕರು ಸೇರ್ಪಡೆ ಮಾಡಿಕೊಂಡರು.

ಪಿ.ಸಿ. ಗದ್ದಿಗೌಡರ ಅಷ್ಟೊತ್ತಿಗಾಗಲೇ ಜನತಾ ಪರಿವಾರದಿಂದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಬಿಜೆಪಿ ಅವರನ್ನೇ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದರು. ಮೊದಲ ಯತ್ನದಲ್ಲೇ ಗದ್ದಿಗೌಡರ ಲೋಕಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾದರು.

1999ರಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದಲ್ಲಿ ರಚನೆಯಾಗಿದ್ದ ಕಾಂಗ್ರೆಸ್‌ ಸರ್ಕಾರಕ್ಕೆ ಸತತ ನಾಲ್ಕು ವರ್ಷಗಳ ಕಾಲ ಬರಗಾಲ ಎದುರಾಯಿತು. ಆಡಳಿತ ವಿರೋಧಿ ಅಲೆ ಜೋರಾಗಿತ್ತು. ರಾಮಕೃಷ್ಣ ಹೆಗಡೆ ಅವರನ್ನು ಕಡೆಗಣಿಸಿದ ಮೇಲೆ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಅವರ ಬೆಂಬಲಿಗರಲು ನಿಧಾನವಾಗಿ ಬಿಜೆಪಿ ಕಡೆಗೆ ಮುಖ ಮಾಡಿದ್ದರು. ಅದರ ಲಾಭ ಗದ್ದಿಗೌಡರಿಗೆ ಲಭಿಸಿತು.

1999ರಲ್ಲಿ ಗೆಲುವು ಸಾಧಿಸಿದ್ದ ರೋಣದ ಆರ್.ಎಸ್‌. ಪಾಟೀಲ ಅವರೇ ಮರು ಆಯ್ಕೆ ಬಯಿಸಿ ಕಣಕ್ಕಿಳಿಸಿದರು. ಗದಗ ಜಿಲ್ಲೆಯವರಾದ ಪಾಟೀಲರು ಇತ್ತ ಕಡೆಗೆ ಹೆಚ್ಚಿನ ಗಮನ ನೀಡಲಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಆದರೂ, ಸ್ಪರ್ಧೆ ಜನತಾ ದಳ (ಎಸ್‌)ನಿಂದ ಸ್ಪರ್ಧಿಸಿದ್ದ ಸಾಂಗ್ಲಿಕರ್‌ ಧರೆಪ್ಪ ಸಿದ್ದಪ್ಪ ಹಾಗೂ ಕಾಂಗ್ರೆಸ್‌ ನಡುವೆ ಸ್ಪರ್ಧೆ ನಡೆಯಬಹುದು ಎಂದುಕೊಳ್ಳಲಾಗಿತ್ತು.

ಎಲ್ಲರೊಂದಿಗೆ ಬೆರೆಯುವ ಸ್ವಭಾವ, ಸರಳತೆಯಿಂದ ಗುರುತಿಸಿಕೊಂಡಿದ್ದ ಗದ್ದಿಗೌಡರ, ಶಾಸಕರು ಹಾಗೂ ಕಾರ್ಯಕರ್ತರ ಪಡೆಯ ನೆರವಿನಿಂದ ಗದ್ದಿಗೌಡರ ಗೆಲುವು ಸಾಧಿಸಿದರು.

ದಾಖಲೆ ಅಂತರದ ಗೆಲುವು

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ತಂದುಕೊಟ್ಟ ಪಿ.ಸಿ. ಗದ್ದಿಗೌಡರ ದಾಖಲೆ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹಿಂದಿನ ದಾಖಲೆಗಳನ್ನು ಮುರಿದರು. 868472 (ಶೇ65.20ರಷ್ಟು) ಮತಗಳು ಚಲಾವಣೆಯಾಗಿದ್ದವು. ಗದ್ದಿಗೌಡರ 459451 ಮತಗಳನ್ನು ಪಡೆದರೆ ಆರ್.ಎಸ್.ಪಾಟೀಲ 292068 ಮತಗಳನ್ನು ಪಡೆದರು. ಧರೆಪ್ಪ ಸಾಂಗ್ಲೀಕರ ಕೇವಲ 64075 ಮತಗಳನ್ನು ಪಡೆದರು. ಗದ್ದಿಗೌಡರ 167383 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದು ಹಿಂದಿನ ಚುನಾವಣೆಗಳಲ್ಲಿ ಹೆಚ್ಚಿನ ಅಂತರದ ಗೆಲುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT