ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಮತದಾನ ಜಾಗೃತಿಗೆ ಬೈಸಿಕಲ್‌ ಜಾಥಾ

Published 28 ಏಪ್ರಿಲ್ 2024, 6:24 IST
Last Updated 28 ಏಪ್ರಿಲ್ 2024, 6:24 IST
ಅಕ್ಷರ ಗಾತ್ರ

ಬೀದರ್‌: ಮತದಾನದ ಮಹತ್ವ ಸಾರಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯಿಂದ ನಗರದಲ್ಲಿ ಭಾನುವಾರ ಮತದಾನ ಜಾಗೃತಿ ಬೈಸಿಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ನಗರದ ಬಹಮನಿ ಕೋಟೆ ಮುಂಭಾಗದಲ್ಲಿ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ನಡೆದ ಜಾಥಾದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರೊಂದಿಗೆ ಬೈಸಿಕಲ್‌ ತುಳಿದರು.

ಕೋಟೆಯಿಂದ ಆರಂಭಗೊಂಡ ಜಾಥಾ, ಸಿದ್ದಾರ್ಥ ಕಾಲೇಜು, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಹಾದು ನೆಹರೂ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ತಲೆಯ ಮೇಲೆ ಟೋಪಿ, ಶ್ವೇತ ವರ್ಣದ ಟೀ ಶರ್ಟ್‌ಗಳನ್ನು ಧರಿಸಿ ಶಿಸ್ತಿನಿಂದ ಸಾಲಾಗಿ ಜಾಥಾ ನಡೆಸಿದರು. ಎಲ್ಲ ಬೈಸಿಕಲ್‌ಗಳಿಗೆ ಮತದಾನ ಜಾಗೃತಿಯ ಧ್ವಜಗಳನ್ನು ಕಟ್ಟಲಾಗಿತ್ತು. ಜಾಥಾ ಮುಂಭಾಗದಲ್ಲಿ ಮತದಾನದ ಮಹತ್ವ ಸಾರುವ ಸಂಗೀತ ಹಾಕಲಾಗಿತ್ತು. ಇದು ದಾರಿಹೋಕರ ಗಮನ ಸೆಳೆಯಿತು. ಆನಂತರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಗೋವಿಂದ ರೆಡ್ಡಿ ಮಾತನಾಡಿ, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಮತದಾನ. ಮೇ 7ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ 18 ವರ್ಷ ಮೇಲಿನ ಅರ್ಹ ಮತದಾರರೆಲ್ಲರೂ ಭಾಗವಹಿಸಿ, ಹಕ್ಕು ಚಲಾಯಿಸಬೇಕು ಎಂದು ಹೇಳಿದರು.

ಸ್ವೀಪ್‌ ಸಮಿತಿ ನೋಡಲ್ ಅಧಿಕಾರಿ ಗೌತಮ್‌ ಅರಳಿ, ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ- ಕಾಲೇಜುಗಳ‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT