ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಬಿಸಿಲ ಪಟ್ಟು: ಕುಕ್ಕುಟೋದ್ಯಮಕ್ಕೆ ಪೆಟ್ಟು

ಸಾವಿರಾರು ಕೋಳಿಗಳ ಸಾವು, ಸಾಕಣೆದಾರರಿಗೆ ಲಕ್ಷಾಂತರ ಲುಕ್ಸಾನು
Published 16 ಮೇ 2024, 7:21 IST
Last Updated 16 ಮೇ 2024, 7:21 IST
ಅಕ್ಷರ ಗಾತ್ರ

ಯಳಂದೂರು: ಮಳೆ ಈಗಷ್ಟೇ ಶುರುವಾಗಿದೆ. ಹಾಗಿದ್ದರೂ ಬಿಸಿಲಿನ ಅಬ್ಬರ ಕಡಿಮೆಯಾಗಿಲ್ಲ. ಬರದಿಂದಾಗಿ ಕುಕ್ಕುಟೋದ್ಯಮ ನಂಬಿದವರ ಬದುಕು ಅತಂತ್ರವಾಗಿದೆ. ಪ್ರತಿದಿನ ಫಾರಂಗಳಲ್ಲಿ ಕೋಳಿ ಸಾಯುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಮೊಟ್ಟೆ ಮತ್ತು ಮಾಂಸದ ಉದ್ದೇಶಕ್ಕೆ ಕೋಳಿ ಸಾಕಣೆ ಮಾಡಲಾಗುತ್ತಿದೆ. ಬಿಸಿ ವಾತಾವರಣ ಕೋಳಿಗಳ ಸಾಕಣೆಗೆ ಹಿನ್ನಡೆಯಾಗಿ ಪರಿಣಮಿಸಿದೆ. ಪ್ರತಿ ದಿನ ಹತ್ತಾರು ಕೋಳಿ ಸಾಯುತ್ತಿದ್ದು, ಅವಧಿಗೂ ಮುನ್ನವೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ, ಕೋಳಿ ಉಳಿಸಿಕೊಳ್ಳಲು ಫಾರಂಗಳಲ್ಲಿ ತಂಪು ತುಂಬುವ ಕೆಲಸ ಮಾಡುತ್ತಿದ್ದು, ನಿರ್ವಹಣೆ ಖರ್ಚನ್ನು ಇಮ್ಮಡಿಗೊಳಿಸಿದೆ.     

‘ಈ ಬಾರಿ ಚಳಿ ಮುಂದುವರಿಯಲಿಲ್ಲ. ಡಿಸೆಂಬರ್-ಜನವರಿ ಮಳೆ ಸುರಿಯಲಿಲ್ಲ. ಇದರಿಂದ ಸಹಜವಾಗಿ ಫೆಬ್ರುವರಿ-ಮೇ ನಡುವೆ ಶಾಖ ಉಲ್ಭಣಗೊಳ್ಳಲು ಕಾರಣವಾಯಿತು. ಜೊತೆಗೆ ಬಿಸಿಗಾಳಿ, ಬಿಸಿಲಿನ ಅಬ್ಬರವೂ ಸೇರಿ ಮತ್ತಷ್ಟು ಕುತ್ತು ತಂದಿತು’ ಎಂದು ಹೇಳುತ್ತಾರೆ ಕೋಳಿ ಸಾಕಣೆದಾರರು.

ಕೋಳಿ ಫಾರಂ ಅನ್ನು ತಂಪಾಗಿ ಇಡಲು ಮಾಲೀಕರು ಹಲವು ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಛಾವಣಿ ಮೇಲೆ ತೆಂಗಿನ ಗರಿ ಇಟ್ಟು, ನೀರು ಸಿಂಪಡಿಸುತ್ತಿದ್ದಾರೆ. ಕೆಲವರು ಫ್ಯಾನ್ ಇಲ್ಲವೇ ಕೂಲರ್ ಬಳಸಲು ಮುಂದಾಗಿದ್ದಾರೆ. ಇದು ಸಾಕಣೆದಾರರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವಂತೆ ಮಾಡಿದೆ.

ದೊಡ್ಡ ಪ್ರಮಾಣದ ಕೋಳಿ ಸಾಕಲು ಆಗುತ್ತಿಲ್ಲ. ಪ್ರತಿದಿನ ಕೋಳಿಗಳು ಸಾಯುತ್ತಿರುವುದರಿಂದ ಮಾಂಸದ ಕೋಳಿ ಉತ್ಪಾದನೆ ಕಡಿಮೆ ಮಾಡಿದೆ. ಚಿಕನ್ ಬೆಲೆ ಏರಿಕೆಗೆ ಕಾರಣವಾಗಿದೆ.

‘ಧಗೆ ಹೆಚ್ಚಳದಿಂದ ಕೋಳಿ ಪಾಲನೆ ಸವಾಲಾಗಿದೆ. ಕೋಳಿ ಮರಿಗಳಿಗೆ ಬಿಸಿ ನೀರು ಸಿಗದಂತೆ ನೋಡಿಕೊಳ್ಳಬೇಕು. ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ತಾಪ ಕಂಡೊಡನೆ ಫಾರಂ ತಂಪಾಗಿಸಬೇಕು. ಮರಗಳ ನೆರಳು ಬೀಳುವಂತೆ ಸಿದ್ಧತೆ ನಡೆಸಬೇಕು. ಹೀಗೆ, ಆರೈಕೆ ಮಾಡಿದರೂ ಕೋಳಿ ಸಾವು ತಪ್ಪಿಸಲಾಗಿಲ್ಲ. ಕೋಳಿಗಳಿಗೆ ವಿಮೆ ಇಲ್ಲ. ನಷ್ಟ ಭರಿಸುವ ಬಗ್ಗೆ ಕಂಪನಿ ಇಲ್ಲವೆ ಸರ್ಕಾರ ನೆರವಿಗೆ ಬಾರದು’ ಎಂಬುದು ಸಾಕಣೆದಾರರ ಅಳಲು.

‘ಶೆಡ್ ಬಳಸಿ 10 ಸಾವಿರ ಕೋಳಿ ಸಾಕಣೆ ಮಾಡುತ್ತಿದ್ದೆವು. ಈಗ 5 ಸಾವಿರಕ್ಕೆ ಕುಸಿದಿದೆ. ಪ್ರತಿದಿನ ಬಿಸಿಲನ ಶಾಪಕ್ಕೆ ಹತ್ತಾರು ಕೋಳಿಗಳು ಸಾಯುತ್ತಿವೆ. 45 ದಿನಗಳಿಂದ ಸಾವಿರ ಕೋಳಿಗಳು ಸತ್ತಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಮದ್ದೂರು ಗ್ರಾಮದ ಕೋಳಿ ಸಾಕಣೆದಾರ ವಿಶ್ವನಾಥ್ ಬೇಸರ ವ್ಯಕ್ತಡಿಸಿದರು.

‘ಬೇಸಿಗೆಯಲ್ಲಿ ಸಹಜವಾಗಿ ಕೋಳಿಗಳು ಆಹಾರ ಸೇವನೆ ಕಡಿಮೆ ಮಾಡುತ್ತವೆ. ಹೀಗಾಗಿ ತೂಕ ಕುಸಿಯುತ್ತದೆ. ಉಸಿರಾಟದ ಸಮಸ್ಯೆ ಕಾಡುತ್ತದೆ. ಶೆಡ್ ಸುತ್ತಮುತ್ತ ಸ್ಪ್ರಿಂಕ್ಲರ್ ಅಳವಡಿಸಿ, ಮಿನಿ ಕೂಲರ್ ಇಟ್ಟರೂ ಸಾವು ತಪ್ಪದು, ಸರ್ಕಾರ ಕೋಳಿ ಸಾಕಣೆದಾರರಿಗೆ ನಷ್ಟ ತುಂಬಿಕೊಡಲಿ’ ಎಂದು ಅವರು ಹೇಳಿದರು. 

‘ಮುನ್ನೆಚ್ಚರಿಕೆ ಬೇಕಿದೆ’
‘ತಾಲ್ಲೂಕಿನ ದುಗ್ಗಹಟ್ಟಿ ಮದ್ದೂರು ಮತ್ತು ಯಳಂದೂರು ಭಾಗಗಳಲ್ಲಿ ನಾಟಿ ಮತ್ತು ಫಾರಂ ಕೋಳಿಗಳ ಸಾಕಣೆ ನಡೆದಿದೆ. ಆದರೆ ಈ ಸಲ ತಾಪಮಾನ ಹೆಚ್ಚಿರುವ ಕಾರಣದಿಂದ ತೊಂದರೆ ಕಂಡುಬಂದಿದೆ. ಕೋಳಿಗಳು ಅತಿ ಶಾಖ ತಡೆಯದು. ಫಾರಂಗಳಲ್ಲಿ ತಂಪಿನ ವಾತಾವರಣ ನಿರ್ಮಿಸಿ ಮರಗಳನ್ನು ನೆಟ್ಟು ಉತ್ತಮ ಹವೆ ಬರುವಂತೆ ಎಚ್ಚರ ವಹಿಸಬೇಕು’ ಎಂದು ತಾಲ್ಲೂಕು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT