ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಎನ್‌ಇಪಿ? ಎಸ್‌ಇಪಿ?: ಮುಗಿಯದ ಗೊಂದಲ

Published 1 ಮೇ 2024, 5:30 IST
Last Updated 1 ಮೇ 2024, 5:30 IST
ಅಕ್ಷರ ಗಾತ್ರ

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಪದವಿ ಕಾಲೇಜುಗಳ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ, ಪದವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮುಂದುವರಿಯಲಿದೆಯೇ ಅಥವಾ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅನುಷ್ಠಾನವಾಗಲಿದೆಯೇ ಎಂಬ ಗೊಂದಲ ವಿದ್ಯಾರ್ಥಿಗಳದ್ದಾಗಿದೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ, ಎನ್‌ಇಪಿ ರದ್ದುಗೊಳಿಸಿ ಎಸ್‌ಇಪಿ ಜಾರಿಗೊಳಿಸುವುದಾಗಿ ಹೇಳಿತ್ತು. ಆದರೆ, ಪ್ರಸ್ತುತ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಮುಗಿದ ನಂತರವಷ್ಟೇ ಪಠ್ಯಕ್ರಮದ ಬಗ್ಗೆ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ, ಪದವಿ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ವಿಷಯದ ಆಯ್ಕೆ ಗೊಂದಲಕ್ಕೆ ಸಿಲುಕಿಸಿದೆ.

‘ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ದಾಖಲಿಸಲು ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಪೋರ್ಟಲ್ ಇನ್ನೂ ತೆರೆದಿಲ್ಲ. ಆದರೆ, ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳು, ಪಾಲಕರನ್ನು ಅಲೆದಾಡಿಸಬಾರದು ಎಂಬ ಕಾರಣಕ್ಕೆ ಅರ್ಜಿ ಸ್ವೀಕರಿಸಿ, ಶುಲ್ಕ ಸಹಿತ ನೋಂದಣಿ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರದಿಂದ ಬಂದಿರುವ ಶುಲ್ಕದ ಮಾದರಿಯಲ್ಲಿ ಶುಲ್ಕ ಪಡೆಯಲಾಗುತ್ತಿದ್ದು, ವಿಶ್ವವಿದ್ಯಾಲಯದ ಪರಿಷ್ಕೃತ ಶುಲ್ಕದ ವಿವರ ಪ್ರಕಟಗೊಂಡ ನಂತರ ಅಧಿಕೃತ ಶುಲ್ಕದ ಮಾಹಿತಿ ಲಭ್ಯವಾಗಲಿದೆ’ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

ತರಗತಿ ವಿಳಂಬ ಸಾಧ್ಯತೆ: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಆಗಿರುವ ಶೈಕ್ಷಣಿಕ ವೇಳಾಪಟ್ಟಿ ಸರಿದೂಗಿಲು ಸಾಕಷ್ಟು ಪ್ರಯತ್ನಗಳು ನಡೆದರೂ ಪ್ರತಿ ಸೆಮಿಸ್ಟರ್‌ ಕನಿಷ್ಠ 90 ದಿನ ನಡೆಯಬೇಕೆಂಬ ನಿಯಮ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಸರಿದಾರಿಗೆ ತರಲು ಸಾಧ್ಯವಾಗಿಲ್ಲ. ಪ್ರಸ್ತುತ 2, 4 ಮತ್ತು 6ನೇ ಸೆಮಿಸ್ಟರ್‌ಗಳ ತರಗತಿಗಳು ನಡೆಯುತ್ತಿದ್ದು, ಜೂನ್‌ನಲ್ಲಿ ಕೊನೆಗೊಳ್ಳಲಿವೆ. ನಂತರ ಪರೀಕ್ಷೆ, ಮೌಲ್ಯಮಾಪನ ನಡೆದು, ಪದವಿ ಪ್ರಥಮ ವರ್ಷದ ಒಂದನೇ ಸೆಮಿಸ್ಟರ್ ಆರಂಭವಾಗಬೇಕಾಗುತ್ತದೆ. ಹೀಗಾಗಿ, ಆಗಸ್ಟ್‌ನಲ್ಲಿ ತರಗತಿಗಳು ಪ್ರಾರಂಭವಾಗಬಹುದು ಎಂದು ಅವರು ಮಾಹಿತಿ ನೀಡಿದರು.

‘ಸಾಮಾನ್ಯವಾಗಿ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಶೈಕ್ಷಣಿಕ ವೇಳಾಪಟ್ಟಿ ಒಂದೇ ರೀತಿ ಇರುತ್ತದೆ. ಒಂದೊಮ್ಮೆ  ಮೊದಲ ಸೆಮಿಸ್ಟರ್ ತರಗತಿ ಆರಂಭಿಸಿದರೆ, ಉಳಿದೆರಡು ಸೆಮಿಸ್ಟರ್‌ಗಳ ಪರೀಕ್ಷೆ, ಮೌಲ್ಯಮಾಪನ ಎಲ್ಲವೂ ವ್ಯತ್ಯಾಸಗೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ, 6ನೇ ಸೆಮಿಸ್ಟರ್‌ ‍ಪೂರ್ಣಗೊಳ್ಳುವ ಪೂರ್ವದಲ್ಲಿ 1ನೇ ಸೆಮಿಸ್ಟರ್ ಆರಂಭವಾದರೆ, ಕಾಲೇಜುಗಳಲ್ಲಿ ಕೊಠಡಿಗಳ ಸಂಖ್ಯೆ ಕೊರತೆಯಾಗಬಹುದು’ ಎಂದು ಪ್ರಾಧ್ಯಾಪಕರೊಬ್ಬರು ಅಭಿಪ್ರಾಯ‍ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT