ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ | ಪತಿ ನಿಧನದ ಸುದ್ದಿ ತಿಳಿದ ನಂತರವೂ ಮತ ಚಲಾಯಿಸಿದ ಪತ್ನಿ

Published 7 ಮೇ 2024, 14:29 IST
Last Updated 7 ಮೇ 2024, 14:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪತಿ ನಿಧನದ ಸುದ್ದಿ ತಿಳಿದ ನಂತರವೂ ಮತಕೇಂದ್ರಕ್ಕೆ ತೆರಳಿ ಪತ್ನಿ ಕಲಾವತಿ ಅವರು ತಾಲ್ಲೂಕಿನ ಮರಗಳಲೆ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿ ಸಾರ್ವಜನಿಕರ ಗಮನ ಸೆಳೆದರು.

ಅಲ್ಪಕಾಲದ ಅನಾರೋಗ್ಯದ ಕಾರಣ ಮಂಗಳೂರಿನ ವೆಲ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಡಗೋಡು ಗ್ರಾಮದ ವೆಂಕಟೇಶ್‌ (62) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.

‘ಅಡಕೆ ಗೊನೆ ಕೀಳುವ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯಾಗಿದ್ದರು. ಮತ ಚಲಾವಣೆ ಮಾಡದಿದ್ದರೆ ಪತಿ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಮತ ಚಲಾಯಿಸಿದ್ದೇನೆ’ ಎಂದು ಗ್ರಾಮಸ್ಥರ ಬಳಿ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಕೈಕೊಟ್ಟ ಮತ ಯಂತ್ರ: ಸಿಂಧೂವಾಡಿ, ದೇವಂಗಿ ಮತಗಟ್ಟೆಯಲ್ಲಿ ಬೆಳಿಗ್ಗೆ ಇವಿಎಂ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 20 ನಿಮಿಷಗಳ ಕಾಲ ಮತದಾನ ಅರ್ಧಕ್ಕೆ ನಿಂತಿತ್ತು. ನಂತರ ತಾಂತ್ರಿಕ ಸಿಬ್ಬಂದಿ ದುರಸ್ತಿಗೊಳಿಸಿ ಮತದಾನಕ್ಕೆ ಅನುಕೂಲ ಕಲ್ಪಿಸಿದರು.

ಕುಡುಮಲ್ಲಿಗೆ ಮತಗಟ್ಟೆಯಲ್ಲಿ ಮತದಾರ ಬಿಜೆಪಿಗೆ ಮತ ಚಲಾಯಿಸಿ ಫೋಟೊ ತೆಗೆದ ಘಟನೆ ನಡೆದಿದೆ. ನಂತರ ಚಿತ್ರವನ್ನು ಹಂಚಿಕೊಳ್ಳುವ ವೇಳೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದು ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಧ್ಯಸ್ಥಿಕೆಯಲ್ಲಿ ಘಟನೆ ಸುಖಾಂತ್ಯ ಕಂಡಿತು.

ಗಮನ ಸೆಳೆಯದ ವಿಶೇಷ ಮತಗಟ್ಟೆ: ಚುನಾವಣೆ ಆಯೋಗದಿಂದ ವಿವಿಧ ಮತಗಟ್ಟೆಗಳನ್ನು ವಿಶೇಷ ಮತಗಟ್ಟೆ ಎಂದು ಗುರುತಿಸಲಾಗಿತ್ತು. ಯುವಜನ ನಿರ್ವಹಣೆ ಮತಗಟ್ಟೆ ಬಾಳೇಬೈಲು, ಧ್ಯೇಯ ಆಧಾರಿತ ಮತಗಟ್ಟೆ ಕುವೆಂಪು ಶಾಲೆಯಲ್ಲಿ ಯಾವುದೇ ವಿಶೇಷತೆ ಕಂಡುಬರಲಿಲ್ಲ. ಮಾಳೂರು, ಸೀಬಿನಕೆರೆ ಮತಗಟ್ಟೆಯಲ್ಲಿ ಕಾಟಾಚಾರಕ್ಕೆ ಸಖಿ ಕೇಂದ್ರವನ್ನು ರೂಪಿಸಿರುವುದು ಕಂಡು ಬಂತು.

ಮತದಾನ ಬಹಿಷ್ಕೃತ ಕೇಂದ್ರದಲ್ಲಿ ನೀರಸ

ಕೇಂದ್ರೀಕೃತ ಬಹುಗ್ರಾಮ ಕುಡಿಯುವ ನೀರು ಯೋಜನೆ ವಿರೋಧಿಸಿ ಹಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ನಡೆಯಿತು. ಕೋಡ್ಲು ಮತಗಟ್ಟೆಯಲ್ಲಿ 399 ಮತದಾರದಿದ್ದು 112 ಮತ ಚಲಾವಣೆಗೊಂಡಿವೆ. ಆಲಗೇರಿಯ 576 ಮತದಾರರ ಪೈಕಿ 210 ಮತ ಚಲಾವಣೆಗೊಂಡಿವೆ. ಹುಣಸವಳ್ಳಿಯಲ್ಲಿ 1044ರ ಪೈಕಿ 710 ಮತದಾನ ನಡೆಯಿತು. ತುಂಗಾನದಿ ತೀರದ ಅನೇಕ ಗ್ರಾಮಗಳಲ್ಲಿ ಮತ ಬಹಿಷ್ಕಾರ ನಡೆದಿದೆ.

ವೆಂಕಟೇಶ್
ವೆಂಕಟೇಶ್
ತೀರ್ಥಹಳ್ಳಿ ತಾಲ್ಲೂಕಿನ ವಿಶೇಷ ಯುವಜನ ನಿರ್ವಹಣೆಯ ಬಾಳೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಶೇಷತೆ ಕಂಡು ಬರಲಿಲ್ಲ
ತೀರ್ಥಹಳ್ಳಿ ತಾಲ್ಲೂಕಿನ ವಿಶೇಷ ಯುವಜನ ನಿರ್ವಹಣೆಯ ಬಾಳೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಶೇಷತೆ ಕಂಡು ಬರಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT