ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಅವರ ಜೊತೆ ಸಂದರ್ಶನ: ಮೋದಿ ಸೋಲಿಸುವಷ್ಟು ಸಂಖ್ಯೆ ‘ಇಂಡಿಯಾ’ಕ್ಕೆ ಸಿಗಲಿದೆ..

‘ಇಂಡಿಯಾ’ ಮೈತ್ರಿಕೂಟಕ್ಕೆ ಜನ ಬೆಂಬಲ– ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Published 19 ಏಪ್ರಿಲ್ 2024, 0:29 IST
Last Updated 19 ಏಪ್ರಿಲ್ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಜನರು ಮೋದಿ ಸರ್ಕಾರದ ವಿರುದ್ಧ ಇದ್ದಾರೆ. ಮೋದಿಯವರನ್ನು ಅಧಿಕಾರದಿಂದ ದೂರವಿಡಲು ಮತ್ತು ಅವರ ಸರ್ಕಾರವನ್ನು ಸೋಲಿಸಲು ಎಷ್ಟು ಬೇಕೊ, ಅಷ್ಟು ಸಂಖ್ಯೆಯ ಸ್ಥಾನಗಳನ್ನು ‘ಇಂಡಿಯಾ’ ಮೈತ್ರಿಕೂಟ ಗೆಲ್ಲಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಗುರುವಾರ ನೀಡಿದ ವಿಶೇಷ ಸಂದರ್ಶನದಲ್ಲಿ ರಾಷ್ಟ್ರ–ರಾಜ್ಯ ರಾಜಕೀಯ, ಮೋದಿ ವರ್ಚಸ್ಸು, ‘ಗ್ಯಾರಂಟಿ’ ಘೋಷಣೆಗಳ ಅಬ್ಬರದ ಕುರಿತು ಮಾತನಾಡಿದ ಅವರು, ‘ಈ ಬಾರಿ ಕರ್ನಾಟಕದಲ್ಲಿ ಪಕ್ಷವು ಗಣನೀಯ ಸಾಧನೆ ಮಾಡಲಿದೆ. ಬಿಜೆಪಿಯವರು ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎನ್ನುವುದು ಬೋಗಸ್. ನಾವು 15ರಿಂದ 20 ಸೀಟುಗಳನ್ನು ಗೆಲ್ಲುತ್ತೇವೆ’ ಎಂದು ಆಶಿಸಿದರು.

ಖರ್ಗೆ ಜೊತೆಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಈ ಚುನಾವಣೆಯಲ್ಲಿ ‘ಪ್ರಜಾಪ್ರಭುತ್ವ ರಕ್ಷಿಸಿ, ಸಂವಿಧಾನ ಉಳಿಸಿ’ ಎನ್ನುವುದರ ಜೊತೆಗೆ, ಕಾಂಗ್ರೆಸ್‌ ಪಕ್ಷವನ್ನು ಉಳಿಸುವ ಸವಾಲೂ ಇದೆಯೇ?

ಕಾಂಗ್ರೆಸ್‌ನ್ನು ಉಳಿಸಿ ಎಂದು ನಾವು ಎಲ್ಲಿ ಹೇಳಿದ್ದೇವೆ. ಕಳೆದ 139 ವರ್ಷಗಳಿಂದಲೂ ಪಕ್ಷವಿದೆ. ಪಕ್ಷ ಸಂಘಟನೆ ಮತ್ತು ಚುನಾವಣೆ ಎರಡೂ ಬೇರೆ. ಚುನಾವಣೆ ಸಂದರ್ಭದಲ್ಲಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳ ಮೇಲಿನ ಜನರ ವಿಶ್ವಾಸಕ್ಕೆ ಕುಸಿದಿದೆ. ಈ ಸಂಸ್ಥೆಗಳಿಗೆ ಮುಖ್ಯಸ್ಥರ ನೇಮಕ ಆಯ್ಕೆ ಸಮಿತಿ ಮೂಲಕ ನಡೆಯುತ್ತಿತ್ತು. ಸಮರ್ಥರ ಆಯ್ಕೆ ವಿಷಯದಲ್ಲಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯಕ್ಕೂ ಬೆಲೆ ಇತ್ತು. ಈಗ ಅದ್ಯಾವುದೂ ಇಲ್ಲ. ಕೇಂದ್ರ ಚುನಾವಣಾ ಆಯುಕ್ತ, ಮಾಹಿತಿ ಆಯುಕ್ತ, ಸಿಬಿಐ ನಿರ್ದೇಶಕ, ಜಾಗೃತ ದಳ ನಿರ್ದೇಶಕ ಎಲ್ಲ ಹುದ್ದೆಗಳೂ ತಮ್ಮ ಕೈಕೆಳಗೆ ಇರುವಂತೆ ಪ್ರಧಾನಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯಪಾಲರುಗಳ ಪರಿಸ್ಥಿತಿ ನೋಡಿ. ನನ್ನ ರಾಜಕೀಯ ಬದುಕಿನಲ್ಲಿ ಎಷ್ಟೂ ರಾಜ್ಯಪಾಲರನ್ನು ನೋಡಿದ್ದೇನೆ. ಆದರೆ, ಇಂದಿನ ಪರಿಸ್ಥಿತಿ ಇರಲಿಲ್ಲ. ರಾಜ್ಯಪಾಲರನ್ನು ನೇಮಿಸಿ, ಅವರಿಗೆ ಸೂಚನೆಗಳನ್ನು ಕೊಡುತ್ತಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಪಾಲರ ನಡೆಯನ್ನು ಎಲ್ಲರೂ ನೋಡಿದ್ದಾರೆ. ಈ ಎಲ್ಲ ಕಾರಣಕ್ಕೆ ‘ಪ್ರಜಾಪ್ರಭುತ್ವ ರಕ್ಷಿಸಿ, ಸಂವಿಧಾನ ಉಳಿಸಿ’ ಎಂದು ಹೊರಟಿದ್ದೇವೆ. ಹಣದುಬ್ಬರ, ನಿರುದ್ಯೋಗ, ರೈತರ ಸಮಸ್ಯೆಗಳನ್ನು ಮುಂದಿಟ್ಟಿದ್ದೇವೆ.

* ಅಂದರೆ, ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಮೋದಿ ಕೈಗೊಂಬೆಗಳೆಂದೇ?

ಶೇ 100ರಷ್ಟು. ಯಾಕೆಂದರೆ, ಅವರೇ ನೇಮಿಸುತ್ತಾರಲ್ಲ. ಯಾರಾದರೂ ವಿರುದ್ದವಾದರೆ ಅಂಥವರಿಂದ ರಾಜೀನಾಮೆ ಕೊಡಿಸುತ್ತಾರೆ ಅಥವಾ ತೆಗೆದುಹಾಕುತ್ತಾರೆ. ಬಡ್ತಿ ತಡೆಹಿಡಿಯುತ್ತಾರೆ. ಚುನಾವಣಾ ಆಯುಕ್ತ, ಆರ್‌ಬಿಐ ಗವರ್ನರ್‌ ಹುದ್ದೆ ತ್ಯಜಿಸಿದರಲ್ಲ, ಅವರ‍್ಯಾರೂ ಸಾಮಾನ್ಯರಲ್ಲ. ಇಡಿ, ಸಿಬಿಐ ಕೇಸ್ ಹಾಕುವುದಾಗಿ ಬೆದರಿಸಿ, ಕಿರುಕುಳ ನೀಡಿ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳ 444 ಶಾಸಕರನ್ನು ಅವರು ತಮ್ಮ ಕಡೆ ಮಾಡಿಕೊಂಡಿದ್ದಾರೆ. ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರನ್ನೂ ಬಲ ಪ್ರಯೋಗಿಸಿ ಸೆಳೆದುಕೊಂಡಿದ್ದಾರೆ. ಜನರಿಂದ ಚುನಾಯಿತ ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಖಂಡ, ಗೋವಾ ಹೀಗೆ ಸರ್ಕಾರಗಳನ್ನು ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಜಾಪ್ರಭುತ್ವ ಅವರಿಗೆ ಬೇಕಿಲ್ಲ. ಈ ಸರ್ವಾಧಿಕಾರಿ ನಡೆ ಇವತ್ತಲ್ಲ, ನಾಳೆ ಅಪಾಯಕಾರಿ.

* 2019ರ ಚುನಾವಣೆಗೂ ಈ ಬಾರಿಯ ಚುನಾವಣೆಗೂ ವ್ಯತ್ಯಾಸ ಏನು?

ಅನೇಕ ಸುಳ್ಳುಗಳನ್ನು ಹೇಳಿ 2014 ಮತ್ತು 2019ರ ಚುನಾವಣೆಗಳಲ್ಲಿ ಅವರು ಅಧಿಕಾರಕ್ಕೆ ಬಂದರು. 2 ಕೋಟಿ ಉದ್ಯೋಗ, ಖಾತೆಗೆ ₹ 15 ಲಕ್ಷ ಎಲ್ಲಿದೆ? ರೈತರ ಆದಾಯ ಇಮ್ಮಡಿ ಆಗಿದೆಯೇ? ಇದೆಲ್ಲ ಮೋದಿ ಗ್ಯಾರಂಟಿಗಳಲ್ಲವೇ? ಯುಪಿಎ ಸರ್ಕಾರ ಏನೂ ಹೇಳದೆಯೇ ‌ನರೇಗಾ, ಆಹಾರ ಭದ್ರತೆ, ಗ್ರಾಮೀಣಾ ಆರೋಗ್ಯ ಅಭಿಯಾನ, ಕಡ್ಡಾಯ ಶಿಕ್ಷಣ ಕಾಯ್ದೆಯಂಥ ಹಕ್ಕುಗಳನ್ನು ಕೊಟ್ಟಿದೆ. ಎಲ್ಲದಕ್ಕೂ ಜಿಎಸ್‌ಟಿ ಮೋದಿ ಸರ್ಕಾರದ ಸಾಧನೆ. ಮತ್ತೊಂದು ಕಡೆ ಭಾರಿ ಪ್ರಮಾಣದಲ್ಲಿ ಸೆಸ್‌ ಸಂಗ್ರಹಿಸುತ್ತಾರೆ. ಆದರೆ, ಅದರಲ್ಲಿ ರಾಜ್ಯಗಳಿಗೆ ಪಾಲು ಇಲ್ಲ. ಮತ್ತೆ, ಒಕ್ಕೂಟ ಸರ್ಕಾರ ಎಂದು ನೀವೇ ಹೇಳುತ್ತೀರಿ. ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ಇದೇ ಮೋದಿ ‘ಹಮರಾ ಟ್ಯಾಕ್ಸ್ ಹಮಾರೆ ಸಾಥ್‌’ ಎಂದಿದ್ದರು. ಅದೇ ಸ್ಲೋಗನ್‌ ವಿರೋಧ ಪಕ್ಷದವರು ಹೇಳಿದಾಗ ನಿಮಗೆ ಯಾಕೆ ನೋವು? ಒಕ್ಕೂಟ ವ್ಯವಸ್ಥೆಗೂ ಧಕ್ಕೆ, ಸ್ವಾಯತ್ತ ಸಂಸ್ಥೆಗಳನ್ನೂ ನಾಶ ಮಾಡುತ್ತಿದ್ದೀರಿ. ವಿರೋಧ ಪಕ್ಷಗಳ‌ ಶಾಸಕ, ಸಂಸದರು, ಅಷ್ಟೇ ಅಲ್ಲ, ಅವರ ಮಾತು ಕೇಳದ ಕಾರ್ಪೊರೇಟ್ ವಲಯದವರನ್ನೂ ಹೆದರಿಸುತ್ತೀರಿ. ಮತ್ತೆ ದುಡ್ಡು ಕೊಟ್ಟವರ ಹೆಸರಿನಲ್ಲಿ ಬಾಂಡ್‌ ತೆಗೆದುಕೊಂಡಿದ್ದೀರಿ. ಲಾಭದಲ್ಲಿ ಇಲ್ಲದ ಕಂಪನಿಗಳಿಂದ ₹ 100 ಕೋಟಿ, ₹ 150 ಕೋಟಿಯ ಬಾಂಡ್‌, ಕೆಲವರಿಂದ ದುಡ್ಡು ತೆಗೆದುಕೊಂಡು ಸಾವಿರಾರು ಕೋಟಿಯ ಗುತ್ತಿಗೆ ಕೊಟ್ಟಿದ್ದೀರಿ. ಇದು ನಿಮ್ಮ ‘ಚಂದಾ ದೇವೊ, ದಂಧಾ ದೇವೊ. ಇಂತಹ ಪ್ರಧಾನಿಯನ್ನು ನಾನು ನೋಡಿಯೇ ಇಲ್ಲ. ಎಲ್ಲೋ ಒಂದೆರಡು ತಪ್ಪು ಮಾಡುವವರನ್ನು ನೋಡಿದ್ದೇವೆ. ಆದರೆ, ಇವರದು ತಪ್ಪಿನ ಮೇಲೆ ತಪ್ಪು.

* ನಿಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಏನು ಹೇಳುತ್ತೀರಿ?

ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ‘ಗ್ಯಾರಂಟಿ’ಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇದೆಲ್ಲ ಬಿಟ್ಟಿ ಭಾಗ್ಯಗಳು ಎಂದು ಟೀಕಿಸಿದವರೇ ಈಗ ‘ಮೋದಿ ಕೀ ಗ್ಯಾರಂಟಿ’ ಆರಂಭಿಸಿದ್ದಾರೆ. ಮೋದಿಯವರ ಕಟ್ಟಾ ಬೆಂಬಲಿಗರು, ಅವರ ಸಿದ್ಧಾಂತದ ಮೇಲೆ ನಂಬಿಕೆ ಇರುವವರೇ ಮೋದಿಯವರನ್ನು ನಿಂದಿಸುತ್ತಿದ್ದಾರೆ. ಮೋದಿ ಎಲ್ಲೂ ಪಕ್ಷದ ಹೆಸರು ಹೇಳುವುದಿಲ್ಲ. ಬಿಜೆಪಿ ಕಾರ್ಯಕ್ರಮ, ಬಿಜೆಪಿ ಸರ್ಕಾರ ಎಂದೂ ಹೇಳುವುದಿಲ್ಲ. ಎಲ್ಲದಕ್ಕೂ ಮೋದಿ ಹೆಸರು. ಮೋದಿ ಆರಂಭಿಸಿರುವುದು, ಮೋದಿ ಮಾಡಿರುವುದು ಎಂದೇ ಗುಣಗಾನ.

* ಮೋದಿಯ ಜನಪ್ರಿಯತೆ ಇಲ್ಲವೆಂದೇ?

ಮೋದಿ ತನ್ನನ್ನು ಬಿಂಬಿಸಿಕೊಳ್ಳುತ್ತಾನೆ. ಪ್ರತಿಯೊಂದನ್ನೂ ತನ್ನ ಹೆಸರಿನಲ್ಲಿ ಹೇಳುತ್ತಾನೆ. ಹೀಗಾಗಿ, ಮೋದಿ. ಮೋದಿ ಎಂದಾಗಿದೆ. ಆದರೆ, ಜನರಿಗೆ ಸತ್ಯ ಗೊತ್ತಾಗುತ್ತಿದೆ. ಮೋದಿ ಏನು ಮಾಡಿದ್ದಾನೆ? ಜನರ ಹೊಟ್ಟೆ ತುಂಬಿಸಲು ಏನಾದರು ಯೋಜನೆ ಕೊಟ್ಟಿದ್ದನಾ? ಈಗ ನಿರುದ್ಯೋಗ ಪ್ರಮಾಣ ಜಾಸ್ತಿ ಆಗಿದೆ. ಹಣದುಬ್ಬರವಿದೆ. ಕಚ್ಛಾ ತೈಲದ ಬೆಲೆ ಕುಸಿದಾಗಲೂ ಇಂಧನ ಬೆಲ ಕಡಿಮೆ ಮಾಡಿಲ್ಲ. ಜನ ಇನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ ಅವರ ಭವಿಷ್ಯಕ್ಕೆ ಅವರೇ ಕಾರಣರಾಗುತ್ತಾರೆ.

* ‘ಇಂಡಿಯಾ’ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದಿರುವುದು ಅನಾನುಕೂಲ ಆಗಬಹುದೇ?

ನಿಮಗೇ ಗೊತ್ತಿದೆ, ನಾವು ಮೈತ್ರಿ ಮಾಡಿಕೊಂಡಿದ್ದೇವೆ.‌ ಮೊದಲು ಚುನಾವಣೆ ಗೆಲ್ಲಬೇಕು. ಬಳಿಕ ನಾವು ಆಯ್ಕೆ ಮಾಡುತ್ತೇವೆ. ಇದು ಪ್ರಜಾಪ್ರಭುತ್ವ. ಹಲವು ದೇಶಗಳಲ್ಲಿ ಚುನಾವಣೆ ಬಳಿಕ ಮೈತ್ರಿಕೂಟದ ಪ್ರಧಾನಿಯನ್ನು ಆಯ್ಕೆ ಮಾಡಲಾಗುತ್ತದೆ. ಜನ ಮೋದಿ ಸರ್ಕಾರದ ವಿರುದ್ಧ ಇದ್ದಾರೆ. ಮೋದಿ ಮತ್ತು ಅವರ ಸರ್ಕಾರವನ್ನು ಸೋಲಿಸಲು ಎಷ್ಟು ಸಂಖ್ಯೆ ಬೇಕೊ, ಅಷ್ಟು ಸಂಖ್ಯೆಯ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ.

* ‘ಇಂಡಿಯಾ’ ಮೈತ್ರಿಕೂಟ ದೊಡ್ಡ ಶಕ್ತಿ ಏನು?

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಎಲ್ಲ 26 ಪಕ್ಷಗಳ ಒಂದಾಗಿರುವುದು. ನಮ್ಮಲ್ಲಿ ಅಪಸ್ವರ ಇಲ್ಲ. ಅದೇ ಶಕ್ತಿ.

* ಮೈತ್ರಿ ಪಕ್ಷಗಳ ಮ ಧ್ರುವೀಕರಣದ ವಿಶ್ವಾಸ ಇದೆಯೇ?

ಖಂಡಿತ. ಒಂದೆರಡು ಕಡೆ ಸಣ್ಣಪುಟ್ಟ ಸಮಸ್ಯೆ ಇದೆ. ಪಶ್ಚಿಮ ಬಂಗಾಳದಲ್ಲಿ ಅಪಸ್ವರ ಇತ್ತು. ಅದು ಎಲ್ಲರಿಗೂ ಗೊತ್ತು. ಆದರೆ, ಮಮತಾ ಮೈತ್ರಿಕೂಟದಡಿ ಬರುತ್ತಾರೆ. ಅರವಿಂದ ಕೇಜ್ರಿವಾಲ್ ಕೂಡಾ ದೂರವಾಗಿದ್ದರು. ಈಗ ಅವರೂ ನಮ್ಮ ಜೊತೆಗಿದ್ದಾರೆ. ಹೀಗಾಗಿ, ಮೈತ್ರಿ ಗಟ್ಟಿಯಾಗಿದೆ. ಪರಸ್ಪರ ವಿಶ್ವಾಸ, ಸಂಬಂಧದಿಂದ ಎಲ್ಲರೂ ಜೊತೆಯಾಗಿ ಹೋಗುತ್ತೇವೆ.

* 25 ‘ಗ್ಯಾರಂಟಿ’ಗಳನ್ನು ಘೋಷಿಸಿದ್ದೀರಿ. ಅವುಗಳನ್ನು ಜನ ಒಪ್ಪುತ್ತಾರೆಯೇ?

ನಮ್ಮ ‘ಗ್ಯಾರಂಟಿ’ಗಳನ್ನು ಜನ ಒಪ್ಪುವ, ನಮ್ಮ ಮೇಲೆ ವಿಶ್ವಾಸವಿಡುವ ನಂಬಿಕೆಯಿದೆ. ಯುವಕರಿಗೆ ಅಪ್ರೆಂಟಿಸ್‌ ಬಳಿಕ ಶಾಶ್ವತವಾಗಿ ಕೆಲಸ ಕೊಡಲು ಪ್ರಯತ್ನಿಸುತ್ತೇವೆ. ಕಳೆದ ಚುನಾವಣೆಯಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕ ₹ 72 ಸಾವಿರದ ನೆರವು ಘೋಷಿಸಿದ್ದೆವು. ಈ ಬಾರಿ ನಾರಿ ನ್ಯಾಯ್‌ ಅಡಿ ₹ 1 ಲಕ್ಷದ ಭರವಸೆ ನೀಡಿದ್ದೇವೆ. ಕರ್ನಾಟಕದಲ್ಲಿ ಈಗಾಗಲೇ ಕೊಟ್ಟಿರುವ 5 ಗ್ಯಾರಂಟಿಗಳನ್ನು ಜನ ಒಪ್ಪಿದ್ದಾರೆ. ಜನರು ಒಪ್ಪುವಂಥ ಕಾರ್ಯಕ್ರಮಗಳನಷ್ಟೆ ಘೋಷಿಸಿದ್ದೇವೆ. ಮೋದಿ ಗ್ಯಾರಂಟಿಯಂತೂ ಸಿಗಲ್ಲ. ಈ ಹಿಂದೆ ಕೊಡುತ್ತೇನೆಂದು ಕೊಟ್ಟಿಲ್ಲ. ಕೊಡವುದಿಲ್ಲ ಎನ್ನುವುದೇ ‘ಮೋದಿ ಗ್ಯಾರಂಟಿ’.

* ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಜಾರಿಯಿಂದ ಅಭಿವೃದ್ಧಿಗೆ ಹೊಡೆತಬಿದ್ದಿದೆ. ರಾಷ್ಟ್ರೀಯಮಟ್ಟದಲ್ಲಿ ಗ್ಯಾರಂಟಿ ಜಾರಿಯಾದರೆ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಉಂಟಾಗದೇ?

ಅಭಿವೃದ್ಧಿ ವಿಚಾರದಲ್ಲಿ ನಮಗೂ ಕಾಳಜಿಯಿದೆ. ಮೋದಿಗೆ ಆ ಕಾಳಜಿ ಇರುತ್ತಿದ್ದರೆ ಲೂಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಅವರು ಕಾರ್ಪೊರೇಟ್ ವಲಯದವರ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಯುಪಿಎ ಸರ್ಕಾರ ಇದ್ದಾಗ ದೇಶದ ಸಾಲ ಕೇವಲ ₹ 53 ಲಕ್ಷ ಕೋಟಿ ಇತ್ತು. ಈಗ ₹ 163 ಲಕ್ಷ ಕೋಟಿಗೆ ಏರಿದೆ. ನಾವು ಘೋಷಿಸಿದ ಗ್ಯಾರಂಟಿಗಳ ಜಾರಿಗೆ ಸಂ‍ಪನ್ಮೂಲ ಹುಡುಕುತ್ತೇವೆ. ನಿಜ, ಆರಂಭದಲ್ಲಿ ಸಮಸ್ಯೆ ಆಗಬಹುದು.

* ಕರ್ನಾಟಕದಲ್ಲಿ ನಿಮ್ಮ ಪಕ್ಷದ ನಿರೀಕ್ಷೆ ಏನು?

ಈ ಬಾರಿ ನಾವು ಉತ್ತಮ ಸಾಧನೆ ತೋರಿಸುತ್ತೇವೆ. ಗಣನೀಯವಾಗಿ ಸೀಟುಗಳ ಸಂಖ್ಯೆ ಹೆಚ್ಚಲಿದೆ. ಪಕ್ಷದ ರಾಜ್ಯ ನಾಯಕರು ಎಷ್ಟೇ ಗುರಿ ಇಟ್ಟಿದ್ದರೂ, ನನ್ನ ಪ್ರಕಾರ ಬಿಜೆಪಿ 28ಕ್ಕೆ 28ನ್ನೂ ಗೆಲ್ಲುತ್ತೇವೆ ಎನ್ನುವುದು ಬೋಗಸ್‌. ನಾವು 15ರಿಂದ 20 ಸ್ಥಾನ ಗೆಲ್ಲುತ್ತೇವೆ.

* ಈ ಬಾರಿ ಕಲಬುರಗಿ ಕ್ಷೇತ್ರದಿಂದ ನೀವು ಕಣಕ್ಕಿಳಿಯಲಿದ್ದೀರಿ ಎಂದು ಸುದ್ದಿಯಾಗಿತ್ತು. ಸ್ಪರ್ಧಿಸಲು ಮುಂದಾಗದ ಬಗ್ಗೆ ಹೇಳಬಹುದೇ?

2019ರಲ್ಲಿಯೇ ಕೋಲಾರದಿಂದ ಸ್ಪರ್ಧಿಸಲು ಒತ್ತಾಯ ಬಂದಿತ್ತು. ಎಂಟು ಶಾಸಕರು ಸಹಿ ಹಾಕಿ ಸೋನಿಯಾ ಗಾಂಧಿಗೆ ಪತ್ರ ಕೊಟ್ಟಿದ್ದರು. ಈ ಬಾರಿ ಉತ್ತರಪ್ರದೇಶದವರೂ ಕರೆದರು. ಆದರೆ, ಈ ಚುನಾವಣೆ ನನ್ನ ಪಾಲಿಗೆ ತುಂಬಾ ಮಹತ್ವದ್ದು. ನನಗೊಂದು ಜವಾಬ್ದಾರಿ ಸಿಕ್ಕಿದೆ. ಆ ಜವಾಬ್ದಾರಿಯನ್ನು ತೃಪ್ತಿಕರವಾಗಿ, ಪರಿಣಾಮಕಾರಿಯಾಗಿ ನಿಭಾಯಿಸಬೇಕಾಗಿದೆ. ಅಲ್ಲದೆ, ‌ಮೇಡಂ (ಸೋನಿಯಾ ಗಾಂಧಿ) ಅವರು ರಾಜ್ಯಸಭೆ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ನನಗಿರುವ ಹೊಣೆಗಾರಿಕೆ ನಿಭಾಯಿಸಲು ಸ್ಪರ್ಧೆಯಿಂದ ದೂರ ನಿಲ್ಲಬೇಕಾಯಿತು.

* ಬಿಜೆಪಿಯ ಸೋಲು ಖಚಿತವೆಂದು ಹೇಗೆ ಹೇಳುತ್ತೀರಿ?

ನಾವು, ಎಲ್ಲ ರಾಜಕೀಯ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ. ಮೋದಿ ಅಲೆ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಮೋದಿ ಹಿಂದೆ ಎಲ್ಲೋ ಭಾಷಣ ಮಾಡಿ ಹೋಗುತ್ತಿದ್ದರು. ಆದರೆ, ಈಗ ಓಣಿ, ಓಣಿಗಳಲ್ಲಿ ರ‍್ಯಾಲಿ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರು ಜನಪ್ರಿಯತೆ ಇಲ್ಲ. ಹಾಗೆಂದು, ಹರಕೆಯಿಂದಷ್ಟೆ ಮಕ್ಕಳು ಹುಟ್ಟಲ್ಲ ಅಲ್ಲವೇ? ನಾವೂ ಕೆಲಸ ಮಾಡಬೇಕು, ಮಾಡುತ್ತಿದ್ದೇವೆ.

* ಅಯೋಧ್ಯೆಯ ರಾಮ ಚುನಾವಣೆಯಲ್ಲಿ ವಿಷಯ ಆಗಲ್ಲವೇ?

ರಾಮನ ಮೇಲೆ ನಂಬಿಕೆ ಇರುವವರು ಯಾವುದೇ ದಿನ ಅಯೋಧ್ಯೆಗೆ ಭೇಟಿ ನೀಡಬಹುದು ಎಂದು ಹಿಂದೆಯೇ ಹೇಳಿದ್ದೇನೆ. ನನ್ನ ಜನರಿಗೆ ಎಲ್ಲ ದೇವಾಲಯಗಳಿಗೆ ಪ್ರವೇಶ ಅವಕಾಶ ಕೊಡಿ. ವಿರೋಧ ಪಕ್ಷದ ನಾಯಕನೆಂದು ನನಗೆ ಆಹ್ವಾನ ನೀಡಿದ್ದೀರಿ. ನನ್ನ ಪಕ್ಷವನ್ನು ಯಾಕೆ ಆರೋಪ ಮಾಡುತ್ತೀರಿ. ಪ್ರಾಣ ಪ್ರತಿಷ್ಠೆಗೆ ದೇಶದ ಮೊದಲ ಪ್ರಜೆ ದೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ. ದಲಿತ ಎಂಬ ಕಾರಣಕ್ಕೆ ನೂತನ ಸಂಸತ್‌ ಭವನದ ಶಿಲಾನ್ಯಾಸಕ್ಕೆ ರಾಮನಾಥ ಕೋವಿಂದ್ ಅವರನ್ನು ಕರೆದಿಲ್ಲ. ಸಂಕುಚಿತ ಮನಸ್ಥಿತಿ ಇಟ್ಟುಕೊಂಡು, ಇನ್ನೊಬ್ಬರ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ? ಮನುಸ್ಮೃತಿ ಇರುವವರೆಗೂ ದಲಿತರು ಉದ್ಧಾರ ಆಗಲ್ಲ ಎಂದು ನಾನೂ ಹೇಳಿಕೊಂಡು ತಿರುಗಾಡಬಹುದು. ಮೋದಿ ಒಬ್ಬ ಚಾಯ್‌ ವಾಲಾ ಆಗಿ ಅವರು ಶೂದ್ರ ಎಂದು ಹೇಳಬಹುದಲ್ವೇ?

* ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆ ನಿರೀಕ್ಷಿಸಬಹುದೇ?

ರಾಜ್ಯ ಸರ್ಕಾರದಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಪಕ್ಷ ಕೊಟ್ಟಿದ್ದ ಆಶ್ವಾಸನೆಗಳನ್ನು ಸರ್ಕಾರ ನಿಭಾಯಿಸುತ್ತಿದೆ. ಹಾಗೆಂದು, ಎಲ್ಲರನ್ನೂ ಶೇ 100 ತೃಪ್ತಿಪಡಿಸಲು ಸಾಧ್ಯವಿಲ್ಲ. ಗ್ಯಾರಂಟಿಗಳಿಂದ ಜನ ಸಂತೋಷವಾಗಿದ್ದಾರೆ. ಈಗ, ಈ ವಿಷಯ ಚರ್ಚಿಸುವುದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗುತ್ತದೆ.

* ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರಲ್ಲ?

ಸಾಧ್ಯವೇ ಇಲ್ಲ. ಸ್ಥಿರ ಸರ್ಕಾರ. ಯಾರೇ ಬಂದರೂ ಸರ್ಕಾರ ಮುಂದುವರಿಯಲಿದೆ. ಈ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಅದನ್ನು ಮುಂದುವರಿಸಲಿದೆ. ಕೆಲವರು ಮತ್ಸರದಿಂದ ಹೀಗೆ ಹೇಳುತ್ತಿದ್ದಾರೆ.

---------

* ಅನೇಕ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರಿ ವಿವಿಧ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ನಾಯಕರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ? 

ಏನು ಉಳಿಸಿಕೊಳ್ಳಬೇಕು? ಈಗ ನೋಡಿ... ನಾನು 53 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದೇನೆ. ನನಗೆ ಏನೇನು ಅನ್ಯಾಯ ಆಗಿದೆಯೆಂದು ನಿಮಗೆಲ್ಲ ಗೊತ್ತು. ಆದರೂ ಪಕ್ಷದಲ್ಲೇ ಇದ್ದೇನೆ. ನಿಷ್ಠೆ, ಸೈದ್ಧಾಂತಿಕ ಬದ್ಧತೆ ಇದ್ದರೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಆದರೆ, ಈಗ ‘ಆಯಾ ರಾಮ್‌, ಗಯಾ ರಾಮ್’. ಅಂಥವರಿಗೆ ತತ್ವ, ನೀತಿ ಇಲ್ಲ.

* ‘ಭ್ರಷ್ಟರೆಲ್ಲ ಬಿಜೆಪಿ ಸೇರುತ್ತಿದ್ದಾರೆ’ ಎನ್ನುವ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

25 ಜನ ದೊಡ್ಡ ದೊಡ್ಡ ಗುತ್ತಿಗೆದಾರರು, ಕಾರ್ಪೊರೇಟ್ ವಲಯದ ಸಿಇಒಗಳು ಇ.ಡಿ ಕೇಸ್‌ ಎದುರಿಸುತ್ತಿದ್ದಾರೆ. ಹೀಗೆ ಇ.ಡಿ ಎದುರಿಸುತ್ತಿರುವವರಿಗೆ ಚುನಾವಣಾ ಬಾಂಡ್‌ ಅಥವಾ ಬಿಜೆಪಿಯಲ್ಲಿ ಹುದ್ದೆ ಕೊಟ್ಟಿದ್ದಾರೆ. ‘ಭ್ರಷ್ಟರನ್ನು ಬಿಡುವುದಿಲ್ಲ, ಜೈಲಿಗೆ ಹಾಕುತ್ತೇವೆ’ ಎಂದು ಭಾಷಣ ಮಾಡಿ, ಮಡಿಲಲ್ಲಿ ಕುಳ್ಳಿರಿಸಿಕೊಂಡಿದ್ದಾರೆ. ಭ್ರಷ್ಟರನ್ನು ಒಳ್ಳೆಯವರಾಗಿ ಮಾಡಲು ಅಮಿತ್ ಶಾ ದೊಡ್ಡ ವಾಷಿಂಗ್ ಮಷಿನ್‌ ಇಟ್ಟುಕೊಂಡಿದ್ದಾರೆ. ಮೋದಿ ಹೇಳುವುದೊಂದು, ನಡೆಯುವುದು ಬೇರೆ ರೀತಿ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಜಾವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು –ಪ್ರಜಾವಾಣಿ ಚಿತ್ರ-Photo By/Krishnakumar P S
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಜಾವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು –ಪ್ರಜಾವಾಣಿ ಚಿತ್ರ-Photo By/Krishnakumar P S

‘ನಾನು 53 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದೀನಲ್ಲಾ’

ಅನೇಕ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರಿ ವಿವಿಧ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ನಾಯಕರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ?  ಏನು ಉಳಿಸಿಕೊಳ್ಳಬೇಕು? ಈಗ ನೋಡಿ... ನಾನು 53 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದೇನೆ. ನನಗೆ ಏನೇನು ಅನ್ಯಾಯ ಆಗಿದೆಯೆಂದು ನಿಮಗೆಲ್ಲ ಗೊತ್ತು. ಆದರೂ ಪಕ್ಷದಲ್ಲೇ ಇದ್ದೇನೆ. ನಿಷ್ಠೆ ಸೈದ್ಧಾಂತಿಕ ಬದ್ಧತೆ ಇದ್ದರೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಆದರೆ ಈಗ ‘ಆಯಾ ರಾಮ್‌ ಗಯಾ ರಾಮ್’. ಅಂಥವರಿಗೆ ತತ್ವ ನೀತಿ ಇಲ್ಲ. * ‘ಭ್ರಷ್ಟರೆಲ್ಲ ಬಿಜೆಪಿ ಸೇರುತ್ತಿದ್ದಾರೆ’ ಎನ್ನುವ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? 25 ಜನ ದೊಡ್ಡ ದೊಡ್ಡ ಗುತ್ತಿಗೆದಾರರು ಕಾರ್ಪೊರೇಟ್ ವಲಯದ ಸಿಇಒಗಳು ಇ.ಡಿ ಕೇಸ್‌ ಎದುರಿಸುತ್ತಿದ್ದಾರೆ. ಹೀಗೆ ಇ.ಡಿ ಎದುರಿಸುತ್ತಿರುವವರಿಗೆ ಚುನಾವಣಾ ಬಾಂಡ್‌ ಅಥವಾ ಬಿಜೆಪಿಯಲ್ಲಿ ಹುದ್ದೆ ಕೊಟ್ಟಿದ್ದಾರೆ. ‘ಭ್ರಷ್ಟರನ್ನು ಬಿಡುವುದಿಲ್ಲ ಜೈಲಿಗೆ ಹಾಕುತ್ತೇವೆ’ ಎಂದು ಭಾಷಣ ಮಾಡಿ ಮಡಿಲಲ್ಲಿ ಕುಳ್ಳಿರಿಸಿಕೊಂಡಿದ್ದಾರೆ. ಭ್ರಷ್ಟರನ್ನು ಒಳ್ಳೆಯವರಾಗಿ ಮಾಡಲು ಅಮಿತ್ ಶಾ ದೊಡ್ಡ ವಾಷಿಂಗ್ ಮಷಿನ್‌ ಇಟ್ಟುಕೊಂಡಿದ್ದಾರೆ. ಮೋದಿ ಹೇಳುವುದೊಂದು ನಡೆಯುವುದು ಬೇರೆ ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT