ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯನ್ನು ಜನರು ತೊಳೆಯಲಿದ್ದಾರೆ: ಅಖಿಲೇಶ್‌ ಯಾದವ್

ಅಖಿಲೇಶ್‌ ಭೇಟಿ ನೀಡಿದ ದೇಗುಲ ಶುದ್ಧೀಕರಿಸಿದ ಬಿಜೆಪಿ ಕಾರ್ಯಕರ್ತರು
Published 8 ಮೇ 2024, 14:33 IST
Last Updated 8 ಮೇ 2024, 14:33 IST
ಅಕ್ಷರ ಗಾತ್ರ

ಕನೌಜ್‌: ಚುನಾವಣಾ ಪ್ರಚಾರದ ವೇಳೆ ಭೇಟಿ ನೀಡಿದ್ದ ದೇಗುಲವನ್ನು ಬಿಜೆಪಿ ಕಾರ್ಯಕರ್ತರು ತೊಳೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್, ಮತದಾನ ಮಾಡುವ ಮೂಲಕ ಜನರು ಮತ್ತೆಂದೂ ಅಧಿಕಾರಕ್ಕೆ ಬರದಂತೆ ಬಿಜೆಪಿಯನ್ನೇ ತೊಳೆಯಲಿದ್ದಾರೆ ಎಂದು ಹೇಳಿದರು.

ಅಖಿಲೇಶ್‌ ಅವರು ಸಿದ್ಧ ಬಾಬಾ ಗೌರಿಶಂಕರ ಮಹಾದೇವ ದೇವಾಲಯಕ್ಕೆ ಈಚೆಗೆ ಭೇಟಿ ನೀಡಿದ್ದರು. ಬಳಿಕ ಬಿಜೆಪಿ ಕಾರ್ಯಕರ್ತರು ಗಂಗಾ ಜಲ ಬಳಸಿ ದೇಗುಲವನ್ನು ಸ್ವಚ್ಛಗೊಳಿಸಿದ್ದರು.

ಹಿಂದುಳಿದವರು, ದಲಿತರು ಹಾಗೂ ಆದಿವಾಸಿಗಳು (ಪಿಡಿಎ) ಈ ಬಾರಿ ಬಿಜೆಪಿಯನ್ನು ತೊಳೆಯಲಿದ್ದಾರೆ. ಚುನಾವಣೆಯಲ್ಲಿ ಸೋಲು ಸನ್ನಿಹಿತವಾಗಿರುವುದಕ್ಕೆ ಬಿಜೆಪಿಯವರು ಇಂತಹ ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಅಖಿಲೇಶ್‌ ತಿಳಿಸಿದರು.

ಅಖಿಲೇಶ್‌ ಅವರು ಭೇಟಿ ನೀಡಿದ್ದ ವೇಳೆ ಆಚಾರ್ಯ ಪಂಡಿತ್‌ ಕರುಣಾ ಶಂಕರ್‌ ಅವರು ಪೂಜೆ ನೆರವೇರಿಸಿದರು. ದೇವಾಲಯದ ಅರ್ಚಕ ಮಥುರಾ ಪ್ರಸಾದ್‌ ಅವರು ಮಂತ್ರ ಪಠಿಸಿದ್ದರು. ಅಖಿಲೇಶ್‌ ಅವರು ತೆರಳಿದ ಬಳಿಕ ಬಿಜೆಪಿ ನಗರ ಘಟಕ ಅಧ್ಯಕ್ಷ ಶಿವೇಂದ್ರ ಕುಮಾರ್ ಮತ್ತು ಕಾರ್ಯಕರ್ತರು ದೇವಾಲಯಕ್ಕೆ ಘೋಷವಾಕ್ಯ ಕೂಗುತ್ತಾ ಬಂದು ಸ್ವಚ್ಛಗೊಳಿಸಿದರು ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದರು.

‘ಅಖಿಲೇಶ್‌ ಅವರು ಕೆಲವು ಮುಸ್ಲಿಂ ಯುವಕರು ಮತ್ತು ಸನಾತನಿಗಳಲ್ಲದವರ ಜೊತೆಗೆ ದೇಗುಲ ಪ್ರವೇಶಿಸಿದ್ದರು. ಅಲ್ಲದೆ ಪಾದರಕ್ಷೆಗಳನ್ನು ಧರಿಸಿಯೇ ದೇವಾಲಯದ ಒಳಗೆ ಬಂದಿದ್ದರು. ಇದರಿಂದ ದೇಗುಲ ಅಶುದ್ಧವಾಗಿತ್ತು. ಈ ಕಾರಣಕ್ಕೆ ಸ್ವಚ್ಛಗೊಳಿಸಿದ್ದೇವೆ’ ಎಂದು ಶಿವೇಂದ್ರ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ದೇವಾಲಯವನ್ನು ಸ್ವಚ್ಛಗೊಳಿಸಿರುವುದಲ್ಲಿ ಸಮಿತಿಯ ಪಾತ್ರವಿಲ್ಲ’ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ರಾಜೇಶ್‌ ಶ್ರೀವಾಸ್ತವ‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT