ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ: ಮೋದಿ ಪ್ರೀತಿ, ಗ್ಯಾರಂಟಿಯ ಆಸೆ

ಹಿರಿಯ ಜಗದೀಶ ಶೆಟ್ಟರ್‌, ಯುವಕ ಮೃಣಾಲ್‌ ಹೆಬ್ಬಾಳಕರ ಮಧ್ಯೆ ನೇರ ಪೈಪೋಟಿ
Published 2 ಮೇ 2024, 0:30 IST
Last Updated 2 ಮೇ 2024, 0:30 IST
ಅಕ್ಷರ ಗಾತ್ರ

ಬೆಳಗಾವಿ: 2004ರ ಚುನಾವಣೆ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಆಗಿದೆ. ಸುರೇಶ ಅಂಗಡಿ ಸತತ ನಾಲ್ಕು ಸಲ, ಅವರ ಪತ್ನಿ ಮಂಗಲಾ ಒಂದು ಸಲ ಸಂಸದರಾಗಿದ್ದಾರೆ. ಆದರೆ, ಈ ಬಾರಿ ಜಗದೀಶ ಶೆಟ್ಟರ್‌ ಪ್ರವೇಶದಿಂದ ಚುನಾವಣೆಯ ದಿಕ್ಕೇ ಬದಲಾಗಿದೆ. ಇಪ್ಪತ್ತು ವರ್ಷಗಳಿಂದ ಕಟ್ಟಿದ ಕೋಟೆ ಭೇದಿಸಲು ಕಾಂಗ್ರೆಸ್‌ನವರು ಒಟ್ಟಾಗಿ ಮುಗಿಬಿದ್ದಿದ್ದಾರೆ.

ಇಬ್ಬರೂ ಅಭ್ಯರ್ಥಿಗಳು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕಿಳಿದಿದ್ದಾರೆ. ವೈಯಕ್ತಿಕ ಸಾಮರ್ಥ್ಯಕ್ಕಿಂತ ತಮ್ಮ ಪಕ್ಷದ ನಾಯಕರ ವರ್ಚಸ್ಸು, ಪ‍ಕ್ಷಗಳ ಕೊಡುಗೆ ಅವಲಂಬಿಸಿದ್ದಾರೆ. ಮೋದಿ ಅಲೆಯನ್ನು ಬಿಜೆಪಿ ಮತ್ತು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ನೆಚ್ಚಿಕೊಂಡಿದೆ.

ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿ, ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದವರು. ಅದಾಚೆಗೆ ಮೋದಿ ವರ್ಚಸ್ಸನ್ನೇ ಅವರು ಬಲವಾಗಿ ಅವಲಂಬಿಸಿದ್ದಾರೆ. ಬಿಜೆಪಿಯ ರಾಷ್ಟ್ರಪ್ರೇಮ, ರಾಮ ಮಂದಿರ ನಿರ್ಮಾಣ, ಹಿಂದೂ ಧರ್ಮದ ಅಸ್ತಿತ್ವಗಳನ್ನು ಬಾಣಗಳಾಗಿ ಹೂಡಿದ್ದಾರೆ.

ಆರಂಭದಲ್ಲಿ ‘ಗೋ ಬ್ಯಾಕ್‌’ ಅಭಿಯಾನ ನಡೆಸಿದವರು ಈಗ ಪ್ರಚಾರದಲ್ಲಿ ಜೊತೆಯಾಗಿದ್ದಾರೆ. ಬೈಲಹೊಂಗಲದಲ್ಲಿ ಮೂರು ದಿಕ್ಕಾಗಿದ್ದ ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ, ಜೆಡಿಎಸ್‌ನ ಶಂಕರ ಮಾಡಲಗಿ ಒಂದಾಗಿದ್ದಾರೆ. ಗೋಕಾಕದಲ್ಲಿ ರಮೇಶ ಜಾರಕಿಹೊಳಿ, ಅರಬಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಯ ಪಾಟೀಲ ಲೀಡ್‌ ಕೊಡಿಸುವಷ್ಟು ಸಮರ್ಥರು.

‘ಜಗದೀಶ ಶೆಟ್ಟರ್‌ ಹೊರಗಿನವರಲ್ಲ’ ಎಂಬ ಮಾತನ್ನು ಜನರ ಮನದಾಳಕ್ಕೆ ಇಳಿಸುವ ಹೊಣೆ ಬಿಜೆಪಿಗರದ್ದು. ಅವರು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೆ ಎಂಬುದೂ ಮುಖ್ಯ.

2014ರಲ್ಲಿ ಲಕ್ಷ್ಮಿ ಹೆಬ್ಬಾಳಕರ ಅವರು ಸುರೇಶ ಅಂಗಡಿ ವಿರುದ್ಧ ಸೋಲುಂಡಿದ್ದರು. ದಶಕದ ಬಳಿಕ ಅವರ ಪುತ್ರ ಮೃಣಾಲ್ ಕಣಕ್ಕಿಳಿದರೂ ತಾವೇ ಅಭ್ಯರ್ಥಿ ಎಂಬಷ್ಟು ಓಡಾಟ ನಡೆಸಿದ್ದಾರೆ. 2021ರ ಉಪಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಕೂಡ ಸೋಲುಂಡರು. ಈಗ ಸತೀಶ ಅವರೇ ಬೆಳಗಾವಿ ಕ್ಷೇತ್ರದ ಉಸ್ತುವಾರಿ. ಇಬ್ಬರೂ ನಾಯಕರು ತಮ್ಮ ಸೋಲಿನ ಕಾರಣ ಮನಗಂಡಿದ್ದಾರೆ. ಈ ಬಾರಿ ದುಪ್ಪಟ್ಟು ಶಕ್ತಿಯೊಂದಿಗೆ ಧುಮುಕಿದ್ದಾರೆ. ಈ ಭಾಗದ ಪ್ರಭಾವಿ ರಾಜಕಾರಣಿ, ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್‌ನಲ್ಲಿರುವುದು, ಮೃಣಾಲ್‌ಗೆ ಹೆಚ್ಚಿನ ಧೈರ್ಯ ತಂದಂತಿದೆ.

ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಮೃಣಾಲ್‌ಗೆ ಆನೆಬಲ ತಂದಿದೆ. ಎಲ್ಲ ಗ್ಯಾರಂಟಿಗಳು ಮಹಿಳಾ ಕೇಂದ್ರಿತ ಆಗಿದ್ದು, ಅವುಗಳ ಕ್ರೆಡಿಟ್‌ ಬಾಚಿಕೊಳ್ಳುವಲ್ಲಿ ಲಕ್ಷ್ಮಿ ಹೆಬ್ಬಾಳಕರ ಸಿದ್ಧಹಸ್ತರು. 

‘ಮನೆಮಗಳು’ ಎಂಬ ಬ್ರ್ಯಾಂಡ್‌ ಬೆಳೆಸಿಕೊಂಡು ಗೆದ್ದ ಲಕ್ಷ್ಮಿ, ಈಗ ‘ಮನೆಮಗ’ ಬ್ರ್ಯಾಂಡ್‌ ಹುಟ್ಟುಹಾಕಿದ್ದಾರೆ.

‘ಜಿಲ್ಲೆಯ ಜನ ‍ಪಕ್ಕಾ ಸ್ವಾಭಿಮಾನಿಗಳು. ನಾನು ಮನೆ ಮಗ. ನನ್ನನ್ನು ಬಿಟ್ಟುಕೊಡುವುದಿಲ್ಲ’ ಎಂಬ ವಿಶ್ವಾಸ ಮೃಣಾಲ್‌ ಹೆಬ್ಬಾಳಕರ ಅವರದ್ದು.

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ, ದಲಿತ ಮಹಿಳೆ ಮತಾಂತರ ಯತ್ನದ ಪ್ರಕರಣಗಳೂ ಪ್ರಭಾವ ಬೀರಲಿವೆ. ‘ಲವ್ ಜಿಹಾದ್‌’ ಸಂಗತಿಯ ಮೂಲಕ ಮತದಾರನ ಮನಸ್ಸನ್ನು ಘಾಸಿಗೊಳಿಸಿ ವಾಲಿಸಿಕೊಳ್ಳುವ ಯತ್ನವನ್ನು ಬಿಜೆಪಿ ನಡೆಸಿದೆ.

ಕ್ಷೇತ್ರದ ಬಹಳಷ್ಟು ಪುರುಷರು ‘ರಾಜ್ಯದಲ್ಲಿ ಯಾವ ಸರ್ಕಾರವಾದರೂ ಬರಲಿ. ಆದರೆ, ದೇಶಕ್ಕೆ ಮೋದಿ ಬೇಕು’ ಎನ್ನುತ್ತಾರೆ. ಬಹಳಷ್ಟು ಮಹಿಳೆಯರು ‘ಗ್ಯಾರಂಟಿಗಳಿಂದ ನಮ್ಮ ಸಂತಿ–‍‍ಪ್ಯಾಟಿ ನಡೀತದ. ಗ್ಯಾರಂಟಿಗೇ ಮತ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT