ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಮತ ಸೆಳೆಯಲು ಸಿ.ಎಂ–ಡಿಸಿಎಂ ಆಪ್ತ ಚರ್ಚೆಯ ವಿಡಿಯೊ

Published 20 ಏಪ್ರಿಲ್ 2024, 0:09 IST
Last Updated 20 ಏಪ್ರಿಲ್ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿಯವರ ಕಚೇರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಆಪ್ತ ಸಂವಾದದ ವಿಡಿಯೊ ತುಣುಕನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದೆ.

ಇಬ್ಬರೂ ನಾಯಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಲೋಕಸಭಾ ಚುನಾವಣೆಯಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಬಿಜೆಪಿ– ಜೆಡಿಎಸ್‌ ಮೈತ್ರಿ, ಎನ್‌ಡಿಎ ಮೈತ್ರಿಕೂಟ ಗಳಿಸಬಹುದಾದ ಸ್ಥಾನಗಳ ಸಂಖ್ಯೆ, ಚುನಾವಣೆ ಮೇಲೆ ‘ಗ್ಯಾರಂಟಿ’ ಯೋಜನೆಗಳ ಪ್ರಭಾವದ ಕುರಿತು ಚರ್ಚಿಸಿದ್ದಾರೆ. ವಿಡಿಯೊ ತುಣುಕಿನ ಲಿಂಕ್‌ ಅನ್ನು ಮುಖ್ಯಮಂತ್ರಿಯವರ ಕಚೇರಿ ಹಂಚಿಕೊಂಡಿದೆ.

‘ನಮಸ್ಕಾರ್‌ ಸಾರ್ ಹೇಗಿದ್ದೀರಿ’ ಎಂದು ಮಾತು ಆರಂಭಿಸುವ ಶಿವಕುಮಾರ್‌, ‘ಕೇರಳಕ್ಕೆ ಹೋಗಿದ್ದೆ. ಅಲ್ಲಿ ಎಲ್ಲ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಕರ್ನಾಟಕದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ದೇಶದ ಯಾವ ಭಾಗದಲ್ಲೂ ಮೋದಿ ಅಲೆ ಇಲ್ಲ’ ಎನ್ನುತ್ತಾರೆ.

‘ಆರೋಗ್ಯ ಸುಧಾರಿಸುತ್ತಾ ಇದೆ’ ಎಂದು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಮಹಾರಾಷ್ಟ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನವನೀತ್‌ ರಾಣಾ ಅವರೇ ಈ ಚುನಾವಣೆಯಲ್ಲಿ ಮೋದಿ ಅಲೆ ಇಲ್ಲ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ 15ರಿಂದ 20 ಸ್ಥಾನವನ್ನು ಕಾಂಗ್ರೆಸ್‌ ಗೆಲ್ಲುವ ವಿಶ್ವಾಸ ನನಗಿತ್ತು. ಈಗ ನೋಡಿದರೆ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ’ ಎಂದು ಹೇಳುತ್ತಾರೆ.

‘ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದೆಲ್ಲ ಸುಳ್ಳು ಎಂಬುದು ಜನರಿಗೆ ಗೊತ್ತಾಗಿದೆ. ಈ ಚುನಾವಣೆಯಲ್ಲಿ ಎನ್‌ಡಿಎ 200 ಸ್ಥಾನಗಳನ್ನು ದಾಟುವುದಿಲ್ಲ. ಎಚ್‌.ಡಿ. ದೇವೇಗೌಡರು ಮಾಜಿ ಪ್ರಧಾನಿಯಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 136 ಶಾಸಕರನ್ನು ಹೊಂದಿರುವ ನಮ್ಮ ಸರ್ಕಾರ ಪತನವಾಗುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವ ಬದ್ಧತೆಯೂ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಜೆಡಿಎಸ್ ಪಕ್ಷದವರು ತಾಳ್ಮೆ ಕಳೆದುಕೊಂಡಿದ್ದಾರೆ. ಮಂಡ್ಯ, ಹಾಸನ, ಕೋಲಾರದಲ್ಲಿ ಅವರು ಗೆಲ್ಲುವುದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT