ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲೂ ಪ್ರಚಾರದ ಭರಾಟೆ

ಚಿತ್ರಗಳು, ಕಿರು ವಿಡಿಯೊಗಳು, ಸಂದರ್ಶನದ ತುಣುಕುಗಳನ್ನು ಹಂಚಿಕೊಳ್ಳುವ ಅಭ್ಯರ್ಥಿಗಳು
Published 25 ಏಪ್ರಿಲ್ 2024, 5:24 IST
Last Updated 25 ಏಪ್ರಿಲ್ 2024, 5:24 IST
ಅಕ್ಷರ ಗಾತ್ರ

ದಾವಣಗೆರೆ: ಮೊಬೈಲ್‌ ಬಳಕೆದಾರರು ‘5ಜಿ’ ನೆಟ್‌ವರ್ಕ್‌ಗೆ ಬದಲಾಗುತ್ತಿದ್ದು, ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲೇ ಅಧಿಕ ಸಮಯ ಕಳೆಯುತ್ತಿದ್ದಾರೆ. ಇದನ್ನು ಅರಿತಿರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲೇ ಭರ್ಜರಿ ಮತ ಬೇಟೆ ನಡೆಸುತ್ತಿದ್ದಾರೆ.

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌ ಖಾತೆಗಳನ್ನು ಹೊಂದದವರೇ ಅಪರೂಪ ಎಂಬಂತಾ
ಗಿದ್ದು, ಬಹುತೇಕರು ಒಂದಿಲ್ಲೊಂದು ಸೋಷಿಯಲ್‌ ಮೀಡಿಯಾಗಳನ್ನು ಮನರಂಜನೆ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ. ಎಲ್ಲ ಮತದಾರರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದ ಅಭ್ಯರ್ಥಿಗಳು, ಈ ಮೂಲಕವೇ ಯುವ ಮತದಾರರನ್ನು ತಲುಪಲು ಯತ್ನಿಸುತ್ತಿದ್ದಾರೆ.

ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತದಾರರೊಂದಿಗೆ ನೇರ ಸಂವಹನ ಸಾಧಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ ಉದ್ದೇಶ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಾವು ಹೊಂದಿರುವ ಕನಸು, ತಮ್ಮನ್ನು ಆಯ್ಕೆ ಮಾಡುವುದರಿಂದ ಜನರಿಗೆ ಆಗುವ ಪ್ರಯೋಜನಗಳು ಏನು? ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಎಲ್ಲೆಲ್ಲಿ ಪ್ರಚಾರ ನಡೆಸುತ್ತಿದ್ದೇವೆ, ಯಾರೆಲ್ಲ ಭಾಗವಹಿಸುತ್ತಿದ್ದಾರೆ ಎಂಬ ವಿವರ, ಪ್ರಚಾರದ ಚಿತ್ರ, ವಿಡಿಯೊ ಸಮೇತ ನಿತ್ಯವೂ ತಮ್ಮ ಫಾಲೋವರ್ಸ್‌ಗಳಿಗೆ ಅಪ್‌ಡೇಟ್ಸ್‌ ನೀಡುತ್ತಿದ್ದಾರೆ. ಅಭ್ಯರ್ಥಿಗಳು ಮಾತ್ರವಲ್ಲದೇ ಅವರ ಬೆಂಬಲಿಗರೂ ತಮ್ಮ ನೆಚ್ಚಿನ ನಾಯಕರ ‘ಫ್ಯಾನ್ಸ್‌ ಪೇಜ್‌’ ರಚಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಅಭ್ಯರ್ಥಿಗಳು ವಿವಿಧ ಘೋಷವಾಕ್ಯಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮತದಾರರನ್ನು ಸೆಳೆಯುವ ಕಸರತ್ತನ್ನೂ ನಡೆಸುತ್ತಿದ್ದಾರೆ.

ನನ್ನ ತತ್ವ ಪ್ರಜಾಪ್ರಭುತ್ವ: 

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ‘ನನ್ನ ತತ್ವ ಪ್ರಜಾಪ್ರಭುತ್ವ’ ಹಾಗೂ ‘ಜನಸೇವೆಗೆ ಒಂದು ಅವಕಾಶ’ ಎಂಬ ಘೋಷವಾಕ್ಯಗಳನ್ನು ಬಳಸಿಕೊಂಡು ಮತದಾರರ ಬಳಿ ಮತಯಾಚಿಸುತ್ತಿದ್ದಾರೆ.

‘ಪ್ರಯತ್ನ ನನ್ನದು..’:

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ವಿನಯಕುಮಾರ್‌ ಜಿ.ಬಿ. ಅವರು ‘ಪ್ರಯತ್ನ ನನ್ನದು, ಬಲ ನಿಮ್ಮದು, ಫಲ ಎಲ್ಲರದ್ದು’ ಎಂಬ ಘೋಷವಾಕ್ಯದೊಂದಿಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಜೊತೆಗೆ ತಾವು ನಾಮಪತ್ರ ಸಲ್ಲಿಕೆಯ ದಿನ ನಡೆಸಿದ ಮೆರವಣಿಗೆ ಬಳಿಕ ‘ಇದು ತಂದ ಜನ ಅಲ್ಲ ಸ್ವಾಮಿ..! ಬಂದ ಜನ’ ಎನ್ನುವ ಘೋಷವಾಕ್ಯ ಬಳಸುವ ಮೂಲಕ ಎದುರಾಳಿಗಳಿಗೆ ಟಾಂಗ್‌ ನೀಡುತ್ತಿದ್ದಾರೆ.

ಜನಸೇವೆಗೆ ಬದ್ಧ:

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ‘ಗಾಯತ್ರಿ ಅಮ್ಮ ಜನಸೇವೆಗೆ ಬದ್ಧ, ಬೆಣ್ಣೆ ನಗರಿಯ ಮತದಾರ ಗೆಲ್ಲಿಸಲು ಸಿದ್ಧ’ ಹಾಗೂ ‘ಅಮ್ಮನ ಮಡಿಲಿಗೆ ವಿಜಯದ ಕೊಡುಗೆ’ ಎಂಬ ಘೋಷವಾಕ್ಯಗಳನ್ನು ಬಳಸಿಕೊಂಡು ಮತದಾರರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ.

ನವಭಾರತ ಸೇನಾ ಪಕ್ಷದಿಂದ ಕಣಕ್ಕಿಳಿದಿರುವ ಎಂ.ಜಿ.ಶ್ರೀಕಾಂತ್‌, ಫೇಸ್‌ಬುಕ್‌ನಲ್ಲಿ 7,000 ಫಾಲೋವರ್ಸ್‌ ಹೊಂದಿದ್ದಾರೆ. ಸಾಮಾಜಿಕ ಜಾಲತಾಣ
ವನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕಾಗಿ ಅವರು ದೇಣಿಗೆಯನ್ನೂ ಸಂಗ್ರಹಿಸಲು ಮುಂದಾಗಿದ್ದಾರೆ.

ವಿವಿಧ ಪಕ್ಷಗಳಿಂದ ಸ್ಪರ್ಧಿಸಿರುವ ಹಾಗೂ ಪಕ್ಷೇತರ ಅಭ್ಯರ್ಥಿಗಳೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸುವುದರಲ್ಲಿ ಹಿಂದೆ ಬಿದ್ದಿಲ್ಲ.

ಫೇಸ್‌ಬುಕ್‌ನಲ್ಲಿ ಪ್ರಭಾಗೆ 20,000 ಫಾಲೋವರ್ಸ್‌

ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಫೇಸ್‌ಬುಕ್‌ನಲ್ಲಿ 20,000 ಫಾಲೋವರ್ಸ್‌, ಇನ್‌ಸ್ಟಾಗ್ರಾಂನಲ್ಲಿ 20,600 ಫಾಲೋವರ್ಸ್‌ ಹೊಂದಿದ್ದಾರೆ. ಇದುವರೆಗೂ 708 ಪೋಸ್ಟ್‌ಗಳನ್ನು ಹಾಕಿದ್ದು, ಸಿಎಂ ಸಿದ್ದರಾಮಯ್ಯ, ರಾಹುಲ್‌ ಗಾಂಧಿ, ನಟ ದರ್ಶನ್‌, ಸಚಿವರು, ಶಾಸಕರು ಸೇರಿದಂತೆ 103 ಖಾತೆಗಳನ್ನು ಅವರು ಫಾಲೊ ಮಾಡುತ್ತಿದ್ದಾರೆ. ಪ್ರಭಾ ಅವರಿಗೆ ಬಲವಾಗಿ ಅವರ ಪತಿ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ.

ಗಾಯತ್ರಿ ಪರ ಸಿದ್ದೇಶ್ವರ ಬ್ಯಾಟಿಂಗ್‌

ಗಾಯತ್ರಿ ಸಿದ್ದೇಶ್ವರ ಅವರು ಇನ್‌ಸ್ಟಾಗ್ರಾಂನಲ್ಲಿ 8,433 ಫಾಲೋವರ್ಸ್‌ ಹೊಂದಿದ್ದಾರೆ. ಇದುವರೆಗೂ 438 ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಗಾಯ್ರತಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಬಿಜೆಪಿ 4 ಇಂಡಿಯಾ’, ‘ಬಿಜೆಪಿ 4 ಕರ್ನಾಟಕ’ ಹಾಗೂ ಪತಿ, ಸಂಸದ ಜಿ.ಎಂ.ಸಿದ್ದೇಶ್ವರ ಅವರ ಖಾತೆಗಳನ್ನು ಫಾಲೊ ಮಾಡುತ್ತಿದ್ದಾರೆ. ಗಾಯತ್ರಿ ಸಿದ್ದೇಶ್ವರ ಅವರ ಫೇಸ್‌ಬುಕ್‌ ಪೇಜ್‌ಗೆ 11,000 ಫಾಲೋವರ್ಸ್‌ ಇದ್ದಾರೆ. ಸಿದ್ದೇಶ್ವರ ಅವರು ಪತ್ನಿಯ ಪರ ಸಾಮಾಜಿಕ ಜಾಲತಾಣದಲ್ಲಿ ಮತಬೇಟೆ ನಡೆಸುತ್ತಿದ್ದಾರೆ.

ರಾಹುಲ್‌ ಗಾಂಧಿ ಫಾಲೊ ಮಾಡುವ ವಿನಯ್‌!

ವಿನಯಕುಮಾರ್‌ ಜಿ.ಬಿ. ಅವರು ಫೇಸ್‌ಬುಕ್‌ನಲ್ಲಿ 6,100 ಫಾಲೋವರ್ಸ್‌ ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 29,700 ಫಾಲೋವರ್ಸ್‌ ಹೊಂದಿದ್ದಾರೆ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇವರು, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಹಿಸ್ಟರಿ ಆಫ್ ಕಾಂಗ್ರೆಸ್‌’, ‘ಇಂಡಿಯನ್‌ ಯೂತ್‌ ಕಾಂಗ್ರೆಸ್‌’, ‘ಐಎನ್‌ಸಿ ಇಂಡಿಯಾ’, ‘ಐಎನ್‌ಸಿ ಕರ್ನಾಟಕ’ ಸೇರಿದಂತೆ 11 ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT