ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ 5 ಕೆಜಿ ಅಕ್ಕಿ, ಸ್ನೇಹಿತರಿಗೆ 5 ವಿಮಾನನಿಲ್ದಾಣ: ಪರಕಾಲ ಪ್ರಭಾಕರ್

ಭಾರತದಲ್ಲಿರುವುದು ವಿಚಿತ್ರ ಆರ್ಥಿಕ ನೀತಿ: ಪರಕಾಲ ಪ್ರಭಾಕರ್ ವ್ಯಾಖ್ಯಾನ
Published 19 ಏಪ್ರಿಲ್ 2024, 16:13 IST
Last Updated 19 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡವರಿಗೆ ಐದು ಕೆ.ಜಿ. ಉಚಿತ ಅಕ್ಕಿ ಕೊಟ್ಟು, ಐದು ವಿಮಾನ ನಿಲ್ದಾಣಗಳನ್ನು ಸ್ನೇಹಿತರಿಗೆ ನೀಡುವ ವಿಚಿತ್ರ ಆರ್ಥಿಕ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ’ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.

‘ಸಮುದಾಯದ ಹಾದಿಯಲ್ಲಿ’ ಸಂಘಟನೆಯು 2024ರ ಲೋಕಸಭಾ ಚುನಾವಣೆ–ಪ್ರಚಲಿತ ರಾಷ್ಟ್ರೀಯ ವಿದ್ಯಮಾನಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ‘ದೇಶದ ದನಿ’ ಉಪನ್ಯಾಸ ಹಾಗೂ ಕರ್ನಾಟಕದ 28 ಸಂಸದರ ‘ರಿಪೋರ್ಟ್‌ ಕಾರ್ಡ್‌’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಗತ್ಯವಸ್ತುಗಳ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಬೀದಿಪಾಲು ಮಾಡಿದೆ. ಹಸಿವಿನಿಂದ ಜನರು ಕಂಗಾಲಾಗಿದ್ದಾರೆ. ಜನರ ಕಷ್ಟದ ಬಗ್ಗೆ ಕೇಳುವ ಮನೋಸ್ಥಿತಿ ದೇಶವನ್ನು ಆಳುವ ನಾಯಕರಿಗೆ ಇಲ್ಲ. ಹಸಿವಿನ ಸೂಚ್ಯಂಕದಲ್ಲಿ ಭಾರತ 142 ಸ್ಥಾನದಲ್ಲಿದ್ದರೂ ದೇಶದಲ್ಲಿ ಒಬ್ಬರೂ ಹಸಿವಿನಿಂದ ಬಳಲುತ್ತಿಲ್ಲವೆಂದು ಪ್ರಧಾನಿ ಮೋದಿ ಅವರ ಸಂಪುಟದ ಸಚಿವರೇ ಹೇಳುತ್ತಾರೆ. ಹಸಿವಿನ ಸಮಸ್ಯೆ ಇಲ್ಲದ ಮೇಲೆ 83 ಕೋಟಿ ಜನರಿಗೆ ಐದು ಕೆ.ಜಿ. ಆಹಾರ ಧಾನ್ಯ ಪೂರೈಸುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು. 

ಶೇ 40ರಷ್ಟು ಸಂಪತ್ತು ಶೇ 1ರಷ್ಟು ಮಂದಿಯ ಕೈಯಲ್ಲಿರುವ ಆರ್ಥಿಕ ವ್ಯವಸ್ಥೆ ನಮ್ಮದು. ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವುದಲ್ಲದೇ, ಸಾರ್ವಜನಿಕ ಆಸ್ತಿಯನ್ನೂ ಅವರಿಗೆ ನೀಡುತ್ತಿದೆ. ಕಳೆದ 10 ವರ್ಷಗಳಲ್ಲಿ ಅಸಮಾನತೆಯ ಅಂತರ ಗಣನೀಯವಾಗಿ ಹೆಚ್ಚಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದ ಭಾರತದ ಸ್ಥಿತಿ ಊಹಿಸಲೂ ಆಗದು ಎಂದರು. 

ಮಹಿಳಾ ಮೀಸಲಾತಿ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಿದರೂ, ಜಾರಿಗೆ 2029ರವರೆಗೆ ಗಡುವು ಹಾಕಿಕೊಂಡಿದ್ದಾರೆ. ಬ್ರಿಟನ್‌ ಹಿಂದಿಕ್ಕಿ ಭಾರತ ಐದನೇ ಅರ್ಥವ್ಯವಸ್ಥೆಯಾಗಿ ಬೆಳೆದಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಇನ್ನೊಂದೆಡೆ ಭಾರತ ಅಭಿವೃದ್ಧಿರಾಷ್ಟ್ರವಾಗಲು 2047ರವರೆಗೆ ಕಾಯಬೇಕು ಎನ್ನುತ್ತಾರೆ. ಮೀಸಲಾತಿಗಾಗಿ ಮಹಿಳೆಯರು, ಸಮಾನತೆಯ  ದಿನಗಳಿಗಾಗಿ ಜನರು ಇನ್ನು ಎಷ್ಟು ವರ್ಷಗಳು ಕಾಯಬೇಕು ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಉಳಿತಾಯ ಶೇ 5 ಇದ್ದರೆ, ಸಾಲದ ಪ್ರಮಾಣ ಶೇ 40ರಷ್ಟಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಭಾರತ ಹೇಗೆ ಅಭಿವೃದ್ಧಿ ರಾಷ್ಟ್ರವಾಗಲಿದೆ ಎನ್ನುವ ಪ್ರಶ್ನೆಗಳಿಗೆ ಅವರ ಬಳಿ ಉತ್ತರವೇ ಇಲ್ಲ. ದೇಶದ ಆರ್ಥಿಕ ಸಮೃದ್ಧತೆಯ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಉದ್ಯಮಿಗಳು ದೇಶ ತೊರೆಯುತ್ತಿದ್ದಾರೆ. ಪ್ರತಿ ವರ್ಷ 1.50 ಲಕ್ಷ ಜನರು ದೇಶದ ನಾಗರಿಕತ್ವವನ್ನೇ ತ್ಯಜಿಸುತ್ತಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಸಲೀಲ್ ಶೆಟ್ಟಿ, ಲೇಖಕ ಆಕಾರ್ ಪಟೇಲ್, ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಶಿಕ್ಷಣ ತಜ್ಞ ವಿ.ಪಿ. ನಿರಂಜನ ಆರಾಧ್ಯ, ಪತ್ರಕರ್ತ ಇಂದೂಧರ ಹೊನ್ನಾಪುರ, ನಿರ್ಮಲಾ, ಸಂಶೋಧಕಿ ಎ.ಆರ್. ವಾಸವಿ, ಚಿಂತಕಿ ಜಾನಕಿ ನಾಯರ್ ಸಂವಾದದಲ್ಲಿ ಪಾಲ್ಗೊಂಡಿದ್ದರು. 

ಭಯೋತ್ಪಾದಕರ ನಿಯಂತ್ರಣಕ್ಕೆ ಇದ್ದ ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ನು ವಿರೋಧ ಪಕ್ಷಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಬಳಸುತ್ತಿದೆ.

–ಆಕಾರ್ ಪಟೇಲ್ ಲೇಖಕ

ಬಿಜೆಪಿ ಸರ್ಕಾರ ಆರ್‌ಟಿಇ ಕಾಯ್ದೆ ದುರ್ಬಲಗೊಳಿಸಿದೆ. 10 ವರ್ಷಗಳಲ್ಲಿ 88 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿವೆ. 12 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ.

–ವಿ.ಪಿ. ನಿರಂಜನಾರಾಧ್ಯ ಶಿಕ್ಷಣ ತಜ್ಞ.

‘ಅಕ್ರಮ ಹಣ ವರ್ಗಾವಣೆ ಶಂಕೆ’

ಚುನಾವಣಾ ಬಾಂಡ್‌ ದೇಶದ ಇತಿಹಾಸದಲ್ಲೇ ದೊಡ್ಡ ಅಕ್ರಮ. ನಷ್ಟದಲ್ಲಿರುವ ಅತ್ಯಂತ ಕಡಿಮೆ ಲಾಭ ಗಳಿಸಿದ ಕಂಪನಿಗಳೂ ಆಡಳಿತ ಪಕ್ಷಕ್ಕೆ ಕೋಟ್ಯಂತರ ಹಣ ದೇಣಿಗೆ ನೀಡಿವೆ. ಇದರ ಹಿಂದೆ ಹಿಂದೆ ಅಕ್ರಮ ಹಣ ವರ್ಗಾವಣೆಯ ಹುನ್ನಾರಗಳು ಇರಬಹುದು ಎಂದು ಪರಕಾಲ ಪ್ರಭಾಕರ್ ಶಂಕೆ ವ್ಯಕ್ತಪಡಿಸಿದರು. ಮಣಿಪುರದಂಥ ಘಟನೆಗಳಿಗೆ ಭಾರತ ವಿಶ್ವದ ಎದುರು ತಲೆ ತಗ್ಗಿಸುವಂತಾಗಿದೆ. ದೇಶದ ಇತರೆ ರಾಜ್ಯಗಳಲ್ಲೂ ಜನರು ನಿತ್ಯವೂ ಇಂತಹ ಸ್ಥಿತಿಯನ್ನೇ ಅನುಭವಿಸುತ್ತಿದ್ದಾರೆ. ಸರ್ಕಾರ ಮಾತ್ರ ಜನರ ಗಮನ ಬೇರೆಡೆ ಸೆಳೆಯುತ್ತಾ ಜನರ ನೋವುಗಳನ್ನು ಹೆಚ್ಚಿಸುತ್ತಲೇ ಸಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT