ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ನಾಲ್ಕು ವಾರ ದುರ್ಬಲವಾಗಿರಲಿದೆ ಮುಂಗಾರು: ಸ್ಕೈಮೆಟ್‌ ಕಳವಳ

Published 13 ಜೂನ್ 2023, 4:32 IST
Last Updated 13 ಜೂನ್ 2023, 4:32 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಮುಂದಿನ ನಾಲ್ಕು ವಾರ ಮುಂಗಾರು ದುರ್ಬಲವಾಗಿರಲಿದೆ ಎಂದು ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ‘ಸ್ಕೈಮೆಟ್ ವೆದರ್’ ಸೋಮವಾರ ತಿಳಿಸಿದೆ. ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆಯೂ ಸ್ಕೈಮೆಟ್‌ ಕಳವಳ ವ್ಯಕ್ತಪಡಿಸಿದೆ.

‘ಎಕ್ಸ್‌ಟೆಂಡೆಡ್‌ ರೇಂಜ್ ಪ್ರಿಡಿಕ್ಷನ್ ಸಿಸ್ಟಮ್ (ದೀರ್ಘ ಕಾಲದ ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆ)–ಇಆರ್‌ಪಿಎಸ್‌’ ಜುಲೈ 6 ರವರೆಗೆ ಅಥವಾ ಮುಂದಿನ ನಾಲ್ಕು ವಾರಗಳವರೆಗೆ ನಿರಾಶಾದಾಯಕ ಸೂಚನೆಗಳನ್ನು ನೀಡಿದೆ. ಇದು ಬಿತ್ತನೆಯ ನಿರ್ಣಾಯಕ ಸಮಯ. ಮಳೆ ನಿರೀಕ್ಷೆಯೊಂದಿಗೆ ರೈತರು ಭೂಮಿ ಹದಗೊಳಿಸುವ ಹೊತ್ತು. ಮಧ್ಯ ಭಾರತ ಮತ್ತು ಪಶ್ಚಿಮ ಭಾಗಗಳು ಋತುವಿನ ಆರಂಭದಲ್ಲಿ ಅಸಮರ್ಪಕ ಮಳೆಯಿಂದಾಗಿ ಒಣಹವೆ ಎದುರಿಸಲಿವೆ’ ಎಂದು ಅದು ಹೇಳಿದೆ.

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್ಜೊಯ್‌ ಚಂಡಮಾರುತವು ಮೊದಲು ಮುಂಗಾರು ಪ್ರವೇಶವನ್ನು ವಿಳಂಬಗೊಳಿಸಿತ್ತು. ಈಗ ಮುಂಗಾರು ಮಾರುತಗಳ ವ್ಯವಸ್ಥೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ. ಜತೆಗೆ ಮಾರುತಗಳು ಒಳನಾಡು ಪ್ರವೇಶವನ್ನೂ ತಡೆಯುತ್ತಿದೆ’ ಎಂದು ಸ್ಕೈಮೆಟ್‌ ಹೇಳಿದೆ.

ಮುಂಗಾರು ಮಾರುತಗಳು ಸಾಮಾನ್ಯವಾಗಿ ಮಹಾರಾಷ್ಟ್ರ, ಒಡಿಶಾ, ತೆಲಂಗಾಣದ ಅರ್ಧಭಾಗ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರವನ್ನು ಜೂನ್ 15ರ ವೇಳೆಗೆ ಆವರಿಸುತ್ತದೆ. ಈ ಬಾರಿ ಪಶ್ಚಿಮಘಟ್ಟ ದಾಟಿ ಒಳನಾಡು ಪ್ರವೇಶಿಸಲು ಹೆಣಗಾಡುತ್ತಿದೆ.

ಸದ್ಯ, ಮಾನ್ಸೂನ್‌ ಮಾರುತ ಈಶಾನ್ಯ ಮತ್ತು ಪಶ್ಚಿಮ ಕರಾವಳಿಗೆ ಮಾತ್ರವೇ ಸೀಮಿತವಾಗಿದೆ. ದುರದೃಷ್ಟವಶಾತ್, ಮುಂಗಾರು ಮಾರುತಗಳಿಗೆ ಪೂರಕವಾಗಿ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವ್ಯವಸ್ಥೆಗಳು ಅಭಿವೃದ್ಧಿಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಸ್ಕೈಮೆಟ್‌ ಹೇಳಿದೆ.

ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ಜೂನ್‌ 1ರ ಬದಲಿಗೆ, ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT