ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಶಾಲೆಗಳಿಗೆ ಬಾಂಬ್‌ ಬೆದರಿಕೆ: ದೆಹಲಿ- ಎನ್‌ಸಿಆರ್‌ ಪೊಲೀಸರಿಗೆ ಅಗ್ನಿಪರೀಕ್ಷೆ

ರಷ್ಯಾದಿಂದ ಸಂದೇಶ ಕಳುಹಿಸಿರುವ ಶಂಕೆ:
Published 1 ಮೇ 2024, 16:03 IST
Last Updated 1 ಮೇ 2024, 16:03 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಎನ್‌ಸಿಆರ್‌ ಪ್ರದೇಶದ ಸುಮಾರು 100 ಶಾಲೆಗಳಿಗೆ ಬುಧವಾರ ಇ–ಮೇಲ್‌ ಮೂಲಕ ಬಂದ ಬಾಂಬ್‌ ಬೆದರಿಕೆಯ ಸಂದೇಶವು ಪೋಷಕರು ಮತ್ತು ಮಕ್ಕಳಲ್ಲಿ ಆತಂಕ ಸೃಷ್ಟಿಸಿತು.

ಬುಧವಾರ ನಸುಕಿನಲ್ಲಿ ಈ ಶಾಲೆಗಳಿಗೆ ಒಂದೇ ರೀತಿಯಾಗಿ ಏಕ ಕಾಲಕ್ಕೆ ಬೆದರಿಕೆ ಸಂದೇಶ ಬಂದಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಆತಂಕದಿಂದ ಶಾಲೆಗಳತ್ತ ದೌಡಾಯಿಸಿದರು. ಅಲ್ಲದೆ, ಪೊಲೀಸರು ಕೂಡ ಬಾಂಬ್‌ ಪತ್ತೆಗೆ ಶಾಲೆಗಳತ್ತ ಶ್ವಾನದಳದೊಂದಿಗೆ ದೌಡಾಯಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳು ಕೂಡ ಸೈರನ್‌ ಶಬ್ದ ಮೊಳಗಿಸುತ್ತಾ ಶಾಲೆಗಳ ಆವರಣದಲ್ಲಿ ಜಮಾಯಿಸಿದವು. 

ಶೋಧದ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಮತ್ತು ಸ್ಫೋಟಕಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್‌ ಬೆದರಿಕೆಯ ಸಂದೇಶವೆಂದು ಪೊಲೀಸರು ಸ್ಪಷ್ಟಪಡಿಸಿದರು.

‘ಶಾಲೆಗಳಿಗೆ ಬಂದಿರುವ ಬೆದರಿಕೆಯ ಸಂದೇಶಗಳ ಮೂಲ ಒಂದೇ ಆಗಿದ್ದು, ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ ಈ ಸಂದೇಶಗಳನ್ನು ರಷ್ಯಾದಿಂದ ಕಳುಹಿಸಿರುವ ಶಂಕೆ ಇದೆ.ದುಷ್ಕರ್ಮಿಗಳು ಡಾರ್ಕ್ ನೆಟ್ ಬಳಸಿ ತಮ್ಮ ಗುರುತನ್ನು ಮರೆಮಾಚಿರುವ ಸಾಧ್ಯತೆಯೂ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು, ದೆಹಲಿ ಪೊಲೀಸರು ಐಪಿಸಿಯ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ. ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್‌) ಪ್ರಕಾರ, ಬಾಂಬ್‌ ಬೆದರಿಕೆ ಸಂದೇಶ ಸಂಬಂಧ ಬುಧವಾರ ಮಧ್ಯಾಹ್ನ 12 ಗಂಟೆಯವರೆಗೆ ವಿವಿಧ ಶಾಲೆಗಳಿಂದ ಕನಿಷ್ಠ 97 ಕರೆಗಳನ್ನು ಸ್ವೀಕರಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ಕರೆಗಳು ಬರಲಾರಂಭಿಸಿದವು. ಮಧ್ಯಾಹ್ನದ ನಂತರವೂ ಶಾಲೆಗಳಿಂದ ಕರೆ ಬಂದಿದ್ದು, ಸ್ಥಳಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ವಾಹನ ಸಮೇತ ಬೀಡುಬಿಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೊಯ್ಡಾ, ಗ್ರೇಟರ್ ನೊಯ್ಡಾ, ಘಾಜಿಯಾಬಾದ್ ಮತ್ತು ಗುರುಗ್ರಾಮದ ಅನೇಕ ಖಾಸಗಿ ಶಾಲೆಗಳಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆದರೆ, ಸ್ಥಳೀಯ ಪೊಲೀಸರು ಅವುಗಳನ್ನು ಹುಸಿ ಸಂದೇಶವೆಂದು ಎಂದು ತಳ್ಳಿಹಾಕಿದ್ದಾರೆ.

ಪೂರ್ವ ದೆಹಲಿಯ 24 ಖಾಸಗಿ ಶಾಲೆಗಳು, ದಕ್ಷಿಣ ದೆಹಲಿಯ 18 ​​ಶಾಲೆಗಳು, ಪಶ್ಚಿಮ ದೆಹಲಿಯ 21 ಶಾಲೆಗಳು ಮತ್ತು ಶಹದಾರದ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯಲು ಶಾಲೆಗಳ ಹೊರಗೆ ಜಮಾಯಿಸುತ್ತಿದ್ದ, ತಮ್ಮ ಮಕ್ಕಳನ್ನು ಕರೆದೊಯ್ಯುವಂತೆ ಪೋಷಕರಿಗೆ ಶಾಲೆಯ ಆಡಳಿತ ಮಂಡಳಿಯವರು ಧ್ವನಿವರ್ಧಕಗಳಲ್ಲಿ ಮನವಿ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. 

ಬೆದರಿಕೆ ಸಂದೇಶ ಹುಸಿಯಾಗಿದ್ದು, ಭಯಪಡುವ ಅಗತ್ಯವಿಲ್ಲ. ದೆಹಲಿ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಇ–ಮೇಲ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ದೆಹಲಿ ಸರ್ಕಾರವು ಶಾಲೆಗಳಿಗೆ ಸಲಹೆ ನೀಡಿದೆ.

ದೆಹಲಿ ಪೊಲೀಸರು ಹುಸಿ ಬಾಂಬ್‌ ಬೆದರಿಕೆಯ ಇ ಮೇಲ್‌ಗಳ ಮೂಲವನ್ನು ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ.. 
–ವಿ.ಕೆ. ಸಕ್ಸೇನಾ, ಲೆಫ್ಟಿನೆಂಟ್ ಗವರ್ನರ್
ಶಾಲೆಗಳಲ್ಲಿ ಏನೂ ಕಂಡುಬಂದಿಲ್ಲ. ಪೋಷಕರು ನಾಗರಿಕರು ಭಯಪಡಬೇಡಿ. ಪೊಲೀಸರು ಮತ್ತು ಶಾಲೆಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ.
– ಆತಿಶಿ, ದೆಹಲಿ ಶಿಕ್ಷಣ ಸಚಿವೆ

ದೆಹಲಿ ಪೊಲೀಸರಿಗೆ ಅಗ್ನಿಪರೀಕ್ಷೆ!

100ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂಬ ಬೆದರಿಕೆ ಸಂದೇಶ ದೆಹಲಿ ಪೊಲೀಸರನ್ನು ಅಗ್ನಿಪರೀಕ್ಷೆಗೆ ಒಡ್ಡಿತ್ತು. ಬೆಳಿಗ್ಗೆ 6ರ ಹೊತ್ತಿಗೆ ದೆಹಲಿ ಪೊಲೀಸ್‌ನ ನಿಯಂತ್ರಣ ಕೊಠಡಿಯ ದೂರವಾಣಿ ರಿಂಗಣಿಸಲು ಆರಂಭವಾದ ನಂತರ ಶುರುವಾದ ಕಾರ್ಯಾಚರಣೆ ಮಧ್ಯಾಹ್ನ 3ರ ವರೆಗೆ ನಡೆಯಿತು. ದೂರವಾಣಿ ಕರೆಗಳನ್ನು ಸ್ವೀಕರಿಸಿದ ಬೆನ್ನಲ್ಲೇ ಶ್ವಾನ ಹಾಗೂ ಬಾಂಬ್‌ ನಿಷ್ಕ್ರಿಯ ದಳದೊಂದಿಗೆ ಕಾರ್ಯಾಚರಣೆಗಿಳಿದ ಪೊಲೀಸರು ಒಂದರ ನಂತರ ಒಂದು ಶಾಲೆಗೆ ತೆರಳಿ ಪರಿಶೀಲನೆ ಕೈಗೊಂಡರು. ‘ರಾಷ್ಟ್ರ ರಾಜಧಾನಿಯ ಪ್ರತಿ ಜಿಲ್ಲೆಯೂ ಬಾಂಬ್‌ ನಿಷ್ಕ್ರಿಯ ಮತ್ತು ಶ್ವಾನ ದಳ ಹೊಂದಿದೆ. ಅಗತ್ಯ ಬಿದ್ದಾಗ ಇತರ ಜಿಲ್ಲೆಗಳ ನೆರವು ಪಡೆಯಲಾಗುತ್ತಿ್ತು. ಆದರೆ ಇಂದಿನ ಪರಿಸ್ಥಿತಿ ಬೇರೆಯೇ ಇತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT