ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾನಿ–ಅದಾನಿ ಜತೆ ಸಖ್ಯ: ಮೋದಿ–ರಾಹುಲ್‌ ಜಟಾಪಟಿ

Published 8 ಮೇ 2024, 16:11 IST
Last Updated 8 ಮೇ 2024, 16:11 IST
ಅಕ್ಷರ ಗಾತ್ರ

ಹೈದರಾಬಾದ್: ಉದ್ಯಮಿಗಳಾದ ಗೌತಮ್‌ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರೊಂದಿಗಿನ ನಂಟಿನ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡುವೆ ಮಾತಿನ ಜಟಾಪಟಿ ತೀವ್ರಗೊಂಡಿದೆ. ‘ಕಳೆದ ಐದು ವರ್ಷಗಳಿಂದ ಅದಾನಿ–ಅಂಬಾನಿ ವಿಷಯ ಪ್ರಸ್ತಾಪಿಸುತ್ತಿದ್ದ ‘ಶಹಜಾದ’ (ರಾಹುಲ್), ಈಗ ಈ ವಿಷಯವಾಗಿ ಮೌನ ತಾಳಿರುವುದೇಕೆ’ ಎಂದು ಮೋದಿ ಪ್ರಶ್ನಿಸಿದರೆ, ‘ಸಿಬಿಐ ಮತ್ತು ಇ.ಡಿಯಿಂದ ಈ ವಿಷಯವನ್ನು ತನಿಖೆಗೆ ಒಳಪಡಿಸಿ’ ರಾಹುಲ್‌ ಕುಟುಕಿದ್ದಾರೆ.

ಪ್ರಧಾನಿ ಮೋದಿ ಅವರು ಅಂಬಾನಿ–ಅದಾನಿ ಜತೆಗೆ ನಂಟು ಹೊಂದಿದ್ದಾರೆ ಎಂದು ಇದುವರೆಗೆ ಕಾಂಗ್ರೆಸ್ ಆರೋಪಿಸುತ್ತಿತ್ತು. ಈಗ ಅದೇ ಆರೋಪವನ್ನು ಮೋದಿ ಅವರು ಕಾಂಗ್ರೆಸ್ ವಿರುದ್ಧ ಮಾಡಿದ್ದಾರೆ.

ತೆಲಂಗಾಣದ ವೇಮುಲವಾಡದಲ್ಲಿ ಮಾತನಾಡಿದ ಮೋದಿ, ‘ ಆದರೆ, ಚುನಾವಣೆಗಳು ಘೋಷಣೆಯಾದ ಗಳಿಗೆಯಿಂದ ಕಾಂಗ್ರೆಸ್‌ನವರು ಅಂಬಾನಿ–ಅದಾನಿ ಅವರನ್ನು ನಿಂದಿಸುವುದನ್ನು ನಿಲ್ಲಿಸಿದರು’ ಎಂದು ಹೇಳಿದರು.

‘ಖಂಡಿತವಾಗಿಯೂ ಏನೋ ಅನುಮಾನಾಸ್ಪದವಾದದ್ದು ನಡೆದಿದೆ. ಐದು ವರ್ಷಗಳ ಕಾಲ ನೀವು ಅಂಬಾನಿ–ಅದಾನಿ ಅವರನ್ನು ನಿಂದಿಸಿದಿರಿ, ರಾತ್ರೋರಾತ್ರಿ ಸುಮ್ಮನಾದಿರಿ. ಅದರ ಅರ್ಥ ನೀವು ‘ಚೋರ್ ಕಿ ಮಾಲ್’ (ಕಳ್ಳಮಾಲು) ಅನ್ನು ಪಡೆದಿದ್ದೀರಿ. ಕಪ್ಪುಹಣದ ಎಷ್ಟು ಮೂಟೆಗಳನ್ನು ನೀವು ಪಡೆದಿದ್ದೀರಿ ಎಂದು ನೀವು ದೇಶಕ್ಕೆ ಉತ್ತರಿಸಬೇಕಿದೆ’ ಎಂದು ಕೆಣಕಿದರು. 

‘ರಫೇಲ್ ವಿಚಾರದ ನಂತರ ರಾಹುಲ್ ‘ಐವರು ಉದ್ಯಮಿ’ಗಳ ಬಗ್ಗೆ ಮಾತನಾಡುತ್ತಿದ್ದರು. ಬಳಿಕ ಅವರು ಅಂಬಾನಿ–ಅದಾನಿ ಬಗ್ಗೆ ಪ್ರಸ್ತಾಪಿಸತೊಡಗಿದರು. ಈಗ ಈ ಉದ್ಯಮಿಗಳ ನಿಂದನೆಯನ್ನೂ  ಇದ್ದಕ್ಕಿದ್ದಂತೆ ನಿಲ್ಲಿಸಿರುವುದೇಕೆ? ಈ ಸಂಬಂಧ ಏನಾದರೂ ಒಪ್ಪಂದ ಕುದುರಿದೆಯೇ? ಅವರ ಪಕ್ಷವು ಟೆಂಪೊಗಟ್ಟಲೆ ಕಪ್ಪು ಹಣವನ್ನು ಪಡೆದಿದೆಯೇ’ ಎಂದರು.

ಕಾಂಗ್ರೆಸ್‌ ನಾಯಕರು ಮೂರನೇ ಹಂತದ ನಂತರ ಗೆಲುವಿನ ಸ್ಥಾನಗಳಿಗಾಗಿ ಭೂತಗನ್ನಡಿ ಹಾಕಿ ಹುಡುಕುತ್ತಿದ್ದಾರೆ. ನಾಲ್ಕನೇ ಹಂತದಲ್ಲಿ ಅವರು ‘ಸೂಕ್ಷ್ಮದರ್ಶಕ’ದ (ಮೈಕ್ರೋಸ್ಕೋಪ್) ಮೂಲಕ ಹುಡುಕಬೇಕು.
ನರೇಂದ್ರ ಮೋದಿ, ಪ್ರಧಾನಿ

‘ಮೂರನೇ ಹಂತದ ಚುನಾವಣೆಯು ಕಾಂಗ್ರೆಸ್ ಮತ್ತು ‘ಇಂಡಿ’ ಕೂಟದ ಮೂರನೇ ‘ಫ್ಯೂಸ್’ ಅನ್ನು ಕಿತ್ತು ಎಸೆದಿದೆ’ ಎಂದು ಲೇವಡಿ ಮಾಡಿದರು.

ಸಾಮಾನ್ಯವಾಗಿ ನೀವು ಅದಾನಿ ಮತ್ತು ಅಂಬಾನಿ ಬಗ್ಗೆ ಗುಪ್ತವಾಗಿ ಮಾತನಾಡುತ್ತೀರಿ. ಮೊದಲ ಬಾರಿಗೆ ಅವರ ಹೆಸರನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದೀರಿ. ಅವರು (ಕಾಂಗ್ರೆಸ್‌ಗಾಗಿ) ಟೆಂಪೊಗಳಲ್ಲಿ ಹಣ ಒಯ್ಯುತ್ತಾರೆ ಎನ್ನುವುದೂ ನಿಮಗೆ ಗೊತ್ತಿದೆ. ಅದು ನಿಮ್ಮ ವೈಯಕ್ತಿಕ ಅನುಭವವೇ? ಒಂದು ಕೆಲಸ ಮಾಡಿ, ಇ.ಡಿ–ಸಿಬಿಐ ಅನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತನಿಖೆಗೆ ಕಳುಹಿಸಿ
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ರಾಹುಲ್ ಪ್ರತಿದಿನವೂ ಅವರ ಹೆಸರು ಪ್ರಸ್ತಾಪಿಸುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

ರಾಯ್‌ಬರೇಲಿ : ಬಿಜೆಪಿಯು ಉದ್ಯಮಿಗಳೊಂದಿಗೆ ನಂಟು ಹೊಂದಿದ್ದು ಅವರ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದರು.

ರಾಹುಲ್ ಗಾಂಧಿ ಕುರಿತು ಬಿಜೆಪಿಯು ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಅವರು ಹೇಳಿದರು. ರಾಹುಲ್ ಅವರು ಅಂಬಾನಿ–ಅದಾನಿ ಬಗ್ಗೆ ಏಕೆ ಪ್ರಸ್ತಾಪಿಸುತ್ತಿಲ್ಲ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ‘ಇಂದು ಅವರು (ಮೋದಿ) ರಾಹುಲ್ ಗಾಂಧಿ ಅಂಬಾನಿ–ಅದಾನಿ ಹೆಸರು ಪ್ರಸ್ತಾಪಿಸುತ್ತಿಲ್ಲ ಎಂದಿದ್ದಾರೆ. ರಾಹುಲ್ ಪ್ರತಿದಿನವೂ ಅವರ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಅವರ ಸತ್ಯ ಏನು ಎನ್ನುವುದನ್ನು ಅವರು ನಿಮ್ಮ ಮುಂದೆ ಪ್ರತಿದಿನವೂ ಇಡುತ್ತಿದ್ದಾರೆ’ ಎಂದು ನುಡಿದರು.

ರಾಯ್‌ಬರೇಲಿಯಲ್ಲಿ ರಾಹುಲ್ ಪರ ಪ್ರಚಾರ ಮಾಡಿದ ಅವರು ‘ಬಿಜೆಪಿಯು ಉದ್ಯಮಿಗಳೊಂದಿಗೆ ನಂಟು ಹೊಂದಿದೆ ಎಂದು ನಾವು ಪ್ರತಿದಿನ ಹೇಳುತ್ತಿದ್ದೇವೆ. ಅತಿ ಶ್ರೀಮಂತರ ₹16 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದರು. ಅದು ಯಾರ ಹಣ? ಅದು ಮೋದಿಜಿ ಅವರ ಹಣವಲ್ಲ ಅದು ದೇಶದ ಹಣ’ ಎಂದು ತಿಳಿಸಿದರು.

ಕಾಲ ಬದಲಾಗುತ್ತಿದೆ. ದೋಸ್ ದೋಸ್ತ್ ನ ರಹಾ... (ಗೆಳೆಯರು ಈಗ ಗೆಳೆಯರಾಗಿ ಉಳಿದಿಲ್ಲ)
ಲೋಕಸಭಾ ಚುನಾವಣೆಯ ಮೂರು ಹಂತದ ಮತದಾನ ಮುಗಿದ ಮೇಲೆ ಪ್ರಧಾನಿ ಮೋದಿ ಅವರ ಕುರ್ಚಿ ಅಲುಗಾಡುತ್ತಿದ್ದು ಇಂದು ಅವರು ತಮ್ಮ ಸ್ನೇಹಿತರ ವಿರುದ್ಧವೇ ದಾಳಿ ಮಾಡುತ್ತಿದ್ದಾರೆ ಮತ್ತು ಇದು ಚುನಾವಣಾ ಫಲಿತಾಂಶದ ನಿಜವಾದ ದಿಕ್ಕನ್ನು ತೋರಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಬಿಜೆಪಿ ನಾಯಕರು ಹಣದುಬ್ಬರ ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಅವರು ಇಲ್ಲಿಗೆ ಬರುತ್ತಾರೆ ಧರ್ಮ ಜಾತಿ ದೇವಸ್ಥಾನ ಮಸೀದಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನಿಮ್ಮ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಹೇಳಿದರು.

‘ರಾಹುಲ್ ಅವರನ್ನು ಆಯ್ಕೆ ಮಾಡಿದರೆ ರಾಯ್‌ಬರೇಲಿಗೆ ಇಬ್ಬರು ಸಂಸದರು ಸಿಗುತ್ತಾರೆ. ಒಬ್ಬರು ರಾಹುಲ್ ಇನ್ನೊಬ್ಬರು ನಾನು. ನಾವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸದಾ ನಿಮ್ಮೊಂದಿಗಿರುತ್ತೇವೆ’ ಎಂದು ಭರವಸೆ ನೀಡಿದರು.

ರಾಹುಲ್ ಬಗ್ಗೆ ಮಾತನಾಡಿದ ಪ್ರಿಯಾಂಕಾ ‘ಅವರು ಎಷ್ಟು ಕಷ್ಟ ಪಟ್ಟರು ಎನ್ನುವುದು ನಿಮಗೆ ಗೊತ್ತಿದೆ. ಅವರ ಬಗ್ಗೆ ಇಡೀ ಬಿಜೆಪಿ ವ್ಯವಸ್ಥೆ ಸಾಧ್ಯವಾದ ರೀತಿಯಲ್ಲೆಲ್ಲ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಅವರ ವಿರುದ್ಧ ಎಷ್ಟು ದಾಳಿಗಳನ್ನು ಮಾಡಿದರು? ಅವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಯಿತು. ಅವರ ಮನೆಯಿಂದ ಅವರನ್ನು ಹೊರಗೆ ತಳ್ಳಲಾಯಿತು. ಆದರೂ ರಾಹುಲ್‌ಜಿ ಮಣಿಯಲಿಲ್ಲ. ಅದು ಅವರ ಗುಣ. ಅನ್ಯಾಯ ನಡೆಯುತ್ತಿರುವುದನ್ನು ನೋಡಿದರೆ ನ್ಯಾಯಕ್ಕಾಗಿ ಹೋರಾಡುತ್ತಾರೆ ಮತ್ತು ಅದರಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು.

‘ಕುಟುಂಬ ಮೊದಲು ಬಿಆರ್‌ಎಸ್‌ ಮಂತ್ರ’

ಕಾಂಗ್ರೆಸ್ ಮತ್ತು ಕೆ.ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್‌ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ‘ದೇಶ ಮೊದಲು’ ಎನ್ನುವುದು ಬಿಜೆಪಿ ನೀತಿಯಾದರೆ ಅವುಗಳದ್ದು ‘ಕುಟುಂಬ ಮೊದಲು’ ಎನ್ನುವ ತತ್ವ. ಇಬ್ಬರ ಪಕ್ಷಗಳಲ್ಲೂ ಭ್ರಷ್ಟಾಚಾರ ಎನ್ನುವುದು ಸಾಮಾನ್ಯ ಅಂಶವಾಗಿದೆ’ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಗ್ಗೆ ಪ್ರತಿಕ್ರಿಯಿಸಿದ  ಮೋದಿ ‘ಡಬಲ್ ಆರ್’ (ಆರ್‌ಆರ್‌) ತೆರಿಗೆಯ ಬಗ್ಗೆ ದೆಹಲಿವರೆಗೂ ಮಾತುಗಳು ಕೇಳಿಬರುತ್ತಿವೆ ಎಂದು ವ್ಯಂಗ್ಯವಾಗಿ ನುಡಿದರು. 

ಚುನಾವಣೆಯ ಉಬ್ಬರ–ಇಳಿತ ಎಷ್ಟು ‘ಹಿಂಸಾತ್ಮಕ’ವಾಗಿ ಬದಲಾಗಿದೆ ಎಂದರೆ ‘ಹಮ್ ದೋ ಹಮಾರೆ ದೋ’; ‘ಪಪ್ಪ’ನೇ ತನ್ನ ಮಕ್ಕಳ ವಿರುದ್ಧ ತಿರುಗಿಬಿದ್ದಿದ್ದಾನೆ.
ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಮೂರು ಹಂತಗಳ ಚುನಾವಣೆಯ ನಂತರ ಮೋದಿ ಕ್ಷೋಭೆಗೊಂಡಿದ್ದಾರೆ. ನೆಲ ನಡುಗುತ್ತಿದೆ ಎಂದು ಅರಿತುಕೊಂಡಿದ್ದಾರೆ. ತಮ್ಮ ‘ಸ್ನೇಹಿತ’ರಿಂದ ₹8200 ಕೋಟಿ ಸಂಗ್ರಹಿಸಿದ ಪ್ರಧಾನಿ ಮೋದಿ ಚುನಾವಣೆಯಲ್ಲಿ ಸೋಲುತ್ತಿರುವ ಗಳಿಗೆಯಲ್ಲಿ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ
ಪವನ್ ಖೇರಾ ಕಾಂಗ್ರೆಸ್ ಮುಖಂಡ
ಇಬ್ಬರು ದೊಡ್ಡ ಉದ್ಯಮಿಗಳ ವಿರುದ್ಧ ಪ್ರಧಾನಿ ಮೋದಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡುತ್ತಿದ್ದಾರೆ. ಸಿಬಿಐ ಇ.ಡಿ ಆದಾಯ ತೆರಿಗೆ ಅಧಿಕಾರಿಗಳು ಎಂದು ಅವರ ಮೇಲೆ ದಾಳಿ ನಡೆಸಲಿದ್ದಾರೆ?
ಸುಪ್ರಿಯಾ ಶ್ರೀನೆತ್ ಕಾಂಗ್ರೆಸ್ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT