ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕೂಲಿ: ರಾಜ್ಯದಲ್ಲಿ ಶೇ 10ರಷ್ಟು ಹೆಚ್ಚಳ

Published 28 ಮಾರ್ಚ್ 2024, 16:21 IST
Last Updated 28 ಮಾರ್ಚ್ 2024, 16:21 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೂಲಿ ದರವನ್ನು ಪರಿಷ್ಕರಿಸಿದ್ದು, ವಿವಿಧ ರಾಜ್ಯಗಳಿಗೆ ಅಂದಾಜು ಶೇ 4ರಿಂದ ಶೇ 10ರಷ್ಟನ್ನು ಏರಿಕೆ ಮಾಡಿದೆ.

ಕರ್ನಾಟಕ, ಆಂಧ್ರಪ್ರದೇಶ, ಗೋವಾ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನರೇಗಾ ಕೂಲಿಯು ಅಂದಾಜು ಶೇ 10ರಷ್ಟು ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಈ ಮೊದಲು ದಿನಕ್ಕೆ ₹ 316ರಷ್ಟಿದ್ದ ನರೇಗಾ ಕೂಲಿ ದರವು ಪರಿಷ್ಕರಣೆ ಬಳಿಕ ₹349ಕ್ಕೆ ಏರಿದಂತಾಗಿದ್ದು, ಒಟ್ಟು ₹ 33 ಹೆಚ್ಚಿದಂತಾಗಿದೆ.

ಈ ಯೋಜನೆಯಡಿ ದೇಶದಲ್ಲಿಯೇ ಅತಿ ಹೆಚ್ಚು ಕೂಲಿ ನಿಗದಿಯಾಗಿರುವ ರಾಜ್ಯ ಹರಿಯಾಣ ಆಗಿದ್ದು, ಅಲ್ಲಿ ಅದರ ಪ್ರಮಾಣ ದಿನಕ್ಕೆ ₹ 374ಕ್ಕೆ ಏರಿದೆ‌. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಕೂಲಿ ಮೊತ್ತ ಅತ್ಯಂತ ಕಡಿಮೆ (₹ 234) ಇದೆ ಎಂದು ಅಧಿಸೂಚನೆ ತಿಳಿಸಿದೆ. ಸಿಕ್ಕಿಂನ ಗ್ನಾಥಾಂಗ್‌, ಲಾಚುಂಗ್ ಮತ್ತು ಲಾಚೆನ್‌ ಪಂಚಾಯ್ತಿಗಳಲ್ಲಿ ದಿನಕ್ಕೆ ₹ 374 ಕೂಲಿ ಇದೆ ಎಂದು ಅದು ಹೇಳಿದೆ.

ಆಯೋಗದಿಂದ ಅನುಮತಿ:

ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿ ಇರುವ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಚುನಾವಣಾ ಆಯೋಗದಿಂದ ಅನುಮತಿ ಪಡೆದು ನರೇಗಾ ಕೂಲಿ ಪರಿಷ್ಕರಣೆ ಅಧಿಸೂಚನೆಯನ್ನು ಮಾರ್ಚ್‌ 27ರಂದು ಹೊರಡಿಸಿದೆ. 

ಅಧಿಸೂಚನೆಯ ಪ್ರಕಾರ, ಗೋವಾದಲ್ಲಿ ಕೂಲಿ ದರವು ದೇಶದಲ್ಲಿಯೇ ಅತಿ ಹೆಚ್ಚು ಪರಿಷ್ಕರಣೆಯಾಗಿದೆ. ಅಂದರೆ ಅಲ್ಲಿನ ಕೂಲಿ ದರದಲ್ಲಿ ₹ 34 ಏರಿಕೆಯಾಗಿದ್ದು, ದಿನದ ಕೂಲಿ ₹ 356ಕ್ಕೆ ತಲುಪಿದೆ. ಆಂಧ್ರಪ್ರದೇಶದಲ್ಲಿ ₹ 28 ಹೆಚ್ಚಳವಾಗಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ (₹7) ಪರಿಷ್ಕರಣೆಯಾಗಿದ್ದು, ಎರಡೂ ರಾಜ್ಯಗಳಲ್ಲಿ ನರೇಗಾ ಕೂಲಿಯು ದಿನಕ್ಕೆ ₹ 237 ಆಗಿದೆ. ಅತಿ ಹೆಚ್ಚು ಕೂಲಿ ದರ ಹೊಂದಿರುವ ರಾಜ್ಯಗಳ ಪೈಕಿ ಹರಿಯಾಣ (₹374) ಮೊದಲ ಸ್ಥಾನದಲ್ಲಿದ್ದರೂ, ಅಲ್ಲಿ ಕೂಲಿ ದರದಲ್ಲಿ ಕೇವಲ ಶೇ 4ರಷ್ಟನ್ನು ಏರಿಕೆ ಮಾಡಲಾಗಿದೆ.

‘ಕೇವಲ ₹ 7 ಏರಿಕೆ’: ಕಾಂಗ್ರೆಸ್ ತರಾಟೆ

ನವದೆಹಲಿ: ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಿರುವ ಕೇಂದ್ರ ಸರ್ಕಾರ ಕೇವಲ ‘₹ 7 ಏರಿಕೆ ಮಾಡಿದೆ’ ಎಂದು ಕಾಂಗ್ರೆಸ್‌ ಪಕ್ಷ ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್‌ ಪಕ್ಷ ತನ್ನ ‘ಶ್ರಮಿಕ ನ್ಯಾಯ’ ಗ್ಯಾರಂಟಿ ಭರವಸೆಯಡಿ ನಿತ್ಯ ಕನಿಷ್ಠ ಕೂಲಿ ₹ 400 ನಿಗದಿಪಡಿಸುವ ಭರವಸೆ ನೀಡಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಈಗ ಪರಿಷ್ಕರಿಸಿರುವ ಒಟ್ಟು ಕೂಲಿ ಮೊತ್ತ ಹಲವು ರಾಜ್ಯಗಳಲ್ಲಿ ಇದಕ್ಕಿಂತಲೂ ಕಡಿಮೆ ಇದೆ ಎಂದು ಹೇಳಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದು ‘ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಅಭಿನಂದನೆಗಳು. ಪ್ರಧಾನಿ ನಿಮ್ಮ ನಿತ್ಯದ ಕೂಲಿಯನ್ನು ₹ 7ರಷ್ಟು ಏರಿಸಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

‘ಇಷ್ಟು ದೊಡ್ಡ ಮೊತ್ತದಲ್ಲಿ ಏನು ಮಾಡುವಿರಿ ಎಂದೂ ಈಗ ಅವರು ಕೇಳಬಹುದು. ₹ 700 ಕೋಟಿ ವ್ಯಯಿಸಿ ನಿಮ್ಮ ಹೆಸರಿನಲ್ಲಿ ‘ಥ್ಯಾಂಕ್‌ ಯೂ ಮೋದಿಜಿ’ ಅಭಿಯಾನವನ್ನೂ ನಡೆಸಬಹುದು’ ಎಂದೂ ರಾಹುಲ್‌ ವ್ಯಂಗ್ಯವಾಡಿದ್ದಾರೆ. ‘ಮೋದಿಜೀ ಅವರ ಈ ಧಾರಾಳತನದ ಕುರಿತು ಆಕ್ರೋಶವಿರುವವರು ಒಂದು ಅಂಶವನ್ನು ಸ್ಮರಿಸಬೇಕು. ‘ಇಂಡಿಯಾ’ ಸರ್ಕಾರ ಮೊದಲ ದಿನವೇ ಪ್ರತಿ ಕಾರ್ಮಿಕನ ಕೂಲಿ ಮೊತ್ತವನ್ನು ನಿತ್ಯ ₹ 400ಕ್ಕೆ ಹೆಚ್ಚಿಸುವ ಭರವಸೆ ನೀಡಿದೆ ಎಂದೂ ಅವರು ಹೇಳಿದ್ದಾರೆ.

ಇದೇ ವಿಷಯ ಕುರಿತ ಇನ್ನೊಂದು ಪೋಸ್ಟ್‌ನಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌  ಅವರು ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ಪ್ರತಿವರ್ಷ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT