ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಜರ್ಮನಿಗೆ ತೆರಳಲು ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ: ದೃಢಪಡಿಸಿದ MEA

Published 2 ಮೇ 2024, 15:57 IST
Last Updated 2 ಮೇ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ‘ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿಗೆ ತೆರಳಿದ್ದಾರೆ. ಆದರೆ ಸರ್ಕಾರದಿಂದ ಅನುಮತಿ ಪಡೆದಿರಲಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಖಚಿತಪಡಿಸಿದೆ.

ವಿದೇಶಕ್ಕೆ ತೆರಳಿರುವ ಪ್ರಜ್ವಲ್‌ಗೆ ನೀಡಿರುವ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದುಪಡಿಸಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ‘ನ್ಯಾಯಾಲಯದಿಂದ ನಿರ್ದೇಶನವಿದ್ದಲ್ಲಿ ಮಾತ್ರ ಇಂಥ ಕ್ರಮ ಕೈಗೊಳ್ಳಲು ಸಾಧ್ಯ’ ಎಂದಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮೊಮ್ಮಗನಾದ ಪ್ವಜ್ವಲ್ ಏ. 27ರಂದೇ ದೇಶ ತೊರೆದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು, ಏ. 26ರಂದು ನಡೆದ 2ನೇ ಹಂತದ ಚುನಾವಣೆ ನಂತರ ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಈ ನಡುವೆ ಆರೋಪ ಕೇಳಿಬಂದ ಬೆನ್ನಲ್ಲೇ ಜೆಡಿಎಸ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.

‘ಜರ್ಮನಿಗೆ ಪ್ರಯಾಣ ಬೆಳೆಸಿರುವ ಪ್ರಜ್ವಲ್‌, ಸರ್ಕಾರದ ಅನುಮತಿ ಕೇಳಿರಲಿಲ್ಲ. ಪ್ರಯಾಣಕ್ಕೆ ವಿದೇಶಾಂಗ ಸಚಿವಾಲಯ ಯಾವುದೇ ಅನುಮತಿ ನೀಡಿರಲಿಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಜರ್ಮನಿಗೆ ತೆರಳಲು ವೀಸಾ ಅಗತ್ಯವಿಲ್ಲದ ಕಾರಣ, ಅವರು ಅದನ್ನೂ ಪಡೆದಿಲ್ಲ. ಅಷ್ಟೇ ಅಲ್ಲದೆ, ಇತರ ಯಾವುದೇ ದೇಶಕ್ಕೆ ತೆರಳಲು ಸಚಿವಾಲಯ ವೀಸಾ ನೀಡಿಲ್ಲ’ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದು, ಪ್ವಜ್ವಲ್ ರೇವಣ್ಣನಿಗೆ ನೀಡಲಾಗಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಪಡಿಸುವಂತೆ ಕೋರಿದ್ದರು.

ಪಜ್ವಲ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರಿಗೆ ವಿತರಿಸಲಾದ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ಮರಳಿ ಪಡೆಯುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಜೈಸ್ವಾಲ್ ಅವರು ಯಾವುದೇ ನೇರ ಉತ್ತರ ನೀಡಿಲ್ಲ.

‘ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಏನು ಮಾಡಬಹುದು ಎಂಬುದನ್ನು ನಾವೂ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಈ ಪ್ರಕರಣದ ತನಿಖೆಯ ಹೊಣೆಯನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದೆ. ಜತೆಗೆ ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ. ಅವರ ಮನೆಯಲ್ಲಿ ಮನೆಗೆಲಸ ಮಾಡುವ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸುಮಾರು ಮೂರು ಸಾವಿರ ವಿಡಿಯೊಗಳು ಹಾಸನದಲ್ಲಿ ಇತ್ತೀಚೆಗೆ ಹರಿದಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT