ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟವಿಲ್ಲದ 42 ಟ್ರಕ್ ತುಪ್ಪ ತಿರಸ್ಕರಿಸಿದ್ದ ತಿರುಮಲ ತಿರುಪತಿ ದೇವಸ್ಥಾನಂ

Published 2 ಆಗಸ್ಟ್ 2023, 14:11 IST
Last Updated 2 ಆಗಸ್ಟ್ 2023, 14:11 IST
ಅಕ್ಷರ ಗಾತ್ರ

ತಿರುಪತಿ: ನಿಗದಿತ ಗುಣಮಟ್ಟವಿಲ್ಲದ 42 ಟ್ರಕ್‌ನಷ್ಟು ಹಸುವಿನ ತುಪ್ಪವನ್ನು ತಿರುಪತಿ ತಿರುಮಲದ ವೆಂಕಟೇಶ್ವರ ದೇವಸ್ಥಾನವು ಕಳೆದ ಒಂದು ವರ್ಷದಲ್ಲಿ ತಿರಸ್ಕರಿಸಿದೆ ಎಂದು ದೇವಸ್ಥಾನದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘2022ರ ಜುಲೈ 22ರಿಂದ 2023ರ ಜೂನ್ 30ರವರೆಗಿನ ಅವಧಿಯಲ್ಲಿ ಇದು ನಡೆದಿದೆ. ಹೀಗೆ ತಿರಸ್ಕರಿಸಲಾದ ಪ್ರತಿ ಟ್ರಕ್‌ನಲ್ಲಿ 18 ಟನ್‌ ತುಪ್ಪ ಇರುತ್ತಿತ್ತು. ಇವುಗಳ ಮಾದರಿಯನ್ನು ಆರೋಗ್ಯ, ವಿಚಕ್ಷಣ ದಳ, ಎಂಜಿನಿಯರಿಂಗ್ ಹಾಗೂ ಇನ್ನಿತರ ವಿಭಾಗಗಳನ್ನು ಒಳಗೊಂಡಿರುವ ಗುಣಮಟ್ಟ ಪರೀಕ್ಷಾ ತಂಡ ಹಾಗೂ ಶುದ್ಧತೆ ಪರೀಕ್ಷಿಸುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಶಿಸ್ತು ಸಮಿತಿ ಮತ್ತು ರಸಾಯನವಿಜ್ಞಾನ ವಿಭಾಗದ ಹಿರಿಯ ತಜ್ಞರು ಇವುಗಳನ್ನು ಪರೀಕ್ಷಿಸಿದ್ದಾರೆ’  ಎಂದು ಟಿಟಿಡಿ ಖರೀದಿ ವಿಭಾಗದ ಮುಖ್ಯ ವ್ಯವಸ್ಥಾಪಕ ಪಿ.ಮುರಳಿಕೃಷ್ಣ ತಿಳಿಸಿದ್ದಾರೆ.

‘ತುಪ್ಪ ತಯಾರಿಗೂ ಪೂರ್ವದಲ್ಲಿ ಬೆಣ್ಣೆಯನ್ನು 60ರಿಂದ 70 ಡಿಗ್ರಿ ಸೆಲ್ಶಿಯಸ್‌ನಲ್ಲಿ ಶೇಖರಿಸಿಡದ ಕಾರಣ ತುಪ್ಪವನ್ನು ತಿರಸ್ಕರಿಸಲಾಗಿದೆ. ಇದಕ್ಕೆ ತೂಕ ಹಾಗೂ ಬುಟೈರೊ ರಿಫ್ರಾಕ್ಟೋಮೀಟರ್‌ನಲ್ಲಿ 40 ಡಿಗ್ರಿ ಸೆಲ್ಶಿಯಸ್‌ನಲ್ಲಿ ದಾಖಲಾದ ಅಂಕಿ ಅಂಶಗಳನ್ನು ಆಧರವಾಗಿಟ್ಟುಕೊಳ್ಳಲಾಗಿದೆ. ಬೋಡ್ವೀನ್, ವನಸ್ಪತಿ ತೈಲ, ಹೊರಗಿನ ಬಣ್ಣ, ಕರಗುವಿಕೆ ಹಂತ ಮತ್ತು ರ‍್ಯಾನ್ಸಿಡಿಟಿ ಪರೀಕ್ಷೆಯನ್ನೂ ನಡೆಸಲಾಗಿದೆ’ ಎಂದು ಹೇಳಿದ್ದಾರೆ.

‘ಗೋದಾಮು ಹಾಗೂ ಟ್ರಕ್‌ನಲ್ಲಿರುವ ತುಪ್ಪದ ಮಾದರಿಯನ್ನು ಟಿಟಿಡಿಯ ನೀರು ಮತ್ತು ಆಹಾರ ವಿಶ್ಲೇಷಣಾ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಟೆಂಡರ್ ಪಡೆಯುವ ಮೊದಲೇ ಡೇರಿ ಪರಿಣಿತರು ಈ ಮಾದರಿಯನ್ನು ರಾಷ್ಟ್ರಮಟ್ಟದ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಿಯೂ ವರದಿ ತರಿಸಿಕೊಳ್ಳುತ್ತಾರೆ’ ಎಂದು ಕೃಷ್ಣ ವಿವರಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡುಗೆ ನಂದಿನಿ ತುಪ್ಪ: KMF ಅಧ್ಯಕ್ಷರ ಹೇಳಿಕೆ ಸರಿಯಲ್ಲ ಎಂದ ಟಿಟಿಡಿ

‘ಖರೀದಿಸುವ ತುಪ್ಪವನ್ನು ವಿಶ್ವ ಪ್ರಸಿದ್ಧ ತಿರುಪತಿ ಲಾಡು ತಯಾರಿಕೆಯಲ್ಲಿ ಬಳಸುವುದರ ಜತೆಗೆ, ಅನ್ನಪ್ರಸಾದಂ, ಅನ್ನದಾನಂನಲ್ಲೂ ಬಳಸಲಾಗುತ್ತದೆ. ಜತೆಗೆ ಟಿಟಿಡಿ ಆಡಳಿತಕ್ಕೆ ಒಳಪಟ್ಟಿರುವ ಸ್ಥಳೀಯ ದೇವಾಲಯಗಳು, ಶಿಕ್ಷಣ ಸಂಸ್ಥೆಗಳಲ್ಲೂ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ತುಪ್ಪ ಇರುವ ಟ್ರಕ್‌ ನೇರವಾಗಿ ತಿರುಪತಿ ಹಾಗೂ ತಿರವಾಂಕೂರ್‌ ದೇವಾಲಯಗಳಿಗೆ ತಲಪುತ್ತದೆ. ಅಲ್ಲಿಂದ 15 ಕೆ.ಜಿ. ಟಿನ್‌ಗಳಂತೆ ದೇವಾಲಯಗಳಿಗೆ ಪೂರೈಕೆಯಾಗುತ್ತದೆ. ಇದೇ ತುಪ್ಪವನ್ನು ದೀಪಾರಾಧನ ಪೂಜೆಯಲ್ಲಿ ದೇವರ ಮುಂದೆ ದೀಪ ಹಚ್ಚಲೂ ಬಳಸಲಾಗುತ್ತದೆ’ ಎಂದಿದ್ದಾರೆ.

‘ತಿರುಪತಿ ತಿರುಮಲ ದೇವಸ್ಥಾನವು ಕಡಿಮೆ ಗುಣಮಟ್ಟದ ತುಪ್ಪವನ್ನು ಖರೀದಿಸುತ್ತದೆ’ ಎಂಬ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಅವರ ಹೇಳಿಕೆಯನ್ನು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅಲ್ಲಗಳೆದಿದ್ದಾರೆ.

‘ಟಿಟಿಡಿ ಖರೀದಿಸುವ ಹಸುವಿನ ತುಪ್ಪುವನ್ನು ಎರಡು ಹಂತಗಳ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಠಿಣವಾದ ಇ–ಟೆಂಡರ್‌ ಪ್ರಕ್ರಿಯೆಯಲ್ಲಿ ಕಡಿಮೆ ದರ ನಮೂದಿಸಿದವರಲ್ಲಿ ಮೊದಲಿಗರಿಗೆ (ಎಲ್‌1 ಬಿಡ್ಡರ್‌) ಮಾತ್ರ ನೀಡಲಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಕೆಎಂಎಫ್‌ ಕೇವಲ ಒಂದು ಬಾರಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿದೆ. ಉಳಿದ ಯಾವ ಸಂದರ್ಭದಲ್ಲೂ ಎಲ್‌1 ಬಿಡ್ಡರ್‌ ಆಗಿಯೂ ಅರ್ಹತೆ ಪಡೆದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT