ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ರಾಮಮಂದಿರ ಸಹಿಸದ ವಿಘ್ನ ಸಂತೋಷಿ ಕಾಂಗ್ರೆಸ್: ಆರ್‌. ಅಶೋಕ

‘ಕರಸೇವಕ’ನ ಬಂಧನವು ರಾಜಕೀಯ ದ್ವೇಷ ಸಾಧನೆಯ ಕ್ರಮವೇ?
ಆರ್‌. ಅಶೋಕ
Published 6 ಜನವರಿ 2024, 0:08 IST
Last Updated 6 ಜನವರಿ 2024, 0:08 IST
ಅಕ್ಷರ ಗಾತ್ರ

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ, ಅಚಾನಕ್ಕಾಗಿ ಕರ್ನಾಟಕ ಅಚ್ಚರಿಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಮೂರು ದಶಕಗಳ ಹಳೆಯ ಪ್ರಕರಣಗಳಿಗೆ ಮರುಜೀವ ಸಿಗುತ್ತಿರುವುದು, 1992ರ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಕರಸೇವಕರ ಬಂಧನ, ಚಿಕ್ಕಮಗಳೂರಿನ ದತ್ತಪೀಠ ಪ್ರಕರಣದ ಮರುತನಿಖೆಯ ಗುಮಾನಿ, ರಾಜ್ಯದಲ್ಲಿ ಗೋಧ್ರಾ ರೀತಿ ಕೋಮುಗಲಭೆ ಸಂಭವಿಸಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರ ಹೇಳಿಕೆ, ಇವೆಲ್ಲವನ್ನೂ ಗಮನಿಸಿದರೆ ಇದರ ಹಿಂದೆ ಆಡಳಿತ ಪಕ್ಷ ಹಾಗೂ ರಾಜ್ಯ ಸರ್ಕಾರದ ಪೂರ್ವನಿಯೋಜಿತ ಷಡ್ಯಂತ್ರ ಇರುವುದು ಸ್ಪಷ್ಟವಾಗುತ್ತದೆ. ಇದಕ್ಕೆಲ್ಲಾ ಪುಷ್ಟಿ ನೀಡುವಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂದರ್ಭದಲ್ಲಿ ಹಳೆಯ ಕೇಸುಗಳನ್ನು ಕೆದಕುವ ಅಗತ್ಯ ಇತ್ತೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಈ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯ ಕಂಡಿದೆ. ಈಗ ಅದು ವಿವಾದವಲ್ಲ. ಕೋಟ್ಯಂತರ ಶ್ರದ್ಧಾಳು ಹಿಂದೂಗಳು ಸಂಭ್ರಮ ಪಡುತ್ತಿರುವ ಸಂತೋಷದ ವಿಷಯ. ರಾಮಮಂದಿರದ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕೆ ಮಾಡಿದರೆ ಮಾಡಲಿ. ಏಕೆಂದರೆ ಬಿಜೆಪಿ ಬಹಳ ಹಿಂದಿನಿಂದಲೇ ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದೆ. ಚುನಾವಣೆ ಬರಲಿ, ಬರದೇ ಇರಲಿ, ಎಲ್ಲ ಸಂದರ್ಭದಲ್ಲೂ ಮಂದಿರ ನಿರ್ಮಾಣದ ಪ್ರಯತ್ನಕ್ಕೆ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಆದರೆ ಕಾಂಗ್ರೆಸ್‌ ಮಂದಿರ ನಿರ್ಮಾಣದಲ್ಲಿ ಕೈ ಜೋಡಿಸುವುದಿಲ್ಲ, ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ, ಕಾರ್ಯಕ್ರಮಕ್ಕೆ ಹೋಗುವವರಿಗೂ ಬಿಡುವುದಿಲ್ಲ ಎಂಬ ಧೋರಣೆ ತಳೆದಿರುವುದು ಈ ನೆಲದ ಪರಂಪರೆ, ಸಂಸ್ಕೃತಿಗೆ ಮಾಡುವ ಘೋರ ಅಪಮಾನ. ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುವ ಕಾಂಗ್ರೆಸ್‌ ವಾಸ್ತವದಲ್ಲಿ ಕೋಮುವಾದಿ ಮನಃಸ್ಥಿತಿ ಹೊಂದಿದೆ. ಮಂದಿರ ಉದ್ಘಾಟನೆಯ ಶ್ರೇಯಸ್ಸು ಬಿಜೆಪಿಗೆ ದೊರೆತಿದೆ ಎಂದು ಕರುಬುವ ಇವರು, ತಾವೇ ಮುಂದೆ ಬಂದು ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿ ಕೀರ್ತಿ ಪತಾಕೆ ಹಾರಿಸಿಕೊಳ್ಳಬಹುದಿತ್ತು.

ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್‌ ಪೂಜಾರಿಯ ವಿರುದ್ಧ 16 ಪ್ರಕರಣಗಳಿವೆ ಎಂದು ಪೊಲೀಸರು ಹಾಗೂ ಸಚಿವರು ಹೇಳಿದರೂ ವಾಸ್ತವವಾಗಿ 15 ಪ್ರಕರಣಗಳಿಗೆ ತಾರ್ಕಿಕ ಅಂತ್ಯ ದೊರಕಿದ್ದು ಒಂದು ಪ್ರಕರಣ ಮಾತ್ರ ಚಾಲ್ತಿಯಲ್ಲಿದೆ. ಅದು ಕೂಡ 31 ವರ್ಷಗಳ ಹಿಂದೆ, 1992ರಲ್ಲಿ ಅವರು ತಲೆಮರಿಸಿಕೊಂಡಿದ್ದರು ಎನ್ನುವ ಪ್ರಕರಣ. ಆದರೆ 2004, 2009, 2018ರಲ್ಲಿ ಶ್ರೀಕಾಂತ್‌ರನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿದ್ದರೆ ಇವೆಲ್ಲ ಹೇಗೆ ಸಾಧ್ಯವಾಯಿತು ಎಂದು ಪೊಲೀಸರೇ ಹೇಳಬೇಕು. ಆಟೊರಿಕ್ಷಾ ಚಲಾಯಿಸಿಕೊಂಡು ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಶ್ರೀಕಾಂತ್‌ ತಲೆಮರೆಸಿಕೊಳ್ಳದೆ ಹುಬ್ಬಳ್ಳಿಯಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದರು ಎನ್ನುವುದು ಪೊಲೀಸರಿಗೂ ಗೊತ್ತಿರುವ ಸಂಗತಿ.

ಹಳೆಯ ಪ್ರಕರಣಗಳನ್ನು ಕೆದಕಲು ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ರಾಜ್ಯದಲ್ಲಿ ಬಾಕಿ ಇರುವ ಸುಮಾರು 50 ಸಾವಿರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಕ್ರಮ ವಹಿಸಲಿ. ಬೆಂಗಳೂರಿನಲ್ಲಿ 10 ಸಾವಿರದಷ್ಟು ಪ್ರಕರಣಗಳಿದ್ದು, ಅವುಗಳ ವಿಚಾರಣೆಯನ್ನೂ ನಡೆಸಿ ಕಾನೂನು ವ್ಯವಸ್ಥೆಯ ಮೇಲಿನ ಭಾರ ಇಳಿಸಿಕೊಳ್ಳಲಿ. ರಾಮಭಕ್ತರನ್ನು ಬೆದರಿಸುವ ಕುಕೃತ್ಯಕ್ಕೆ ಹಳೆಯ ಪ್ರಕರಣಗಳನ್ನು ಶೀಘ್ರ ಮುಗಿಸುವ ಮಹಾ ಸುಧಾರಣಾ ಪರ್ವದ ಹೆಸರು ಕೊಡುವುದು ಬೇಡ. ಒಂದು ವೇಳೆ ಶ್ರೀಕಾಂತ್‌ ಮೇಲಿನ ಪ್ರಕರಣಕ್ಕೆ ಅಂತ್ಯ ಕಾಣಿಸಬೇಕೆಂಬ ಉದ್ದೇಶವಿದ್ದರೆ ಮೊದಲು ನೋಟಿಸ್‌ ನೀಡಬೇಕಿತ್ತು, ಎಫ್‌ಐಆರ್‌ ಪ್ರತಿ ನೀಡಬೇಕಿತ್ತು. ಇವ್ಯಾವುದನ್ನೂ ಮಾಡದೆ ನ್ಯಾಯಾಲಯಕ್ಕೆ ರಜೆ ಇರುವಾಗ ಏಕಾಏಕಿ ಎಳೆದುಕೊಂಡು ಜೈಲಿಗೆ ಹಾಕಿರುವುದನ್ನು ನೋಡಿದರೆ ಇದು ಸಂಪೂರ್ಣ ರಾಜಕೀಯಪ್ರೇರಿತ ಎಂದು ತಿಳಿಯದಷ್ಟು ದಡ್ಡರು ಯಾರೂ ಇಲ್ಲ.

ಪಿಎಫ್‌ಐ, ಎಸ್‌ಡಿಪಿಐ ಮೊದಲಾದ ದೇಶದ್ರೋಹಿ ಸಂಘಟನೆಗಳ ಬಗ್ಗೆ ಮೃದು ಧೋರಣೆ ಹೊಂದಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಈ ಸಂಘಟನೆಗಳ ದುಷ್ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿತ್ತು. 2009ರ ಜುಲೈನಲ್ಲಿ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಗಲಭೆ ನಡೆಸಿದ್ದಕ್ಕೆ ಬಿಜೆಪಿ ಸರ್ಕಾರ ಪಿಎಫ್‌ಐ ಹಾಗೂ ಕೆಎಫ್‌ಡಿಯ 1,600 ಕಾರ್ಯಕರ್ತರ ವಿರುದ್ಧ 175 ಪ್ರಕರಣಗಳನ್ನು ದಾಖಲಿಸಿತ್ತು. ಅದರ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಕಾನೂನು ಇಲಾಖೆ ಕಾರ್ಯದರ್ಶಿ ನೀಡಿದ್ದ ಸಲಹೆಯನ್ನು ಬದಿಗಿಟ್ಟ ಕಾಂಗ್ರೆಸ್‌ ಸರ್ಕಾರ, 2015ರ ಜೂನ್‌ 1ರಂದು ಪ್ರಕರಣಗಳನ್ನು ಹಿಂಪಡೆಯಲು ಆದೇಶಿಸಿತ್ತು.

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ಶಾಸಕ ತನ್ವೀರ್‌ ಸೇಠ್‌ ಪತ್ರ ಬರೆದಾಗ ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೆಲವರ ವಿರುದ್ಧ ಸುಳ್ಳು ದೋಷಾರೋಪ ಮಾಡಿದ್ದು, ಈ ವಿಚಾರವನ್ನು ಪರಿಶೀಲಿಸುವಂತೆ ಸಂಪುಟ ಉಪ ಸಮಿತಿಗೆ ತಿಳಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ‘ಮುಸಲ್ಮಾನರಿಗೆ ವಿನಾಯಿತಿ, ಹಿಂದೂಗಳಿಗೆ ಜೈಲೇ ಗತಿ’ ಎನ್ನುವ ಈ ಮನಃಸ್ಥಿತಿಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ.

ರಾಮಮಂದಿರ ಉದ್ಘಾಟನೆಗೆ ಕೆಲವು ದಿನಗಳು ಇರುವಾಗ ಸಮಯ ನೋಡಿಕೊಂಡು ಪೂರ್ವಯೋಜಿತವಾಗಿ ಕಾಂಗ್ರೆಸ್‌ ಈ ಕೆಲಸ ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೂಲಕ ಕರಸೇವಕರು ಹಾಗೂ ರಾಮಭಕ್ತರು ಮಂದಿರ ಉದ್ಘಾಟನೆಗೆ ಹೋಗಬಾರದು, ಹಿಂದೂ ಧರ್ಮ ರಕ್ಷಣೆ ಸಂಬಂಧಿತ ಹೋರಾಟಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಸಂದೇಶ ರವಾನಿಸುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ಇದರ ಜೊತೆಗೆ ಬಾಬರಿ ಮಸೀದಿ ನೆಲಸಮವಾಗಿದ್ದಕ್ಕೆ ಬೇಸರಗೊಂಡಿರುವವರ ಮನಸ್ಸುಗಳನ್ನೂ ತೃಪ್ತಿ ಪಡಿಸುವ ಉದ್ದೇಶ ಇದ್ದಂತಿದೆ. ಮಂದಿರ ನಿರ್ಮಾಣವಂತೂ ತಡೆಯಲು ಸಾಧ್ಯವಾಗಿಲ್ಲ, ಕನಿಷ್ಠಪಕ್ಷ ಕರಸೇವಕರಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ತಮ್ಮ ಮತ ಬ್ಯಾಂಕ್‌ಗಳಿಗೆ ಸಂತೈಸಲು ಹೊರಟಿದೆ.

ಯಾರೇನೇ ಮಾಡಿದರೂ ರಾಮಮಂದಿರ ಉದ್ಘಾಟನೆಯಾಗು ವುದನ್ನಾಗಲೀ, ಭಕ್ತರು ಶ್ರೀರಾಮನನ್ನು ಬರಮಾಡಿಕೊಳ್ಳುವುದನ್ನಾಗಲೀ ತಪ್ಪಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಲಾದರೂ ಎಚ್ಚೆತ್ತುಕೊಂಡು ಕರಸೇವಕರ ಮೇಲಿನ ಅನಗತ್ಯ ಕಾನೂನು ಕ್ರಮವನ್ನು ವಾಪಸ್‌ ಪಡೆಯಲಿ. ಇಲ್ಲವಾದರೆ ಬಿಜೆಪಿಯಿಂದ ಹಾಗೂ ಅಸಂಖ್ಯಾತ ರಾಮಭಕ್ತರಿಂದ ಇನ್ನಷ್ಟು ಪ್ರತಿರೋಧ ಎದುರಿಸಲು ಸಿದ್ಧವಾಗಲಿ.

****

ಹಳೆಯ ಪ್ರಕರಣಗಳನ್ನು ಕೆದಕಲು ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಇದ್ದರೆ ರಾಜ್ಯದಲ್ಲಿ ಬಾಕಿ ಇರುವ ಸುಮಾರು 50 ಸಾವಿರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಕ್ರಮ ವಹಿಸಲಿ. ಬೆಂಗಳೂರಿನಲ್ಲಿ 10 ಸಾವಿರದಷ್ಟು ಪ್ರಕರಣಗಳಿದ್ದು, ಅವುಗಳ ವಿಚಾರಣೆಯನ್ನೂ ನಡೆಸಿ ಕಾನೂನು ವ್ಯವಸ್ಥೆಯ ಮೇಲಿನ ಭಾರ ಇಳಿಸಿಕೊಳ್ಳಲಿ. ರಾಮಭಕ್ತರನ್ನು ಬೆದರಿಸುವ ಕುಕೃತ್ಯಕ್ಕೆ ಹಳೆಯ ಪ್ರಕರಣಗಳನ್ನು ಶೀಘ್ರ ಮುಗಿಸುವ ಮಹಾ ಸುಧಾರಣಾ ಪರ್ವದ ಹೆಸರು ಕೊಡುವುದು ಬೇಡ

****

ಲೇಖಕ: ವಿಧಾನಸಭೆಯ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT