ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ

ನವೀನ ಕುಮಾರ್‌ ಹೊಸದುರ್ಗ
Published 21 ಏಪ್ರಿಲ್ 2024, 19:30 IST
Last Updated 21 ಏಪ್ರಿಲ್ 2024, 19:30 IST
ಅಕ್ಷರ ಗಾತ್ರ

ವಿಸ್ತೀರ್ಣದಲ್ಲಿ ಸುಮಾರು ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದಷ್ಟು ಮಾತ್ರ ದೊಡ್ಡದಿರುವ ಪುಟಾಣಿ ದ್ವೀಪ ದೇಶ ಜಪಾನ್; ಸಂಪನ್ಮೂಲಗಳ ಸದ್ಬಳಕೆ, ಪ್ರಜೆಗಳ ಪ್ರಾಮಾಣಿಕ ದೇಶ ಪ್ರೇಮ, ಕಾಯಕ ಪ್ರಜ್ಞೆ ಮೂಲಕ ವಿಶೇಷ ಪ್ರಗತಿ ಸಾಧಿಸಿ, ಅಭಿವೃದ್ಧಿಯ ವಿಚಾರದಲ್ಲಿ ಹಲವು ದೇಶಗಳಿಗಿಂತ ಬಹಳ ಮುಂದಿದೆ. ಇದಕ್ಕೆ ಮುಖ್ಯ ಕಾರಣ, ಅಲ್ಲಿನ ನಾಗರಿಕರಿಗೆ ತಮ್ಮ ದೇಶದ ಕುರಿತಾಗಿ ಇರುವ ನಿಸ್ವಾರ್ಥ ಕಾಳಜಿ ಹಾಗೂ ಕಳಕಳಿ. 1945ರಲ್ಲಿ ನಡೆದ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಡೆದ ಅತ್ಯಂತ ಭೀಕರ ಬಾಂಬ್ ದಾಳಿಯಿಂದ ಸಂಪೂರ್ಣ ನಾಶವಾಗಿದ್ದ ಹಿರೋಶಿಮಾ, ನಾಗಸಾಕಿ ನಗರಗಳನ್ನು ಕೆಲವೇ ವರ್ಷಗಳಲ್ಲಿ ಮರು ನಿರ್ಮಾಣ ಮಾಡಿ, ಮಾದರಿಯಾದವರು ಜಪಾನೀಯರು. ಈ ಜಪಾನೀಯರಿಗೆ ತಮ್ಮ ದೇಶದ ಬಗೆಗಿರುವ ವಿಶಿಷ್ಟ ಕಾಳಜಿಯ ಕುರಿತು ಹಲವಾರು ಕಥೆಗಳಿವೆ.

ಒಮ್ಮೆ ಜಪಾನ್ ದೇಶದ ಚಪ್ಪಲಿ ಕಾರ್ಖಾನೆಯೊಂದರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರವೊಂದನ್ನು ನಡೆಸಲು ಆಲೋಚಿಸಿದರು. ಸಾಮಾನ್ಯವಾಗಿ ನಮ್ಮಲ್ಲಿ ಮುಷ್ಕರವೆಂದರೆ ಕಾರ್ಖಾನೆಯ ಲಾಕ್ ಡೌನ್, ಎಲ್ಲವನ್ನೂ ಬಲಾತ್ಕಾರವಾಗಿ ಬಂದ್ ಮಾಡಿಸುವುದು, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶ, ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡುವುದು, ದುಷ್ಕರ್ಮಿಗಳಿಂದ ದೊಂಬಿ ಕಲ್ಲು ತೂರಾಟ ಇತ್ಯಾದಿಗಳು ಸರ್ವೇ ಸಾಮಾನ್ಯ. ಆದರೆ ತಾವು ಮಾಡುವ ಕಾಯಕ, ದೇಶದ ಪ್ರಗತಿಗೆ ಅತ್ಯಂತ ಅವಶ್ಯಕ ಹಾಗೂ ತಮ್ಮ ಮುಷ್ಕರದಿಂದ ದೇಶದ ಪ್ರಗತಿ ಕುಂಠಿತವಾಗಬಾರದೆಂದು ಎಂದು ದೃಢವಾಗಿ ನಂಬಿದ್ದ ಜಪಾನಿನ ಈ ಚಪ್ಪಲಿ ಕಾರ್ಖಾನೆಯ ಕಾರ್ಮಿಕರು ಮುಷ್ಕರವನ್ನು ಹೇಗೆ ಮಾಡಿದರು ಗೊತ್ತೇ?

ತಮ್ಮ ಕೆಲಸಕ್ಕೆ ಎಂದೂ ರಜೆ ಹಾಕದೇ, ಕಾರ್ಖಾನೆಯ ಉತ್ಪಾದನೆಗೆ ಕೊಂಚವೂ ತಡೆಯಾಗದಂತೆ ತಮ್ಮ ಬೇಡಿಕೆಗಳನ್ನು ಇವರು ಈಡೇರಿಸಿಕೊಂಡ ವಿಧಾನ ಅತ್ಯಂತ ವಿಶಿಷ್ಟವಾಗಿದೆ. ಮುಷ್ಕರ ನಿರತ ಈ ಕಾರ್ಖಾನೆಯ ಕಾರ್ಮಿಕರು, ಬರೀ ಎಡಗಾಲಿನ ಚಪ್ಪಲಿಯನ್ನು ಮಾತ್ರ ಉತ್ಪಾದನೆ ಮಾಡತೊಡಗಿದರು. ತಮ್ಮ ಬೇಡಿಕೆ ಈಡೇರುವ ತನಕ ಬಲಗಾಲಿನ ಚಪ್ಪಲಿಗಳನ್ನು ಉತ್ಪಾದಿಸುವುದಿಲ್ಲ ಎಂಬುದು ಅವರ ದೃಢ ನಿಲುವಾಗಿತ್ತು. ಕೇವಲ ಎಡಗಾಲಿನ ಚಪ್ಪಲಿಯನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಅಸಾಧ್ಯವೆಂದರಿತ ಕಾರ್ಖಾನೆಯ ಮಾಲೀಕರಿಗೆ, ಕಾರ್ಮಿಕರ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸದೆ ಬೇರೆ ದಾರಿಯಿರಲಿಲ್ಲ.

ಹೀಗೆ ಒಂದು ನಿಮಿಷದ ಕೆಲಸವನ್ನೂ ವ್ಯರ್ಥ ಮಾಡದೇ ಸಾರ್ವಜನಿಕ ಆಸ್ತಿಗಳಿಗೆ ಯಾವುದೇ ಹಾನಿಯುಂಟು ಮಾಡದೇ, ತಮ್ಮ ಕಾಯಕದ ಮೂಲಕವೇ ಪ್ರತಿಭಟನೆ ಮಾಡಿ ಬೇಡಿಕೆಗಳನ್ನು ಈಡೇರಿಸಿಕೊಂಡ ಜಪಾನೀಯರ ಈ ವಿಧಾನ ಮಾದರಿಯಲ್ಲವೇ? ದೇಶದ ಕುರಿತಾದ ನಿಜವಾದ ಕಳಕಳಿಗೆ ಇದು ಬಹಳ ದೊಡ್ಡ ಉದಾಹರಣೆ. ತಮ್ಮ ಕಾಯಕ ಯಾವುದೇ ಇರಲಿ, ಅದನ್ನು ಅತ್ಯಂತ ನಿಷ್ಠೆಯಿಂದ ಮಾಡಬೇಕೆಂದು ಪ್ರತಿಯೊಬ್ಬ ಪ್ರಜೆಯೂ ಆಲೋಚಿಸಿದಾಗ ಮಾತ್ರ, ಯಾವುದೇ ದೇಶ ಜಪಾನ್ ಮಾದರಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT