ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: CSK vs LSG- ಲಖನೌ ಸೂಪರ್ ಜೈಂಟ್ಸ್‌ಗೆ ಸುಲಭ ಜಯ-ಮಿಂಚಿದ ರಾಹುಲ್

ಚೆನ್ನೈ ಪರ ಜಡೇಜ ಅರ್ಧ ಶತಕ
Published 19 ಏಪ್ರಿಲ್ 2024, 18:35 IST
Last Updated 19 ಏಪ್ರಿಲ್ 2024, 18:35 IST
ಅಕ್ಷರ ಗಾತ್ರ

ಲಖನೌ: ನಾಯಕ ಕೆ.ಎಲ್‌.ರಾಹುಲ್ (82, 53ಎ, 4x9, 6x3) ಮತ್ತು ಕ್ವಿಂಟನ್‌ ಡಿಕಾಕ್‌ (54, 43ಎ) ಅವರ ಅರ್ಧ ಶತಕಗಳ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡ, ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ನಿರೀಕ್ಷೆಗಿಂತ ಸುಲಭವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ177 ರನ್‌ಗಳ ಗುರಿಯನ್ನು ಬೆಂಬತ್ತಿದ ಲಖನೌಗೆ ರಾಹುಲ್ ಮತ್ತು ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿಕಾಕ್‌ 15 ಓವರುಗಳಲ್ಲಿ ಮೊದಲ ವಿಕೆಟ್‌ಗೆ 134 ರನ್‌ ಸೇರಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ರಾಹುಲ್ ಮತ್ತು ಡಿಕಾಕ್‌ ಹಾಕಿಕೊಟ್ಟ ಅಡಿಪಾಯದ ಮೇಲೆ ಪೂರನ್ ಮತ್ತು ಸ್ಟೊಯಿನಿಸ್‌ ಅವರು ಗೆಲುವಿನ ಔಪಚಾರವನ್ನು ಪೂರೈಸಿದರು. ತಂಡವು 19 ಓವರುಗಳಲ್ಲಿ 2 ವಿಕೆಟ್‌ಗೆ 180 ರನ್ ಗಳಿಸಿತು. 

ಇದಕ್ಕೆ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್ ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿತ್ತು.

ರಾಹುಲ್ ಮತ್ತು ಡಿಕಾಕ್‌ ಅವರು ಆರಂಭದಿಂದಲೇ ವೇಗವಾಗಿ ರನ್ ಗಳಿಸುತ್ತ ಹೋದರು. ಪವರ್‌ ಪ್ಲೇ ಅವಧಿಯಲ್ಲಿ 54 ರನ್‌ಗಳು ಬಂದವು. ಈ ಇಬ್ಬರೂ ಚೈನ್ನೈ ತಂಡದ  ಬೌಲರ್‌ಗಳನ್ನು ದಂಡಿಸಿದರು. ರಾಹುಲ್ ಶತಕ ವಂಚಿತರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. 

ಇದಕ್ಕೆ ಮೊದಲು, ಚೆನ್ನೈ ತಂಡವು ಆಲ್‌ರೌಂಡರ್ ರವೀಂದ್ರ ಜಡೇಜ (ಔಟಾಗದೆ 57, 40ಎಸೆತ) ಅವರ ತಾಳ್ಮೆಯ ಅರ್ಧಶತಕ ಮತ್ತು ಕೊನೆಯ ಹಂತದಲ್ಲಿ ಮಹೇಂದ್ರಸಿಂಗ್ ಧೋನಿ (ಔಟಾಗದೇ 28, 9ಎ) ಬೀಸಾಟದಿಂದಾಗಿ ಹೋರಾಟದ ಮೊತ್ತ ದಾಖಲಿಸಿತು. 

ಅಜಿಂಕ್ಯ ರಹಾನೆ (36; 24ಎ, 4X5, 6X1) ಹಾಗೂ ಮೋಯಿನ್ ಅಲಿ (30; 20ಎ, 6X3) ಅವರೂ ಕಾಣಿಕೆ ನೀಡಿದರು. 

ಪವರ್‌ಪ್ಲೇ ಅವಧಿಯಲ್ಲಿಯೇ ಚೆನ್ನೈ ತಂಡವು ಎರಡು ವಿಕೆಟ್ ಕಳೆದುಕೊಂಡಿತು. ನಂತರವೂ ಪ್ರಮುಖ ಬ್ಯಾಟರ್‌ಗಳೂ ದೀರ್ಘ ಇನಿಂಗ್ಸ್ ಆಡಲಿಲ್ಲ. ಲಖನೌ ತಂಡದ ಬೌಲರ್‌ಗಳಾದ ಮೊಹ್ಸಿನ್ ಖಾನ್, ಕೃಣಾಲ್ ಪಾಂಡ್ಯ ಹಾಗೂ ಯಶ್ ಠಾಕೂರ್ ಆರಂಭಿಕ ಪೆಟ್ಟುಕೊಟ್ಟರು. ರಚಿನ್ ರವೀಂದ್ರ  ಅವರಿಗೆ ಖಾತೆ ತೆರೆಯಲು ಮೊಹ್ಸಿನ್ ಬಿಡಲಿಲ್ಲ. ಅಜಿಂಕ್ಯ ಅವರೊಂದಿಗೆ ಸೇರಿಕೊಂಡ ನಾಯಕ ಋತುರಾಜ್ ಗಾಯಕವಾಡ (17; 13ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 29 ರನ್‌ ಸೇರಿಸಿದರು. ಆದರೆ ಐದನೇ ಓವರ್‌ನಲ್ಲಿ ಯಶ್‌ ಠಾಕೂರ್ ಎಸೆತದಲ್ಲಿ ಋತುರಾಜ್ ಔಟಾದರು. 

ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಶಿವಂ ದುಬೆ (3 ರನ್) ಲಯ ಕಾಣದೇ ಸ್ಟೊಯಿನಿಸ್ ಬೌಲಿಂಗ್‌ನಲ್ಲಿ ಔಟಾದರು. ಸಮೀರ್ ರಿಜ್ವಿ ಒಂದು ರನ್ ಗಳಿಸಿ ನಿರ್ಗಮಿಸಿದರು. ಇದೆಲ್ಲಕ್ಕೂ ಸಾಕ್ಷಿಯಾದವರು ಜಡೇಜ. ತಂಡವು 12.2 ಓವರ್‌ಗಳಲ್ಲಿ 90 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. 

ಜಡೇಜ ತಮ್ಮ ಎಂದಿನ ಆಕ್ರಮಣಶೈಲಿಗೆ ತುಸು ಕಡಿವಾಣ ಹಾಕಿದರು. ಮೊಯಿನ್ ಅವರೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಆರನೇ ವಿಕೆಟ್‌ಗೆ 51 ರನ್‌ ಸೇರಿಸಿದರು. 

17ನೇ ಓವರ್‌ನಲ್ಲಿ ಮೊಹಸೀನ್ ಎಸೆತವನ್ನು ಲಾಂಗ್‌ ಆನ್‌ಗೆ ಎತ್ತಿ ಸಿಕ್ಸರ್‌ ಬಾರಿಸಿದ ಜಡೇಜ ಅರ್ಧಶತಕದ ಗಡಿ ದಾಟಿದ ಸಂಭ್ರಮಿಸಿದರು. ನಂತರದ ಓವರ್‌ನಲ್ಲಿ ಸ್ಪಿನ್ನರ್ ರವಿ ಬಿಷ್ಣೋಯಿ ಎಸೆತದಲ್ಲಿ ಮೊಯಿನ್ ಔಟಾದರು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಮತ್ತು ಕೇಕೆ, ಶಿಳ್ಳೆಗಳ ಸದ್ದು ಪ್ರತಿಧ್ವನಿಸಿದವು. ಮಹೇಂದ್ರಸಿಂಗ್ ಧೋನಿ ಕ್ರೀಸ್‌ಗೆ ಬಂದಿದ್ದೇ ಇದಕ್ಕೆ ಕಾರಣ. ಅವರು ಜಡೇಜ ಜೊತೆ ಮುರಿಯದ ಏಳನೇ ವಿಕೆಟ್‌ ಜೊತೆಯಾಟದಲ್ಲಿ 35 (13ಎ) ರನ್‌ ಸೇರಿಸಿದರು. ಅದರಲ್ಲಿ ಜಡೇಜ ಪಾಲು ಏಳು ರನ್ ಮಾತ್ರ.

ಧೋನಿ ಆಟ

ಹಳದಿ ಬಣ್ಣದ ಜರ್ಸಿ ತೊಟ್ಟು ಅದೇ ಬಣ್ಣದ ಬಾವುಟ ಹಿಡಿದಿದ್ದ  ತಮ್ಮ ಅಭಿಮಾನಿಗಳನ್ನು ಮಹಿ ನಿರಾಶೆಗೊಳಿಸಲಿಲ್ಲ. 9 ಎಸೆತಗಳನ್ನು ಎದುರಿಸಿದ ಅವರು 28 ರನ್‌ ಗಳಿಸಿದರು.  ಅದರಲ್ಲಿ ಮೂರು ಬೌಂಡರಿಗಳಿದ್ದವು.  19ನೇ ಓವರ್‌ನಲ್ಲಿ ಮೊಹಸಿನ್ ಹಾಕಿದ ಶಾರ್ಟ್‌ ಲೆಂಗ್ತ್ ಎಸೆತವನ್ನು ತಮ್ಮ ಬಲಬದಿಗೆ ಎರಡೆಜ್ಜೆ ಸರಿದ ಧೋನಿ ವಿಕೆಟ್‌ಕೀಪರ್ ರಾಹುಲ್ ತಲೆ ಮೇಲಿಂದ ಸಿಕ್ಸರ್‌ಗೆತ್ತಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಯಶ್ ಠಾಕೂರ್ ಎಸೆತವನ್ನೂ ಲಾಂಗ್ ಆನ್ ಗೆರೆಯಾಚೆ ದಾಟಿಸಿದರು.  ಓವರ್‌ ಕೊನೆಯ ಎರಡೂ ಎಸೆತಗಳಲ್ಲಿ ಬೌಂಡರಿ ಗಳಿಸಿ ಇನಿಂಗ್ಸ್‌ಗೆ ತೆರೆಯೆಳೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT