ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗನತ್ತ ಘಟನೆ: ಸಂಘರ್ಷಕ್ಕೆ ವಿಷಾದ, ಸಹಬಾಳ್ವೆಯ ವಾಗ್ದಾನ

ತೊಳಸಿಕೆರೆಯಲ್ಲಿ ಪೊಲೀಸರು, ಕಂದಾಯ ಅಧಿಕಾರಿಗಳು, ಗ್ರಾಮಸ್ಥರ ಶಾಂತಿ
Published 30 ಏಪ್ರಿಲ್ 2024, 16:32 IST
Last Updated 30 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಲೋಕಸಭಾ ಚುನಾವಣೆಯ ಮತದಾನದ ದಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟ ವ್ಯಾಪ್ತಿಯ ತೊಳಸಿಕೆರೆ ಗ್ರಾಮದಲ್ಲಿ ಮಂಗಳವಾರ ಪೊಲೀಸರು, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರ ನಡುವೆ ಶಾಂತಿ ಸಭೆ ನಡೆಯಿತು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ ಟಿ.ಜೆ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್‌ಪಿ ಧರ್ಮೇಂದ್ರ ಅವರು ವಿವಿಧ ಗ್ರಾಮಗಳ ಮುಖಂಡರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಸಭೆಯಲ್ಲಿ ಗ್ರಾಮಗಳ ಮುಖಂಡರು ಮಾತನಾಡಿ, ‘ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಹಲವಾರು ಬಾರಿ ಪ್ರತಿಭಟನೆ ಮೂಲಕ ಮನವಿ ಮಾಡಲಾಗಿತ್ತು. ಬೇಡಿಕೆ ಈಡೇರಿಸದೆ ಇದ್ದುದರಿಂದ ಎಲ್ಲರೂ ಒಮ್ಮತವಾಗಿ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದರು.  ಈ ನಡುವೆ ಕೆಲವರು ಮತದಾನ ಮಾಡಿದ್ದು, ವಾಗ್ವಾದ ಉಂಟಾಗಿ ದುರ್ಘಟನೆ ನಡೆದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಹಿಂದೆ ಯಾವಾಗಲೂ ಇಂತಹ ಘಟನೆ ನಡೆದಿಲ್ಲ. ಕಾಡಂಚಿನ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದೆವು. ಇಂಡಿಗನತ್ತ ದುರ್ಘಟನೆಗೆ ಕಾರಣರಾದರಿಗೆ ಕಾನೂನು ರೀತಿ ಕ್ರಮವಾಗಲಿ. ಇನ್ನು ಮುಂದೆ ಇಂತಹ ಘಟನೆಗೆ ಆಸ್ಪದ ನೀಡುವುದಿಲ್ಲ. ಸಾಮರಸ್ಯ, ಶಾಂತಿ ನೆಮ್ಮದಿಯಿಂದ ಬದುಕಲು ಜಿಲ್ಲಾಡಳಿತ ಸೇರಿದಂತೆ  ಆಡಳಿತ ವರ್ಗ ಅವಕಾಶ ಮಾಡಿಕೊಡಬೇಕು. ಇದಕ್ಕೆ ನಾನಙ ಸಹಕಾರ ನೀಡುತ್ತೇವೆ. ಎಲ್ಲರಿಗೂ ಧೈರ್ಯ ತುಂಬುವ ಕೆಲೇವಾಗಬೇಕುಠ ಎಂದರು.

ಅಧಿಕಾರಿಗಳು ಮಾತನಾಡಿ, ‘ಇಂಡಿಗನತ್ತ ಘಟನೆಯಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವವರನ್ನು ವಶಕ್ಕೆ ಒಪ್ಪಿಸಿ. ಅಮಾಯಕರಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಸ್ಥಳೀಯ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಂತ ಹಂತವಾಗಿ ಬೇಡಿಕೆ ಈಡೇರಲಿದೆ’ ಎಂದು ಭರವಸೆ ನೀಡಿದರು.

ಸಭೆಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮುಖಂಡ ಕೆ.ವಿ.ಮಾದೇಶ್‌, ‘ಮಹದೇಶ್ವರಬೆಟ್ಟ ಕಾಡಂಚಿನ ಎಲ್ಲ ಸಮುದಾಯ ಜನರು ಕೂಡ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಇಂಡಿಗನತ್ತ ದುರ್ಘಟನೆಯು ಕೆಟ್ಟ ಗಳಿಗೆಯಲ್ಲಿ ನಡೆದಿದ್ದು, ಕಾನೂನು ಕ್ರಮವಾಗಲಿ. ಸಾಮರಸ್ಯದಿಂದ ಬದುಕು ಸಾಗಿಸಲು ಎಲ್ಲರೂ ಜೊತೆ ಇರುತ್ತೇವೆ ಇದಕ್ಕೆ ಜಿಲ್ಲಾಡಳಿತ, ಆಡಳಿತ ವರ್ಗ ಕೈಜೋಡಿಸಬೇಕು’ ಎಂದರು.

ಮಹದೇಶ್ವರಬೆಟ್ಟ ಇನ್‌ಸ್ಪೆಕ್ಟರ್ ಜಗದೀಶ್, ಆರ್.ಎಫ್.ಒ ಭಾರತಿ ನಂದಿಹಳ್ಳ, ಸಬ್ ಇನ್‌ಸ್ಪೆಕ್ಟರ್‌ ರಾಧಾ, ಬಸವರಾಜ್, ಆರ್.ಐ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ವಿನೋದ್, ಬೇಡಗಂಪಣ ಮುಖಂಡರಾದ ಪುಟ್ಟಣ್ಣ ಮಾಸ್ಟರ್, ಹಲಗ ತಂಬಡಿ, ಮಾದಯ್ಯ, ಕೆಂಪಣ್ಣ ಸೇರಿದಂತೆ ತೊಳಸಿಕೆರೆ, ಮಹದೇಶ್ವರಬೆಟ್ಟ, ಪಡಸನತ್ತ ಗ್ರಾಮಸ್ಥರು ಹಾಗೂ ಇನ್ನಿತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT