ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ತೀವ್ರ ಶಾಖದ ಅಲೆ; ರೆಡ್‌ ಅಲರ್ಟ್‌ ಘೋಷಣೆ

ಬಿಸಿಲಿನಿಂದ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಮನವಿ
Published 2 ಮೇ 2024, 13:44 IST
Last Updated 2 ಮೇ 2024, 13:44 IST
ಅಕ್ಷರ ಗಾತ್ರ

ಕೊಪ್ಪಳ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಲೇ ಇದ್ದು ಮೇ 5ರ ತನಕ ಜಿಲ್ಲೆಯಾದ್ಯಂತ ತೀವ್ರ ಶಾಖದ ಅಲೆ ಇರುತ್ತದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಈಗಾಗಲೇ ಬಿಸಿಲು ಸಾಕಷ್ಟು ಏರಿಕೆಯಾಗಿದ್ದು ಜನರಿಗೆ ದಿನದೂಡುವುದೇ ದುಸ್ತರವಾಗಿದೆ. ಡಾಂಬಾರು ಹಾಗೂ ಕಾಂಕ್ರಿಟ್‌ ರಸ್ತೆಗಳ ಮೇಲೆ ಸಂಚರಿಸುವಾಗ ವಾಹನಗಳ ಸವಾರರಿಗೆ ತಗುಲುತ್ತಿರುವ ಬಿಸಿಗಾಳಿಯ ಅಲೆ ತಡೆಯಲು ಸಾಧ್ಯವಾಗುತ್ತಿಲ್ಲ.

ಬೆಳಿಗ್ಗೆ ಏಳು ಗಂಟೆಯಿಂದಲೇ ತಾಪ ಏರಿಕೆಯಾಗುತ್ತಿದ್ದ ಚುನಾವಣಾ ಸಮಯವೂ ಆಗಿರುವುದರಿಂದ ಅನೇಕರು ನಿತ್ಯದ ಕೆಲಸಗಳಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಮನರೇಗಾದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಬೀದಿಬದಿಯ ವ್ಯಾಪಾರಿಗಳು ಬಿಸಿಲಿನ ಹೊಡೆತಕ್ಕೆ ನಲುಗಿ ಹೋಗಿದ್ದಾರೆ.  ಆದ್ದರಿಂದ ಬಿಸಿಲಿನ ಆಘಾತದಿಂದ ಸಂಭವಿಸಬಹುದಾದ ಅಪಾಯಗಳನ್ನು ತಡೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಐಎಂಡಿ ಪ್ರಕಾರ ಗುರುವಾರ 41 ಡಿಗ್ರಿ ಇತ್ತು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮೇ 1ರಿಂದ 2ರ ಬೆಳಿಗ್ಗೆ 8.30ರ ಅವಧಿಯಲ್ಲಿ ಜಿಲ್ಲೆಯಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದೆ.

‘ಜಿಲ್ಲೆಯಲ್ಲಿ ತೀವ್ರ ಶಾಖದ ಅಲೆ ಅಥವಾ ಅತಿಯಾದ ಉಷ್ಣಾಂಶದಿoದಾಗಿ ನಾನಾ ರೀತಿಯ ಅನಾರೋಗ್ಯ ಸಂಭವಿಸುವ ಸಾಧ್ಯತೆ ಇದ್ದು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಸಂರಕ್ಷಣಾ ಸಲಹೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.

‘ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ನೀರು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಒಳಾಂಗಣದಲ್ಲೇ ಇರಬೇಕು, ವಿಶೇಷವಾಗಿ ಮಕ್ಕಳು, ಹಿರಿಯರು, ಮಧುಮೇಹ ಹಾಗೂ ಬಿಪಿ ಇರುವವರು ಹೆಚ್ಚಿನ ಕಾಳಜಿ ವಹಿಸಬೇಕು. ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3ರ ತನಕ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT