ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಮತ ಲೆಕ್ಕಾಚಾರ; ಮುಖಂಡರೊಂದಿಗೆ ಮಾತುಕತೆ

ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವನ; ಸಂಜೆ ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ
Published 28 ಏಪ್ರಿಲ್ 2024, 6:47 IST
Last Updated 28 ಏಪ್ರಿಲ್ 2024, 6:47 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರ ಶನಿವಾರದ ದಿನಚರಿ, ಹಿಂದಿನ ದಿನಗಳಿಗಿಂತ ಭಿನ್ನವಾಗಿತ್ತು. ಚುನಾವಣಾ ಪ್ರಚಾರಕ್ಕಾಗಿ ನಿತ್ಯ ಬೆಳಿಗ್ಗೆ ಹೊರಟು ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರಚಾರ, ಸಭೆ–ಸಮಾರಂಭ, ಸಮಾವೇಶ, ರೋಡ್ ಷೋದಲ್ಲಿ ಪಾಲ್ಗೊಳ್ಳುವಿಕೆ, ಮುಖಂಡರ ಮನೆ ಭೇಟಿ ಮುಗಿಸಿಕೊಂಡು ಮಧ್ಯರಾತ್ರಿ ಮನೆಗೆ ವಾಪಸ್ಸಾಗುತ್ತಿದ್ದ ಅವರ ದಿನಚರಿ ಶನಿವಾರ ಬದಲಾಗಿತ್ತು.

ಬೆಳಗ್ಗೆ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದ ಮಂಜುನಾಥ್, ಕ್ಷೇತ್ರದ ಚುನಾವಣಾ ಸುದ್ದಿಗಳನ್ನು ಗಮನಿಸಿ ಮನೆಯವರ ಜೊತೆಗೆ ಚರ್ಚಿಸಿದರು. ಬಳಿಕ ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಮುಖಂಡರೊಂದಿಗೆ ಕ್ಷೇತ್ರದ ಮತದಾನದ ವಿವರ ಆಧರಿಸಿ ಸೋಲು–ಗೆಲುವಿನ ಲೆಕ್ಕಾಚಾರದ ಕುರಿತು ಮಾತುಕತೆ ನಡೆಸಿದರು.

ನಂತರ ಬೆಳಗ್ಗಿನ ಉಪಾಹಾರದ ಸೇವಿಸಿ ಕುಣಿಗಲ್ ತಾಲ್ಲೂಕಿನ ಕಿಚ್ಚಾವಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದೌರ್ಜನ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಬಿಜೆಪಿ ಕಾರ್ಯಕರ್ತ ಚಂದ್ರಯ್ಯ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮಧ್ಯಾಹ್ನ ಅಲ್ಲಿಂದ ಮಾಗಡಿ ಮಾರ್ಗವಾಗಿ ಬೆಂಗಳೂರು ಬಂದ ಮಂಜುನಾಥ್, ಮಾರ್ಗ ಮಧ್ಯೆ ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಮುಖಂಡರನ್ನು ಭೇಟಿ ಮಾಡಿದರು.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್

ಸಂಜೆಯ ಹೊತ್ತಿಗೆ ಮನೆ ಬಂದ ಅವರು, ಮೊಮ್ಮಕ್ಕಳೊಂದಿಗೆ ಕೆಲ ಹೊತ್ತು ಕಳೆದು ವಿಶ್ರಾಂತಿ ಪಡೆದರು. ರಾತ್ರಿ ಐಪಿಎಲ್‌ ಟಿ–20 ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯವನ್ನು ಪತ್ನ ಅನಸೂಯ ಹಾಗೂ ಮೊಮ್ಮಕ್ಕಳೊಂದಿಗೆ ವೀಕ್ಷಿಸಿದರು.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಮತದಾರರಿಗೆ ಸಲ್ಲಿಸಿರುವ ಕೃತಜ್ಞತೆ ಸಂದೇಶದ ಪೋಸ್ಟ್‌
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಮತದಾರರಿಗೆ ಸಲ್ಲಿಸಿರುವ ಕೃತಜ್ಞತೆ ಸಂದೇಶದ ಪೋಸ್ಟ್‌

ಮತದಾರರಿಗೆ ಅಭ್ಯರ್ಥಿಗಳಿಂದ ಕೃತಜ್ಞತೆ

ಮತದಾನ ಮುಗಿದ ಬೆನ್ನಲ್ಲೇ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಸುರೇಶ್ ಅವರು ‘ನನ್ನ ಕಾರ್ಯಕರ್ತರೇ ನನ್ನ ಬಲ! ನಿಮ್ಮ ಈ ಪ್ರೀತಿ ಕಠಿಣ ಪರಿಶ್ರಮಕ್ಕೆ ನನ್ನದೊಂದು ದೊಡ್ಡ ಸಲಾಂ. ಧನ್ಯವಾದಗಳು!’ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಮಸ್ತ ಜನತೆ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ನನ್ನ ಹೃದಯಂತರಾಳದ ಕೃತಜ್ಞತೆಗಳು. ಈ ಚುನಾವಣೆಯುದ್ದಕ್ಕೂ ನನಗೆ ಬೆಂಬಲವಾಗಿ ನಿಂತು ಹರಸಿ ಹಾರೈಸಿ ಆಶೀರ್ವದಿಸಿದ ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಋಣವನ್ನು ತಮ್ಮೆಲ್ಲರ ಸೇವೆ ಮಾಡುವ ಮೂಲಕ ತೀರಿಸುವ ಸದಾವಕಾಶ ನನ್ನದಾಗಲಿ ಎಂದು ಆಶಿಸುವೆ’ ಎಂಬ ಕೃತಜ್ಞತೆ ಸಂದೇಶದೊಂದಿಗೆ ಮಂಜುನಾಥ್ ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT