ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಾ ಚಲಾಯಿಸುವಂತೆ ಒತ್ತಾಯಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ: ಬಿಜೆಪಿ

Published 9 ಮೇ 2024, 4:36 IST
Last Updated 9 ಮೇ 2024, 4:36 IST
ಅಕ್ಷರ ಗಾತ್ರ

ಇಂದೋರ್‌: 'ನೋಟಾ' (ಮೇಲಿನ ಯಾರೂ ಅಲ್ಲ – NOTA) ಮತ ಚಲಾಯಿಸುವಂತೆ ಕಾಂಗ್ರೆಸ್‌ ಪಕ್ಷವು ಪೋಸ್ಟರ್‌ಗಳ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಹರಿಹಾಯ್ದಿದೆ. ಮತದಾರರನ್ನು ಈ ರೀತಿ ಒತ್ತಾಯಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಸರಿ ಎಂದು ಕಿಡಿಕಾರಿದೆ.

ಬಿಜೆಪಿಯವರಾದ ಇಂದೋರ್‌ನ ಕೌನ್ಸಿಲರ್‌ ಸಂಧ್ಯಾ ಯಾದವ್‌ ಅವರು, ಆಟೋರಿಕ್ಷಾ ಮೇಲೆ ಅಂಟಿಸಿದ್ದ ಪೋಸ್ಟರ್‌ವೊಂದನ್ನು ತೆರವುಗೊಳಿಸಿದ್ದಾರೆ. ಇದನ್ನು ಖಂಡಿಸಿರುವ ಕಾಂಗ್ರೆಸ್‌, ಸಂಧ್ಯಾ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ದೂರು ನೀ‌ಡಿದೆ.

ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ, 'ಮತಯಂತ್ರದಲ್ಲಿ ನೋಟಾ ಆಯ್ಕೆಯನ್ನು ಒತ್ತುವಂತೆ ಮತದಾರರನ್ನು ಒತ್ತಾಯಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪರಾಧ' ಎಂದಿದ್ದಾರೆ.

'ಹೀಗೆ ಪ್ರಚೋದಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಸರಿ' ಎಂದಿರುವ ಅವರು, 'ಕಾಂಗ್ರೆಸ್‌ ನಾಯಕತ್ವವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಯಸುತ್ತಿದೆ' ಎಂದು ಆರೋಪಿಸಿದ್ದಾರೆ.

ಇಂದೋರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಕ್ಷಯ್‌ ಕಾಂತಿ ಬಾಮ್‌ ಅವರು ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಏಪ್ರಿಲ್‌ 29ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಬಳಿಕ ಬಿಜೆಪಿ ಸೇರಿದ್ದರು. ಇದರಿಂದ ಆಕ್ರೋಶಗೊಂಡಿರುವ 'ಕೈ' ಪಡೆ, ನೋಟಾ ಚಲಾಯಿಸುವಂತೆ ಕರೆ ನೀಡುತ್ತಿದೆ.

ಅಕ್ಷಯ್‌ ನಾಮಪತ್ರ ಹಿಂಪಡೆದ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ಈ ಬಗ್ಗೆ ಮಾತನಾಡಿರುವ ಶರ್ಮಾ, 'ನಿಮ್ಮ ಅಭ್ಯರ್ಥಿ ತಾವಾಗಿಯೇ ನಾಮಪತ್ರ ಹಿಂಪಡೆದಿದ್ದಾರೆ. ಜನರೇನು ಮೂರ್ಖರಲ್ಲ. ಜನರು ನೋಟಾ ಚಲಾಯಿಸಬೇಕೆಂದು ನೀವು ಮಾಡುತ್ತಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.

ಮುಂದುವರಿದು, 'ನಾವಿಲ್ಲಿ ಎಕ್ಸ್-ರೇ ಮತ್ತು ಶುದ್ಧೀಕರಣ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಚಿಂತಿಸುವ ಅಗತ್ಯವಿಲ್ಲ' ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ದೂರು
'ಲೋಕತಂತ್ರ ಬಚಾವೊ ಸಮಿತಿ'ಯು ಜನರು ನೋಟಾ ಚಲಾಯಿಸಬೇಕೆಂದು ಮನವಿ ಮಾಡಿ ಅಂಟಿಸಿರುವ ಪೋಸ್ಟರ್‌ ಅನ್ನು ಸಂಧ್ಯಾ ಯಾದವ್‌ ಅವರು ತೆರವು ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್, ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಆದರೆ, ತಾವು ಈ ಕೆಲಸ ಮುಂದುವರಿಸುವುದಾಗಿ ಹೇಳಿರುವ ಸಂಧ್ಯಾ, 'ಆತ್ಮಸಾಕ್ಷಿಯುಳ್ಳ ಪ್ರಜೆಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ' ಎಂದು ಪ್ರತಿಪಾದಿಸಿದ್ದಾರೆ.

ಈ ಆಯ್ಕೆ (ನೋಟಾ) ಚಲಾಯಿಸುವಂತೆ ಪ್ರಚಾರ ಮಾಡುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದೂ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಯಾದವ್‌, ಬಿಜೆಪಿ ಕೌನ್ಸಿಲರ್‌ ಸಂಧ್ಯಾ ಅವರು ಗೂಂಡಾಗಳೊಂದಿಗೆ ಹೋಗಿ ಆಟೋ ಚಾಲಕನನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೊ ದಾಖಲೆಯನ್ನು ನೀಡಿ, ಸಂಧ್ಯಾ ವಿರುದ್ಧ ದೂರು ನೀಡಿರುವುದಾಗಿಯೂ ತಿಳಿಸಿದ್ದಾರೆ.

ಇಂದೋರ್‌ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT